ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಅಣ್ಣಾಮಲೈ ಕಾಲಿಗೆ ಚಕ್ರ ಕಟ್ಟಿಕೊಂಡು, ತಮಿಳುನಾಡಿನ ಎಲ್ಲಾ 234 ಅಸೆಂಬ್ಲಿ ಕ್ಷೇತ್ರಗಳಲ್ಲಿ ಓಡಾಡಿದ್ದರು. ಪಕ್ಷದ ಬೇಸ್ ಅನ್ನು ಬಲಪಡಿಸುವ ಕೆಲಸವನ್ನು ಮಾಡಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಖುದ್ದು ಸ್ಪರ್ಧಿಸಿದರೂ, ಡಿಎಂಕೆ ಅಭ್ಯರ್ಥಿ ವಿರುದ್ದ ಸೋಲು ಅನುಭವಿಸಿದರು.
ಕರ್ನಾಟಕದಲ್ಲಿ IPS ಅಧಿಕಾರಿಯಾಗಿ ʼಸಿಂಗಂʼ ಅಂತ ಕರೆಸಿಕೊಂಡಿದ್ದ ಕೆ. ಅಣ್ಣಾಮಲೈ, ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿ, ತಮಿಳುನಾಡು ಬಿಜೆಪಿ ಅಧ್ಯಕ್ಷರೂ ಆಗಿ, ಚುನಾವಣೆಯಲ್ಲಿ ಸೋತ ನಂತರ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಸಲಾಗಿದೆ. ಇದೀಗ ಬಿಜೆಪಿಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ರಾಜಕೀಯ ಸೇರುವುದಕ್ಕಾಗಿಯೇ ತಮ್ಮ ಸರ್ಕಾರಿ ಕೆಲಸವನ್ನೇ ತೊರೆದವರು. ಐಪಿಎಸ್ ನಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಅಧಿಕಾರಿಗಳು ರಾಜಕೀಯಕ್ಕೆ ಬಂದರೆ ಖಂಡಿತವಾಗಿಯೂ ಅಲ್ಲೊಂದು ಬದಲಾವಣೆ ಸಾಧ್ಯ ಅಂತ ನಂಬಿದ್ದ ಜನರನ್ನ ಅಣ್ಣಾಮಲೈ ನಿರಾಸೆಗೊಳಿಸಿದ್ದರು. ಬಿಜೆಪಿಗೆ ಸೇರಿದ ಮೇಲೆ ಅವರು ಬಿಜೆಪಿಯ ಜಾಯಮಾನಕ್ಕೆ ಹೊಂದಿಕೊಂಡು ಬದಲಾಗಿದ್ದರು. ಅತಿರೇಕದ ಹೇಳಿಕೆ, ವರ್ತನೆ ಅವರ ಮೇಲಿನ ಗೌರವ ಕಡಿಮೆ ಮಾಡಿತ್ತು.
ಕೆ. ಅಣ್ಣಾಮಲೈ, 2021ರಲ್ಲಿ ಬಿಜೆಪಿ ಸೇರಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಡಿಎಂಕೆ ವಿರುದ್ಧದ ಅವರ ತೀಕ್ಷ್ಣ ಟೀಕೆಗಳು ಬಹುಷಃ ಈಗ ಅಣ್ಣಾಮಲೈಗೆ ಮುಳುವಾದಂತೆ ಕಾಣುತ್ತಿದೆ. ಇಂದು ಬಿಜೆಪಿ ಹೈಕಮಾಂಡ್‌ನೊಂದಿಗಿನ ಘರ್ಷಣೆಗಳು, ಅಧ್ಯಕ್ಷ ಸ್ಥಾನದಿಂದ ತೆರವು ಮತ್ತು ಈಗ ಹೊಸ ಪಕ್ಷ ರಚನೆಯ ಚರ್ಚೆ – ಇವೆಲ್ಲವೂ ಅವರ ರಾಜಕೀಯ ಜೀವನವನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ಅನ್ನಿಸುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ಮಾತನಾಡಿ, ತಮ್ಮ ಪಾತ್ರದ ಬಗ್ಗೆ ಪಕ್ಷದ ಜೊತೆ ಸಂಘರ್ಷವಿದೆ ಎಂಬ ಬಗ್ಗೆ ಒಪ್ಪಿಕೊಂಡಿದ್ದು, “ಯಾರನ್ನೂ ಕೂಡ ತಲೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಯಿರಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ NDA ಬೆಳವಣಿಗೆಯ ಬಗ್ಗೆ ಕೊಯಮತ್ತೂರಿನಲ್ಲಿ ಪತ್ರಕರ್ತರು ಅಣ್ಣಾಮಲೈ ಅವರನ್ನು ಕೇಳಿದಾಗ, ನಾನು ಕೂಡ ಬಿಜೆಪಿಯ ಕಾರ್ಯಕರ್ತನಾಗಿ ಕಾಯುತ್ತಿದ್ದೇನೆ ಮತ್ತು ಗಮನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೈತ್ರಿಕೂಟದ ರಚನೆಯ ಬಗ್ಗೆ ಪತ್ರಕರ್ತರು ಕೇಳಿದಾಗ ಆ ಬಗ್ಗೆ ಪ್ರತಿಕ್ರಿಯಿಸಲು ನನಗೆ ಅಧಿಕಾರವಿಲ್ಲ ಎಂದು ಹೇಳಿದ ಅಣ್ಣಾಮಲೈ, “ನನಗೆ ಇಷ್ಟವಾದರೆ ನಾನು ಉಳಿಯುತ್ತೇನೆ ಅಥವಾ ಇಷ್ಟವಿಲ್ಲದಿದ್ದರೆ ನಾನು ರಾಜೀನಾಮೆ ನೀಡಿ ಕೃಷಿ ಮಾಡುವುದನ್ನು ಮುಂದುವರಿಸುತ್ತೇನೆ. ಸಮಯ ಬಂದಾಗ ನಾನು ಮಾತನಾಡುತ್ತೇನೆ. ತಲೆಯ ಮೇಲೆ ಬಂದೂಕನ್ನು ಹಿಡಿದು ಯಾರನ್ನೂ ಪಕ್ಷದಲ್ಲಿ ಉಳಿಯುವಂತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದು ಸ್ವಯಂಪ್ರೇರಿತ ಕಾರ್ಯವಿಧಾನ. ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡುವ ಮೂಲಕ ರಾಜಕೀಯದಲ್ಲಿದ್ದೇವೆ” ಎಂದು ಹೇಳಿದ್ದರು.
“ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ. ನಾನು ಇನ್ನೂ ಕಾಯಲು ಸಿದ್ಧನಿದ್ದೇನೆ. ನಾನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾತನಾಡುವ ಸಾಂಪ್ರದಾಯಿಕ ರಾಜಕಾರಣಿಯಲ್ಲ” ಎಂದು ಅವರು ಹೇಳಿದ್ದಾರೆ.

ಅಣ್ಣಾಮಲೈ ಹಿನ್ನೆಲೆ
1985ರಲ್ಲಿ ಜನಿಸಿದ ಅಣ್ಣಾಮಲೈ ಅವರು, ತಮಿಳುನಾಡಿನ ಕೊಯಮತ್ತೂರಿನಲ್ಲಿ ಹುಟ್ಟಿ ಬೆಳೆದಿದ್ದು, ಐಐಟಿ ಕಾಂಪಿಲ್‌ನಿಂದ ಎಂಜಿನಿಯರಿಂಗ್ ಪದವಿ ಪಡೆದ ನಂತರ, ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡಿದರು. ಆದರೆ, ಅವರ ಜೀವನದ ಮುಖ್ಯ ತಿರುವು ಬಂದದ್ದು 2006ರಲ್ಲಿ. ಐಪಿಎಸ್ ಪರೀಕ್ಷೆಯಲ್ಲಿ 23ನೇ ರ್ಯಾಂಕ್ ಪಡೆದು ತಮಿಳುನಾಡು ಕೇಡರ್‌ಗೆ ಸೇರಿದರು. 