ಹರಿಯಾಣ ಸರ್ಕಾರವು ತನ್ನ ಎಲ್ಲ ಇಲಾಖೆಗಳು, ಸಾರ್ವಜನಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಸಂಬಂಧಿಸಿದ ಅಧಿಕೃತ ಸಂವಹನಗಳಲ್ಲಿ ‘ಹರಿಜನ’ ಮತ್ತು ‘ಗಿರಿಜನ’ ಪದಗಳ ಬಳಕೆಯನ್ನು ನಿಷೇಧಿಸಿದೆ. ಈ ಪದಗಳನ್ನು ಕಟ್ಟುನಿಟ್ಟಾಗಿ ಬಳಸುವಂತಿಲ್ಲ ಎಂದು ಆದೇಶಿಸಿದೆ.
ಹರಿಯಾಣದ ಮುಖ್ಯ ಕಾರ್ಯದರ್ಶಿ ಕಚೇರಿಯು ಸುತ್ತೋಲೆ ಹೊರಡಿಸಿದೆ. “ಮಹಾತ್ಮ ಗಾಂಧಿಯವರು ಪರಿಶಿಷ್ಟ ಜಾತಿಯ ಜನರನ್ನು ‘ಹರಿಜನ’ ಎಂದು ಹೆಸರಿಸಿದ್ದರು. ಅಂದರೆ ‘ದೇವರ ಜನರು’. ಆದಾಗ್ಯೂ, ಬಿ.ಆರ್ ಅಂಬೇಡ್ಕರ್ ಅವರು ‘ಹರಿಜನ’ ಎಂಬ ಪದದ ಬಳಕೆಯನ್ನು ವಿರೋಧಿಸಿ, ಅವರನ್ನು ದಲಿತರು ಎಂದು ಕರೆಯಲು ಆದ್ಯತೆ ನೀಡಿದರು” ಎಂದು ವಿವರಿಸಿದೆ.
“ಹರಿಯಾಣ ಸರ್ಕಾರವು ರಾಜ್ಯದ ಎಲ್ಲ ಆಡಳಿತ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಮಂಡಳಿಗಳು, ನಿಗಮಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ವಿಭಾಗೀಯ ಆಯುಕ್ತರು, ಉಪ ಆಯುಕ್ತರು, ಉಪ-ವಿಭಾಗೀಯ ಅಧಿಕಾರಿಗಳು (ಸಿವಿಲ್) ಹಾಗೂ ವಿಶ್ವವಿದ್ಯಾಲಯಗಳ ರಿಜಿಸ್ಟ್ರಾರ್‌ಗಳು ತಮ್ಮ ಎಲ್ಲ ಅಧಿಕೃತ ವಿಷಯಗಳು ಮತ್ತು ಪತ್ರವ್ಯವಹಾರಗಳಲ್ಲಿ ‘ಹರಿಜನ’ ಮತ್ತು ‘ಗಿರಿಜನ’ ಪದಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು” ಎಂದು ನಿರ್ದೇಶನ ನೀಡಲಾಗಿದೆ.
ಭಾರತದ ಸಂವಿಧಾನವು ಎಸ್‌ಸಿ ಮತ್ತು ಎಸ್‌ಟಿಗಳನ್ನು ಸೂಚಿಸಲು ಈ ಪದಗುಚ್ಛಗಳನ್ನು ಬಳಸುವುದಿಲ್ಲ ಎಂದು ಸುತ್ತೋಲೆ ಪುನರುಚ್ಚರಿಸಿದೆ. ಅಧಿಕೃತ ವ್ಯವಹಾರಗಳಲ್ಲಿ ಈ ಪದಗಳನ್ನು ನಿರ್ಬಂಧಿಸುವ ಮತ್ತು ಕಡ್ಡಾಯಗೊಳಿಸುವ ಭಾರತ ಸರ್ಕಾರದ ಸೂಚನೆಗಳನ್ನು ರಾಜ್ಯ ಸರ್ಕಾರದ ಸೊತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
“ಭಾರತದ ಸರ್ಕಾರದ ಸೂಚನೆಗಳ ಹೊರತಾಗಿಯೂ ಕೆಲವು ಇಲಾಖೆಗಳು ಈ ಪದಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲ ಅಧಿಕೃತ ದಾಖಲೆಗಳು, ಪತ್ರವ್ಯವಹಾರ ಹಾಗೂ ಸಂವಹನಗಳಲ್ಲಿ ‘ಹರಿಜನ’ ಮತ್ತು ‘ಗಿರಿಜನ’ ಪದಗಳ ಬಳಕೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರವು ಈ ನಿರ್ದೇಶನ ಹೊರಡಿಸಿದೆ” ಎಂದು ಸುತ್ತೋಲೆ ವಿವರಿಸಿದೆ.




