2027ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಗುಜರಾತ್ ಕಾಂಗ್ರೆಸ್‌ಮೂರು ದಶಕದ ಬಿಜೆಪಿಯ ದುರಾಡಳಿತದ ವಿರುದ್ಧ ನವೆಂಬರ್ 21 ರಿಂದ ‘ಜನ್ ಅಕ್ರೋಶ್ ಯಾತ್ರೆ’ ಆರಂಭಿಸುತ್ತಿದೆ. ಉತ್ತರ ಗುಜರಾತ್‌ನಿಂದ ಆರಂಭವಾಗುವ ಈ ಯಾತ್ರೆ 1,100 ಕಿಲೋಮೀಟರ್ ಕ್ರಮಿಸಿ ಡಿಸೆಂಬರ್ 3 ರಂದು ಮೊದಲ ಹಂತ ಪೂರ್ಣಗೊಳಿಸಲಿದೆ ಎಂದು ಹೇಳಿಲಾಗಿದೆ.
ಉತ್ತರ ಗುಜರಾತ್‌ನ ಧೀಮಾ ಗ್ರಾಮದಿಂದ ಆರಂಭವಾಗುವ ಈ ಯಾತ್ರೆಯು ಮೊದಲ ಹಂತದಲ್ಲಿ ಏಳು ಜಿಲ್ಲೆಗಳು, 40 ತಾಲೂಕುಗಳು ಮತ್ತು 12 ನಗರಗಳನ್ನು ಕ್ರಮಿಸಲಿದೆ. ಸುಮಾರು 1,100 ಕಿಲೋಮೀಟರ್ ದೂರವನ್ನು ಕ್ರಮಿಸಿ, ಡಿಸೆಂಬರ್ 3 ರಂದು ಬೆಹರಜಿ ದೇವಾಲಯದಲ್ಲಿ ಮೊದಲ ಹಂತವು ಕೊನೆಗೊಳ್ಳಲಿದೆ.
ಕಳೆದ ಮೂರು ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಆಡಳಿತವು ಜನರನ್ನು ಗುಲಾಮರನ್ನಾಗಿಸಿ, ಶೋಷಿಸುತ್ತಿದೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಚಾವ್ಡಾ ಆರೋಪಿಸಿದ್ದಾರೆ. ಗುಜರಾತ್‌ನಲ್ಲಿ ಭಯ, ಹಸಿವು ಮತ್ತು ಭ್ರಷ್ಟಾಚಾರ ಮನೆಮಾಡಿದೆ. ಸರ್ಕಾರದ ಬದಲಿಗೆ ಅಧಿಕಾರಿಗಳ ಆಡಳಿತ ನಡೆಯುತ್ತಿದೆ ಮತ್ತು ಜನರ ಸಂವಿಧಾನಬದ್ಧ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಈ ಯಾತ್ರೆಯನ್ನು ಬದಲಾವಣೆಯ ಚಳವಳಿ ಎಂದು ಕರೆದ ಚಾವ್ಡಾ, ಇದು 2027 ರ ರಾಜ್ಯ ಚುನಾವಣೆಗೆ ಕಾಂಗ್ರೆಸ್‌ನ ಸುದೀರ್ಘ ಪ್ರಚಾರದ ಆರಂಭ ಎಂದು ಹೇಳಿದರು.