2011ರಲ್ಲಿ ಐಪಿಎಸ್ ಹುದ್ದೆಗೆ ಆಯ್ಕೆಯಾದ ಅಣ್ಣಾಮಲೈ, 2013ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 2015ರ ಜನವರಿ 1 ರಂದು ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ಪಡೆದ ಅಣ್ಣಾಮಲೈ, 2016ರವರೆಗೆ ಉಡುಪಿ ಜಿಲ್ಲಾ ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ 2018ರ ಅಕ್ಟೋಬರ್‌ವರೆಗೆ ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿ, ಆ ಬಳಿಕ ಬೆಂಗಳೂರು ದಕ್ಷಿಣ ಪೊಲೀಸ್ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
2011ರಲ್ಲಿ ಚೆನ್ನೈನಲ್ಲಿ ನಡೆದ ಸರ್ಕಾರಿ ಭೂಮಿ ಮಾರಾಟದ ವಂಚನೆಯನ್ನು ಬಹಿರಂಗಪಡಿಸಿ, ಅವರು ಡಿಎಂಕೆ ಸರ್ಕಾರದ ವಿರುದ್ಧ ನಿಂತರು. ಬೆಂಗಳೂರು ರಾಷ್ಟ್ರೀಯ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (EOW) ಕೆಲಸ ಮಾಡಿ, ಹಲವು ಹೈಪ್ರೊಫೈಲ್ ಕೇಸ್‌ಗಳನ್ನು ಕೈಗೆತ್ತಿಕೊಂಡಿದ್ದರು. ಕರ್ನಾಟಕದಲ್ಲಿ ಅವರ ಧೈರ್ಯ, ಸಾಮರ್ಥ್ಯವನ್ನು ಕಂಡು ‘ಸಿಂಗಂ’ ಎಂದು ಕರೆಯುತ್ತಿದ್ದರು. ಅಣ್ಣಾಮಲೈ ಅವರ ಧೈರ್ಯ ಸಾಮಾನ್ಯ ಅಧಿಕಾರಿಯನ್ನು ಮೀರಿ, ಸಿಸ್ಟಮ್‌ನ ವಿರುದ್ಧ ನಿಲ್ಲುವ ಶಪಥವಾಗಿತ್ತು.

2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ಹಿರಿಯ ಸಹದ್ಯೋಗಿಯಾಗಿದ್ದ ಮಧುಕರ್ ಶೆಟ್ಟಿ ಅಕಾಲಿಕ ನಿಧನ, ನನ್ನನ್ನು ಬಹಳವಾಗಿ ಕಾಡುತ್ತಿದೆ. ಮಾನಸ ಸರೋವರದ ಭಾಗದಲ್ಲಿ ಸ್ವಲ್ಪ ದಿನ ಕಳೆಯುತ್ತೇನೆ. ಆ ಮೂಲಕ ನನ್ನ ಜೀವನದ ಮುಂದಿನ ಆದ್ಯತೆ. ಮತ್ತೊಮ್ಮೆ ಅಧ್ಯಯನ ನಡೆಸಬೇಕಿದೆ ಎನ್ನುವ ಕಾರಣ ನೀಡಿದ್ದರು. ಅಷ್ಟೊತ್ತಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿತ್ತು. 2021ರ ಜುಲೈನಲ್ಲಿ, ಬಿಜೆಪಿಯಲ್ಲಿ ಸೇರಿದ ಅವರು ತಕ್ಷಣ ತಮಿಳುನಾಡು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡರು. ಇದು ಒಂದು ದೊಡ್ಡ ತಿರುವು – ಏಕೆಂದರೆ, ದ್ರಾವಿಡ ರಾಜಕೀಯದಲ್ಲಿ ಬಿಜೆಪಿ ಒಂದು ಚಿಕ್ಕ ಪಕ್ಷವಾಗಿತ್ತು. ಅಣ್ಣಾಮಲೈ ಅವರ ಆಯ್ಕೆಯು ಹೈಕಮಾಂಡ್‌ಗೆ ಒಂದು ರಿಸ್ಕ್ ಆಗಿತ್ತು. ಆದರೆ, ಅವರ ಯುವಶಕ್ತಿ, ತಮಿಳ್ ಹಿನ್ನೆಲೆ ಮತ್ತು ಡಿಎಂಕೆ ವಿರುದ್ಧದ ತೀಕ್ಷ್ಣತೆಯು ಅಣ್ಣಾಮಲೈ ಸಾಧಿಸಬಲ್ಲ ಅಂತ ಬಿಜೆಪಿ ನಂಬಿತ್ತು.
