ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಯಾಗಿದೆ. ಇದರ ಪರಿಣಾಮ ಭಾರತದ ಮೇಲೂ ಕಾಣಿಸಿಕೊಂಡಿದೆ. ದೇಶದ ತೈಲ ಮಾರಾಟ ಕಂಪನಿಗಳು (OMCs) ಶುಕ್ರವಾರದಿಂದ ಅನ್ವಯವಾಗುವಂತೆ 95-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿವೆ. ಇದಕ್ಕಿಂತಲೂ ಆಘಾತಕಾರಿಯಾಗಿ, ಕೈಗಾರಿಕಾ ಬಳಕೆಯ ಡೀಸೆಲ್ ದರದಲ್ಲಿ ಲೀಟರ್‌ಗೆ 22 ರೂಪಾಯಿ ಭಾರೀ ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಸಮಯದಲ್ಲಿ, ದೇಶದಲ್ಲಿ ಪ್ರೀಮಿಯಂ ಪೆಟ್ರೋಲ್ ಮತ್ತು ಕೈಗಾರಿಕೆ ಡೀಸೆಲ್ ದರಗಳು ಹೆಚ್ಚಾಗಿವೆ. ಆದರೂ, ದೇಶದ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರಲು ತೈಲ ಕಂಪನಿಗಳು ನಿರ್ಧರಿಸಿವೆ. ಆದ್ದರಿಂದ, ಜನಸಾಮಾನ್ಯರು ತಮ್ಮ ವಾಹನಗಳಿಗಾಗಿ ಬಳಸುವ ಪೆಟ್ರೋಲ್-ಡೀಸೆಲ್‌ನಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಎಂದು ದೇಶದ ಅತಿದೊಡ್ಡ ಇಂಧನ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ (IOCL) ಸ್ಪಷ್ಟಪಡಿಸಿದೆ. ತಾರ್ಕಿಕ ಬೆಲೆ ನಿಗದಿ ಕಾರ್ಯತಂತ್ರದ ಮೂಲಕ ಸಾಮಾನ್ಯ ಗ್ರಾಹಕರ ಮೇಲೆ ಹೊರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದೆ.
ಈ XP-95 ಪ್ರಿಮಿಯಂ ಪೆಟ್ರೋಲ್ಅನ್ನು ಐಷಾರಾಮಿ ಕಾರು ಮತ್ತು ಸ್ಪೋರ್ಟ್ಸ್ ಬೈಕ್‌ಗಳಿಗೆ ಬಳಸಲಾಗುತ್ತದೆ. ಅಂತೆಯೇ, ಕೈಗಾರಿಕಾ ಡೀಸೆಲ್‌ಅನ್ನು ಕಾರ್ಖಾನೆಗಳು ಮತ್ತು ದೊಡ್ಡ ಯಂತ್ರೋಪಕರಣಗಳಿಗೆ ಬಳಕೆ ಮಾಡಲಾಗುತ್ತದೆ. ಸದ್ಯ, ಈ ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚಾಗಿವೆ.
ಈ ಬೆಲೆ ಏರಿಕೆಯು ಸಾಮಾನ್ಯ ಜನರ ದೈನಂದಿನ ಬಜೆಟ್ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲವೆಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂಕಿಅಂಶಗಳ ಪ್ರಕಾರ, ದೇಶದ ಒಟ್ಟು ವಾಹನ ಸವಾರರಲ್ಲಿ ಕೇವಲ 5%ಕ್ಕಿಂತ ಕಡಿಮೆ ಜನರು ಮಾತ್ರ ಪ್ರೀಂಮಿಯಂ ಪೆಟ್ರೋಲ್ ಬಳಸುತ್ತಾರೆ. ಆದ್ದರಿಂದ, ಆ 5% ಜನರ ಮೇಲೆ ಮಾತ್ರವೇ ಬೆಲೆ ಏರಿಕೆಯ ಪರಿಣಾಮ ತಟ್ಟಲಿದೆ ಎಂದು ಇಂಡಿಯನ್ ಆಯಿಲ್ ಹೇಳಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
ಕೈಗಾರಿಕಾ ಡೀಸೆಲ್ ಬೆಲೆಯಲ್ಲಿ ಒಮ್ಮೆಗೆ 22 ರೂಪಾಯಿ ಏರಿಕೆಯಾಗಿರುವುದು ಉತ್ಪಾದನಾ ವಲಯದಲ್ಲಿ ಆತಂಕ ಮೂಡಿಸಿದೆ. ಇದು ಸಾರಿಗೆ ವೆಚ್ಚ ಮತ್ತು ಕಾರ್ಖಾನೆಗಳ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಪರೋಕ್ಷವಾಗಿ ಸಿದ್ಧ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.
ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದು, ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು, ಹೀಗೆಯೇ ಮುಂದುವರೆದರೆ, ಸಾಮಾನ್ಯ ಪೆಟ್ರೋಲ್ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.




