ಗುಂಪುಗಳು ಹಾದಿಬೀದಿಗಳಲ್ಲಿ ಜಜ್ಜಿ ಎಸಗುವ ಹತ್ಯೆಗಳು, ಪೊಲೀಸ್ ಕಸ್ಟಡಿಯಲ್ಲಿನ ಚಿತ್ರಹಿಂಸೆ, ಅಥವಾ ಜಾತೀಯ ಪ್ರೇರಿತ ದಾಳಿಗಳಲ್ಲಿ ಕುಟುಂಬಗಳು ಮಕ್ಕಳು ಮರಿಗಳನ್ನು ಕಳೆದುಕೊಳ್ಳುತ್ತಿವೆ. ಅವುಗಳಿಗೆ ಕಾನೂನು ವ್ಯವಸ್ಥೆಯೇ ಮತ್ತೊಂದು ಆಘಾತದ ಸ್ಥಳವಾಗಿ ಹೊಮ್ಮತೊಡಗಿದೆ. ವಿಚಾರಣೆಗಳು ಅಂತ್ಯವೇ ಇಲ್ಲದಷ್ಟು ವಿಳಂಬಗೊಳ್ಳುತ್ತಿವೆ. ತನಿಖೆಗಳು ಸ್ಥಗಿತಗೊಳ್ಳುತ್ತವೆ. ಸಾಕ್ಷಿಗಳಿಗೆ ಬೆದರಿಕೆ ಒಡ್ಡಲಾಗುತ್ತದೆ. ಬರಹ- ರೋಷನ್ ಮೊಹಿದ್ದೀನ್; ಸೌಜನ್ಯ– ಮಖ್ತೂಬ್ ಮೀಡಿಯಾ
ದ್ವೇಷ ಎಂಬುದು ಇಂದಿನ ಭಾರತದಲ್ಲಿ ಏಕಾಏಕಿ ಸ್ಫೋಟಗೊಳ್ಳುವುದಿಲ್ಲ; ಅದು ಹರಿದು ಸಂಚರಿಸುತ್ತದೆ. ಅದು ಅಚ್ಚರಿಗೊಳಿಸುವುದಿಲ್ಲ, ಅದು ನೆಲೆಯೂರುತ್ತದೆ. ಅದು ಇನ್ನು ಸಾರ್ವಜನಿಕ ಬದುಕನ್ನು ಅಸ್ತವ್ಯಸ್ತಗೊಳಿಸುವುದಿಲ್ಲ, ಬದಲಿಗೆ ಸಾರ್ವಜನಿಕ ಬದುಕಿನ ಹಿಮ್ಮೇಳದ ಲಯವೇ ಆಗಿ ಹೋಗಿದೆ— ಅದು ರಾಜಕೀಯ ಭಾಷೆಯೊಳಗೆ ಹೊಕ್ಕು ನೆಲೆ ನಿಂತು, ಟಿವಿ ಸ್ಟುಡಿಯೋಗಳಲ್ಲಿ ಅಬ್ಬರಿಸಿದೆ, ನಾಗರಿಕರನ್ನು ರಕ್ಷಿಸುವ ಹೊಣೆ ಹೊತ್ತ ಸಂಸ್ಥೆಗಳು ದ್ವೇಷಕ್ಕೆ ಮೌನವಾಗಿ ಮಾನ್ಯತೆ ನೀಡುತ್ತಿವೆ. ನಾವು ಕಾಣುತ್ತಿರುವುದು ತತ್ಕಾಲದ ಅಸಹಿಷ್ಣುತೆಯ ಏರಿಕೆ ಅಲ್ಲ, ಬದಲಾಗಿ ಒಂದು ಸಂರಚನೆಯನ್ನು ಹೊಕ್ಕಿರುವ ಪರಿವರ್ತನೆ: ಕ್ರೌರ್ಯವನ್ನು ಸರ್ವೇಸಾಧಾರಣ ಸಂಗತಿ ಮಾಡಲಾಗಿದೆ, ಭೇದಭಾವ- ತಾರತಮ್ಯವನ್ನು ಆಡಳಿತದ ಅನುದಿನದ ಪರಿಕ್ರಮವನ್ನಾಗಿ ಮಾಡಲಾಗಿದೆ.
ಈ ರೂಪಾಂತರ ರಾತ್ರೋರಾತ್ರಿ ಆದದ್ದಲ್ಲ. ಅದನ್ನು ಒಂದು ಇಟ್ಟಿಗೆಯಿಂದ ಮತ್ತೊಂದು ಇಟ್ಟಿಗೆಗೆ, ಒಂದು ತಲೆಬರೆಹದಿಂದ ಇನ್ನೊಂದು ತಲೆಬರೆಹಕ್ಕೆ, ಒಂದು ಭಾಷಣದಿಂದ ಮತ್ತೊಂದಕ್ಕೆ ಭಾಷಣಕ್ಕೆ ಎಚ್ಚರಿಕೆಯಿಂದ ಕಟ್ಟಲಾಗಿದೆ.
ನಿರಂತರ ಸಂಶಯಗ್ರಸ್ತ ರಾಜಕೀಯ
ದೇಶದಾದ್ಯಂತ ಇಂದು ಸಮುದಾಯ-ಸಮುದಾಯಗಳೇ ನಿತ್ಯನಿರಂತರ ಅನುಮಾನದ ಆಡಳಿತದಡಿ ಬದುಕುತ್ತಿವೆ. ಲಖನೌನಲ್ಲಿನ ಮುಸ್ಲಿಂ ಸ್ವಚ್ಛತಾ ಕಾರ್ಮಿಕರಿಗೆ—ನುಸುಳಕೋರರು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ದಶಕಗಳ ಕಾಲ ವಾಸವಿದ್ದು ಆಧಾರ್ ಕಾರ್ಡ್, ಎನ್‌ಆರ್‌ಸಿ ದಾಖಲೆಗಳಿದ್ದರೂ ಈ ದುಸ್ಥಿತಿ ತಪ್ಪಿಲ್ಲ. ಕ್ರಿಸ್ಮಸ್ ಆಚರಿಸುವ ಕ್ರೈಸ್ತರನ್ನು ಸಂಚು ಮತ್ತು ಮತಾಂತರದ ಆರೋಪಕ್ಕೆ ಗುರಿ ಮಾಡಲಾಗುತ್ತಿದೆ. ತಾವು ಭಾರತೀಯ ಪೌರರೆಂದು ಮತ್ತೆ ಮತ್ತೆ ಒತ್ತಿ ಹೇಳಿದರೂ ಈಶಾನ್ಯ ಭಾರತದ ವಿದ್ಯಾರ್ಥಿಗಳನ್ನು ಅನ್ಯ ಜನಾಂಗೀಯರೆಂದು ಹಂಗಿಸಲಾಗುತ್ತಿದೆ. ನೂರಕ್ಕೆ ನೂರು ಸಂದರ್ಭಗಳಲ್ಲಿಯೂ ಆರೋಪವೇ ಮೊದಲು, ಸಾಕ್ಷ್ಯದ ಸರದಿ ಆನಂತರದ್ದು. ಅಪರಾಧವನ್ನು ಮೊದಲೇ ತೀರ್ಮಾನಿಸಲಾಗಿರುತ್ತದೆ. ದೋಷಿಯಲ್ಲವೆಂದು ಲೆಕ್ಕವಿಲ್ಲದಷ್ಟು ಸಲ ಅನಂತ ಕಾಲ ರುಜುವಾತು ಮಾಡುತ್ತಲೇ ಇರಬೇಕಾಗುತ್ತದೆ.
ಇದು ಕಾನೂನು ಜಾರಿಯ ಅಥವಾ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಲ್ಲ. ಬದಲಿಗೆ ಪೌರತ್ವದ ಅರ್ಥವನ್ನೇ ಮರು ವ್ಯಾಖ್ಯಾನಿಸುವ ದುರುಳ ಪ್ರಯತ್ನ. ಈ ದೇಶಕ್ಕೆ ಸೇರಿದವರು ಎಂಬುದು ಇನ್ನು ಸಂವಿಧಾನಾತ್ಮಕ ಹಕ್ಕು ಅಲ್ಲ. ಬದಲಾಗಿ ಅದು ಬಹುಸಂಖ್ಯಾತರಿಂದ ನೀಡಲ್ಪಡುವ ದಾನ. ದಾಖಲೆ ದಸ್ತಾವೇಜುಗಳು ಸುರಕ್ಷತೆಯನ್ನು ಖಾತ್ರಿಪಡಿಸುವುದಿಲ್ಲ; ನಿರಂತರ ನಿಷ್ಠಾವಂತಿಕೆಯ ಪ್ರದರ್ಶನಗಳು ಮಾತ್ರ ಸುರಕ್ಷೆಯನ್ನು ಒದಗಿಸಬಲ್ಲವು. ರಾಜ್ಯವ್ಯವಸ್ಥೆಯ ನೋಟ ಎಲ್ಲರ ಮೇಲೂ ಸಮವಾಗಿ ಬೀಳುವುದಿಲ್ಲ; ಅದು ಕೆಲವು ನಿರ್ದಿಷ್ಟ ದೇಹಗಳು, ಭಾಷೆಗಳು, ಹೆಸರುಗಳು ಹಾಗೂ ಅವರ ಪ್ರಾರ್ಥನೆಗಳ ಮೇಲೆ ಹರಿದಾಡುತ್ತದೆ.
