ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಹಿಂದೂ ಮಹಾಸಭಾ ನಾಯಕ ಶ್ರೀಕಂದನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಸಂತ್ರಸ್ತೆಯ ಅತ್ತೆ ನಿರ್ಮಲಾ ಅವರೂ ಕೂಡ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ನಿರ್ಮಲಾ ಅವರನ್ನು ಎರಡನೇ ಆರೋಪಿಯಾಗಿಸಲಾಗಿದೆ. ಶ್ರೀಕಂದನ್ ಮತ್ತು ನಿರ್ಮಲಾ ಪರಸ್ಪರ ಆಪ್ತರಾಗಿದ್ದರು, 2023ರಲ್ಲಿ ಸಂತ್ರಸ್ತೆ ತನ್ನ ಅತ್ತೆಯ ಮನೆಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ. ಅತ್ತೆ ನಿರ್ಮಲಾ ಈ ಘಟನೆಯನ್ನು ತಿಳಿದಿದ್ದರೂ ತಡೆಯದೆ ಅನುಮತಿಸಿದ್ದಕ್ಕಾಗಿ ಅವರನ್ನೂ ಆರೋಪಿಯಾಗಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ 2023ರಲ್ಲಿ ನಡೆದಿದ್ದರೂ, ದೂರು ಕೆಲವೇ ದಿನಗಳ ಹಿಂದೆ ಪೊಲೀಸರಿಗೆ ಸಲ್ಲಿಕೆಯಾಗಿದೆ. ಶ್ರೀಕಂದನ್ ಮತ್ತು ನಿರ್ಮಲಾ ಇಬ್ಬರನ್ನೂ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಉದ್ಯಮಿಗೆ ಲೈಂಗಿಕ ಕಿರುಕುಳ-ಹತ್ಯೆ ಆರೋಪ; ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ!
ಶ್ರೀಕಂದನ್ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದು, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ವಂಚನೆ ಆರೋಪಗಳನ್ನು ಎದುರಿಸಿದ್ದಾನೆ. 2020ರಲ್ಲಿ ಕಿಲ್ಪಾಕ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕಿರುಕುಳ ನೀಡಿದ್ದಕ್ಕಾಗಿ ಶ್ರೀಕಂದನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದರ ಜೊತೆಗೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಿಂಗ್ ಜನರೇಶನ್ ಪ್ರೇಯರ್ ಹಾಲ್‌ನ ಪಾಸ್ಟರ್ ಜಾನ್ ಜೆಬರಾಜ್ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 17 ಮತ್ತು 14 ವರ್ಷದ ಇಬ್ಬರು ಬಾಲಕಿಯರು 2024 ಮೇ 21ರಂದು ತಮ್ಮ ಮೇಲೆ ಪಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬವು ಸುಮಾರು ಹನ್ನೊಂದು ತಿಂಗಳ ನಂತರ ದೂರು ನೀಡಿದೆ. ಈ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.





