ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಸೆರೆ ಹಿಡಿದಿದ್ದು, ವೆನೆಜುವೆಲಾ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ವೆನೆಜುವೆಲಾ ಮೇಲಿನ ದಾಳಿ ಮತ್ತು ಅಮೆರಿಕದ ಕ್ರೌರ್ಯದ ಕುರಿತು ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ನಿಲುವು ತೆಗೆದುಕೊಳ್ಳದೇ ಇರುವುದಕ್ಕೆ ಮೋದಿ ವಿರುದ್ಧ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಅಮೆರಿಕಗೆ ಹೆದರುತ್ತಿದೆ. ವೆನೆಜುವೆಲಾದಂತೆ ಭಾರತದ ಮೇಲೂ ಅಂತಹ ಘಟನೆ ಸಂಭವಿಸಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ವೆನೆಜುವೆಲಾದಲ್ಲಿ ಏನು ನಡೆಯುತ್ತಿದೆಯೋ, ಅದು ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ. ಚುನಾಯಿತ ಅಧ್ಯಕ್ಷರನ್ನು ಅಪಹರಿಸಲಾಗಿದೆ. ನಾಳೆ ಬೇರೆ ಯಾವುದೇ ದೇಶದ ಮೇಲೂ ಇದೇ ರೀತಿ ಆಗಬಹುದು ಎಂಬುದು ಗಂಭೀರ ಕಳವಳಕಾರಿ. ನಾಳೆ, ಭಾರತಕ್ಕೂ ಇದು ಆಗಬಹುದು” ಎಂದು ಚವಾಣ್ ಹೇಳಿದ್ದಾರೆ.
“ವೆನೆಜುವೆಲಾ ವಿಷಯದ ಬಗ್ಗೆ ಭಾರತ ಮಾತನಾಡಿಲ್ಲ, ನಿಲುವು ತೆಗೆದುಕೊಂಡಿಲ್ಲ. ರಷ್ಯಾ ಮತ್ತು ಚೀನಾ ನಿಲುವು ತೆಗೆದುಕೊಂಡಿವೆ. ಅಮೆರಿಕದ ಕೃತ್ಯವನ್ನು ಟೀಕಿಸಿವೆ. ನಾವು ಉಕ್ರೇನ್ ಯುದ್ಧದಲ್ಲೂ ನಿಲುವು ತೆಗೆದುಕೊಳ್ಳಲಿಲ್ಲ, ಇಸ್ರೇಲ್-ಹಮಾಸ್ ವಿಷಯದಲ್ಲೂ ನಾವು ನಿಲುವು ತೆಗೆದುಕೊಳ್ಳಲಿಲ್ಲ, ಈಗ ನಾವು ಅಮೆರಿಕನ್ನರಿಗೆ ತುಂಬಾ ಹೆದರುತ್ತಿದ್ದೇವೆ, ಏನಾಯಿತು ಎಂಬುದನ್ನು ನಾವು ಟೀಕಿಸಲು ಸಹ ಪ್ರಯತ್ನಿಸುತ್ತಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಕ್ಯಾರಕಾಸ್‌ನಲ್ಲಿ ಸೆರೆಹಿಡಿದು, ನ್ಯೂಯಾರ್ಕ್‌ನಲ್ಲಿ ಇರಿಸಲಾಗಿದೆ. ಅಮೆರಿಕ ಗುಪ್ತಚರ ಸಂಸ್ಥೆಗಳು ಮತ್ತು ಯುಎಸ್ ಕಾನೂನು ಜಾರಿ ಸಂಸ್ಥೆಗಳು ಅವರನ್ನು ಸೆರೆಹಿಡಿದಿವೆ.
ಈ ನಡುವೆ, ವೆನೆಜುವೆಲಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ವೆನೆಜುವೆಲಾದ ಜನರ ಸುರಕ್ಷತೆ ಮತ್ತು ಯೋಗಕ್ಷೇಮದ ವಿಚಾರದಲ್ಲಿ ಆ ದೇಶಕ್ಕೆ ಭಾರತದ ಬೆಂಬಲ ನೀಡುವುದಾಗಿ ಹೇಳಿದೆ. ಆದರೆ, ಅಮೆರಿಕದ ಕೃತ್ಯವನ್ನು ಖಂಡಿಸಿಲ್ಲ. “ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ತೀವ್ರ ಕಳವಳಕಾರಿಯಾಗಿವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿ, ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂಬಂಧಪಟ್ಟ ಎಲ್ಲರಿಗೂ ಕರೆ ನೀಡುತ್ತೇವೆ” ಎಂದಷ್ಟೇ ವಿದೇಶಾಂಗ ಸಚಿವಾಲಯ ಹೇಳಿದೆ.




