ರೈತರ ಬೇಡಿಕೆಗಳು ಈಡೇರದಿದ್ದರೆ ಸಾಮೂಹಿಕ ಆಂದೋಲನ ಮತ್ತು ‘ನೇಪಾಳವಾಲಿ’ (ನೇಪಾಳದಲ್ಲಿ ನಡೆದಂತೆ) ಶೈಲಿಯ ದಂಗೆ ಎದುರಾಗುತ್ತದೆ ಎಂದು ಗುಜರಾತ್ ಸರ್ಕಾರಕ್ಕೆ ಅಲ್ಲಿನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ಎಚ್ಚರಿಕೆ ನೀಡಿದ್ದಾರೆ. ರೈತರ ಬೇಡಿಕೆ ಈಡೇರಿಸಲು ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ‘ಜನ ಆಕ್ರೋಶ್ ಸಭಾ’ ಸಮಾವೇಶದಲ್ಲಿ ಮಾತನಾಡಿದ ಚಾವ್ಡಾ, ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ಸರ್ಕಾರವು ಭ್ರಷ್ಟಾಚಾರ, ದುರಹಂಕಾರ ಹಾಗೂ ರೈತರ ನೋವಿನ ಬಗ್ಗೆ ಅಸಡ್ಡೆಯಿಂದ ವರ್ತಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಸರ್ಕಾರ ಎರಡು ತಿಂಗಳೊಳಗೆ ರೈತರ ಕುಂದುಕೊರತೆಗಳನ್ನು ಪರಿಹರಿಸಬೇಕು. ವಿಫಲವಾದರೆ, ಗಾಂಧಿನಗರದ ವಿಧಾನಸಭೆಯನ್ನು ಸುತ್ತುವರಿಯಲು ಗುಜರಾತ್‌ನ ಎಲ್ಲ ಭಾಗಗಳ ಗ್ರಾಮೀಣ ಜನರನ್ನು ಕಾಂಗ್ರೆಸ್ ಸಜ್ಜುಗೊಳಿಸಲಿದೆ. ನ್ಯಾಯ ಸಿಗುವವರೆಗೆ ನಿರಂತರ ಆಂದೋಲನ ಪ್ರಾರಂಭಿಸಲಿದೆ” ಎಂದು ಘೋಷಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು
“ಸರ್ಕಾರ ರೈತರ ಹಿತಾಸಕ್ತಿಗಾಗಿ ಕೆಲಸ ಮಾಡದಿದ್ದರೆ, ನಾವು ರೈತರಿಗಾಗಿ ಹೋರಾಟ ನಡೆಸುತ್ತೇವೆ. ಸಾರ್ವಜನಿಕ ಕೋಪವು ಹೆಚ್ಚಾಗುತ್ತಿದೆ. ಈಗಲಾದರೂ, ಸರ್ಕಾರ ಎಚ್ಚೆತ್ತುಕೊಂಡು, ಕೆಲಸ ಮಾಡಬೇಕು. ಇಲ್ಲವಾದಲ್ಲಿ, ನಾವು ‘ನೇಪಾಳವಾಲಿ’ ಶೈಲಿಯ ಆಂದೋಲನ ಮಾಡುತ್ತೇವೆ. ನಿಮ್ಮ ಸಿಂಹಾಸನ ಉಳಿಯುವುದಿಲ್ಲ” ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
“ಅಕಾಲಿಕ ಮಳೆ ನಷ್ಟ, ಪರಿಹಾರದ ಕೊರತೆ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸರಿಯಾದ ನೆರವು ದೊರೆಯದೆ ರೈತರು ಹೈರಾಣಾಗಿದ್ದಾರೆ. ಬೆಳೆಗಳಿಗೆ ನ್ಯಾಯಯುತ ಬೆಲೆಗಳು, ತಕ್ಷಣದ ಪರಿಹಾರ ಪ್ಯಾಕೇಜ್‌ಗಳು ಹಾಗೂ ಸಂತ್ರಸ್ತ ರೈತರಿಗೆ ಸಕಾಲಿಕ ನೆರವು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.




