ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಐವರು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಗಲ್ಫ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್ ಖಚಿತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅಂತರ-ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯ ಒದಗಿಸಲು ಭಾರತೀಯ ಮಿಷನ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಹಿಂದಿನ ಘಟನೆಯೊಂದರಲ್ಲಿ ನಮ್ಮ ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ,ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಭಾರತೀಯ ಪ್ರಜೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ತ್ವರಿತವಾಗಿ ಈ ಬಗ್ಗೆ ಅಧಿಕೃತ ಮಾಹತಿ ಒದಗಿಸಲಾಗುತ್ತದೆ ಎಂದಿದ್ದಾರೆ.
ಮೃತರ ಪಾರ್ಥಿವ ಶರೀರಗಳನ್ನು ಅಗತ್ಯ ಔಪಚಾರಿಕ ವಿಧಾನಗಳನ್ನು ಪೂರೈಸಿದ ತರುವಾಯ ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸಿ ಕೊಡುವ ಬಗ್ಗೆ ಓಮನ್, ಇರಾಕ್ ಮತ್ತು ಯುಎಇಯಲ್ಲಿರುವ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ ಎಂದು ಮಹಾಜನ್ ತಿಳಿಸಿದರು.
ಕೊಲ್ಲಿ ಪ್ರದೇಶದಲ್ಲಿರುವ ಭಾರತೀಯ ನಾವಿಕರಿಗೆ ತಮ್ಮಿಂದ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಂದರು ಮತ್ತು ಹಡಗು ಸಚಿವಾಲಯದ ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು. ನೇರ ವಿಮಾನಗಳು ಲಭ್ಯವಿಲ್ಲದ ಬಹ್ರೇನ್ ಮತ್ತು ಕುವೈತ್‌ನಂತಹ ಪ್ರದೇಶಗಳಿಂದ ಸುರಕ್ಷಿತವಾಗಿ ಜನರನ್ನು ಸ್ವದೇಶಕ್ಕೆ ಕರೆತರಲು ಬೇಕಾಗಿರುವ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ (ANI) ವರದಿ ಮಾಡಿದೆ.
ಇತ್ತೀಚಿನ ಅಂಕಿ ಅಂಶಗಳು(ಮಾರ್ಚ್2026)
ಭಾರತೀಯ ವಿದೇಶಾಂಗ ಸಚಿವಾಲಯದ (MEA) ವರದಿಗಳ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಈವರೆಗೆ ಕನಿಷ್ಠ ಐದು ಭಾರತೀಯರು ಮೃತಪಟ್ಟಿದ್ದಾರೆ:
- ಸಮುದ್ರದಲ್ಲಿನ ದಾಳಿ: ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮುಂಬೈ ಮೂಲದ ಎಂಜಿನಿಯರ್ ಸೇರಿದ್ದಾರೆ.
- ಓಮನ್ ದಾಳಿ: ಮಾರ್ಚ್ 13, 2026 ರಂದು ಓಮನ್‌ನ ಸೋಹರ್(Sohar) ನಗರದ ಮೇಲೆ ನಡೆದ ಕ್ಷಿಪಣಿ ಅಥವಾ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ.
- ಗಾಯಗೊಂಡವರು: ಈ ಘಟನೆಗಳಲ್ಲಿ ಸುಮಾರು 10 ಭಾರತೀಯರು ಗಾಯಗೊಂಡಿದ್ದು, ಒಬ್ಬ ನಾವಿಕ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕೊಲ್ಲಿ ಕದನ ತೀವ್ರವಾದ ಬೆನ್ನಲ್ಲೇ ಅಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ಕುರಿತು ಆತಂಕ ಸೃಷ್ಟಿಯಾಗಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಕಾರ್ಮಿಕರು ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ಕೆಲಸ ಹಾಗೂ ವಿದ್ಯಾಭ್ಯಾಸದ ಉದ್ದೇಶವಾಗಿ ನೆಲೆಸಿದ್ದಾರೆ.
ಭಾರತ ಸರ್ಕಾರದ ಕ್ರಮಗಳು:
ಕೊಲ್ಲಿ ರಾಷ್ಟ್ರಗಳಲ್ಲಿರುವ ಸುಮಾರು ಒಂದು ಕೋಟಿ ಭಾರತೀಯರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ಸರ್ಕಾರ ಘೋಷಿಸಿದೆ. ನವದೆಹಲಿಯಲ್ಲಿ ವಿದೇಶಾಂಗ ಸಚಿವಾಲಯವು ದಿನದ 24 ಗಂಟೆಯು ವಿಶೇಷ ನಿಯಂತ್ರಣ ಕೊಠಡಿಯನ್ನು ತೆರೆದಿದೆ.
ರಾಜತಾಂತ್ರಿಕ ಸಂವಹನ: ಪ್ರಧಾನಿ ನರೇಂದ್ರ ಮೋದಿ ಅವರು ಒಮಾನ್, ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಇರಾನ್ ನಾಯಕರೊಂದಿಗೆ ಮಾತನಾಡಿ, ಭಾರತೀಯರ ರಕ್ಷಣೆಗೆ ಒತ್ತು ನೀಡುವಂತೆ ಕೋರಿದ್ದಾರೆ.
ಸ್ಥಳಾಂತರ ಪ್ರಕ್ರಿಯೆ: ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ, ಇಂಡಿಗೋ ಮತ್ತು ಸ್ಪೈಸ್‌ಜೆಟ್ ವಿಮಾನಗಳ ಮೂಲಕ ಜೆಡ್ಡಾ ಮತ್ತು ಫುಜೈರಾದಂತಹ ಸುರಕ್ಷಿತ ಸ್ಥಳಗಳಿಗೆ ಭಾರತೀಯರನ್ನು ಕರೆತರಲಾಗುತ್ತಿದೆ.
ಸಂಸತ್ತಿನಲ್ಲಿ ಹೇಳಿಕೆ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡುವಾಗ, ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಮೃತದೇಹಗಳ ರವಾನೆ: ಮೃತಪಟ್ಟವರ ಪಾರ್ಥಿವ ಶರೀರಗಳನ್ನು ಶೀಘ್ರವಾಗಿ ಭಾರತಕ್ಕೆ ತರಲು ಆಯಾ ದೇಶಗಳ ರಾಯಭಾರ ಕಚೇರಿಗಳೊಂದಿಗೆ ಸರ್ಕಾರ ಸಂಪರ್ಕದಲ್ಲಿದೆ.