ಹದಿನೇಳು ವರ್ಷಗಳಿಂದ ಲಖನೌನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಸ್ವಚ್ಛಗೊಳಿಸುತ್ತಿರುವ ಸಲ್ಮಾ ಅವರಂತಹವರು ಈ ದೇಶಕ್ಕೆ ಸೇರಿದವರು ಎಂಬುದನ್ನು ಅವರ ದಿನನಿತ್ಯದ ದುಡಿಮೆ ನಿರ್ಧರಿಸುವುದಿಲ್ಲ. ಮಾನವೀಯತೆ ಎಂಬುದು ಷರತ್ತುಬದ್ಧ ಮೌಲ್ಯವಾಗಿದೆಯೇ ವಿನಾ ಬೇಷರತ್ತಾಗಿ ಉಳಿದಿಲ್ಲ. ಅನುಮಾನವೇ ಬದುಕಾಗಿದೆ. ಸಲ್ಮಾಳಂತಹವರ ಕಥೆ ಅಪವಾದವಲ್ಲ; ಅದು ಸಿದ್ಧಮಾದರಿಯಾಗಿ ಸ್ಥಾಪಿತವಾಗಿದೆ. ಅತ್ಯಂತ ಬಡ ಶ್ರಮಿಕರನ್ನು ಅಪಾಯಕಾರಿಗಳಂತೆ ಚಿತ್ರಿಸಿದಾಗ, ಮಾನವೀಯತೆಯನ್ನು ಷರತ್ತುಬದ್ಧವಾಗಿ ನೋಡಲು ಸಮಾಜವನ್ನು ತರಬೇತುಗೊಳಿಸಲಾಗುತ್ತಿದೆ.
ಅನಾವರಣ ಆಗುತ್ತಿರುವುದು ಅಂಕೆತಪ್ಪಿದ ದ್ವೇಷವಲ್ಲ. ಇದು ಉದ್ದೇಶಪೂರ್ವಕ ನೀತಿನಿರ್ಧಾರಗಳು ನಿರ್ಮಿಸುವ ವಾತಾವರಣ. ರಾಜಕೀಯ ಭಾಷಣಗಳಲ್ಲಿ ಮುಸ್ಲಿಮರನ್ನು ನುಸುಳುಕೋರರು, ಜನಸಾಂಖ್ಯಿಕ ಅಪಾಯಗಳು, ಅಥವಾ ಆಂತರಿಕ ಶತ್ರುಗಳೆಂದು ನಿರಂತರವಾಗಿ ಬಣ್ಣಿಸಲಾಗುತ್ತದೆ. ಈ ಪದಗಳು ಸಾಂಕೇತಿಕ ಅಲ್ಲ, ಬದಲಾಗಿ ಅವು ನೆಲೆಗಟ್ಟನ್ನು ಸಿದ್ಧಪಡಿಸುತ್ತವೆ. ಶುದ್ಧೀಕರಣದ ಮತ್ತು ಸ್ವಚ್ಛಗೊಳಿಸುವ ಭಾಷೆಯನ್ನು ನಾಯಕರು ಬಳಸಿದಾಗ, ಅದರ ಅಂತರಾರ್ಥ ಏನೆಂದು ಕೇಳುಗರಿಗೆ ತಿಳಿದು ಹೋಗುತ್ತದೆ. ಹಿಂಸಾಚಾರವನ್ನು ಸ್ಪಷ್ಟವಾಗಿ ಆದೇಶಿಸುವ ಅಗತ್ಯವಿಲ್ಲ; ಅದಕ್ಕೆ ವೀಳ್ಯವಿಟ್ಟು ಕರೆಯಲಾಗುತ್ತದೆ.
ಹಿಂದೂ ರಾಷ್ಟ್ರದ ಕಲ್ಪನೆಯು ಇದೇ ವಾತಾವರಣದಲ್ಲೇ ಬೆಳೆಯುತ್ತದೆ. ಸಂಪೂರ್ಣ ಹೊರಗಿಡುವಿಕೆಯ ಅಗತ್ಯ ಅದಕ್ಕಿಲ್ಲ. ನಿರಂತರ ಅಭದ್ರತೆ ಅಸುರಕ್ಷತೆ ಸಾಕು. ಆತಂಕದಲ್ಲಿಟ್ಟ ಅಲ್ಪಸಂಖ್ಯಾತರನ್ನು ನಿಯಂತ್ರಿಸುವುದು ಸಲೀಸು. ಹೀಗಾಗಿ ದ್ವೇಷವೆಂಬುದು ಆಡಳಿತದ ಕೈಯಲ್ಲಿನ ಸಲಕರಣೆಯಾಗುತ್ತದೆ—ಜನರನ್ನು ಹುರಿದುಂಬಿಸುವ, ಸಮರ್ಥ ಸಲಕರಣೆ. ಚುನಾವಣಾ ಲಾಭ ತರುವ ಸಾಧನ.
ಆರ್ಥಿಕ ವೈಫಲ್ಯ, ನಿರುದ್ಯೋಗ, ಕೃಷಿ ಕಾರ್ಪಣ್ಯ, ಮತ್ತು ಕಲ್ಯಾಣ ಯೋಜನೆಗಳ ಅವನತಿಯನ್ನು ಪ್ರಾಮಾಣಿಕವಾಗಿ ಎದುರಿಸುವುದಿಲ್ಲ. ಬದಲಿಗೆ ಕಲ್ಪಿತ ಶತ್ರುಗಳನ್ನು ಸೃಷ್ಟಿಸಿ ಅವರ ಮೇಲೆ ಈ ಹೊರೆಯನ್ನು ವರ್ಗಾಯಿಸಲಾಗುತ್ತದೆ. ಹೊಣೆಗಾರಿಕೆಯನ್ನು ಬಲಿಪಶುಗಳ ಹೆಗಲುಗಳ ಮೇಲೆ ಮತ್ತು ನೀತಿ ನಿರ್ಧಾರಗಳನ್ನು ಭಯ-ಶಂಕೆಗಳ ಹೆಗಲ ಮೇಲೆ ಹೊರಿಸಲಾಗುತ್ತದೆ
ಮೀಡಿಯಾ ಕಾವಲು ನಾಯಿಯಾಗಿ ಉಳಿದಿಲ್ಲ
ಟೆಲಿವಿಷನ್ ಸ್ಟುಡಿಯೋಗಳು ಪತ್ರಿಕೋದ್ಯಮವನ್ನು ತ್ಯಜಿಸಿ ನಾಟಕೀಯತೆಗೆ ಶರಣಾಗಿವೆ. ಪ್ರೈಮ್-ಟೈಮ್ ಚರ್ಚೆಗಳು ಸ್ವಘೋಷಿತ ನ್ಯಾಯಾಲಯಗಳ ಪಾತ್ರ ಧರಿಸಿವೆ—ಮುಸ್ಲಿಮರು ತಮ್ಮ ಧರ್ಮ, ಆಹಾರ, ಜನನ ದರ, ಪ್ರೀತಿ, ಭಾಷೆ ಮತ್ತು ನಿಷ್ಠೆಯ ಕಾರಣಗಳಿಗಾಗಿ ನಿರಂತರವಾಗಿ ಆರೋಪಿಗಳಾಗಿದ್ದಾರೆ. ಬಡತನ ಏಕೆ ಮುಂದುವರಿದಿದೆ ಅಥವಾ ಸಂಸ್ಥೆಗಳು ಏಕೆ ವಿಫಲವಾಗುತ್ತಿವೆ ಎಂಬುದು ನಿಜ ಪ್ರಶ್ನೆಯಾಗಬೇಕಿತ್ತು. ಆದರೆ ಯಾವಾಗಲೂ ಈ ದೇಶಕ್ಕೆ ಸೇರಿದವರು ಯಾರು, ಹೊರಗಿನವರು ಯಾರು ಎಂಬುದೇ ಮೀಡಿಯಾ ಕೇಳುತ್ತಿರುವ ಪ್ರಶ್ನೆಯಾಗಿ ಹೋಗಿದೆ.

ಮುಸ್ಲಿಮರನ್ನು ಗುಂಪುಗಳು ಜಜ್ಜಿ ಕೊಂದಾಗ ಹಾರಿಕೆಯ ವರದಿಯನ್ನು ಇಲ್ಲವೇ ಸೌಮ್ಯ ಪದಗಳಲ್ಲಿ ತೇಲಿಸುವ-ಮುಚ್ಚಿಹಾಕುವ ವರದಿಯನ್ನು ಬರೆಯಲಾಗುತ್ತದೆ. ಮುಸ್ಲಿಂ ಅಂಗಡಿಗಳನ್ನು ಬಹಿಷ್ಕರಿಸಿದಾಗ ಅದನ್ನು “ಸ್ಥಳೀಯ ಉದ್ವಿಗ್ನತೆ” ಎಂದು ಕರೆಯಲಾಗುತ್ತದೆ. ಮುಸ್ಲಿಂ ಮಗುವನ್ನು ಕೊಂದಾಗ, ಅದು ರಾಷ್ಟ್ರೀಯ ನೆನಪಿನ ಕೋಶದಿಂದ ಕೆಲವೇ ತಾಸುಗಳಲ್ಲಿ ಅಳಿಸಿಹೋಗುತ್ತದೆ. ಇದೇ ಸಮಯದಲ್ಲಿ, ಹಿಂಸಾಚಾರಕ್ಕೆ ನೀಡಲಾದ ಕರೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಚರ್ಚಿಸಲಾಗುತ್ತದೆ; ದ್ವೇಷ ಭಾಷಣವನ್ನು ದಿಟ್ಟ ಅಭಿಪ್ರಾಯವೆಂದು ರೂಪಿಸಲಾಗುತ್ತದೆ.
ಇದು ಕೇವಲ ನಿರ್ಲಕ್ಷ್ಯವಲ್ಲ; ಇದು ಉದ್ದೇಶಪೂರ್ವಕ ವಿನ್ಯಾಸ. ದ್ವೇಷವನ್ನು ಪ್ರತಿದಿನ ಪುನರಾವರ್ತಿಸಿದಾಗ, ಆಕ್ರೋಶ ತನ್ನ ಮೊನಚನ್ನು ಕಳೆದುಕೊಳ್ಳುತ್ತದೆ. ನಿರ್ದಿಷ್ಟ ದುಃಖವನ್ನಷ್ಟೇ ಎತ್ತಿ ತೋರಿಸಿದಾಗ, ನೋಡುಗರು ಕೂಡ ಯಾವುದಕ್ಕೆ ಕಾಳಜಿ ಮಾಡಬೇಕು, ಮಾಡುವ ಅಗತ್ಯವಿಲ್ಲ ಎಂದು ತರಬೇತುಗೊಳ್ಳುತ್ತಾರೆ. ಹಿಂಸಾಚಾರವು ನೈತಿಕ ಆಘಾತವಾಗುವುದಿಲ್ಲ; ಅದು ನಿತ್ಯರೂಢಿಯ ಕಾರ್ಯಕ್ರಮವಾಗುತ್ತದೆ. ದ್ವೇಷವು ಮನರಂಜನೆಯಾಗುತ್ತದೆ, ಕ್ರೌರ್ಯವು ಗ್ರಾಹಕ ಸರಕಾಗುತ್ತದೆ. ಅರ್ಥಮಾಡಿಕೊಳ್ಳಲು ಅಥವಾ ಸಹಾನುಭೂತಿ ತೋರುವ ಅವಕಾಶ ಕೊಡುವುದಿಲ್ಲ. ಬದಲಾಗಿ ತೀರ್ಪು ನೀಡಲು, ಅಣಕಿಸಿ ಅಪಹಾಸ್ಯಗೊಳಿಸಲು, ಚಪ್ಪಾಳೆ ತಟ್ಟಿ ಮೆಚ್ಚಲು ಮಾತ್ರವೇ ಆಹ್ವಾನ ನೀಡುತ್ತದೆ.
