ದೇಶದಲ್ಲಿ ಗೃಹಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸುವಂತೆ ತೈಲ ಸಂಸ್ಕರಣಾ ಕಂಪನಿಗಳಿಗೆ ಸೂಚಿಸಿದೆ. ಉತ್ಪಾದಿಸಿದ ಎಲ್‌ಪಿಜಿಯನ್ನು ಕೇವಲ ಗೃಹಬಳಕೆಯ ಗ್ರಾಹಕರಿಗೆ ಮಾರಾಟ ಮಾಡಲು ಮೂರು ಸಾರ್ವಜನಿಕ ವಲಯದ ಘಟಕಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂಗೆ ಒದಗಿಸುವಂತೆ ಆದೇಶಿಸಿದೆ.
1955ರ ಅಗತ್ಯ ವಸ್ತುಗಳ ಕಾಯ್ದೆ ಮತ್ತು 1999ರ ಪೆಟ್ರೋಲಿಯಂ ಉತ್ಪನ್ನಗಳ (ಉತ್ಪಾದನೆ, ಸಂಗ್ರಹಣೆ ಮತ್ತು ಪೂರೈಕೆ ನಿರ್ವಹಣೆ) ಆದೇಶದ ಅಡಿಯಲ್ಲಿ ಬುಧವಾರ (ಮಾರ್ಚ್ 5, 2026) ಈ ಕುರಿತು ಆದೇಶ ಹೊರಡಿಸಲಾಗಿದೆ.
“ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ತೈಲ ಸಂಸ್ಕರಣಾ ಕಂಪನಿಗಳು ತಮ್ಮಲ್ಲಿ ಲಭ್ಯವಿರುವ ಪ್ರೊಪೇನ್ ಮತ್ತು ಬ್ಯುಟೇನ್ ಸ್ಟ್ರೀಮ್‌ಗಳನ್ನು ಎಲ್‌ಪಿಜಿ ಉತ್ಪಾದನೆಗೆ ಗರಿಷ್ಠವಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಅದನ್ನು ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಲಭ್ಯವಾಗುವಂತೆ ಮಾಡಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ರೀತಿ ಉತ್ಪಾದಿಸಲಾದ ಎಲ್‌ಪಿಜಿಯನ್ನು ಕೇವಲ ಗೃಹಬಳಕೆಯ ಗ್ರಾಹಕರಿಗೆ ಮಾತ್ರ ಪೂರೈಕೆ ಅಥವಾ ಮಾರಾಟ ಮಾಡುವುದನ್ನು ಸಾರ್ವಜನಿಕ ವಲಯದ ಎಲ್ಲ ತೈಲ ಮಾರುಕಟ್ಟೆ ಕಂಪನಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ವಿನಾಶಕಾರಿ ನೀತಿ, ಭಾರತೀಯ ವಿಮಾನಯಾನಕ್ಕೆ ದುಃಸ್ವಪ್ನ
ತೈಲ ಸಂಸ್ಕರಣಾ ಕಂಪನಿಗಳು ಪೆಟ್ರೋಕೆಮಿಕಲ್ ಉತ್ಪನ್ನಗಳು ಅಥವಾ ಇತರ ಡೌನ್‌ಸ್ಟ್ರೀಮ್ ಉತ್ಪನ್ನಗಳ ತಯಾರಿಕೆಗಾಗಿ ಪ್ರೊಪೇನ್ ಅಥವಾ ಬ್ಯುಟೇನ್ ಅನ್ನು ಬೇರೆಡೆಗೆ ತಿರುಗಿಸುವಂತಿಲ್ಲ, ಸಂಸ್ಕರಿಸುವಂತಿಲ್ಲ ಅಥವಾ ಬಳಸುವಂತಿಲ್ಲ ಎಂದು ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಡುಗೆ ಅನಿಲವು ಪ್ರೊಪೇನ್ ಮತ್ತು ಬ್ಯುಟೇನ್ ಅನಿಲಗಳ ಸಂಯೋಜನೆಯಿಂದ ರೂಪುಗೊಳ್ಳುತ್ತದೆ ಎಂಬುದು ಇಲ್ಲಿ ಗಮನಾರ್ಹ.





