ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಸುಡುವ ಬಿಸಿಲು, ಹಿಮಾಚಲ ಪ್ರದೇಶದಲ್ಲಿ ಅಸಹಜ ಬಿಸಿಗಾಳಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಣಹವೆ ಹಾಗೂ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಮಳೆಯಂತಹ ನಾನಾ ರೀತಿಯ ಹವಾಮಾನವನ್ನು ಮಾರ್ಚ್ ತಿಂಗಳು ಕಂಡಿದೆ. ಸಾಮಾನ್ಯವಾಗಿ ಚಳಿಗಾಲದಿಂದ ಬೇಸಿಗೆಗೆ ನಿಧಾನವಾಗಿ ಬದಲಾಗುವ ಈ ತಿಂಗಳಲ್ಲಿ ಈ ಬಾರಿ ಹವಾಮಾನ ವ್ಯತಿರಿಕ್ತವಾಗಿದೆ.
ಮಾರ್ಚ್ ತಿಂಗಳಿನಲ್ಲಾಗುತ್ತಿರುವ ಹವಾಮಾನ ಬಲಾವಣೆ ಅಥವಾ ವೈಪರೀತ್ಯಗೆ ‘ಪಶ್ಚಿಮದ ಮಾರುತಗಳು’ ಅಥವಾ ವೆಸ್ಟರ್ನ್ ಡಿಸ್ಟರ್ಬನ್ಸ್ ಪ್ರಮುಖ ಕಾರಣ. ಇವು ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಉದ್ಭವಿಸುವ ಮಳೆ ಹೊತ್ತ ಮಾರುತಗಳು. ಇವು ಭಾರತದ ಕಡೆಗೆ ಪೂರ್ವಕ್ಕೆ ಚಲಿಸುವಾಗ ಮೆಡಿಟರೇನಿಯನ್ ಸಮುದ್ರ, ಕಪ್ಪು ಸಮುದ್ರ, ಕ್ಯಾಸ್ಪಿಯನ್ ಸಮುದ್ರ ಹಾಗೂ ಅರೇಬಿಯನ್ ಸಮುದ್ರದಿಂದ ತೇವಾಂಶವನ್ನು ಹೀರಿಕೊಳ್ಳುತ್ತವೆ.
ಕಳೆದ ನವೆಂಬರ್‌ನಿಂದ ಭಾರತದ ಮೇಲೆ ಪ್ರಭಾವ ಬೀರುತ್ತಿರುವ ಪಶ್ಚಿಮದ ಮಾರುತಗಳ ತೀವ್ರತೆ ಕಡಿಮೆಯಾಗಿತ್ತು. ಇದು ಮಳೆ ಮತ್ತು ಹಿಮಪಾತದ ಮೇಲೆ ನೇರ ಪರಿಣಾಮ ಬೀರಿತ್ತು. ಆದರೆ, ಕಳೆದ ವಾರದಿಂದ ಈ ಪ್ರವೃತ್ತಿ ಬದಲಾಗಿದೆ. ಮಾರ್ಚ್ 13 ಮತ್ತು 18ರಂದು ಎರಡು ತೀವ್ರಗತಿಯ ಪಶ್ಚಿಮದ ಮಾರುತಗಳು ವಾಯುವ್ಯ, ಉತ್ತರ ಹಾಗೂ ಪೂರ್ವ ಭಾರತವನ್ನು ದಾಟಿವೆ.
ಇದರ ಪರಿಣಾಮವಾಗಿ, ಪಶ್ಚಿಮ ಹಿಮಾಲಯ, ಪೂರ್ವ ಮತ್ತು ಈಶಾನ್ಯ ಭಾರತ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು, ಆಲಿಕಲ್ಲು ಮಳೆ ಹಾಗೂ ಅಲ್ಪಾವಧಿಯ ತೀವ್ರ ಮಳೆ (24 ಗಂಟೆಗಳಲ್ಲಿ 115 ಮಿಮೀಗಿಂತ ಹೆಚ್ಚು) ಸಂಭವಿಸಿದೆ. ನೆರೆಯ ಪಾಕಿಸ್ತಾನವೂ ಎರಡು ದಿನಗಳ ಹಿಂದೆ ಇಂತಹ ತೀವ್ರ ಹವಾಮಾನವನ್ನು ಅನುಭವಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಅಧಿಕಾರಿಗಳ ಪ್ರಕಾರ, ಇದು ಕೇವಲ ಪಶ್ಚಿಮದ ಮಾರುತಗಳಿಂದ ಮಾತ್ರವಲ್ಲದೆ, ವಾತಾವರಣದ ಕೆಳಮಟ್ಟದಲ್ಲಿ ದೀರ್ಘಕಾಲದವರೆಗೆ ಇದ್ದ ಚಂಡಮಾರುತದ ಸುಳಿಗಾಳಿಯಿಂದಲೂ ಸಂಭವಿಸಿದೆ. ಇದರ ಜೊತೆಗೆ, ಬಂಗಾಳ ಕೊಲ್ಲಿಯಿಂದ ಬೀಸಿದ ನೈಋತ್ಯ ಗಾಳಿಯು ಮಧ್ಯ ಮತ್ತು ವಾಯುವ್ಯ ಭಾರತದ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ.
