ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಸರ್ಕಾರಗಳು, ಸಂಘ-ಸಂಸ್ಥೆಗಳು ನಿರಂತರವಾಗಿ ಹೇಳುತ್ತಲೇ ಇವೆ. ಹಲವು ರೀತಿಯ ಅಭಿಯಾನಗಳು, ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದರೆ, ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳ ಬಳಕೆ ಮತ್ತು ಪ್ರಚಾರ ತೀರಾ ಕಡಿಮೆಯಿದೆ. ಇದೇ ಸಂದರ್ಭದಲ್ಲಿ ಮಹಿಳಾ ಗುಂಪೊಂದು ಪ್ಲಾಸ್ಟಿಕ್ ತಟ್ಟೆ, ತೋಟಗಳಿಗೆ ಪರ್ಯಾಯವನ್ನು ಕಂಡುಹಿಡಿದಿವೆ. ಭತ್ತದ ತ್ಯಾಜ್ಯಗಳನ್ನು ಬಳಸಿ ಊಟಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ತರಾಯಿಸುತ್ತಿವೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆ ಬಳಿಯ ಕಾಕಾನಿ ಗ್ರಾಮದಲ್ಲಿ ರಾಯುಡು ರಾಜಲಕ್ಷ್ಮಿ ಮತ್ತು ವೆಂಕಟ ರಮಣಿ ನೇತೃತ್ವದಲ್ಲಿ ಮಹಿಳೆಯರು ‘ಅಗ್ರಿವೇರ್’ ಎಂಬ ಪುಟ್ಟ ‘ಸ್ಟಾರ್ಟ್‌ಅಪ್’ ಆರಂಭಿಸಿದ್ದಾರೆ. ಅವರು ಭತ್ತದ ಹೊಟ್ಟು, ಅಕ್ಕಿ ಹೊಟ್ಟು ಹಾಗೂ ಭತ್ತದ ಒಣಹುಲ್ಲಿನಂತಹ ತ್ಯಾಜ್ಯಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ-ಜೈವಿಕ ತಟ್ಟೆಗಳು, ಲೋಟಗಳು, ಬಟ್ಟಲುಗಳು, ಚಮಚಗಳು ಹಾಗೂ ನಾನಾ ಬಗೆಯ ಬಳಸಿ-ಬಿಸಾಡುವ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ತಮ್ಮ ಉದ್ಯಮವನ್ನು ವಿಸ್ತರಿಸಲು ಬ್ಯಾಂಕ್‌ಗಳಿಂದ ಸಾಲ ಪಡೆದು ಸುಮಾರು 3 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.ಲಕ್ಷ್ಮಿ ಮತ್ತು ರಮಣಿ ಅವರ ಕೆಲಸಕ್ಕೆ ಅವರ ಪತಿಯರಾದ ರಾಯುಡು ಭಾನು ಕಿರಣ್ ಮತ್ತು ಮುರಳಿ ಕೃಷ್ಣ ನೆರವು ನೀಡುತ್ತಿದ್ದಾರೆ.
“ನಾವು ಯಾವುದೇ ಸಮಾರಂಭ, ಸಣ್ಣ ಅಥವಾ ಬೃಹತ್ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ತಟ್ಟೆಗಳು ಮತ್ತು ಕಪ್‌ಗಳನ್ನು ಹೆಚ್ಚಾಗಿ ಬಳಸುವುದನ್ನು ನೋಡಿದ್ದೇವೆ. ಅವುಗಳನ್ನು ಬಳಕೆಯ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಗುಂಡಿಗಳಲ್ಲಿ ಎಸೆಯಲಾಗುತ್ತದೆ. ಇದು ಪರಿಸರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಆ ಅಪಾಯಗಳ ಕುರಿತಾದ ಚಿಂತನೆಯು ನಮ್ಮನ್ನು ಪ್ಲಾಸ್ಟಿಕ್ ಮುಕ್ತ, ಮಾಲಿನ್ಯ ಮುಕ್ತ ಪರ್ಯಾಯಗಳನ್ನು ಹುಡುಕಲು ಪ್ರೇರೇಪಿಸಿತು” ಎಂದು ರಾಜಲಕ್ಷ್ಮಿ ಹೇಳಿದ್ದಾರೆ.

