ಮತಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಬಿಎಲ್‌ಒಗಳಿಗೆ ಬೆದರಿಕೆ ಹಾಕುತ್ತಿರುವುದು ಮತ್ತು ಕೆಲಸಕ್ಕೆ ಅಡ್ಡಿ ಮಾಡುತ್ತಿವುದರ ಗಂಭೀರತೆಯನ್ನು ಚುನಾವಣಾ ಆಯೋಗ ಅರಿತುಕೊಳ್ಳಬೇಕು. ಪರಿಸ್ಥಿತಿಯನ್ನು ನಿಭಾಯಿಸಬೇಕು. ಇಲ್ಲವಾದಲ್ಲಿ, ಅರಾಜಕತೆ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಅಗತ್ಯವಿರುವಷ್ಟು ಸಿಎಪಿಎಫ್ ನಿಯೋಜಿಸಬೇಕೆಂದು ಕೋರಿ ಸನಾತನಿ ಸಂಘಸದ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿದೆ. “ಸಹಕಾರದ ಕೊರತೆ ಮತ್ತು ಬಿಎಲ್‌ಒಗಳಿಗೆ ಬೆದರಿಕೆ ಹಾಕುತ್ತಿರುವ ಪ್ರಕರಣಗಳನ್ನು ನಮ್ಮ ಗಮನಕ್ಕೆ ತನ್ನಿ. ನಾವು ಆದೇಶಗಳನ್ನು ರವಾನಿಸುತ್ತೇವೆ” ಎಂದು ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ಸೂಚನೆ ಪ್ರತಿಕ್ರಿಯಿಸಿರುವ ಆಯೋಗವು, “ಬಿಎಲ್‌ಒಗಳು ಮತ್ತು ಎಸ್‌ಐಆರ್ ಕೆಲಸದಲ್ಲಿ ತೊಡಗಿರುವ ಇತರ ಅಧಿಕಾರಿಗಳು ಎದುರಿಸುತ್ತಿರುವ ಬೆದರಿಕೆಯನ್ನು ನಿಭಾವಿಸಲು ತನಗೆ ಎಲ್ಲ ಸಾಂವಿಧಾನಿಕ ಅಧಿಕಾರವಿದೆ” ಎಂದು ಹೇಳಿದೆ. “ಪರಿಸ್ಥಿತಿ ಹದಗೆಟ್ಟರೆ, ಪೊಲೀಸರನ್ನು ನಿಯೋಜಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ತಿಳಿಸಿದೆ.
ಆಯೋಗದ ಉತ್ತರಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, “ಪರಿಸ್ಥಿತಿಯನ್ನು ನಿಭಾಯಿಸಿ. ಇಲ್ಲದಿದ್ದರೆ, ಅದು ಅರಾಜಕತೆಗೆ ಕಾರಣವಾಗುತ್ತದೆ” ಎಂದು ಹೇಳಿದೆ.




