ಸರ್ಕಾರಿ ಶಾಲೆಯ ಆಂತರಿಕ ಪರೀಕ್ಷೆಯಲ್ಲಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯ ಪ್ರಶ್ನೆಯೊಂದಕ್ಕೆ ನಾಯಿಯ ಹೆಸರಿಗೆ ‘ರಾಮ’ ಎಂಬ ಹೆಸರನ್ನು ಆಯ್ಕೆಯಾಗಿ ಕೊಟ್ಟಿದ್ದರು ಎಂಬ ಕಾರಣಕ್ಕಾಗಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಛತ್ತೀಸ್‌ಗಢದಲ್ಲಿ ಈ ಬೆಳವಣಿಗೆ ನಡೆದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತೀಸ್‌ಗಢದ ರಾಯ್‌ಪುರ ವಿಭಾಗದ ನಕ್ತಿ (ಖಪ್ರಿ) ಸರ್ಕಾರಿ ಶಾಲೆಯ ಶಿಕ್ಷಕಿ ಶಿಖಾ ಸೋನಿ ಎಂಬವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿದ್ದ ಸಹಾಯಕ ಅತಿಥಿ ಶಿಕ್ಷಕಿ ನಮ್ರತಾ ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಲೆಯಲ್ಲಿ ನಡೆದ ಪರೀಕ್ಷೆ ವೇಳೆ, ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ‘ಮೋನಾ ಅವರ ನಾಯಿಯ ಹೆಸರೇನು?’ ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಅದರಲ್ಲಿ, ‘ರಾಮ್’ ಕೂಡ ಒಂದಾಗಿತ್ತು.
ಪ್ರಶ್ನೆ ಪತ್ರಿಕೆಯ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ರಾಮ’ ಎಂಬ ಹೆಸರನ್ನು ನಾಯಿಗೆ ಸೂಚಿಸುವ ಮೂಲಕ ಭಗವಾನ್ ರಾಮನಿಗೆ ಅವಮಾನ ಮಾಡಲಾಗಿದೆ. ಹಿಂದು ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಹಿಂದುತ್ವ ಕೋಮುವಾದಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಶಿಕ್ಷಣ ಇಲಾಖೆಗೆ ದೂರನ್ನೂ ನೀಡಿದ್ದವು.
ಹಿಂದುತ್ವವಾದಿಗಳ ದೂರಿನ ಆಧಾರದ ಮೇಲೆ ಈ ವಿಚಾರದ ತನಿಖೆಗೆ ಶಿಕ್ಷಣ ಇಲಾಖೆಯು ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಸಮಿತಿಯ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಮುಖ್ಯ ಶಿಕ್ಷಕಿ ಶಿಖಾ ಸೋನಿ ಅವರನ್ನು ಅಮಾನತು ಮಾಡಿ ರಾಯ್‌ಪುರ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಹಿಮಾಂಶು ಭಾರ್ತಿ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಸಂಬಂಧ ವಿವರಣೆ ನೀಡಿರುವ ಮುಖ್ಯ ಶಿಕ್ಷಕಿ ಶಿಖಾ ಸೋನಿ, “ಪ್ರಶ್ನೆಪತ್ರಿಕೆಯ ಆಯ್ಕೆಯಲ್ಲಿ ‘ರಾಮು’ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಆದರೆ, ‘ಯು’ ಅಕ್ಷರ ಬಿಟ್ಟುಹೋದ ಕಾರಣ, ‘ರಾಮ್’ ಪದವನ್ನು ಅಜಾಗರೂಕತೆಯಿಂದ ಮುದ್ರಿಸಲಾಗಿದೆ. ಕಣ್ತಪ್ಪಿನಿಂದ ದೋಷ ಉಂಟಾಗಿದೆ. ಪ್ರಶ್ನೆ ಪತ್ರಿಕೆಯ ಪರಿಶೀಲನೆ ಸಮಯದಲ್ಲಿಯೂ ಈ ತಪ್ಪು ಗಮನಕ್ಕೆ ಬಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು, “ಯಾವುದೇ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ಯಾವುದೇ ಧರ್ಮ ಅಥವಾ ಸಮುದಾಯವನ್ನು ಅವಮಾನಿಸುವ ಉದ್ದೇಶ ನಮಗೆ ಇಲ್ಲ. ಸಮಸ್ಯೆಯ ಉದ್ದೇಶಪೂರ್ವಕವಾಗಿ ಆಗಿರುವುದಲ್ಲ ಕಣ್ತಪ್ಪಿನಿಂದ ಸಂಭವಿಸಿದೆ. ತಪ್ಪಿಗೆ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಹಿಂದುತ್ವವಾದಿಗಳ ಒತ್ತಡಕ್ಕೆ ಮಣಿದಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿದ್ದು, ಸಹಾಯಕ ಶಿಕ್ಷಕಿಯನ್ನು ವಜಾಗೊಳಿಸಲು ಕ್ರಮ ಕೈಗೊಂಡಿದೆ.




