ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯುಕ್ತರಾಗಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಹಾಗೂ ಸುಖ್‌ಬೀರ್ ಸಂಧು ಅವರನ್ನು ನೇಮಕ ಮಾಡಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ.
ಚುನಾವಣಾ ಆಯುಕ್ತರ ಆಯ್ಕೆಗಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮೂವರು ಸದಸ್ಯರ ಉನ್ನತ ಮಟ್ಟದ ಸಭೆಯ ನಂತರ ತಿಳಿಸಿದ್ದಾರೆ. ಚೌಧರಿ ಅವರು ಚುನಾವಣಾ ಅಧಿಕಾರಿ ನೇಮಕ ಮಾಡುವ ಸಭೆಯ ಮೂವರು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಆದಾಗ್ಯೂ ಚೌಧರಿ ಅವರು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ವಿರೋಧಿಸಿದ್ದಾರೆ.
“ಕಳೆದ ರಾತ್ರಿ 212 ಮಂದಿಯ ಹೆಸರುಗಳನ್ನು ನನಗೆ ಕಳಿಸಲಾಯಿತು. ಆ ಪಟ್ಟಿಯೊಂದಿಗೆ ನಾನು ಇಂದು ಬೆಳಿಗ್ಗೆ ಪ್ರಧಾನಿ ನಿವಾಸಕ್ಕೆ ತೆರಳಿದೆ. ಮಧ್ಯಾಹ್ನ 12 ಗಂಟೆಯಲ್ಲಿ ಸಭೆ ಆಯೋಜನೆಗೊಂಡ ಕಾರಣ ಸಣ್ಣ ಸಮಯದಲ್ಲಿ ನಾನು ಏನನ್ನು ನಿರ್ಧರಿಸುವುದಕ್ಕೆ ಸಾಧ್ಯವಾಗಲಿಲ್ಲ. ಆರು ಸದಸ್ಯರ ಕಿರು ಪಟ್ಟಿಯಲ್ಲಿ ಜ್ಞಾನೇಶ್ ಕುಮಾರ್ ಹಾಗೂ ಸುಖ್‌ಬೀರ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಕೆಲವೇ ನಿಮಿಷಗಳಲ್ಲಿ ನೇಮಕ ಮಾಡಲಾಯಿತು” ಎಂದು ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾರ್ಚ್ ನಲ್ಲೇ ನೀರಿಗಾಗಿ ಹಾಹಾಕಾರ, ಮಿತ ಬಳಕೆಯ ಪಾಠ ಕಲಿಯಲು ಇದು ಸಕಾಲ
ಕೆಲವು ದಿನಗಳ ಹಿಂದೆ ಚುನಾವಣಾ ಆಯುಕ್ತರಾದ ಅರುಣ್ ಗೋಯಲ್ ರಾಜೀನಾಮೆ ಹಾಗೂ ಕಳೆದ ತಿಂಗಳು ಅನೂಪ್ ಚಂದ್ರ ಪಾಂಡೆ ನಿವೃತ್ತಿ ಹೊಂದಿದರು.
ಲೋಕಸಭಾ ಚುನಾವಣಾ ದಿನಾಂಕಗಳನ್ನು ಮಾ.15 ಅಥವಾ ಮಾ.16ರಂದು ಘೋಷಿಸುವ ಸಾಧ್ಯತೆಯಿದೆ.
ಈ ನಡುವೆ ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಸೇರಿಸದಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.