ಇಂತಹ ಮಾಧ್ಯಮ ಪರಿಸರದಲ್ಲಿ, ದುಃಖ ಯಾತನೆಗಳನ್ನು ಕುಗ್ಗಿಸಿ ಸಣ್ಣದಾಗಿಸಿ, ಸರ್ವೇಸಾಮಾನ್ಯ ಆಗಿಸುವುದಲ್ಲದೆ ಕ್ಷುಲ್ಲಕಗೊಳಿಸಲಾಗುತ್ತದೆ.
ಕಾನೂನೆಂಬುದು ಆಯ್ದ ಸಾಧನ-ಸಲಕರಣೆ
ಈ ಸಾಮಾನ್ಯೀಕರಣದ ಅತ್ಯಂತ ವಿನಾಶಕಾರಿ ಪರಿಣಾಮ ಹೊಂದಿದೆ. ಕಾನೂನಿನ ಆಡಳಿತಕ್ಕೆ ಕ್ರಮೇಣ ತುಕ್ಕು ಹಿಡಿಯುತ್ತದೆ. ಕಾನೂನಿನ ಮುಂದೆ ಸರ್ವರೂ ಸಮಾನರು, ಬದುಕಿನ ಘನತೆಯನ್ನು ಉಳ್ಳವರು, ಹಾಗೂ ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವವರು ಎಂಬ ಸಾಂವಿಧಾನಿಕ ಹಕ್ಕುಗಳು-ಮೌಲ್ಯಗಳು ಕಾಗದದ ಮೇಲೆಯಷ್ಟೇ ಉಳಿದು ಹೋಗುತ್ತವೆ. ವಾಸ್ತವದಲ್ಲಿ, ಕಾನೂನನ್ನು ಆಯ್ದ ಕೆಲವರಿಗೆ ಮಾತ್ರವೇ ಅನ್ವಯಿಸಲಾಗುತ್ತದೆ. ಕಾನೂನು ಕಾಯ್ದೆಗಳ ಜಾರಿ ತತ್ವದ ಆಧಾರದ ಮೇಲೆ ಅಲ್ಲ, ಗುರುತು-ಅಸ್ಮಿತೆಗಳ ಆಧಾರದ ಮೇಲೆ ನಡೆಯುತ್ತದೆ. ವಿಶೇಷವಾಗಿ ಸಮಾಜದ ಅಂಚಿಗೆ ನೂಕಲ್ಪಟ್ಟ ಸಮುದಾಯಗಳ ಪ್ರತಿಭಟನಾಕಾರರನ್ನು ತಡಮಾಡದೆ, ದೊಡ್ಡ ಸಂಖ್ಯೆಯಲ್ಲಿ ಕೈದು ಮಾಡಲಾಗುತ್ತದೆ; ಆದರೆ ಪ್ರಭುತ್ವದ ಪರ ಪ್ರಬಲ ರಾಜಕೀಯ ಹಿತಾಸಕ್ತಿಗಳಿಗೆ ಹೊಂದಿಕೊಂಡ ಗುಂಪುಗಳು ಪೊಲೀಸ್ ಕಣ್ಗಾವಲಿನಲ್ಲೇ ಲಂಗುಲಗಾಮಿಲ್ಲದೆ ಸಂಚರಿಸುತ್ತವೆ.
ಎಫ್‌ಐಆರ್‌ಗಳು ಅಪರಾಧಿಗಳ ವಿರುದ್ಧವಲ್ಲ, ಬಲಿಯಾದವರ ವಿರುದ್ಧವೇ ವೇಗವಾಗಿ ದಾಖಲಾಗುತ್ತವೆ. ಹಿಂಸೆಗೆ ತುತ್ತಾದವರೇ ತಮ್ಮ ನಿರ್ದೋಷ, ಉದ್ದೇಶ, ಮತ್ತು ಪೌರತ್ವವನ್ನೂ ಸಾಬೀತುಪಡಿಸಬೇಕಾಗುತ್ತದೆ; ಹಿಂಸೆಯನ್ನು ಪ್ರಚೋದಿಸುವವರು ರಾಜಕೀಯ ರಕ್ಷಣೆ, ಸಾರ್ವಜನಿಕ ಸಮರ್ಥನೆ, ಅಥವಾ ಆಡಳಿತಾತ್ಮಕ ನಿರ್ಲಕ್ಷ್ಯದ ಉಡುಗೊರೆ ಪಡೆಯುತ್ತಾರೆ. ಕೈದು ಕೇಂದ್ರಗಳ (Detention Centers) ಬಗ್ಗೆ ಅವುಗಳು ಸರ್ವೇಸಾಮಾನ್ಯವೇನೋ ಎಂಬಂತೆ ಸಾರ್ವಜನಿಕ ಚರ್ಚೆಗಳಲ್ಲಿ ಸಹಜವಾಗಿ ಪ್ರಸ್ತಾಪಿಸಿಲಾಗುತ್ತಿದೆ. ಅಪರಾಧ ಸಾಬೀತಾಗದೇ ಜನರನ್ನು ಸ್ವಾತಂತ್ರ್ಯದಿಂದ ವಂಚಿಸುವುದು ಗಂಭೀರ ಸಂವಿಧಾನಾತ್ಮಕ ಉಲ್ಲಂಘನೆ. ಈ ಮಾತನ್ನು ಮೂಲೆಪಾಲು ಮಾಡಲಾಗಿದೆ.

ಈ ವಾತಾವರಣದಲ್ಲಿ ನ್ಯಾಯವು ಷರತ್ತುಬದ್ಧ ಹಕ್ಕಾಗಿ ಉಳಿಯುವುದೇ ವಿನಾ ಬೇಷರತ್ ಹಕ್ಕಾಗಿ ಉಳಿಯುವುದಿಲ್ಲ. ಹಕ್ಕುಗಳನ್ನು ಧರ್ಮ, ಪ್ರದೇಶ, ಜಾತಿ ಮತ್ತು ರಾಜಕೀಯ ಅನುಕೂಲತೆಯ ಆಧಾರದ ಮೇಲೆ ಹಂಚಲಾಗುತ್ತದೆಯೇ ವಿನಾ ಎಲ್ಲ ನಾಗರಿಕರಿಗೆ ಸಮಾನ ಖಾತರಿಯ ಭರವಸೆಯಾಗಿ ಅಲ್ಲ.
ಗುಂಪುಗಳು ಹಾದಿಬೀದಿಗಳಲ್ಲಿ ಜಜ್ಜಿ ಎಸಗುವ ಹತ್ಯೆಗಳು, ಪೊಲೀಸ್ ಕಸ್ಟಡಿಯಲ್ಲಿನ ಚಿತ್ರಹಿಂಸೆ, ಅಥವಾ ಜಾತೀಯ ಪ್ರೇರಿತ ದಾಳಿಗಳಲ್ಲಿ ಕುಟುಂಬಗಳು ಮಕ್ಕಳು ಮರಿಗಳನ್ನು ಕಳೆದುಕೊಳ್ಳುತ್ತಿವೆ. ಅವುಗಳಿಗೆ ಕಾನೂನು ವ್ಯವಸ್ಥೆಯೇ ಮತ್ತೊಂದು ಆಘಾತದ ಸ್ಥಳವಾಗಿ ಹೊಮ್ಮತೊಡಗಿದೆ. ವಿಚಾರಣೆಗಳು ಅಂತ್ಯವೇ ಇಲ್ಲದಷ್ಟು ವಿಳಂಬಗೊಳ್ಳುತ್ತಿವೆ. ತನಿಖೆಗಳು ಸ್ಥಗಿತಗೊಳ್ಳುತ್ತವೆ. ಸಾಕ್ಷಿಗಳಿಗೆ ಬೆದರಿಕೆ ಒಡ್ಡಲಾಗುತ್ತದೆ. ಪೊಲೀಸ್ ಠಾಣೆಗಳು ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತುವುದೆಂದರೆ ಗಾಯಗಳನ್ನು ಮತ್ತೆ ಮತ್ತೆ ಕೆದಕಿದಂತೆ ಆಗಿಹೋಗಿದೆ. ಅಪರಾಧಿಗಳಿಗಿಂತ ಹೆಚ್ಚಾಗಿ ಅಪರಾಧಕ್ಕೆ ಬಲಿಯಾದವರನ್ನೇ ದಂಡಿಸುವ ಪ್ರಕ್ರಿಯೆ ರೂಪು ತಳೆಯುತ್ತದೆ. ಇಂತಹ ಬಲಿಪಶುಗಳನ್ನು ರಕ್ಷಿಸಲು ರಾಜ್ಯವ್ಯವಸ್ಥೆ ವಿಫಲವಾಗುವುದು ಮಾತ್ರವಲ್ಲ, ಆಶಾವಾದವನ್ನೇ ಚಿವುಟಿ ಹಾಕುತ್ತದೆ.
