ಮೂರು ವರ್ಷಕ್ಕಿಂತ ಹಳೆಯ ಜಿಎಸ್‌ಟಿ ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವವರಿಗೆ ಈ ತಿಂಗಳ ಕೊನೆಯವರೆಗೆ ಅವಕಾಶ ಕೊಡಲಾಗಿದೆ. ಇಷ್ಟು ಹಳೆಯ ಜಿಎಸ್‌ಟಿ ಸಲ್ಲಿಸಲು ಜೂನ್ 30ಕ್ಕೆ ಅಂತಿಮ ದಿನವಾಗಿದೆ.
ಜುಲೈ 1ರಿಂದ ಹಳೆಯ ಮೂರು ವರ್ಷದ ಹಿಂದಿನ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ. ಒಂದು ವೇಳೆ, ಪಾವತಿದಾರರು ಜೂನ್ 30ರೊಳಗೆ ಜಿಎಸ್‌ಟಿ ಸಲ್ಲಿಸದೇ ಇದ್ದರೆ ಆ ತೆರಿಗೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸಿಗುವುದಿಲ್ಲ. ಇದರ ಜೊತೆಗೆ, ತೆರಿಗೆ ಅಧಿಕಾರಿಗಳು ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಬಹುದು.
ಜುಲೈ 1ರಿಂದ ಪಾವತಿದಾರರಿಗೆ ಮೂರು ವರ್ಷದವರೆಗೆ ಮಾತ್ರ ಜಿಎಸ್‌ಟಿ ಸಲ್ಲಿಸಲು ಅವಕಾಶ ಇರುತ್ತದೆ. ಅದಕ್ಕೂ ಹಿಂದಿನ ತೆರಿಗೆಗೆ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮೂರು ವರ್ಷದ ವಿಂಡೋವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ, ಅದು ಎರಡು ವರ್ಷಕ್ಕೆ ಸೀಮಿತಗೊಳ್ಳಬಹುದು. ಅಥವಾ ಒಂದು ವರ್ಷಕ್ಕೂ ಸೀಮಿತಗೊಳ್ಳಬಹುದು.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಹೆಚ್ಚಾದ ಪ್ರತಿಭಟನೆ: 5 ದಿನ ಇಂಟರ್‌ನೆಟ್ ಸೇವೆ ಸ್ಥಗಿತ
ಒಂದು ವೇಳೆ ಎರಡು ವರ್ಷಕ್ಕೆ ಈ ವಿಂಡೋ ಸೀಮಿತಗೊಳಿಸಲು ನಿರ್ಧರಿಸಿದರೆ, ಎರಡು ವರ್ಷದಷ್ಟು ಹಿಂದಿನ ಜಿಎಸ್‌ಟಿ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಸದ್ಯ ಇದು ಮೂರು ವರ್ಷ ಇದೆ. ಇಂದಿನ (2025ರ ಜೂನ್) ಜಿಎಸ್‌ಟಿ ರಿಟರ್ನ್ ಅನ್ನು ಸಲ್ಲಿಸಲು ಪಾವತಿದಾರರು 2028ರ ಜೂನ್ವರೆಗೂ ಸಮಯಾವಕಾಶ ಹೊಂದಿರುತ್ತಾರೆ.
ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂದರೇನು?
ನೀವು ಒಂದು ಉತ್ಪನ್ನ ತಯಾರಿಸಬೇಕಾದರೆ ಕಚ್ಛಾ ವಸ್ತುಗಳನ್ನು ಖರೀದಿಸುವಾಗ ತೆರಿಗೆ ಪಾವತಿಸಿರುತ್ತೀರಿ. ಆದರೆ, ನಿಮ್ಮ ಉತ್ಪನ್ನ ಮಾರುವಾಗಲೂ ನೀವು ತೆರಿಗೆ ಪಾವತಿಸುತ್ತೀರಿ. ಒಂದೇ ಉತ್ಪನ್ನಕ್ಕೆ ನೀವು ಎರಡೆರಡು ಬಾರಿ ಟ್ಯಾಕ್ಸ್ ಕಟ್ಟಿದಂತಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರವು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಒದಗಿಸಿದೆ. ನೀವು ಕಚ್ಛಾ ವಸ್ತುಗಳ ಖರೀದಿ ವೇಳೆ ಪಾವತಿಸಿದ ತೆರಿಗೆ ಮೊತ್ತವನ್ನು ಮರಳಿ ಪಡೆಯಬಹುದು. ಇದನ್ನೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನಲಾಗುತ್ತದೆ. ಇದನ್ನು ಪಡೆಯಬೇಕಾದರೆ ನೀವು ಜಿಎಸ್‌ಟಿ ರಿಟರ್ನ್ ಫೈಲ್ ಮಾಡಬೇಕು.
ವ್ಯವಹಾರ ನಡೆಸುವವರಿಗೆ ಜಿಎಸ್‌ಟಿ ಅನ್ವಯ ಆಗುತ್ತದೆ. ಜಿಎಸ್‌ಟಿ ನೊಂದಾವಣಿ ಮಾಡಿಸಿರಬೇಕು. ಹೀಗಿದ್ದಾಗ, ನೀವು ಈ ಕ್ರಮ ಅನುಸರಿಸಿ ಜಿಎಸ್‌ಟಿ ರಿಟರ್ನ್ ಫೈಲ್ ಮಾಡಬಹುದು. ಅದಕ್ಕೆ ಮುನ್ನ ಎಲ್ಲ ಇನ್ವಾಯ್ಸ್ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಜಿಎಸ್‌ಟಿ ವೆಬ್‌ಸೈಟ್‌ಗೆ ಹೋಗಿ ಸಲ್ಲಿಸಬೇಕು.