234 ಕ್ಷೇತ್ರಗಳಲ್ಲಿ ಓಡಾಡಿದ್ದರು
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು, ತಮಿಳುನಾಡಿನ ಎಲ್ಲಾ 234 ಅಸೆಂಬ್ಲಿ ಕ್ಷೇತ್ರಗಳಲ್ಲಿ ಓಡಾಡಿದ್ದರು. ಪಕ್ಷದ ಬೇಸ್ ಅನ್ನು ಬಲಪಡಿಸುವ ಕೆಲಸವನ್ನು ಮಾಡಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಖುದ್ದು ಸ್ಪರ್ಧಿಸಿದರೂ, ಡಿಎಂಕೆ ಅಭ್ಯರ್ಥಿ ವಿರುದ್ದ ಸೋಲು ಅನುಭವಿಸಿದರು. ಆ ಚುನಾವಣೆಯಲ್ಲಿ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿ AIADMK ಜೊತೆ ಸೇರಿಕೊಂಡು, ಬಿಜೆಪಿ ಇಪ್ಪತ್ತು ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಅಣ್ಣಾಮಲೈ, ಚುನಾವಣೆಯಲ್ಲಿ ಸೋತಿದ್ದರೂ, ಸಕ್ರಿಯ ರಾಜಕಾರಣಕ್ಕೆ ಇಳಿದ ಒಂದೇ ವರ್ಷದಲ್ಲಿ ಪಡೆದ ಮತ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ʼಎನ್ ಮಣ್ ಎನ್ ಮಕ್ಕಳ್ʼ ಎನ್ನುವ ಯಾತ್ರೆಯನ್ನು ಅಣ್ಣಾಮಲೈ ಶುರು ಮಾಡಿದ್ದರು. ಜುಲೈ 8, 2023ರಲ್ಲಿ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ರು. ಇದಾದ ನಂತರದಲ್ಲಿ ಸಾರ್ವತ್ರಿಕ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿತು. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಎಡಪ್ಪಾಡಿ ಪಳನಿಸ್ವಾಮಿ ಒಪ್ಪದೇ, ಪ್ರತ್ಯೇಕವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದರು. ಇದು, ಡಿಎಂಕೆ ಮೈತ್ರಿಕೂಟಕ್ಕೆ ಭರ್ಜರಿ ವರವಾಗಿ ಪರಿಣಮಿಸಿತು.
ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಅಣ್ಣಾಮಲೈ ಗಮನ ಸೆಳೆದರು. ಅದರಲ್ಲೂ ತಮಿಳು ಕವಿ ತಿರುವಳ್ಳುವರ್ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಭಾರೀ ವಿವಾದ ಮಾಡಿಕೊಂಡಿದ್ದರು. ಸಂದರ್ಶನವೊಂದರಲ್ಲಿ ‘ಭ್ರಷ್ಟಾಚಾರದ ದೃಷ್ಟಿಯಿಂದ 1991-1996 ಅವಧಿ ಅತ್ಯಂತ ಕೆಟ್ಟದಾಗಿತ್ತೆಂಬುದನ್ನು ನೀವು ಒಪ್ಪುತ್ತೀರಾ?’ ಎಂಬ ಪ್ರಶ್ನೆಗೆ, “ಯೆಸ್, ಭ್ರಷ್ಟಾಚಾರದಲ್ಲಿ (ತಮಿಳುನಾಡು) ನಂಬರ್ 1” ಎಂದು ಯಾವುದೇ ನಾಯಕರ, ನಾಯಕಿಯ ಹೆಸರು ಹೇಳದೆ ಅಣ್ಣಾಮಲೈ ಹೇಳಿದ್ದು ಭಾರತೀಯ ಜನತಾ ಪಕ್ಷ ಮತ್ತು ಎಐಎಡಿಎಂಕೆ ನಡುವಿನ ಸಂಬಂಧ ಮತ್ತಷ್ಟು ಹಳಸುವಂತೆ ಮಾಡಿತ್ತು. ಅಣ್ಣಾಮಲೈ ಅವರ ಬಾಯಿ ಮುಚ್ಚಿಸದಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸದಿದ್ದರೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳುವುದಾಗಿ ಎಐಎಡಿಎಂಕೆ ಪಕ್ಷದ ನಾಯಕರು ಅಬ್ಬರಿಸಿದ್ದರು. ಎಐಎಡಿಎಂಕೆ ಪಾರ್ಟಿಯು, ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಅಷ್ಟೇ ಅಲ್ಲದೇ ಅಣ್ಣಾಮಲೈ ಡಿಎಂಕೆ ನಾಯಕರಾದ ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿದ್ದರು. “ಡಿಎಂಕೆ ಅಹಂಕಾರದ ಪಕ್ಷ” ಎಂದು ಕರೆದರು. ಇದು ಕೂಡ ಬಿಜೆಪಿಯ ಮೈತ್ರಿ ರಾಜಕೀಯಕ್ಕೆ ಅಡ್ಡಿ ಬಂದಿತು.