ಆಯ್ದ ನ್ಯಾಯದ ಈ ಮಾದರಿ ಸಮಾಜಕ್ಕೆ ಭೀತಿಭರಿತ ಸಂದೇಶ ರವಾನಿಸುತ್ತದೆ. ಇಂತಿಂತಹ ಜೀವಗಳನ್ನು ಉಳಿಸಬೇಕು, ಇತರೆ ಜೀವಗಳನ್ನು ಅಳಿಸಬಹುದೆಂದು ಹೇಳಿಕೊಡುತ್ತದೆ. ಕೆಲವು ಜೀವಗಳ ಕುರಿತು ಸಾರ್ವಜನಿಕ ಶೋಕ ವ್ಯಕ್ತವಾಗುತ್ತದೆ. ಇತರೆ ಕೆಲವು ಜೀವಗಳನ್ನು ಲೆಕ್ಕಿಸದೆ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯೀಕರಣದ ಮನೋವಿಜ್ಞಾನ
ಈ ಕ್ಷಣದ ಅತ್ಯಂತ ಅಪಾಯಕಾರಿ ಗುರುತೆಂದರೆ ಕ್ರೌರ್ಯವನ್ನು ಅದೃಶ್ಯಗೊಳಿಸುವುದು, ಗಮನಕ್ಕೆ ಬರದಂತೆ ಮಾಡುವುದು,
ಹಿಂಸೆಯನ್ನು ಗುರುತಿಸುವ ಸಾಮರ್ಥ್ಯವನ್ನೇ ಕುಗ್ಗಿಸಿಬಿಡುವುದು. ಅನ್ಯಾಯವೇ ದಿನನಿತ್ಯದ ರೂಢಿಯಾಗಿ ಹೋದಾಗ, ಅದು ದಿನನಿತ್ಯದ ಬದುಕನ್ನು ಅಸ್ತವ್ಯಸ್ತಗೊಳಿಸುವುದಿಲ್ಲ, ಬದಲಾಗಿ ದಿನನಿತ್ಯದ ಬದುಕಿನಲ್ಲಿ ಸಹಜ ಸ್ವಾಭಾವಿಕ ಎಂಬಂತೆ ಬೆರೆತುಹೋಗುತ್ತದೆ.
ಸಂಶಯ ಅಥವಾ ಕಣ್ಗಾವಲಿಗೆ ಗುರಿಯಾಗದವರಿಗೆ ಬದುಕು ಎಂದಿನಂತೆ ಸಹಜಸಾಮಾನ್ಯವಾಗಿ ಕಾಣುತ್ತದೆ. ದುಡಿಮೆ, ನಿತ್ಯ ನೇಮಗಳು, ಹಬ್ಬ ಆಚರಣೆಗಳು ಎಂದಿನಂತೆ ಯಾವ ವ್ಯತ್ಯಯವೂ ಇಲ್ಲದೆ ಜರುಗುತ್ತವೆ. ಟೀವಿಯನ್ನು ನೋಡಲೇಬೇಕೆಂದಿಲ್ಲ, ಸ್ವಿಚ್ ಆಫ್ ಕೂಡ ಮಾಡಬಹುದು. ಬಲಿಪಶು ಆಗುವವರಿಗೆ ಮತ್ತು ಆಗದವರ ನಡುವೆ ಅಪನಂಬಿಕೆಯ ಅಂತರವನ್ನು ಬೆಳೆಸುತ್ತದೆ. ಅನ್ಯಾಯ ಎಂಬುದು ನಿಮ್ಮ ಮನೆಬಾಗಿಲಿಗೇ ಬರದೆ ಹೋದರೆ, ಅದನ್ನು ಅತಿಶಯ, ಮೀಡಿಯಾ ನಿರ್ಮಿತ ರೋಚಕತೆ ಅಥವಾ ರಾಜಕೀಯ ಪ್ರಾಪಗ್ಯಾಂಡ ಎಂದು ತಳ್ಳಿ ಹಾಕುವುದು ಸುಲಭವಾಗುತ್ತದೆ.
ಆದರೆ ಸಂಶಯ- ಕಣ್ಗಾವಲಿಗೆ ಗುರಿಯಾದವರಿಗೆ ಬದುಕು ನಿರಂತರ ಅಸಹನೀಯ ಒತ್ತಡ ಆಗುತ್ತದೆ. ನಿತ್ಯ ಮುಂಜಾನೆಗಳು ಪೊಲೀಸರು ಕದ ಬಡಿಯುವ ಭಯ, ರಾತ್ರಿ ಗುಂಪು ಸೇರಲು ಭಯ, ತಪ್ಪಾಗಿ ಅರ್ಥೈಸಿಕೊಳ್ಳುವ ಭಯ, ಮೀಡಿಯಾದ ಸುದ್ದಿಯಾಗುವ ಭಯಗಳು ಕಾಡುತ್ತವೆ. ಮುಕ್ತವಾಗಿ ಮಾತಾಡುವುದು, ಸಾರ್ವಜನಿಕವಾಗಿ ಪ್ರಾರ್ಥಿಸುವುದು, ಘನತೆಯನ್ನು ಸಮರ್ಥಿಸಿಕೊಳ್ಳುವಂತಹ ಸಾಮಾನ್ಯ ಕ್ರಿಯೆಗಳು ಅಪಾಯಕಾರಿ ಆಗಿ ಹೋಗುತ್ತವೆ. ಕೇವಲ ದೈಹಿಕ ನಿಯಂತ್ರಣ ಮಾತ್ರವಲ್ಲ, ಮನೋವೈಜ್ಞಾನಿಕ ಅಧೀನತೆಯನ್ನು ಹೇರಲಾಗುತ್ತಿದೆ. ಇದು ನಿರಂತರ ಮನೋಯುದ್ಧವೇ ವಿನಾ ಕೇವಲ ರಾಜಕೀಯ ದಮನ ಅಲ್ಲ.
ಇಂತಹ ಸಮಾಜ ಸುಸ್ಥಿರವಾಗಿರಲು ಸಾಧ್ಯವಿಲ್ಲ. ಒಂದು ಗುಂಪನ್ನು ಮಾನವೀಯತೆಯಿಂದ ವಂಚಿಸಲು ತನಗೆ ತಾನೇ ತರಬೇತಿ ಪಡೆಯುವ ದೇಶವು, ಕಾಲಕ್ರಮೇಣ ಯಾರನ್ನಾದರೂ ರಕ್ಷಿಸಲು ಬೇಕಾಗಿರುವ ನೈತಿಕ ಭಾಷೆಯನ್ನು ಕಳೆದುಕೊಳ್ಳುತ್ತದೆ. ಅಲ್ಪಸಂಖ್ಯಾತರನ್ನು ಗುರಿ ಆಗಿಸಲು ನಿರ್ಮಿಸಿದ ವಿಧಿವಿಧಾನಗಳು ಅಲ್ಲಿಗೇ ನಿಲ್ಲುವುದಿಲ್ಲ. ಇಂದು ಮುಸ್ಲಿಮರು ಮತ್ತು ಕ್ರೈಸ್ತರು. ನಾಳೆ ಭಿನ್ನಮತೀಯರು, ಕಾರ್ಮಿಕರು ಹೊಸ ಗುರಿ ಆಗಬಲ್ಲರು. ಸರ್ವಾಧಿಕಾರ ಎಂಬುದು ಆರಂಭದ ಬಿಂದುವಿನಲ್ಲೇ ನಿಂತು ಬಿಡುವುದಿಲ್ಲ ಎಂಬುದನ್ನು ಅರಿಯಬೇಕಾಗಿದೆ.
ಸರ್ವಾಧಿಕಾರವು ತನ್ನ ಮೊದಲ ಬಲಿಪಶುಗಳಿಗಷ್ಟೇ ತೃಪ್ತಗೊಳ್ಳುವುದಿಲ್ಲ. ಅದು ವಿಸ್ತರಿಸುತ್ತದೆ, ರೂಪಾಂತರಗೊಳ್ಳುತ್ತದೆ, ಮುಂದಕ್ಕೆ ಚಲಿಸುತ್ತದೆ. ಆರಂಭದ ಬಿಂದುವಿನಲ್ಲೇ ನಿಂತು ಬಿಡುವುದಿಲ್ಲ. ಎದೆಗೊಟ್ಟು ಎದುರಿಸಿದಾಗ ಮಾತ್ರ ಅದು ನಿಲ್ಲುತ್ತದೆ.
ದ್ವೇಷವೆಂಬುದು ಚುನಾವಣಾ ತಂತ್ರವಾಗಿ…
ದ್ವೇಷ ಏಕೆ ಮುಂದುವರಿಯುತ್ತದೆ? ಏಕೆಂದರೆ ಇದು ಆಳುವವರು ಬಯಸಿದ್ದನ್ನು ಈಡೇರಿಸುತ್ತದೆ.
ದ್ವೇಷ ಎಂಬುದು ರಾಜಕೀಯವಾಗಿ ಪರಿಣಾಮಕಾರಿ ಅಸ್ತ್ರ. ಭಯವನ್ನು ನಿಷ್ಠೆಯಾಗಿ ಪರಿವರ್ತಿಸಿ ಮತಗಳನ್ನು ಧ್ರುವೀಕರಿಸುತ್ತದೆ. ಭೌತಿಕ ಬದುಕುಗಳನ್ನು ಸುಧಾರಿಸದೆ ಭಾವತೀವ್ರ ಏಕತೆಯನ್ನು ಸೃಷ್ಟಿಸುತ್ತದೆ. ಹೀಗಾಗಿ ಆಳುವವರು ಹೊಣೆಯನ್ನೇ ಹೊರದೆ, ಸಾಧನೆಯನ್ನೇ ಮಾಡದೆ ಅಧಿಕಾರದಲ್ಲಿರಲು ಅವಕಾಶ ನೀಡುತ್ತದೆ. ಸಾರ್ವಜನಿಕ ಬದುಕನ್ನು ಸುಧಾರಿಸುವ ಆಡಳಿತಕ್ಕಿಂತ, ಕೋಮುವಾದಿ ಧ್ರುವೀಕರಣ ಅಗ್ಗವಾಗುತ್ತದೆ. ಆಳುವವರ ಪಾಲಿಗೆ ಭಯ ಎಂಬುದು ಅಭಿವೃದ್ಧಿಗಿಂತ ಹೆಚ್ಚು ನಂಬಿಕೆಗೆ ಅರ್ಹವಾಗಿ ಪರಿಣಮಿಸುತ್ತದೆ.
