ಡಿಸೆಂಬರ್ 6ರಂದು 25 ಜೀವಗಳನ್ನು ಬಲಿ ಪಡೆದ ಗೋವಾ ನೈಟ್‌ಕ್ಲಬ್ ಬೆಂಕಿ ದುರಂತ ಪ್ರಕರಣದಲ್ಲಿ ಆರೋಪಿಗಳಾಗಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್ ಮಾಲೀಕ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಅವರನ್ನು ಥೈಲ್ಯಾಂಡ್ ಗಡಿಪಾರು ಮಾಡಿದೆ. ಬ್ಯಾಂಕಾಕ್‌ಗೆ ಪಲಾಯನ ಮಾಡಿದ್ದ ಲೂಥ್ರಾ ಸಹೋದರರನ್ನು ಮಂಗಳವಾರ ಬೆಳಿಗ್ಗೆ ‘ತುರ್ತು ಪ್ರಮಾಣಪತ್ರ’ದ ಮೇಲೆ ಗಡಿಪಾರು ಮಾಡಲಾಗಿದ್ದು, ಅವರನ್ನು ಭಾರತಕ್ಕೆ ಕಳಿಸಲಾಗಿದೆ. ಆರೋಪಿಗಳು ಮಧ್ಯಾಹ್ನ 1:45ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ.
ಥೈಲ್ಯಾಂಡ್‌ಗೆ ತೆರಳಿದ್ದ ಸಿಬಿಐ ಮತ್ತು ಗುಪ್ತಚರ ಅಧಿಕಾರಿಗಳ ತಂಡವು, ಥೈಲ್ಯಾಂಡ್‌ನ ವಲಸೆ ಭದ್ರತಾ ಅಧಿಕಾರಿಗಳ ನೆರವಿನೊಂದಿಗೆ ಆರೋಪಿ ಸಹೋದರರನ್ನು ಬಂಧಿಸಿದ್ದಾರೆ. ಬ್ಯಾಂಕಾಕ್‌ನ ವಿಮಾನ ನಿಲ್ದಾಣದಲ್ಲಿ ಆರೋಪಿಗಳನ್ನು ಇಂಡಿಗೋ ವಿಮಾನ ಹತ್ತಿಸಲಾಗಿದೆ. ಆರೋಪಿಗಳು ಮಧ್ಯಾಹ್ನ ದೆಹಲಿಗೆ ಬರಲಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನೂ ದೆಹಲಿ ಅಪರಾಧ ವಿಭಾಗ ಮತ್ತು ಗೋವಾ ಪೊಲೀಸರ ದಂಡವು ವಶಕ್ಕೆ ಪಡೆಯಲಿದ್ದು, ಪಟಿಯಾಲ ಹೌಸ್ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಆರೊಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ, ಇಬ್ಬರನ್ನೂ ‘ಟ್ರಾನ್ಸಿಟ್ ರಿಮಾಂಡ್’ಗೆ ಪಡೆಯುವ ಪೊಲೀಸರು ಯೋಜಿಸಿದ್ದಾರೆ. ಸಹೋದರರನ್ನು ಮಂಗಳವಾರ ರಾತ್ರಿಯೊಳಗೆ ಗೋವಾಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಆರೋಪಿ ಲೂಥ್ರೋ ಸಹೋದರನ್ನು ಮಂಗಳವಾರ ರಾತ್ರಿ ಗೋವಾಗೆ ಕರೆತರಲಾಗುತ್ತದೆ ಎಂದು ಗೋವಾ ಡಿಜಿಪಿ ಅಲೋಕ್ ಕುಮಾರ್ ದೃಢಪಡಿಸಿದ್ದಾರೆ.
#WATCH | Bangkok, Thailand | Luthra brothers-Gaurav and Saurabh, the owners of the Birch by Romeo Lane nightclub in Arpora, Goa, where 25 people were killed in a fire, are being deported from Thailand today.
— ANI (@ANI) December 16, 2025
The two brothers are being brought to Delhi, where they will be… pic.twitter.com/acedxyRkxJ
ಗಡಿಪಾರು ಪ್ರಕ್ರಿಯೆಯಲ್ಲಿ ನಡೆದಿದ್ದೇನು?
ನೈಟ್‌ಕ್ಲಬ್‌ನಲ್ಲಿ ಘಟನೆ ನಡೆದ ದಿನ ಲೂಥ್ರಾ ಸಹೋದರರು ಬ್ಯಾಂಕಾಕ್‌ಗೆ ಪಲಯನ ಮಾಡಿದ್ದರು. ಈ ಬೆನ್ನಲ್ಲೇ, ವಿದೇಶಾಂಗ ಸಚಿವಾಲಯವು ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಿತು. ಲುಕ್ ಔಟ್ ನೋಟಿಸ್ ಜಾರಿ ಮಾಡಲಾಯಿತು. ಪಾಸ್‌ಪೋರ್ಟ್ ರದ್ದಾದ್ದರಿಂದ, ಆರೋಪಿ ಸಹೋದರರು ಮಾನ್ಯ ದಾಖಲೆಗಳಿಲ್ಲದೆ, ಥೈಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಸೂಚಿಸಲಾಯಿತು.