2024ರ ನಂತರದ ಘಟನೆಗಳು ಅಣ್ಣಾಮಲೈ ಅವರ ರಾಜಕೀಯ ಜೀವನವನ್ನು ಬದಲಾಯಿಸಿದವು. ಲೋಕಸಭೆಯ ನಂತರ, ಬಿಜೆಪಿ ಹೈಕಮಾಂಡ್ AIADMK ಮೈತ್ರಿಯನ್ನು ಬಲಪಡಿಸಲು ನಿರ್ಧರಿಸಿತು. ತಾವು ವಿರೋಧಿಸುತ್ತಿದ್ದ ಪಕ್ಷದೊಂದಿಗೇ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಿರ್ಧಾರ ಅಣ್ಣಾಮಲೈ ಅವರಿಗೆ ಇರುಸುಮುರುಸು ಉಂಟುಮಾಡಿದೆ.
ಆದರೆ ತಮಿಳುನಾಡಿನಲ್ಲಿ ಪ್ರಮುಖವಾಗಿರುವುದು ಎರಡೇ ಪಕ್ಷಗಳು; ಡಿಎಂಕೆ ಮತ್ತು ಎಐಎಡಿಎಂಕೆ. ರಾಜ್ಯದಲ್ಲಿ ಕಳೆದ ಹಲವಾರು ದಶಕಗಳಿಂದ ಇವುಗಳದ್ದೇ ರಾಜ್ಯಭಾರ. ರಾಜ್ಯದ ಜನರ ಒಲವು ಕೂಡ ಈ ಪಕ್ಷಗಳ ನಾಯಕರ ಮೇಲೆಯೇ ಇದೆ. ಹೀಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ನ್ಯಾಷನಲ್ ಪಾರ್ಟಿಗಳು ತಮಿಳುನಾಡಿನಲ್ಲಿ ಸೀಟು ಗೆಲ್ಲಬೇಕು ಅಂದ್ರೆ, ಪ್ರಾದೇಶಿಕ ಪಕ್ಷಗಳ ಬೆಂಬಲ ಬೇಕೇ ಬೇಕು. ಅದು ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ. ಅಷ್ಟರಮಟ್ಟಿಗೆ ಪ್ರಾದೇಶಿಕ ಪಾರ್ಟಿಗಳ ಹಿಡಿತ ತಮಿಳುನಾಡಿನಲ್ಲಿದೆ. ತಮಿಳುನಾಡಿನಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಿಜೆಪಿಯ ಪ್ರಭಾವ ಕಮ್ಮಿ.