ಆಡಳಿತಸೂತ್ರ ಹಿಡಿದವರ ಸಿದ್ಧಾಂತ ಮಾತ್ರವಲ್ಲ, ವಿರೋಧಪಕ್ಷಗಳ ವೈಫಲ್ಯವು ಈ ದಿನಮಾನಗಳನ್ನು ನಿರ್ದಿಷ್ಟವಾಗಿ ಮಬ್ಬುಗೊಳಿಸಿ ದುರ್ಬಲ ಆಗಿಸಿದೆ. ವಿರೋಧಪಕ್ಷಗಳ ದೊಡ್ಡ ಗುಂಪುಗಳು ಬಹುಸಂಖ್ಯಾತವಾದವನ್ನು ಮುಖಾಮುಖಿಯಾಗಿ ಎದುರುಗೊಳ್ಳುವುದನ್ನು ಬಿಟ್ಟು, ಆ ಆವರಣದೊಳಗೇ ಪೈಪೋಟಿಗೆ ಇಳಿದಿವೆ. ಬಹುಸಂಖ್ಯಾತವಾದದ ತೆಳುಗೊಳಿಸಿದ ಸೌಮ್ಯ ಕಥಾನಕಗಳನ್ನು ನೀಡುತ್ತಿವೆ. ಹೀಗೆ ಮಾಡುವ ಮೂಲಕ ಸಮಾನತೆಯೆಂಬುದು ರಾಜೀ ಮಾಡಿಕೊಳ್ಳಬಹುದಾದ ಚೌಕಾಶಿಯ ವಿಷಯ ಎಂಬ ಅಪಾಯಕಾರಿ ಸುಳ್ಳಿಗೆ ಬಲ ತುಂಬುತ್ತಿವೆ. ಸಾಂವಿಧಾನಿಕ ಹಕ್ಕುಗಳನ್ನು ರಾಜಕೀಯ ಅನುಕೂಲ-ಅನಾನುಕೂಲಕ್ಕೆ ತಕ್ಕಂತೆ ಅಮಾನತುಗೊಳಿಸಬಹುದು, ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರವರ ಆಯ್ಕೆಗೆ ಬಿಟ್ಟದ್ದು ಎಂಬ ಅಸತ್ಯಗಳನ್ನು ದಟ್ಟಗೊಳಿಸುತ್ತಿವೆ.
ಫಲವಾಗಿ, ಮುಸ್ಲಿಮರನ್ನು ರಾಜ್ಯದ ಮೇಲೆ ನ್ಯಾಯಸಮ್ಮತ ಹಕ್ಕುಗಳಿರುವ ನಾಗರಿಕರಂತೆ ಅಲ್ಲ, ನಿರ್ವಹಿಸಬೇಕಾದ, ನಿಯಂತ್ರಿಸಬೇಕಾದ, ಅಥವಾ ಮೌನಗೊಳಿಸಬೇಕಾದ ಹೊಣೆಗಾರಿಕೆಗಳಂತೆ ಕಾಣಲಾಗುತ್ತದೆ. ನ್ಯಾಯವನ್ನು ತೆರೆದಾಗಿ ನಿರಾಕರಿಸಲಾಗುವುದಿಲ್ಲ; ಅದನ್ನು ಮುಂದೂಡಲಾಗುತ್ತದೆ, ಕುಗ್ಗಿಸಲಾಗುತ್ತದೆ, ಮರುವ್ಯಾಖ್ಯಾನಿಸಲಾಗುತ್ತದೆ—ಅಂತಿಮವಾಗಿ ಅದು ಅಳಿದುಹೋಗುವವರೆಗೆ.
ಪರಿಣಾಮವಾಗಿ ಮುಸಲ್ಮಾನರನ್ನು ನಾಗರಿಕ ಹಕ್ಕುಗಳನ್ನು ಉಳ್ಳ ನಾಗರಿಕರಂತೆ ಅಲ್ಲದೆ ನಿಯಂತ್ರಿಸಿ, ಬಾಯಿ ಮುಚ್ಚಿಸಬೇಕಾದ ಜವಾಬ್ದಾರಿಗಳಂತೆ ಬಗೆಯಲಾಗುತ್ತಿದೆ. ನ್ಯಾಯನೀಡಿಕೆಯನ್ನು ಬಹಿರಂಗವಾಗಿ ನಿರಾಕರಿಸುತ್ತಿಲ್ಲ, ಬದಲಾಗಿ ಅದನ್ನು ತೆಳುವಾಗಿಸಲಾಗುತ್ತಿದೆ, ಮುಂದೂಡಲಾಗುತ್ತಿದೆ, ಹೊಸಚೌಕಟ್ಟುಗಳಲ್ಲಿ ಬಂಧಿಸಲಾಗುತ್ತಿದೆ, ನ್ಯಾಯನೀಡಿಕೆಯ ಪರಿಕಲ್ಪನೆಯೇ ಕಣ್ಮರೆ ಆಗುವ ತನಕವೂ ಈ ಪ್ರವೃತ್ತಿ ಮುಂದುವರೆಯುತ್ತದೆ.
ರಾಜಕೀಯ ಗಡಿರೇಖೆಗಳನ್ನೇ ದಾಟಿ ಹಂಚಿಕೊಂಡಿರುವ ಮೌನ ಒಪ್ಪಂದವಿದು. ಪ್ರಜಾಪ್ರಭುತ್ವವನ್ನು ಪೊಳ್ಳು ಮಾಡಿರುವ ಕೃತ್ಯ. ರಾಜಕೀಯವೆಂಬುದು ಪ್ರಹಸನ-ಪ್ರದರ್ಶನ ಆಗುತ್ತದೆ. ಆಕ್ರೋಶವು ನಾಟಕವಾಗುತ್ತದೆ ಹಾಗೂ ಪೌರತ್ವ ಎಂಬುದು ದೃಶ್ಯಾವಳಿಯಾಗಿಯಷ್ಟೇ ಉಳಿಯುತ್ತದೆ.
ಕ್ರೌರ್ಯವನ್ನು ಸಹಜ ಸ್ವಾಭಾವಿಕ ಎಂಬಂತೆ ಆಗಿಸುವ ಸಮಾಜಗಳು ಕೊಳೆಯುತ್ತವೆಯೇ ವಿನಾ ಸುಸ್ಥಿರಗೊಳ್ಳುವುದಿಲ್ಲ.
ನಾಜಿ ಜರ್ಮನಿ, ಜಿಮ್ ಕ್ರೋ ಅಮೆರಿಕ, ಜನಾಂಗೀಯಭೇದದ ದಕ್ಷಿಣ ಆಫ್ರಿಕಾದ ತನಕ ದ್ವೇಷದ ಮಾದರಿಗಳು ಒಂದೇ ತೆರನಾದವು. ಅಲ್ಪಸಂಖ್ಯಾತರ ದುಃಖ ಯಾತನೆಗಳು ನಿತ್ಯಬದುಕಿನ ರೂಢಿಯಾಗಿ ಹೋದಾಗ ಅಥವಾ ಮನರಂಜನೆಯಾಗಿ ಪರಿಣಮಿಸಿದಾಗ, ಜನತಾಂತ್ರಿಕ ಸಂಸ್ಥೆಗಳು ಒಳಗಿನಿಂದ ಕೊಳೆಯಲು ಆರಂಭಿಸುತ್ತವೆ. ಕಾಯ್ದೆ ಕಾನೂನುಗಳು ಅರ್ಥ ಕಳೆದುಕೊಳ್ಳುವೆ. ಹಿಂಸಾಚಾರ ದಟ್ಟವಾಗುತ್ತಲೇ ಹೋಗುತ್ತದೆ. “ಅನ್ಯರನ್ನು” ಗುರಿಯಾಗಿಸಲು ಕಟ್ಟಿದ ವಿಧಿವಿಧಾನಗಳೇ ಎದುರುತಿರುಗಿ, ಕಟ್ಟಕಡೆಗೆ ಭಿನ್ನಮತೀಯರು, ವಿಮರ್ಶಕರು, ಹಾಗೂ ಅಂತಿಮವಾಗಿ ಚಪ್ಪಾಳೆ ತಟ್ಟಿ ಮೆಚ್ಚಿದ ಸಮಾಜವನ್ನೇ ನುಂಗಿಬಿಡುತ್ತದೆ.
ಭಾರತವೂ ಅಪವಾದವಲ್ಲ. ಯಾವುದೇ ನಾಗರಿಕತೆಯೂ ಈ ತರ್ಕದಿಂದ ಮುಕ್ತವಲ್ಲ.
ಕಟ್ಟಕಡೆಗೆ ಉಳಿಯುವ ಪ್ರಶ್ನೆಯಿದು
ಈ ದಿನಮಾನಗಳ ಕುರಿತು ಸಹಾನುಭೂತಿಯಷ್ಟೇ ಸಾಲದು. ಸ್ಥಿತಿಗತಿಯನ್ನು ಗುರುತಿಸಬೇಕಾಗುತ್ತದೆ.
ದ್ವೇಷವನ್ನು ಪ್ರತಿನಿತ್ಯ ಪುನರಾವರ್ತಿಸಿದಾಗಲೂ ಅದು ನಮ್ಮ ಕಣ್ಣುಗಳಿಗೆ ದ್ವೇಷವಾಗಿಯೇ ಕಾಣಬಹುದೇ? ಕ್ರೌರ್ಯಕ್ಕೆ ಕಾನೂನು ಹೊದಿಸಿ, ಚರ್ಚೆಯಾಗಿ ಪ್ರಸಾರ ಮಾಡಿದಾಗಲೂ ಅದು ಆಕ್ರೋಶವನ್ನು ಅನುಭವ ನೀಡುವುದೇ? ನಮ್ಮ ನೆರೆಹೊರೆಯವರನ್ನು ಆಪಾಯದಂತೆ ಕಾಣುವಂತೆ ಅಧಿಕಾರ ಸಾರಿ ಹೇಳುವಾಗಲೂ ನಾವು ಅವರನ್ನು ಮನುಷ್ಯರಂತೆ ಗುರುತಿಸಬಹುದೇ?