“2024ರಲ್ಲಿ ಉದ್ಯಮವನ್ನು ಆರಂಭಿಸಿದಾಗ,ಬೆಂಗಳೂರಿನಿಂದ ಮೂರು ಉನ್ನತ ದರ್ಜೆಯ ಯಂತ್ರಗಳನ್ನು 60 ಲಕ್ಷ ರೂ.ಗಳಿಗೆ ಖರೀದಿ ಮಾಡಿದೆವು. ಪ್ರತಿ ಯಂತ್ರದಿಂದ ದಿನಕ್ಕೆ ಸುಮಾರು 1,500 ವಸ್ತುಗಳನ್ನು ತಯಾರಿಸಬಹುದು. ಇದೀಗ, ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಉದ್ಯಮವು ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಸುತ್ತಿದೆ.ಉತ್ಪಾದನಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಬೆಂಬಲಿತ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಕಚ್ಚಾ ವಸ್ತುಗಳ ಮಿಶ್ರಣವನ್ನು ಸುಮಾರು 400° ಸೆಲ್ಸಿಯಸ್‌ನಲ್ಲಿ ಬಿಸಿ ಮಾಡಿ ತಟ್ಟೆಗಳು, ಕಪ್‌ಗಳು ಮತ್ತು ಬಟ್ಟಲುಗಳನ್ನು ತಯಾರಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ನಾವು ತರಾಯಿಸುವ ವಸ್ತುಗಳು ಪರಿಸರ ಮತ್ತು ಆರೋಗ್ಯ ಸ್ನೇಹಿಯಾಗಿವೆ. ಉತ್ಪನ್ನಗಳು ವಿಟಮಿನ್ ಬಿ ಮತ್ತು ಕೆ ನಂತಹ ಸೂಕ್ಷ್ಮ ಪೋಷಕಾಂಶಗಳನ್ನು ಉಳಿಸಿಕೊಂಡಿರುತ್ತವೆ. ಇವುಗಳಲ್ಲಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ. ಸಂಪೂರ್ಣವಾಗಿ ಭತ್ತದ ತ್ಯಾಜ್ಯದಿಂದ ತಯಾರಿಸಲ್ಪಟ್ಟ ವಸ್ತುಗಳು 90 ರಿಂದ 120 ದಿನಗಳಲ್ಲಿ ನೈಸರ್ಗಿಕವಾಗಿ ಕೊಳೆಯುತ್ತವೆ. ಇವು ವಿಷಕಾರಿಯಲ್ಲದ ಕಾರಣ, ಬಳಸಿದ ತಟ್ಟೆಗಳನ್ನು ನಿಯಮಿತ ಮೇವಿನೊಂದಿಗೆ ಹಸುಗಳು ಮತ್ತು ಎಮ್ಮೆಗಳಿಗೂ ತಿನ್ನಿಸಬಹುದು” ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ವಿದ್ಯುತ್ ಬಳಕೆ ಮತ್ತು ನಿರಂತರ ಕೌಶಲ್ಯಪೂರ್ಣ ಕಾರ್ಮಿಕರ ಅಗತ್ಯತೆಯಂತಹ ಸವಾಲುಗಳ ಹೊರತಾಗಿಯೂ, ಕಚ್ಚಾ ವಸ್ತುಗಳನ್ನು ಪಡೆಯುವುದು ಸುಲಭವಾಗಿದೆ. ಭತ್ತದ ಹೊಟ್ಟನ್ನು ಹತ್ತಿರದ ಅಕ್ಕಿ ಗಿರಣಿಗಳಿಂದ ಸಂಗ್ರಹಿಸಲಾಗುತ್ತದೆ. ಭತ್ತದ ಹುಲ್ಲನ್ನು ಸ್ಥಳೀಯ ರೈತರಿಂದ ನೇರವಾಗಿ ಪಡೆಯಲಾಗುತ್ತದೆ.
ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್




