ತರಗತಿಯಲ್ಲಿ ಹಿಜಾಬ್ ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರು ಅನುಮತಿ ಕೆಳಿದ್ದರಿಂದ ವಿವಾದ ಸೃಷ್ಟಿಯಾಗಿದೆ ಎಂದು ಹೇಳಿಕೊಂಡಿರುವ ಕೇರಳದ ಶಾಲೆಯೊಂದು ಎರಡು ದಿನ ರಜೆ ಘೋಷಿಸಿದೆ. ಶಿಕ್ಷಕರು ಮತ್ತು ಸಿಬ್ಬಂದಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿ ರಜೆ ತೆಗೆದುಕೊಂಡಿದ್ದಾರೆ. ಆದ್ದರಿಂದ, ಇಡೀ ಶಾಲೆಗೆ ಘೋಷಿಸಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿಕೊಂಡಿದೆ.
ಘಟನೆಯು ಕೇರಳದ ಎರ್ನಾಕುಲಂ ಜಿಲ್ಲೆಯ ಪಲ್ಲೂರುತಿನಲ್ಲಿರುವ ಸೇಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ. ಈ ಶಾಲೆ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಆಡಳಿತದಲ್ಲಿದೆ. ಸಿಬಿಎಸ್‌ಇ ಮಾನ್ಯತೆಯನ್ನೂ ಪಡೆದಿದೆ.
ಶಾಲೆಯಿಂದ ಅನುಮತಿಸಲಾಗದ ಉಡುಪಿನಲ್ಲಿ ವಿದ್ಯಾರ್ಥಿಯರು ಶಾಲೆಗೆ ಬಂದಿದ್ದರಿಂದ ವಿವಾದ ಸೃಷ್ಟಿಯಾಗಿದೆ. ವಿವಾದ ಪರಿಸ್ಥಿತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆಂದು ಶಿಕ್ಷಕರು ಮತ್ತು ಸಿಬ್ಬಂದಿಗಳು ರಜೆ ತೆತೆದುಕೊಂಡಿದ್ದಾರೆ. ಹೀಗಾಗಿ, ಪರಿಸ್ಥಿತಿ ತಿಳಿಗೊಂಡು, ಎಲ್ಲರೂ ಶಾಲೆಗೆ ಮರಳಬೇಕು. ಆದ್ದರಿಂದ, ಎರಡು ದಿನಗಳ ಕಾಲ ಶಾಲೆಗೆ ರಜೆ ನೀಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹೆಲೀನಾ ಆಲ್ಬಿ ಹೇಳಿದ್ದಾರೆ.
ಮೂಲಗಳ ಪ್ರಕಾರ, ಓರ್ವ ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳಿಗೆ ಹಿಜಾಬ್ ಧರಿಸಲು ಅನುಮತಿಸುವಂತೆ ಶಾಲೆಯ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಆದರೆ, ತನ್ನ ಸಮವಸ್ತ್ರ ನೀತಿಯಲ್ಲಿ ಯಾವುದೇ ಧಾರ್ಮಿಕ ಉಡುಪು ಅಥವಾ ಚಿಹ್ನೆಗಳನ್ನು ಅನುಮತಿಸುವುದಿಲ್ಲ ಎಂದು ಶಾಲೆ ಸ್ಪಷ್ಟಪಡಿಸಿತ್ತು. ಶಾಲೆಯ ನಿರಾಕರಣೆಯಿಂದಾಗಿ ವಿದ್ಯಾಥಿನಿಯ ತಂದೆ ಮತ್ತು ಇತರ 6 ಮಂದಿ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಪಲ್ಲೂರುತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವಿದ್ಯಾರ್ಥಿನಿಯ ಪೋಷಕರ ನಡೆ ಪ್ರಚೋದನಕಾರಿ ಮತ್ತು ಅಪಾಯಕಾರಿ ಸ್ವರೂಪದ್ದಾಗಿತ್ತು ಎಂದು ಶಾಲೆಯ ಶಿಕ್ಷಕರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ‘ಅನ್ನಭಾಗ್ಯ’ ಯೋಜನೆಯಲ್ಲಿ ‘ಇಂದಿರಾ ಕಿಟ್’; ಪೌಷ್ಠಿಕ ಆಹಾರ ಪೂರೈಕೆಗೆ ಹೊಸ ಮೈಲಿಗಲ್ಲು
ಘಟನೆಯು ವಿವಾದಕ್ಕೆ ತಿರುಗಿದ್ದರಿಂದ, ಶಾಲೆಯ ಆಡಳಿತ ಮಂಡಳಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ತುರ್ತು ವಿಚಾರಣೆ ನಡೆಸಿರುವ ನ್ಯಾಯಾಲಯವು, ‘ಶಾಲೆಗೆ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಆದೇಶಿಸಿದೆ.
ಘಟನೆಯ ವಿವರ
ಇತ್ತೀಚೆಗೆ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ತರಗಿತಿಯಲ್ಲಿ ಹಿಜಾಬ್ ಧರಿಸಲು ಪ್ರಾರಂಭಿಸಿದ್ದರು. ವಿದ್ಯಾರ್ಥಿನಿಯ ವಸ್ತ್ರವು ಶಾಲೆಯ ಡೈರಿಯಲ್ಲಿರುವ 30ರಿಂದ 33ನೇ ವಿಧಿಯ ಪ್ರಕಾರ ಸಮವಸ್ತ್ರ ನೀತಿ ಉಲ್ಲಂಘನೆ ಎಂದು ಪರಿಗಣಿಸಿತ್ತು. ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿತ್ತು. ಅಲ್ಲದೆ, ವಿದ್ಯಾರ್ಥಿನಿಯ ಪೋಷಕರಿಂದ ಶಾಲೆಯು ವಿವರಣೆ ಕೇಳಿತ್ತು.
ಶಾಲೆಯ ನಡೆಗೆ ವಿರೋಧ ವ್ಯಕ್ತಪಡಿಸಿದ ಪೋಷಕರು, ಅಕ್ಟೋಬರ್ 10 ರಂದು ಕೆಲವರನ್ನು ಶಾಲೆಗೆ ಕರೆದುಕೊಂಡು ಬಂದಿದ್ದರು. ಅಲ್ಲದೆ, ಶಾಲೆಯ ವಿರುದ್ಧ ಶಾಲೆಯ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಲಾಗಿದೆ.
ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯ ಪೋಷಕರು ಇತರ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರನ್ನು ಸಂಪರ್ಕಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ್ದಾರೆ ಎಂದು ಶಾಲೆಯು ಆರೋಪಿಸಿದೆ. ಪ್ರತಿಭಟನೆಗಳು, ವಿವಾದಗಳಿಂದಾಗಿ ಮುಂಜಾಗ್ರತೆ ಕ್ರಮವಾಗಿ ಶಾಲೆಗೆ ಎರಡು ದಿನ ರಜೆ ಘೋಷಿಸಿರುವುದಾಗಿ ಆಡಳಿತ ಮಂಡಳಿ ಹೇಳಿಕೊಂಡಿದೆ.