ಏಕೆಂದರೆ ದ್ವೇಷವೇ ಅಧಿಕಾರದ ವ್ಯಾಕರಣವಾದಾಗ, ಮೌನವಹಿಸುವುದು ದ್ವೇಷದಲ್ಲಿ ಪಾಲ್ಗೊಂಡಂತೆಯೇ ವಿನಾ ತಟಸ್ಥತೆಯಾಗಿ ಉಳಿಯುವುದಿಲ್ಲ.
ಗಣರಾಜ್ಯಗಳು ಯಾವುದೇ ಒಂದು ನಾಟಕೀಯ ಕ್ಷಣದಲ್ಲಿ ಕುಸಿಯುವುದಿಲ್ಲ. ಅವು ಮೌನವಾಗಿ ಕ್ಷೀಣಿಸುತ್ತವೆ. ಅವು ಸಾಮಾನ್ಯೀಕರಣದ ಮೂಲಕ, ಅವಹೇಳನವನ್ನು ನಕ್ಕು ಮೆಚ್ಚುವ ಮೂಲಕ ಕ್ಷೀಣಿಸುತ್ತವೆ. “ವಾಸ್ತವವಾದ” ಮತ್ತು “ಪ್ರಾಯೋಗಿಕ ರಾಜಕೀಯ” ಎಂಬ ಹೆಸರಿನಲ್ಲಿ ಬಗೆಯುವ ನಿರ್ಲಕ್ಷ್ಯದ ಮೂಲಕ ಕ್ಷೀಣಿಸುತ್ತವೆ. ಅನ್ಯಾಯ ಎಂಬುದು ವ್ಯಕ್ತಿಗತವಾಗಿ ನಮ್ಮದೇ ಬಾಗಿಲಿಗೆ ತಟ್ಟುವ ಹೊತ್ತಿಗೆ, ಅಡಿಪಾಯಗಳು ಅದಾಗಲೇ ದುರ್ಬಲಗೊಂಡಿರುತ್ತವೆ.
ವಿದ್ಯಾರ್ಥಿಗಳು, ಚಿಂತಕರು, ಮತ್ತು ಸಾಮಾನ್ಯ ನಾಗರಿಕರ ಮಹತ್ವ ಅಡಗಿರುವುದು ಇಲ್ಲಿಯೇ. ವಿಶ್ವವಿದ್ಯಾಲಯಗಳು, ಪ್ರಶ್ನಿಸುವಿಕೆಯ, ಸ್ಥಳಗಳಾಗಬೇಕಿತ್ತೇ ವಿನಾ ಉಸಿರೆತ್ತದೆ ಪಾಲಿಸುವ ಸ್ಥಳಗಳಲ್ಲ, ಭಿನ್ನಮತದ ಆವರಣಗಳಾಗಬೇಕೇ ವಿನಾ ಭಯದ ತಾಣಗಳಲ್ಲ. ಶಿಕ್ಷಕರು ಮೌನದ ಅನುಕೂಲವನ್ನು ತಳ್ಳಿ ಹಾಕಬೇಕು, ಪತ್ರಕರ್ತರು ಸತ್ಯವನ್ನು ಆಯ್ದುಕೊಳ್ಳಬೇಕು. ಸುಳ್ಳು ಸುರಕ್ಷತೆಗಾಗಿ ಮಾನವೀಯತೆಯನ್ನು ಬಲಿ ಕೊಡುವುದು ಸರಿಯೇ ತಪ್ಪೇ ಎಂದು ಸಮಾಜ ನಿರ್ಧರಿಸಬೇಕು.
ಭಾರತದ ಮುಂದಿರುವ ಆಯ್ಕೆ ನಿಚ್ಚಳ. ದ್ವೇಷದ ಈ ಯಂತ್ರಾಂಗವನ್ನು ಅಡ್ಡಗಟ್ಟಬೇಕು. ಇಲ್ಲವಾದರೆ ಭಯವೇ ಪೌರತ್ವವನ್ನು ವ್ಯಾಖ್ಯಾನಿಸುವ, ಸಾರ್ವಜನಿಕವಾಗಿ ಪ್ರದರ್ಶನವಾಗಿ ತೋರುವುದೇ ನಿಷ್ಠಾವಂತಿಕೆ ಎನಿಸಿಕೊಳ್ಳುವ ಹಾಗೂ ಮಾನವೀಯತೆ ಎಂಬುದು ಐಚ್ಛಿಕ ಎನಿಸುವ ಭವಿಷ್ಯತ್ತನ್ನು ಒಪ್ಪಿಕೊಳ್ಳಬೇಕು.
ಇತಿಹಾಸ ಮೌನವಾಗಿದ್ದವರನ್ನು ಯಾಕೆ ಎಂದು ಕೇಳುವುದಿಲ್ಲ. ಮೌನವೇ ಸುಲಭ ದಾರಿಯೆನಿಸಿದ್ದ ಸನ್ನಿವೇಶದಲ್ಲಿ ಯಾರು ಮಾತನಾಡಿದರು, ಕ್ರೌರ್ಯ ಸಹಜ ಸಾಮಾನ್ಯ ಎಂಬಂತೆ ಆಗಿಸಿದ ದಿನಮಾನಗಳಲ್ಲಿ ಯಾರು ಮನುಷ್ಯರಾಗಿ ಉಳಿದರು ಎಂಬುದನ್ನು ಕೇಳುತ್ತದೆ.
ವರದಿ: ದ್ವೇಷ ಎಂಬುದು ಇಂದಿನ ಭಾರತದಲ್ಲಿ ಏಕಾಏಕಿ ಸ್ಫೋಟಗೊಳ್ಳುವುದಿಲ್ಲ; ಅದು ಹರಿದು ಸಂಚರಿಸುತ್ತದೆ. ಅದು ಅಚ್ಚರಿಗೊಳಿಸುವುದಿಲ್ಲ, ಅದು ನೆಲೆಯೂರುತ್ತದೆ. ಅದು ಇನ್ನು ಸಾರ್ವಜನಿಕ ಬದುಕನ್ನು ಅಸ್ತವ್ಯಸ್ತಗೊಳಿಸುವುದಿಲ್ಲ, ಬದಲಿಗೆ ಸಾರ್ವಜನಿಕ ಬದುಕಿನ ಹಿಮ್ಮೇಳದ ಲಯವೇ ಆಗಿ ಹೋಗಿದೆ— ಅದು ರಾಜಕೀಯ ಭಾಷೆಯೊಳಗೆ ಹೊಕ್ಕು ನೆಲೆ ನಿಂತು, ಟಿವಿ ಸ್ಟುಡಿಯೋಗಳಲ್ಲಿ ಅಬ್ಬರಿಸಿದೆ, ನಾಗರಿಕರನ್ನು ರಕ್ಷಿಸುವ ಹೊಣೆ ಹೊತ್ತ ಸಂಸ್ಥೆಗಳು ದ್ವೇಷಕ್ಕೆ ಮೌನವಾಗಿ ಮಾನ್ಯತೆ ನೀಡುತ್ತಿವೆ. ನಾವು ಕಾಣುತ್ತಿರುವುದು ತತ್ಕಾಲದ ಅಸಹಿಷ್ಣುತೆಯ ಏರಿಕೆ ಅಲ್ಲ, ಬದಲಾಗಿ ಒಂದು ಸಂರಚನೆಯನ್ನು ಹೊಕ್ಕಿರುವ ಪರಿವರ್ತನೆ: ಕ್ರೌರ್ಯವನ್ನು ಸರ್ವೇಸಾಧಾರಣ ಸಂಗತಿ ಮಾಡಲಾಗಿದೆ, ಭೇದಭಾವ- ತಾರತಮ್ಯವನ್ನು ಆಡಳಿತದ ಅನುದಿನದ ಪರಿಕ್ರಮವನ್ನಾಗಿ ಮಾಡಲಾಗಿದೆ.
ಈ ರೂಪಾಂತರ ರಾತ್ರೋರಾತ್ರಿ ಆದದ್ದಲ್ಲ. ಅದನ್ನು ಒಂದು ಇಟ್ಟಿಗೆಯಿಂದ ಮತ್ತೊಂದು ಇಟ್ಟಿಗೆಗೆ, ಒಂದು ತಲೆಬರಹದಿಂದ ಇನ್ನೊಂದು ತಲೆಬರಹಕ್ಕೆ, ಒಂದು ಭಾಷಣದಿಂದ ಮತ್ತೊಂದಕ್ಕೆ ಭಾಷಣಕ್ಕೆ ಎಚ್ಚರಿಕೆಯಿಂದ ಕಟ್ಟಲಾಗಿದೆ.
ನಿರಂತರ ಸಂಶಯಗ್ರಸ್ತ ರಾಜಕೀಯ
ದೇಶದಾದ್ಯಂತ ಇಂದು ಸಮುದಾಯ-ಸಮುದಾಯಗಳೇ ನಿತ್ಯನಿರಂತರ ಅನುಮಾನದ ಆಡಳಿತದಡಿ ಬದುಕುತ್ತಿವೆ. ಲಖನೌನಲ್ಲಿನ ಮುಸ್ಲಿಂ ಸ್ವಚ್ಛತಾ ಕಾರ್ಮಿಕರಿಗೆ—ನುಸುಳಕೋರರು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ದಶಕಗಳ ಕಾಲ ವಾಸವಿದ್ದು ಆಧಾರ್ ಕಾರ್ಡ್, ಎನ್‌ಆರ್‌ಸಿ ದಾಖಲೆಗಳಿದ್ದರೂ ಈ ದುಸ್ಥಿತಿ ತಪ್ಪಿಲ್ಲ. ಕ್ರಿಸ್ಮಸ್ ಆಚರಿಸುವ ಕ್ರೈಸ್ತರನ್ನು ಸಂಚು ಮತ್ತು ಮತಾಂತರದ ಆರೋಪಕ್ಕೆ ಗುರಿ ಮಾಡಲಾಗುತ್ತಿದೆ. ತಾವು ಭಾರತೀಯ ಪೌರರೆಂದು ಮತ್ತೆ ಮತ್ತೆ ಒತ್ತಿಹೇಳಿದರೂ ಈಶಾನ್ಯ ಭಾರತದ ವಿದ್ಯಾರ್ಥಿಗಳನ್ನು ಅನ್ಯ ಜನಾಂಗೀಯರೆಂದು ಹಂಗಿಸಲಾಗುತ್ತಿದೆ. ನೂರಕ್ಕೆ ನೂರು ಸಂದರ್ಭಗಳಲ್ಲಿಯೂ ಆರೋಪವೇ ಮೊದಲು, ಸಾಕ್ಷ್ಯದ ಸರದಿ ಆನಂತರದ್ದು. ಅಪರಾಧವನ್ನು ಮೊದಲೇ ತೀರ್ಮಾನಿಸಲಾಗಿರುತ್ತದೆ. ದೋಷಿಯಲ್ಲವೆಂದು ಲೆಕ್ಕವಿಲ್ಲದಷ್ಟು ಸಲ ಅನಂತ ಕಾಲ ರುಜುವಾತು ಮಾಡುತ್ತಲೇ ಇರಬೇಕಾಗುತ್ತದೆ.
