ಅಸ್ಸಾಂನ ಗುವಾಹಟಿಯಲ್ಲಿ ಹೈಕೋರ್ಟ್‌ನ ಹೊಸ ಸಂಕೀರ್ಣ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕ್ರಮವನ್ನು ಅಲ್ಲಿನ ಬಾರ್ ಅಸೋಸಿಯೇಷನ್ ಬಹಿಷ್ಕರಿಸಿದೆ. ಅಸೋಸಿಯೇಷನ್‌ನ ಸದಸ್ಯ ವಕೀಲರು ಉಪವಾಸ ಪ್ರತಿಭಟನೆ ನಡೆಸಿದ್ದಾರೆ.
ಗುವಾಹಟಿ ನಗರದ ಹೃದಯ ಭಾಗದಲ್ಲಿರುವ ಹೈಕೋರ್ಟ್‌ಅನ್ನು ನಗರದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಲಾಗಿತ್ತಿದೆ. ಸ್ಥಳಾಂತರವನ್ನು ವಿರೋಧಿಸಿರುವ ವಕೀಲರು, ಇಂದು (ಭಾನುವಾರ) ಸಿಜೆಐ ಸೂರ್ಯಕಾಂತ್ ಅವರು ನೆರವೇರಿಸಲಿರುವ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.
ನೂತನ ಹೈಕೋರ್ಟ್ ಸಂಕೀರ್ಣವನ್ನು ಉತ್ತರ ಗುವಾಹಟಿಯ ರಂಗಮಹಲ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರದೇಶಕ್ಕೆ ನ್ಯಾಯಾಂಗ ಪಟ್ಟಣವೆಂದೂ ಹೆಸರಿಸಲಾಗಿದೆ. ಆದರೆ, “ನಗರದ ಹೃದಯದ್ದಿರುವ ಹೈಕೋರ್ಟ್ ಅನ್ನು ಸ್ಥಳಾಂತರಿಸುವುದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಸ್ಥಳಾಂತರದ ಪ್ರಸ್ಥಾಪ ರೂಪುಗೊಂಡಾಗಿನಿಂದಲೂ ಇದನ್ನು ನಾವು ವಿರೋಧಿಸಿದ್ದೇವೆ. ಆದರೆ, ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಯಾವುದೇ ವಕೀಲರು ಶಂಕುಸ್ಥಾಪನೆ ಸಮಾರಂಭದಲ್ಲಿ ಹಾಜರಾಗುವುದಿಲ್ಲ” ಎಂದು ಬಾರ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಸಂತನು ಬೋರ್ತಕೂರ್ ತಿಳಿಸಿದ್ದಾರೆ.
ಅಸ್ಸಾಂ ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಅವರು ಬಾರ್ ಅಸೋಸಿಯೇಷನ್‌ನ ನಡೆಯನ್ನು ಟೀಕಿಸಿದ್ದಾರೆ. ಈ ಪ್ರತಿಭಟನೆಯ ಹಿಂದೆ ರಾಜಕೀಯ ಪಕ್ಷಗಳ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.
ಅಸ್ಸಾಂ ಸರ್ಕಾರವು ಬ್ರಹ್ಮಪುತ್ರ ನದಿಯ ಮುಂಭಾಗವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ, ನದಿ ಸಮೀಪವೇ ಇರುವ ಹೈಕೋರ್ಟ್ ಭೂಮಿಯನ್ನು ವಶಕ್ಕೆ ಪಡೆಯಬೇಕಿದೆ. ಅದಕ್ಕಾಗಿ, ಹೈಕೋರ್ಟ್‌ಅನ್ನು ಸ್ಥಳಾಂತರಿಸುತ್ತಿದೆ ಎಂದು ವರದಿಯಾಗಿದೆ.




