ಮಹಾರಾಷ್ಟ್ರ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಮಕ್ಕಳ ಮಿತಿ ಇದ್ದ ಕಾರಣಕ್ಕೆ, ವಿಕೃತನೊಬ್ಬ ತನ್ನ 3ನೇ ಮಗಳನ್ನು ಕಾಲುವೆ ತಳ್ಳಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ನಿಜಾಮಾಬಾದ್‌ನ ದುರುಳ ತಂದೆ ಪಾಂಡುರಂಗ ಕೊಂಡ್ಮಂಗಳೆ ಎಂಬಾತ ತನ್ನ 6 ವರ್ಷದ ಮಗಳು ಪ್ರಾಚಿಯನ್ನು ಕೊಲೆಗೈದಿದ್ದಾನೆ.
ಆರೋಪಿ ಪಾಂಡುರಂಗ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕೆರೂರ್ ಗ್ರಾಮ ನಿವಾಸಿಯಾಗಿದ್ದಾನೆ. ಆತ, ಗ್ರಾಮದಲ್ಲಿ ಸಲೂನ್ ನಡೆಸುತ್ತಿದ್ದಾನೆ. ಆತ, ಮುಂಬರುವ ಕೆರೂರ್ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ. ಆದರೆ, ಚುನಾವಣೆ ಸ್ಪರ್ಧೆಗೆ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವಂತಿಲ್ಲ ನಿಯಮವಿದೆ. ಇದರಿಂದ, ಮೂರು ಮಕ್ಕಳನ್ನು ಹೊಂದಿರುವ ಪಾಂಡುರಂಗ, ತನಗೂ ಇಬ್ಬರೇ ಮಕ್ಕಳೆಂದು ಬಿಂಬಿಸಲು ತನ್ನ 3ನೇ ಮಗಳನ್ನು ತೆಲಂಗಾಣದ ನಿಜಾಮಾಬಾದ್‌ಗೆ ಕರೆದೊಯ್ದು, ಕಾಲುವೆಗೆ ದೂಡಿದ್ದಾನೆಂದು ವರದಿಯಾಗಿದೆ.
ನಿಜಾಮಾಬಾದ್‌ನ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಡ ನಿಜಾಮಾಬಾದ್ ಪೊಲೀಸರು ತನಿಖೆ ನಡೆಸಿದ್ದು, ಆಕೆಯ ತಂದೆಯೇ ಕೊಲೆ ಮಾಡಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಆರೋಪಿ ತಂದೆ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪಾಂಡುರಂಗನನ್ನು ವಿಚಾರಣೆ ಒಳಪಡಿಸಿದ್ದು, ತನ್ನ ಸ್ನೇಹಿತ, ಸರಂಪಚ್ ಗಣೇಶ್ ಶಿಂಧೆಯೊಂದಿಗೆ ಚರ್ಚಿಸಿ ತಾನೇ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





