ಇಂಡಿಗೋ ಬಿಕ್ಕಟ್ಟು ಮುಂದುವರೆದಿದ್ದು, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಸುಮಾರು 180 ವಿಮಾನಗಳನ್ನು ಇಂಡಿಗೋ ಮಂಗಳವಾರ ರದ್ದುಗೊಳಿಸಿದೆ. ವಿಮಾನಯಾನ ಸಂಸ್ಥೆಯಲ್ಲಿ ಸತತ ಎಂಟನೇ ದಿನವೂ ಅಡಚಣೆ ಉಂಟಾಗಿದೆ. ಈ ನಡುವೆ ಮಾರ್ಗಗಳನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ, 58 ವಿಮಾನಗಳು ರದ್ದಾಗಿದೆ. 14 ಆಗಮಿಸುವ ಮತ್ತು 44 ನಿರ್ಗಮಿಸುವ ವಿಮಾನಗಳು ರದ್ದಾಗಿವೆ. ಬೆಂಗಳೂರಿನಲ್ಲಿ ಆಗಮಿಸುವ 58 ವಿಮಾನಗಳು ಮತ್ತು 63 ನಿರ್ಗಮಿಸುವ ವಿಮಾನಗಳು ಸೇರಿದಂತೆ ಒಟ್ಟಾಗಿ 121 ವಿಮಾನಗಳು ರದ್ದಾಗಿವೆ.
ಇದನ್ನು ಓದಿದ್ದೀರಾ? ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?
ಇನ್ನು ಬಿಕ್ಕಟ್ಟಿನಿಂದಾಗಿ ಇಂಡಿಗೋ ಹಲವು ಮಾರ್ಗಗಳನ್ನು ಕಳೆದುಕೊಳ್ಳಲಿದೆ. ದಂಡವಾಗಿ ರ್ಕಾರವು ವಿಮಾನಯಾನ ಸಂಸ್ಥೆಯ ಮಾರ್ಗ ಹಂಚಿಕೆಯನ್ನು ಖಂಡಿತವಾಗಿಯೂ ಕಡಿತಗೊಳಿಸುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಡಿಡಿ ನ್ಯೂಸ್‌ಗೆ ಪ್ರತಿಕ್ರಿಯಿಸಿದ ನಾಯ್ಡು, “ಇಂಡಿಗೋದ ಚಳಿಗಾಲದ ವೇಳಾಪಟ್ಟಿಯಿಂದ ಕೆಲವು ಮಾರ್ಗಗಳನ್ನು ಕಡಿಮೆ ಮಾಡಲು ನಾವು ಆದೇಶ ಹೊರಡಿಸುತ್ತೇವೆ. ಇತರ ವಾಹಕಗಳಿಗೆ ಈ ಮಾರ್ಗವನ್ನು ನೀಡಲಾಗುತ್ತದೆ. ಸರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಂಡಿಯೋ ಸಾಬೀತುಪಡಿಸಿದ ಬಳಿಕವೇ ಮತ್ತೆ ವಿಮಾನ ಮಾರ್ಗಗಳನ್ನು ಇಂಡಿಗೋಗೆ ಹಂಚಲಾಗುವುದು” ಎಂದು ತಿಳಿಸಿದ್ದಾರೆ.
ಇಂಡಿಗೋ 90 ದೇಶೀಯ ಮತ್ತು 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತಾಣಗಳಲ್ಲಿ 2,200ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ. ದೇಶದಲ್ಲಿ ಬಹುತೇಕ ಏಕಸ್ವಾಮ್ಯವನ್ನು ಇಂಡಿಗೋ ಹೊಂದಿದೆ ಎಂದರೆ ತಪ್ಪಾಗಲಾರದು. ಆದರೆ ಕಳೆದ ಹಲವು ದಿನಗಳಿಂದ ಹಲವು ವಿಮಾನಗಳನ್ನು ರದ್ದುಗೊಳಿಸಿದೆ. ಸಿಬ್ಬಂದಿ ಕೊರತೆ ಕಾರಣವನ್ನು ನೀಡಿದೆ. ಇದರಿಂದಾಗಿ ಹಲವು ಪ್ರಯಾಣಿಕರು ಪರದಾಡುವಂತಾಗಿದೆ. ಇದಾದ ಬೆನ್ನಲ್ಲೇ ಸರ್ಕಾರವು ಸಿಬ್ಬಂದಿಗೆ ಒಂದು ವಾರ ವಿಶ್ರಾಂತಿ ನಿಯಮವನ್ನು ಹಿಂಪಡೆದಿದೆ. ಆದರೆ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಲು ಇನ್ನೂ ಹಲವು ದಿನಗಳು ಬೇಕಾಗುತ್ತದೆ ಎಂದು ಇಂಡಿಗೋ ಹೇಳಿಕೊಂಡಿದೆ. ಆದರೆ ಇವೆಲ್ಲವುದಕ್ಕೂ ಏರ್‌ಬಸ್ ತಂತ್ರಾಂಶ ಸಮಸ್ಯೆಯೇ ಕಾರಣವೇ ಎಂಬ ಗುಮಾನಿಯೂ ಇದೆ. ಇತ್ತೀಚಿಗಷ್ಟೇ ಏರ್‌ಬಸ್ ತಂತ್ರಾಂಶ ಸಮಸ್ಯೆಯಿಂದಾಗಿ ಹಲವು ವಿಮಾನಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ನಡೆದಿತ್ತು.





