ಕೇರಳ ಸ್ಟೋರಿ-2 ಸಿನಿಮಾವನ್ನು ಜನರು ಹೆಚ್ಚಾಗಿ ವೀಕ್ಷಿಸುತ್ತಿಲ್ಲ ಎಂಬುದು ಒಳ್ಳೆಯ ಸುದ್ದಿ. ಕೇರಳ ಸ್ಟೋರಿ ಖಾಲಿಯಾಗಿರುವಂತೆ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಕೇರಳದ ಕುಟ್ಟಿಕ್ಕನಂನ ಮರಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್, “ಕೇರಳ ಎಂದರೇನು, ಅದರ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳದ ಬಹುಪಾಲು ಜನರಿದ್ದಾರೆ ಎಂದು ಈ ಸಿನಿಮಾ ತೋರಿಸುತ್ತದೆ. ಸಿನಿಮಾಗಳನ್ನು ಆಯುಧಗಳಾಗಿ ಬಳಸಲಾಗುತ್ತಿದೆ. ಜನರನ್ನು ನಿಂದಿಸಲು, ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಬಳಸಲಾಗುತ್ತಿದೆ ” ಎಂದರು.
ಇದನ್ನು ಓದಿದ್ದೀರಾ? ‘ದಿ ಕೇರಳ ಸ್ಟೋರಿ-2’ ಸಿನಿಮಾ ನಿರ್ಮಾಪಕರು, ಸಿಬಿಎಫ್‌ಸಿಗೆ ಹೈಕೋರ್ಟ್ ನೋಟಿಸ್
“ಇಂತಹ ಬೆಳವಣಿಗೆಗಳು ದೇಶಕ್ಕೆ ಅತ್ಯಂತ ಹಾನಿಕಾರಕ. ಈ ಕೆಟ್ಟ ಉದ್ದೇಶಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ” ಎಂದು ಹೇಳಿದ ರಾಹುಲ್ ಈ ಸಂದರ್ಭದಲ್ಲೇ ತಾವು ಹೆಚ್ಚಾಗಿ ಓದುವುದಾಗಿ, ಸಿನಿಮಾ ನೋಡಲ್ಲ ಎಂದಿದ್ದಾರೆ.
“ಹವ್ಯಾಸವಾಗಿ, ನನಗೆ ಚೆಸ್ ಆಡುವುದು, ಇತರೆ ಕಲೆಗಳನ್ನು ಮಾಡುವುದು ಇಷ್ಟ. ಈಜುವುದು, ಓಡುವುದು ಮತ್ತು ಫಿಟ್ ಆಗಿರಲು ವ್ಯಾಯಾಮ ಮಾಡುತ್ತೇನೆ” ಎಂದೂ ತಿಳಿಸಿದ್ದಾರೆ.
“ಐದು ವರ್ಷಗಳ ಕಾಲ ಕೇರಳವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದ್ದರೂ, ರಾಜ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಆದರೆ ವಯನಾಡಿನ ಜನರಿಂದ ಬಹಳಷ್ಟು ಕಲಿತಿದ್ದೇನೆ” ಎಂದೂ ಹೇಳಿದರು.
‘ದಿ ಕೇರಳ ಸ್ಟೋರಿ’ಯ ಎರಡನೇ ಭಾಗವಾದ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಚಿತ್ರದ ಟ್ರೇಲರ್ ಮತ್ತು ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿತ್ತು.
ಟ್ರೇಲರ್‌ನಲ್ಲಿ ಸೆರೆಯಲ್ಲಿದ್ದ ಮಹಿಳೆಯೊಬ್ಬಳು ತನಗೆ ನೀಡಿದ ಆಹಾರದ ತಟ್ಟೆಯನ್ನು ಕಾಲಿನಿಂದ ಒದೆಯುತ್ತಾ, “ಸತ್ತರೂ ಸಾಯುತ್ತೇನೆ ಆದರೆ ಬೀಫ್ ತಿನ್ನುವುದಿಲ್ಲ” ಎಂದು ಹೇಳುವ ದೃಶ್ಯವಿದೆ. ಆದರೆ ಕೇರಳದಲ್ಲಿ ಬೀಫ್ ತಿನ್ನುವುದು ಸಾಮಾನ್ಯವಾಗಿರುವ ಕಾರಣ ಕೇರಳದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಾವು ಬೀಫ್ ತಿನ್ನುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ‘ಬೀಫ್-ಪರೋಟ’ ಚಾಲೆಂಜ್‌ನೊಂದಿಗೆ ಸಿನಿಮಾವನ್ನು ಲೇವಡಿ ಮಾಡುತ್ತಿದ್ದಾರೆ.