ಇದು ಕಾನೂನು ಜಾರಿಯ ಅಥವಾ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಲ್ಲ. ಬದಲಿಗೆ ಪೌರತ್ವದ ಅರ್ಥವನ್ನೇ ಮರುವ್ಯಾಖ್ಯಾನಿಸುವ ದುರುಳ ಪ್ರಯತ್ನ. ಈ ದೇಶಕ್ಕೆ ಸೇರಿದವರು ಎಂಬುದು ಇನ್ನು ಸಂವಿಧಾನಾತ್ಮಕ ಹಕ್ಕು ಅಲ್ಲ. ಬದಲಾಗಿ ಅದು ಬಹುಸಂಖ್ಯಾತರಿಂದ ನೀಡಲ್ಪಡುವ ದಾನ. ದಾಖಲೆ ದಸ್ತಾವೇಜುಗಳು ಸುರಕ್ಷತೆಯನ್ನು ಖಾತ್ರಿಪಡಿಸುವುದಿಲ್ಲ; ನಿರಂತರ ನಿಷ್ಠಾವಂತಿಕೆಯ ಪ್ರದರ್ಶನಗಳು ಮಾತ್ರ ಸುರಕ್ಷೆಯನ್ನು ಒದಗಿಸಬಲ್ಲವು. ರಾಜ್ಯ ವ್ಯವಸ್ಥೆಯ ನೋಟ ಎಲ್ಲರ ಮೇಲೂ ಸಮವಾಗಿ ಬೀಳುವುದಿಲ್ಲ; ಅದು ಕೆಲವು ನಿರ್ದಿಷ್ಟ ದೇಹಗಳು, ಭಾಷೆಗಳು, ಹೆಸರುಗಳು ಹಾಗೂ ಅವರ ಪ್ರಾರ್ಥನೆಗಳ ಮೇಲೆ ಹರಿದಾಡುತ್ತದೆ.
ಹದಿನೇಳು ವರ್ಷಗಳಿಂದ ಲಖನೌನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಸ್ವಚ್ಛಗೊಳಿಸುತ್ತಿರುವ ಸಲ್ಮಾ ಅವರಂತಹವರು ಈ ದೇಶಕ್ಕೆ ಸೇರಿದವರು ಎಂಬುದನ್ನು ಅವರ ದಿನನಿತ್ಯದ ದುಡಿಮೆ ನಿರ್ಧರಿಸುವುದಿಲ್ಲ. ಮಾನವೀಯತೆ ಎಂಬುದು ಷರತ್ತುಬದ್ಧ ಮೌಲ್ಯವಾಗಿದೆಯೇ ವಿನಾ ಬೇಷರತ್ತಾಗಿ ಉಳಿದಿಲ್ಲ. ಅನುಮಾನವೇ ಬದುಕಾಗಿದೆ. ಸಲ್ಮಾಳಂತಹವರ ಕಥೆ ಅಪವಾದವಲ್ಲ; ಅದು ಸಿದ್ಧಮಾದರಿಯಾಗಿ ಸ್ಥಾಪಿತವಾಗಿದೆ. ಅತ್ಯಂತ ಬಡ ಶ್ರಮಿಕರನ್ನು ಅಪಾಯಕಾರಿಗಳಂತೆ ಚಿತ್ರಿಸಿದಾಗ, ಮಾನವೀಯತೆಯನ್ನು ಷರತ್ತುಬದ್ಧವಾಗಿ ನೋಡಲು ಸಮಾಜವನ್ನು ತರಬೇತುಗೊಳಿಸಲಾಗುತ್ತಿದೆ.
ಅನಾವರಣ ಆಗುತ್ತಿರುವುದು ಅಂಕೆತಪ್ಪಿದ ದ್ವೇಷವಲ್ಲ. ಇದು ಉದ್ದೇಶಪೂರ್ವಕ ನೀತಿನಿರ್ಧಾರಗಳು ನಿರ್ಮಿಸುವ ವಾತಾವರಣ. ರಾಜಕೀಯ ಭಾಷಣಗಳಲ್ಲಿ ಮುಸ್ಲಿಮರನ್ನು ನುಸುಳುಕೋರರು, ಜನಸಾಂಖ್ಯಿಕ ಅಪಾಯಗಳು, ಅಥವಾ ಆಂತರಿಕ ಶತ್ರುಗಳೆಂದು ನಿರಂತರವಾಗಿ ಬಣ್ಣಿಸಲಾಗುತ್ತದೆ. ಈ ಪದಗಳು ಸಾಂಕೇತಿಕ ಅಲ್ಲ, ಬದಲಾಗಿ ಅವು ನೆಲೆಗಟ್ಟನ್ನು ಸಿದ್ಧಪಡಿಸುತ್ತವೆ. ಶುದ್ಧೀಕರಣದ ಮತ್ತು ಸ್ವಚ್ಛಗೊಳಿಸುವ ಭಾಷೆಯನ್ನು ನಾಯಕರು ಬಳಸಿದಾಗ, ಅದರ ಅಂತರಾರ್ಥ ಏನೆಂದು ಕೇಳುಗರಿಗೆ ತಿಳಿದು ಹೋಗುತ್ತದೆ. ಹಿಂಸಾಚಾರವನ್ನು ಸ್ಪಷ್ಟವಾಗಿ ಆದೇಶಿಸುವ ಅಗತ್ಯವಿಲ್ಲ; ಅದಕ್ಕೆ ವೀಳ್ಯವಿಟ್ಟು ಕರೆಯಲಾಗುತ್ತದೆ.
ಹಿಂದೂ ರಾಷ್ಟ್ರದ ಕಲ್ಪನೆಯು ಇದೇ ವಾತಾವರಣದಲ್ಲೇ ಬೆಳೆಯುತ್ತದೆ. ಸಂಪೂರ್ಣ ಹೊರಗಿಡುವಿಕೆಯ ಅಗತ್ಯ ಅದಕ್ಕಿಲ್ಲ. ನಿರಂತರ ಅಭದ್ರತೆ ಅಸುರಕ್ಷತೆ ಸಾಕು. ಆತಂಕದಲ್ಲಿಟ್ಟ ಅಲ್ಪಸಂಖ್ಯಾತರನ್ನು ನಿಯಂತ್ರಿಸುವುದು ಸಲೀಸು. ಹೀಗಾಗಿ ದ್ವೇಷವೆಂಬುದು ಆಡಳಿತದ ಕೈಯಲ್ಲಿನ ಸಲಕರಣೆಯಾಗುತ್ತದೆ—ಜನರನ್ನು ಹುರಿದುಂಬಿಸುವ, ಸಮರ್ಥ ಸಲಕರಣೆ. ಚುನಾವಣಾ ಲಾಭ ತರುವ ಸಾಧನ.
ಆರ್ಥಿಕ ವೈಫಲ್ಯ, ನಿರುದ್ಯೋಗ, ಕೃಷಿ ಕಾರ್ಪಣ್ಯ, ಮತ್ತು ಕಲ್ಯಾಣ ಯೋಜನೆಗಳ ಅವನತಿಯನ್ನು ಪ್ರಾಮಾಣಿಕವಾಗಿ ಎದುರಿಸುವುದಿಲ್ಲ. ಬದಲಿಗೆ ಕಲ್ಪಿತ ಶತ್ರುಗಳನ್ನು ಸೃಷ್ಟಿಸಿ ಅವರ ಮೇಲೆ ಈ ಹೊರೆಯನ್ನು ವರ್ಗಾಯಿಸಲಾಗುತ್ತದೆ. ಹೊಣೆಗಾರಿಕೆಯನ್ನು ಬಲಿಪಶುಗಳ ಹೆಗಲುಗಳ ಮೇಲೆ ಮತ್ತು ನೀತಿ ನಿರ್ಧಾರಗಳನ್ನು ಭಯ-ಶಂಕೆಗಳ ಹೆಗಲ ಮೇಲೆ ಹೊರಿಸಲಾಗುತ್ತದೆ
ಮೀಡಿಯಾ ಕಾವಲು ನಾಯಿಯಾಗಿ ಉಳಿದಿಲ್ಲ
ಟೆಲಿವಿಷನ್ ಸ್ಟುಡಿಯೋಗಳು ಪತ್ರಿಕೋದ್ಯಮವನ್ನು ತ್ಯಜಿಸಿ ನಾಟಕೀಯತೆಗೆ ಶರಣಾಗಿವೆ. ಪ್ರೈಮ್-ಟೈಮ್ ಚರ್ಚೆಗಳು ಸ್ವಘೋಷಿತ ನ್ಯಾಯಾಲಯಗಳ ಪಾತ್ರ ಧರಿಸಿವೆ—ಮುಸ್ಲಿಮರು ತಮ್ಮ ಧರ್ಮ, ಆಹಾರ, ಜನನ ದರ, ಪ್ರೀತಿ, ಭಾಷೆ ಮತ್ತು ನಿಷ್ಠೆಯ ಕಾರಣಗಳಿಗಾಗಿ ನಿರಂತರವಾಗಿ ಆರೋಪಿಗಳಾಗಿದ್ದಾರೆ. ಬಡತನ ಏಕೆ ಮುಂದುವರಿದಿದೆ ಅಥವಾ ಸಂಸ್ಥೆಗಳು ಏಕೆ ವಿಫಲವಾಗುತ್ತಿವೆ ಎಂಬುದು ನಿಜ ಪ್ರಶ್ನೆಯಾಗಬೇಕಿತ್ತು. ಆದರೆ ಯಾವಾಗಲೂ ಈ ದೇಶಕ್ಕೆ ಸೇರಿದವರು ಯಾರು, ಹೊರಗಿನವರು ಯಾರು ಎಂಬುದೇ ಮೀಡಿಯಾ ಕೇಳುತ್ತಿರುವ ಪ್ರಶ್ನೆಯಾಗಿ ಹೋಗಿದೆ.
