ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷೆಯಾಗಿ 100 ಬಸ್ಕಿ ಹೊಡೆಸಿದ ಪರಿಣಾಮ 13 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ತಹಸಿಲ್‌ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ವಸಾಯಿ ಪ್ರದೇಶದ ಸತಿವಲಿಯಲ್ಲಿರುವ ಶ್ರೀ ಹನುಮಂತ್ ವಿದ್ಯಾ ಮಂದಿರ ಪ್ರೌಢಶಾಲೆಯ ವಿದ್ಯಾರ್ಥಿನಿ ಅಂಶಿಕಾ ಗೌಡ್ (13) ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಬಾಲಾಪರಾಧಿ ಗೃಹದಿಂದ ಆರು ಬಾಲಕಿಯರು ಪರಾರಿ
ಮಕ್ಕಳ ದಿನಾಚರಣೆಯಾದ ಶುಕ್ರವಾರ ಈ ಘಟನೆ ನಡೆದಿದೆ. ಶಾಲೆಯ ಬ್ಯಾಗ್ ಬೆನ್ನಿಗೆ ನೇತು ಹಾಕಿಕೊಂಡೇ ಬಾಲಕಿ 100 ಬಾರಿ ಬಸ್ಕಿ ಹೊಡೆಯುವಂತೆ ಶಿಕ್ಷಕರು ಒತ್ತಡ ಹೇರಿದ್ದಾರೆ. ಇದಾದ ಬಳಿಕ ಬಾಲಕಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ.
ಬಾಲಕಿ ಸಂಜೆ ಮನೆಗೆ ಹಿಂದಿರುಗುತ್ತಿದ್ದಂತೆ ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
“ಶಿಕ್ಷೆಯ ನಂತರ, ಆಕೆಗೆ ಕುತ್ತಿಗೆ ಮತ್ತು ಬೆನ್ನು ತೀವ್ರವಾಗಿ ನೋವಾಗಿದೆ. ಆಕೆಗೆ ಎದ್ದೇಳಲೂ ಸಾಧ್ಯವಾಗುತ್ತಿರಲಿಲ್ಲ” ಎಂದು ಆಕೆಯ ಪೋಷಕರು ಹೇಳಿದ್ದಾರೆ.
ಸದ್ಯ ವಾಲಿವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಅಂಶಿಕಾ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಪಾಂಡುರಂಗ್ ಗಲಾಂಗೆ ಹೇಳಿದ್ದಾರೆ.
ಘಟನೆಯ ವಿರುದ್ಧ ಎಂಎನ್‌ಎಸ್ ಮತ್ತು ಎನ್‌ಸಿಪಿ (ಎಸ್‌ಪಿ) ಸ್ಥಳೀಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಶಾಲೆ, ಅದರ ಅಧಿಕಾರಿಗಳು ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.





