ದೇಶದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿನಿ ಗೌರಿ ಗರಿಷ್ಠ ಮತಗಳನ್ನು ಪಡೆದು ಜಯಗಳಿಸಿದ್ದಾರೆ.
1999ರಲ್ಲಿ ಬಳ್ಳಾರಿ ಮೂಲದ ಸಯ್ಯದ್ ನಾಸಿರ್ ಹುಸೆನ್ ಜೆಎನ್‌ಯು ವಿದ್ಯಾರ್ಥಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್ಐ)ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಅದಾದ ಬಳಿಕ ಕರ್ನಾಟಕ ಮೂಲದ ಯಾವುದೇ ವಿದ್ಯಾರ್ಥಿ/ವಿದ್ಯಾರ್ಥಿನಿ ಜೆಎನ್‌ಯು ಚುನಾವಣೆಯಲ್ಲಿ ಜಯ ಸಾಧಿಸಿರಲಿಲ್ಲ.
ಇದನ್ನು ಓದಿದ್ದೀರಾ? ಜೆಎನ್‌ಯು ವಿವಿ ವಿದ್ಯಾರ್ಥಿ ಘಟಕ ಚುನಾವಣೆ: ಎಡ ಸಂಘಟನೆಗಳಿಗೆ ಭರ್ಜರಿ ಜಯ, ಎಬಿವಿಪಿಗೆ ಮುಖಭಂಗ
2025ರ ಚುನಾವಣೆಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿನಿ ಗೌರಿ School of Social Science (SSS)ನಲ್ಲಿ ಕೌನ್ಸಿಲರ್ ಸ್ಥಾನದಲ್ಲಿ ಗರಿಷ್ಠ ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. 5 ಕೌನ್ಸಿಲರ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇತರರಗಿಂತ ಅಧಿಕ ಮತಗಳನ್ನು ಪಡೆದಿದ್ದಾರೆ. ಅಂದರೆ ಒಟ್ಟು 1200 ಮತಗಳಲ್ಲಿ, ಸುಮಾರು 723 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಎಂಎ ಸಮಾಜಶಾಸ್ತ್ರದ ವಿದ್ಯಾರ್ಥಿನಿಯಾದ ಗೌರಿ ಎಡಪಂಥಿಯ ‘ಕಲೆಕ್ಟಿವ್’ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತೆಯಾಗಿದ್ದು, ಗೌರಿಯ ಸೈದ್ಧಾಂತಿಕ ಬದ್ಧತೆಯಿಂದಾಗಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಗೌರಿ ಅಭ್ಯಾಸದ ಜತೆಜತೆಗೆ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಾ ಬಂದಿದ್ದಾರೆ ಮತ್ತು ಹೋರಾಟಗಳಲ್ಲೂ ಸಕ್ರಿಯವಾಗಿದ್ದಾರೆ.





