ಕಳೆದ ಐದು ವರ್ಷಗಳಲ್ಲಿ ಸುಮಾರು 6.15 ಲಕ್ಷ ಕೋಟಿ ರೂ. ಸಾಲವನ್ನು ಸರ್ಕಾರಿ ಬ್ಯಾಂಕ್‌ಗಳು ‘ರೈಟ್ ಆಫ್’ (ಎಂದಿಗೂ ಮರುಪಾವತಿಯಾಗದ ಸಾಲ) ಹೆಸರಿನಲ್ಲಿ ಮನ್ನಾ ಮಾಡಿವೆ ಎಂಬುದು ಆರ್‌ಬಿಐ ಹಂಚಿಕೊಂಡಿರುವ ಮಾಹಿತಿಗಳಿಂದ ತಿಳಿದುಬಂದಿದೆ. ಈ ಎಲ್ಲ ಹಣವೂ ಬಹುತೇಕ ಕಾರ್ಪೊರೇಟ್‌ಗಳದ್ದೇ ಆಗಿದೆ.
ಸರ್ಕಾರಿ ಬ್ಯಾಂಕ್‌ಗಳು ತಾವು ನೀಡಿರುವ ಸಾಲಗಳಲ್ಲಿ ಬರೋಬ್ಬರಿ 6.15 ಲಕ್ಷ ಕೋಟಿ ರೂ. ಮೊತ್ತದ ಸಾಲಗಳನ್ನು 2020ರ ಏಪ್ರಿಲ್‌ನಿಂದ 2025ರ ಸೆಪ್ಟೆಂಬರ್ 30ರವರೆಗೆ ‘ರೈಟ್ ಆಫ್’ ಮಾಡಿವೆ. ತಮ್ಮ ಲೆಕ್ಕ ಪುಸ್ತಕಗಳಿಂದ ಅಳಿಸಿಹಾಕಿವೆ.
ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ ಒಟ್ಟು 6.15 ಲಕ್ಷ ಕೋಟಿ ರೂ. ಮೊತ್ತದಲ್ಲಿ, 2020-21ರಲ್ಲಿ 1.33 ಲಕ್ಷ ಕೋಟಿ ರೂ., 2021-22ರಲ್ಲಿ 1.16 ಲಕ್ಷ ಕೋಟಿ ರೂ., ಹಾಗೂ 2022-23ರಲ್ಲಿ ಮತ್ತೆ 1.27 ಲಕ್ಷ ಕೋಟಿ ರೂ. ರೈಟ್ ಆಫ್ ಆಗಿದೆ.
ಆದರೆ, ಈ ಐದು ವರ್ಷಗಳಲ್ಲಿ ಸರ್ಕಾರಿ ಬ್ಯಾಂಕ್‌ಗಳು ಒಟ್ಟು 1.65 ಲಕ್ಷ ಕೋಟಿ ರೂ. ಹಣವನ್ನು ಮಾತ್ರವೇ ವಸೂಲಿ ಮಾಡಿವೆ ಎಂದು ವರದಿಯಾಗಿದೆ.
ಬೃಹತ್ ಪ್ರಮಾಣದ ಸಾಲಗಳನ್ನು ಸರ್ಕಾರಿ ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ್ದರೂ, 2022-23ನೇ ಆರ್ಥಿಕ ವರ್ಷದಿಂದ ಬ್ಯಾಂಕ್‌ಗಳ ಸುಧಾರಣೆ ಮತ್ತು ಆರ್ಥಿಕ ಸಾಧನೆಗಾಗಿ ಕೇಂದ್ರ ಸರ್ಕಾರವು ಅಗತ್ಯ ಬಂಡವಾಳವನ್ನು ಒದಗಿಸಿಲ್ಲ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಬಂಗಾಳದ ಅಂಗಳದಲ್ಲಿ ‘ಮೆಸ್ಸಿ’ ಆಕರ್ಷಣೆ: ದಾದಾ-ಬಾದ್‌ಷಾ ಸಾಥ್, ಅಭಿಮಾನಿಗಳ ಪಾಲಿಗೆ ಹಬ್ಬ
ಸರ್ಕಾರದಿಂದ ಬಂಡವಾಳ ದೊರೆಯದ ಪರಿಸ್ಥಿತಿಯಲ್ಲಿಯೂ ಸರ್ಕಾರಿ ಬ್ಯಾಂಕ್‌ಗಳು ತಮ್ಮ ಅಗತ್ಯಗಳ ಪೂರೈಕೆಗಾಗಿ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹವನ್ನು ಹೆಚ್ಚಿಸುತ್ತಿವೆ. 2022ರ ಏಪ್ರಿಲ್ ಮತ್ತು 2025ರ ಸೆಪ್ಟೆಂಬರ್ ನಡುವೆ ಈಕ್ವಿಟಿ ಮತ್ತು ಬಾಂಡ್ ವಿತರಿಸುವ ಮೂಲಕ 1.79 ಲಕ್ಷ ಕೋಟಿ ರೂ. ಹಣವನ್ನು ಸಂಗ್ರಹಿಸಿವೆ ಎಂಬುದು ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶದಿಂದ ಗೊತ್ತಾಗಿದೆ.
“ಬ್ಯಾಂಕ್‌ಗಳು ತಾವು ನೀಡಿದ ಸಾಲಗಳು ನಾಲ್ಕು ವರ್ಷಗಳಲ್ಲಿ ವಸೂಲಿ ಮಾಡಲು ಸಾಧ್ಯವಾಗದಿದ್ದರೆ, ಆ ಸಾಲವನ್ನು ಸಾಮಾನ್ಯವಾಗಿ ನಾಲ್ಕು ವರ್ಷಗಳ ಬಳಿಕ ಆರ್‌ಬಿಐ ನಿಯಮಗಳು ಮತ್ತು ಆಡಳಿತ ಮಂಡಳಿಯ ನೀತಿಗಳನ್ನು ಅನುಸರಿಸಿ ‘ಅನುತ್ಪಾದಕ ಆಸ್ತಿಗಳು’ (ಎನ್‌ಪಿಎ) ಎಂದು ಘೋಷಿಸಿ, ರೈಟ್ ಆಫ್ ಮಾಡುತ್ತವೆ. ರೈಟ್ ಆಫ್ ಎಂದರೆ ಸಾಲಗಳ ಮನ್ನಾ ಎಂದು ಅರ್ಥವಲ್ಲ. ರೈಟ್ ಆಫ್ ಮಾಡಿದ ಬಳಿಕವೂ ಸಾಲಗಾರರು ತಮ್ಮ ಸಾಲದ ಮೊತ್ತವನ್ನು ಮರುಪಾವತಿಸಲು ಹೊಣೆಗಾರರಾಗಿರುತ್ತಾರೆ” ಎಂದು ಸಹಾಯಕ ವಿತ್ತ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.
ಆದರೆ, ರೈಟ್ ಆಫ್ ಮಾಡಲಾದ ಮೊತ್ತವು ಪರೋಕ್ಷವಾಗಿ ಮನ್ನಾ ಎಂದೇ ಅರ್ಥೈಸುತ್ತದೆ. ರೈಟ್ ಆಫ್ ಮಾಡಿದ ಸಾಲದ ಕುರಿತು ಬ್ಯಾಂಕ್‌ಗಳು ವಸೂಲಿ ಅಥವಾ ಬೇರಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂಬುದು ವಾಸ್ತವ ಎನ್ನುತ್ತಾರೆ ಆರ್ಥಿಕ ತಜ್ಞರು.