ಹೀಗಾಗಿ ಅಣ್ಣಾಮಲೈ ಅವರನ್ನು ರಾಜ್ಯ ಅಧ್ಯಕ್ಷರ ಸ್ಥಾನದಿಂದ ತೆಗೆದುಹಾಕಿ, ನೈನಾರ್ ನಾಗೇಂದ್ರನ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯ್ತು. ಆದರೆ, ಬಿಜೆಪಿ ವರಿಷ್ಠರ ಈ ನಿರ್ಧಾರ, ಕಾರ್ಯಕರ್ತರ ಮಟ್ಟದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು. ಅಂದಿನಿಂದ, AIADMK ನಾಯಕರೂ, ಅಣ್ಣಾಮಲೈ ಅವರನ್ನು ಲೇವಡಿ ಮಾಡಲು ಆರಂಭಿಸಿದ್ದರು. ಅಮಿತ್ ಶಾ ಸೂಚನೆ ಮೇರೆಗೆ ಸುಮ್ಮನಿದ್ದೇನೆ. ಇಲ್ಲದಿದ್ರೆ ಇವರ ಬಾಯಿ ಮುಚ್ಚಿಸಲು ನನಗೆ 2 ನಿಮಿಷ ಸಾಕು, ಎನ್ನುವ ಮಾತನ್ನು ಅಣ್ಣಾಮಲೈ ಹೇಳಿದ್ದರು.

2025 ರಲ್ಲಿ, ಈ ಘರ್ಷಣೆಗಳು ತೀವ್ರಗೊಂಡವು. ಅಣ್ಣಾಮಲೈ ಅವರು ದೆಹಲಿಗೆ ತೆರಳಿ ಹೈಕಮಾಂಡ್‌ನೊಂದಿಗೆ ಸಭೆ ನಡೆಸಿದರು, ಆದರೆ ರಾಜ್ಯ ಮಟ್ಟದ ಸಭೆಗಳನ್ನು ಬಿಟ್ಟರು. AIADMK ಮೈತ್ರಿಯ ಬಗ್ಗೆ ಅವರ ಅಭಿಪ್ರಾಯಗಳು ವಿಭಿನ್ನವಾಗಿದ್ದವು – “ಬಿಜೆಪಿ ಯಾರಿಗೂ ಮೋಸ ಮಾಡುವುದಿಲ್ಲ” ಎಂದು ಹೇಳಿದರೂ, ಆಂತರಿಕ ಚರ್ಚೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದರೊಂದಿಗೆ, ಹೊಸ ಪಕ್ಷ ರಚನೆಯ ಚರ್ಚೆ ರಾಜಕೀಯ ವಲಯದಲ್ಲಿ ಉಂಟಾದವು. ಟಿವಿಕೆ ಪಕ್ಷದೊಂದಿಗೆ ಮೈತ್ರಿಯ ಚರ್ಚೆಗಳು ನಡೆಯುತ್ತಿವೆ ಎಂದು ಸುದ್ದಿಗಳು ಬಂದಿದೆ.
ಇದನ್ನೂ ಓದಿ ಬಿಜೆಪಿಗೆ ಗುಡ್‌ಬೈ? ರಾಜಕೀಯದ ʼಪ್ರಿಲಿಮಿನರಿʼ ಪರೀಕ್ಷೆಯಲ್ಲಿ ಸೋತರೇ ಅಣ್ಣಾಮಲೈ!
ಕಳೆದ ವಾರ ಅಣ್ಣಾಮಲೈ ಆಡಿರುವ ಮಾತು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಮೌನ ಮುರಿದಿದ್ದಾರೆ. ಹೊಸ ಪಾರ್ಟಿ ಕಟ್ಟುವ ಸುದ್ದಿ ಊಹಾಪೋಹ ಎಂದಿದ್ದರೂ, “ತಲೆಗೆ ಗನ್ ಹಿಡಿದು ಯಾರನ್ನೂ ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇಷ್ಟವಾದರೆ ಇರುತ್ತೇನೆ, ಇಲ್ಲವಾದರೆ ರಾಜೀನಾಮೆ ನೀಡಿ ಕೃಷಿ ಮಾಡಿಕೊಂಡಿರುತ್ತೇನೆ” ಅಂತ ಹೇಳುವ ಮೂಲಕ ಪಕ್ಷದೊಳಗಿನ ಮೈತ್ರಿ ರಾಜಕಾರಣ ಮತ್ತು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಈ ಮೂಲಕ ಅಣ್ಣಾಮಲೈ ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟ ಹಾಗೂ ಕಠಿಣ ಸಂದೇಶ ರವಾನಿಸಿದ್ದಾರೆ.