ಮಾರ್ಚ್‌ನಲ್ಲಿ ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆ ಹೇಗೆ ಸಾಧ್ಯ?
- ಪಶ್ಚಿಮದ ಮಾರುತಗಳು ಮಾನ್ಸೂನ್ ಅಲ್ಲದ ತಿಂಗಳುಗಳಲ್ಲಿ ಮಳೆಯನ್ನು ಉಂಟುಮಾಡುತ್ತವೆ. ಚಳಿಗಾಲದ ಪ್ರಭಾವವಿರುವ ಮಾರ್ಚ್ ಆರಂಭದಲ್ಲಿ ಇದು ಹೆಚ್ಚು ಕಂಡುಬರುತ್ತದೆ.
- ಮಾರ್ಚ್ ತಿಂಗಳು ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆಗೆ ಅತ್ಯಂತ ಪೂರಕವಾದ ತಿಂಗಳು. ಮಾರ್ಚ್ ಮಧ್ಯದ ನಂತರ ತಾಪಮಾನ ಏರಲಾರಂಭಿಸುತ್ತದೆ. ಇದು ಸರಿಯಾದ ಹವಾಮಾನ ಪರಿಸ್ಥಿತಿಗಳಲ್ಲಿ ಗುಡುಗು ಮತ್ತು ಮಿಂಚಿನ ಮಳೆಗೆ ಕಾರಣವಾಗುತ್ತದೆ.
- ಪೂರ್ವ ಭಾರತದಲ್ಲಿ ‘ನಾರ್ವೆಸ್ಟರ್ಸ್’ (ಪಶ್ಚಿಮ ಬಂಗಾಳದಲ್ಲಿ ಕಾಲ್ ಬೈಸಾಖಿ) ಎಂದು ಕರೆಯಲ್ಪಡುವ ಸ್ಥಳೀಯ ಗಾಳಿಗಳು ಈ ಸಮಯದಲ್ಲಿ ಹಠಾತ್ ತೀವ್ರ ಚಂಡಮಾರುತ ಮತ್ತು ಮಳೆಗೆ ಕಾರಣವಾಗುತ್ತವೆ.
ಒಡಿಶಾ, ಅಸ್ಸಾಂ, ಮೇಘಾಲಯ, ಹಿಮಾಚಲ ಪ್ರದೇಶ, ಸಿಕ್ಕಿಂ, ಜಾರ್ಖಂಡ್, ಪಂಜಾಬ್, ಹರಿಯಾಣ, ಛತ್ತೀಸ್‌ಗಢ ಹಾಗೂ ಮಹಾರಾಷ್ಟ್ರ ಸೇರಿದಂತೆ ಭಾರತದ ವಿಶಾಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದೆ. ಗಮನಾರ್ಹವಾಗಿ, ಉತ್ತರ ಕರ್ನಾಟಕದ ರಾಯಚೂರು ಮತ್ತು ಧಾರವಾಡ ಜಿಲ್ಲೆಗಳ ಹಲವು ಪ್ರದೇಶಗಳು ಮಾರ್ಚ್ 18 ರಂದು ಆಲಿಕಲ್ಲು ಮಳೆಯಾಗಿದ್ದು, ನಾನಾ ಪ್ರದೇಶಗಳು ಬಿಳಿ ಹೊದಿಕೆಯಿಂದ ಆವೃತವಾಗಿದ್ದವು.
ಮಾರ್ಚ್‌ನ ಮುಂದಿನ ದಿನಗಳು ಹೇಗಿರಲಿವೆ?
ಮಾರ್ಚ್ ತಿಂಗಳು ಬಿಸಿಗಾಳಿಯೊಂದಿಗೆ ಆರಂಭವಾದರೂ, ಈಗಿನ ಗುಡುಗು ಸಹಿತ ಮಳೆಯು ತಾಪಮಾನವನ್ನು ತಗ್ಗಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ.
- ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಹಾಗೂ ಒಡಿಶಾದಲ್ಲಿ ಗಂಟೆಗೆ 60-80 ಕಿಮೀ ವೇಗದ ಗಾಳಿ ಬೀಸಲಿದೆ.
- ಮಾರ್ಚ್ 22 ಮತ್ತು 26ನ ನಡುವೆ ಮತ್ತೆರಡು ಪಶ್ಚಿಮದ ಮಾರುತಗಳು ಭಾರತವನ್ನು ಪ್ರವೇಶಿಸಲಿವೆ. ಎರಡನೇ ಮಾರುತ (ಮಾರ್ಚ್ 26) ಹೆಚ್ಚು ತೀವ್ರವಾಗಿರಲಿದ್ದು, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಿದೆ.
ಒಟ್ಟಾರೆಯಾಗಿ, ಮಾರ್ಚ್‌ನ ಉಳಿದ ದಿನಗಳಲ್ಲಿ ದೇಶಾದ್ಯಂತ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಕಡಿಮೆ ಇರಲಿದೆ. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.