ಗಡೀಪಾರು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಿಬಿಐ ಮತ್ತು ಗುಪ್ತಚರ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವು ಶನಿವಾರ ಥೈಲ್ಯಾಂಡ್‌ನ ಫುಕೆಟ್‌ಗೆ ತೆರಳಿತ್ತು. ಫುಕೆಟ್‌ನ ಇಂಡಿಗೋ ಹೋಟೆಲ್‌ನಲ್ಲಿ ಲೂಥ್ರಾ ಸಹೋದರರನ್ನು ಬಂಧಿಸಿ, ಅವರನ್ನು ಬ್ಯಾಂಕಾಕ್ ಬಂಧನ ಕೇಂದ್ರಕ್ಕೆ ಕರೆತರಲಾಯಿತು. ನಂತರ ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪಾಸ್ ರದ್ದಾಗಿದ್ದ ಲೂಥ್ರಾ ಸಹೋದರರಿಗೆ ತುರ್ತು ಪ್ರಮಾಣಪತ್ರ ಮತ್ತು ಏಕಮುಖ ಪ್ರಯಾಣ ದಾಖಲೆಗಳನ್ನು ನೀಡಿದೆ.
ಬಳಿಕ, ಇಬ್ಬರನ್ನೂ ಥಾಯ್ ಅಧಿಕಾರಿಗಳು ವಶಕ್ಕೆ ಪಡೆದು, ಬ್ಯಾಂಕಾಕ್‌ನಲ್ಲಿರುವ ವಲಸೆ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಮಂಗಳವಾರ ಬೆಳಗ್ಗೆ ಇಬ್ಬರನ್ನೂ ವಿಮಾನದ ಮೂಲಕ ಭಾರತಕ್ಕೆ ಗಡಿಪಾರು ಮಾಡಲಾಗಿದೆ.
ಡಿಸೆಂಬರ್ 6ರ ದುರಂತ ಮತ್ತು ಅಕ್ರಮ ನೈಟ್‌ಕ್ಲಬ್
ಬಿರ್ಚ್ ಬೈ ನೈಟ್‌ಕ್ಲಬ್‌ನಲ್ಲಿ ಡಿ.6ರ ರಾತ್ರಿ 11.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಆಗ 150 ಕ್ಕೂ ಹೆಚ್ಚು ಪ್ರವಾಸಿಗರು ನೈಟ್‌ಕ್ಲಬ್‌ನಲ್ಲಿದ್ದರು. ಕಾರ್ಯಕ್ರಮದ ಸಮಯದಲ್ಲಿ ವಿದ್ಯುತ್ ಕಿಡಿಗಳು ಮರದ ಸೀಲಿಂಗ್‌ಗೆ ಬಡಿದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳ ನಿರ್ದೇಶನಾಲಯವು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಬ್ಯಾಂಕ್, ವಿಮಾ ಕಂಪನಿಗಳಲ್ಲಿ ಬಿದ್ದಿದೆ ಜನರ 78,000 ಕೋಟಿ ರೂ.; ಈ ಹಣ ಪಡೆಯುವುದು ಹೇಗೆ?
ದುರಂತ ಘಟನೆಯ ಕುರಿತು ಗೋವಾ ಪೊಲೀಸರು ನಡೆಸಿದ ತನಿಖೆಯಲ್ಲಿ; ಬಿರ್ಚ್ ಬೈ ನೈಟ್‌ಕ್ಲಬ್ ಕಳೆದ 18 ತಿಂಗಳುಗಳಿಂದ ಯಾವುದೇ ಅನುಮತಿಗಳಿಲ್ಲದೆ, ಅಗತ್ಯ ಮತ್ತು ಮಾನ್ಯ ಪರವಾನಗಿ ಇಲ್ಲದೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೆ, ನೈಟ್‌ಕ್ಲಬ್‌ನ ನಿರ್ಮಾಣಕ್ಕೂ ಅನುಮತಿ ಪಡೆಯಲಾಗಿಲ್ಲ. ನಿರ್ಮಾಣ ಮಾನದಂಡಗಳನ್ನೂ ಪಾಲಿಸಲಾಗಿಲ್ಲ ಎಂದು ತಿಳಿದುಬಂದಿದೆ. ಈ ಸ್ಪಷ್ಟ ಲೋಪಗಳ ಹೊರತಾಗಿಯೂ, ಡಿಸೆಂಬರ್ 6ರ ರಾತ್ರಿ ಬೆಂಕಿ ಅವಘಡ ಸಂಭವಿಸುವವರೆಗೂ ಯಾವುದೇ ಅಧಿಕಾರಿಗಳು ಈ ನೈಟ್‌ಕ್ಲಬ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂದು ತನಿಖೆ ಕಂಡುಕೊಂಡಿದೆ.
ದುರಂತ ಘಟನೆಗೆ ಸಂಬಂಧಿಸಿದಂತೆ ಈವರೆಗೆ, ಗುರ್ಗಾಂವ್ ನಿವಾಸಿ ಅಜಯ್ ಗುಪ್ತಾ (55), ಸಹೋದರರಾದ ಸೌರಭ್ ಮತ್ತು ಗೌರವ್ ಅವರ ಪಾಲುದಾರ, ನವದೆಹಲಿ ಮೂಲದ ರಾಜೀವ್ ಮೋಡಕ್ (49), ಗೇಟ್ ಮ್ಯಾನೇಜರ್ ಪ್ರಿಯಾಂಶು ಠಾಕೂರ್ (32), ಉತ್ತರ ಪ್ರದೇಶದ ಬಾರ್ ಮ್ಯಾನೇಜರ್ ರಾಜವೀರ್ ಸಿಂಘಾನಿಯಾ (32), ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್ (27) ಮತ್ತು ದೆಹಲಿಯ ಭರತ್ ಕೊಹ್ಲಿ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ, ಅಕ್ರಮವಾಗಿ ನಡೆಯುತ್ತಿದ್ದ ನೈಟ್‌ಕ್ಲಬ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.