ಮುಸ್ಲಿಮರನ್ನು ಗುಂಪುಗಳು ಜಜ್ಜಿ ಕೊಂದಾಗ ಹಾರಿಕೆಯ ವರದಿಯನ್ನು ಇಲ್ಲವೇ ಸೌಮ್ಯ ಪದಗಳಲ್ಲಿ ತೇಲಿಸುವ-ಮುಚ್ಚಿಹಾಕುವ ವರದಿಯನ್ನು ಬರೆಯಲಾಗುತ್ತದೆ. ಮುಸ್ಲಿಂ ಅಂಗಡಿಗಳನ್ನು ಬಹಿಷ್ಕರಿಸಿದಾಗ ಅದನ್ನು “ಸ್ಥಳೀಯ ಉದ್ವಿಗ್ನತೆ” ಎಂದು ಕರೆಯಲಾಗುತ್ತದೆ. ಮುಸ್ಲಿಂ ಮಗುವನ್ನು ಕೊಂದಾಗ, ಅದು ರಾಷ್ಟ್ರೀಯ ನೆನಪಿನ ಕೋಶದಿಂದ ಕೆಲವೇ ತಾಸುಗಳಲ್ಲಿ ಅಳಿಸಿಹೋಗುತ್ತದೆ. ಇದೇ ಸಮಯದಲ್ಲಿ, ಹಿಂಸಾಚಾರಕ್ಕೆ ನೀಡಲಾದ ಕರೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಚರ್ಚಿಸಲಾಗುತ್ತದೆ; ದ್ವೇಷ ಭಾಷಣವನ್ನು ದಿಟ್ಟ ಅಭಿಪ್ರಾಯವೆಂದು ರೂಪಿಸಲಾಗುತ್ತದೆ.
ಇದು ಕೇವಲ ನಿರ್ಲಕ್ಷ್ಯವಲ್ಲ; ಇದು ಉದ್ದೇಶಪೂರ್ವಕ ವಿನ್ಯಾಸ. ದ್ವೇಷವನ್ನು ಪ್ರತಿದಿನ ಪುನರಾವರ್ತಿಸಿದಾಗ, ಆಕ್ರೋಶ ತನ್ನ ಮೊನಚನ್ನು ಕಳೆದುಕೊಳ್ಳುತ್ತದೆ. ನಿರ್ದಿಷ್ಟ ದುಃಖವನ್ನಷ್ಟೇ ಎತ್ತಿ ತೋರಿಸಿದಾಗ, ನೋಡುಗರು ಕೂಡ ಯಾವುದಕ್ಕೆ ಕಾಳಜಿ ಮಾಡಬೇಕು, ಮಾಡುವ ಅಗತ್ಯವಿಲ್ಲ ಎಂದು ತರಬೇತುಗೊಳ್ಳುತ್ತಾರೆ. ಹಿಂಸಾಚಾರವು ನೈತಿಕ ಆಘಾತವಾಗುವುದಿಲ್ಲ; ಅದು ನಿತ್ಯರೂಢಿಯ ಕಾರ್ಯಕ್ರಮವಾಗುತ್ತದೆ. ದ್ವೇಷವು ಮನರಂಜನೆಯಾಗುತ್ತದೆ, ಕ್ರೌರ್ಯವು ಗ್ರಾಹಕ ಸರಕಾಗುತ್ತದೆ. ಅರ್ಥಮಾಡಿಕೊಳ್ಳಲು ಅಥವಾ ಸಹಾನುಭೂತಿ ತೋರುವ ಅವಕಾಶ ಕೊಡುವುದಿಲ್ಲ. ಬದಲಾಗಿ ತೀರ್ಪು ನೀಡಲು, ಅಣಕಿಸಿ ಅಪಹಾಸ್ಯಗೊಳಿಸಲು, ಚಪ್ಪಾಳೆ ತಟ್ಟಿ ಮೆಚ್ಚಲು ಮಾತ್ರವೇ ಆಹ್ವಾನ ನೀಡುತ್ತದೆ.
ಇಂತಹ ಮಾಧ್ಯಮ ಪರಿಸರದಲ್ಲಿ, ದುಃಖ ಯಾತನೆಗಳನ್ನು ಕುಗ್ಗಿಸಿ ಸಣ್ಣದಾಗಿಸಿ, ಸರ್ವೇಸಾಮಾನ್ಯ ಆಗಿಸುವುದಲ್ಲದೆ ಕ್ಷುಲ್ಲಕಗೊಳಿಸಲಾಗುತ್ತದೆ.
ಕಾನೂನೆಂಬುದು ಆಯ್ದ ಸಾಧನ-ಸಲಕರಣೆ
ಈ ಸಾಮಾನ್ಯೀಕರಣದ ಅತ್ಯಂತ ವಿನಾಶಕಾರಿ ಪರಿಣಾಮ ಹೊಂದಿದೆ. ಕಾನೂನಿನ ಆಡಳಿತಕ್ಕೆ ಕ್ರಮೇಣ ತುಕ್ಕು ಹಿಡಿಯುತ್ತದೆ. ಕಾನೂನಿನ ಮುಂದೆ ಸರ್ವರೂ ಸಮಾನರು, ಬದುಕಿನ ಘನತೆಯನ್ನು ಉಳ್ಳವರು, ಹಾಗೂ ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವವರು ಎಂಬ ಸಾಂವಿಧಾನಿಕ ಹಕ್ಕುಗಳು-ಮೌಲ್ಯಗಳು ಕಾಗದದ ಮೇಲೆಯಷ್ಟೇ ಉಳಿದು ಹೋಗುತ್ತವೆ. ವಾಸ್ತವದಲ್ಲಿ, ಕಾನೂನನ್ನು ಆಯ್ದ ಕೆಲವರಿಗೆ ಮಾತ್ರವೇ ಅನ್ವಯಿಸಲಾಗುತ್ತದೆ. ಕಾನೂನು ಕಾಯ್ದೆಗಳ ಜಾರಿ ತತ್ವದ ಆಧಾರದ ಮೇಲೆ ಅಲ್ಲ, ಗುರುತು- ಅಸ್ಮಿತೆಗಳ ಆಧಾರದ ಮೇಲೆ ನಡೆಯುತ್ತದೆ. ವಿಶೇಷವಾಗಿ ಸಮಾಜದ ಅಂಚಿಗೆ ನೂಕಲ್ಪಟ್ಟ ಸಮುದಾಯಗಳ ಪ್ರತಿಭಟನಾಕಾರರನ್ನು ತಡಮಾಡದೆ, ದೊಡ್ಡ ಸಂಖ್ಯೆಯಲ್ಲಿ ಕೈದು ಮಾಡಲಾಗುತ್ತದೆ; ಆದರೆ ಪ್ರಭುತ್ವದ ಪರ ಪ್ರಬಲ ರಾಜಕೀಯ ಹಿತಾಸಕ್ತಿಗಳಿಗೆ ಹೊಂದಿಕೊಂಡ ಗುಂಪುಗಳು ಪೊಲೀಸ್ ಕಣ್ಗಾವಲಿನಲ್ಲೇ ಲಂಗುಲಗಾಮಿಲ್ಲದೆ ಸಂಚರಿಸುತ್ತವೆ.
ಎಫ್‌ಐಆರ್‌ಗಳು ಅಪರಾಧಿಗಳ ವಿರುದ್ಧವಲ್ಲ, ಬಲಿಯಾದವರ ವಿರುದ್ಧವೇ ವೇಗವಾಗಿ ದಾಖಲಾಗುತ್ತವೆ. ಹಿಂಸೆಗೆ ತುತ್ತಾದವರೇ ತಮ್ಮ ನಿರ್ದೋಷ, ಉದ್ದೇಶ ಮತ್ತು ಪೌರತ್ವವನ್ನೂ ಸಾಬೀತುಪಡಿಸಬೇಕಾಗುತ್ತದೆ; ಹಿಂಸೆಯನ್ನು ಪ್ರಚೋದಿಸುವವರು ರಾಜಕೀಯ ರಕ್ಷಣೆ, ಸಾರ್ವಜನಿಕ ಸಮರ್ಥನೆ ಅಥವಾ ಆಡಳಿತಾತ್ಮಕ ನಿರ್ಲಕ್ಷ್ಯದ ಉಡುಗೊರೆ ಪಡೆಯುತ್ತಾರೆ. ಕೈದು ಕೇಂದ್ರಗಳ (Detention Centers) ಬಗ್ಗೆ ಅವುಗಳು ಸರ್ವೇ ಸಾಮಾನ್ಯವೇನೋ ಎಂಬಂತೆ ಸಾರ್ವಜನಿಕ ಚರ್ಚೆಗಳಲ್ಲಿ ಸಹಜವಾಗಿ ಪ್ರಸ್ತಾಪಿಸಿಲಾಗುತ್ತಿದೆ. ಅಪರಾಧ ಸಾಬೀತಾಗದೇ ಜನರನ್ನು ಸ್ವಾತಂತ್ರ್ಯದಿಂದ ವಂಚಿಸುವುದು ಗಂಭೀರ ಸಂವಿಧಾನಾತ್ಮಕ ಉಲ್ಲಂಘನೆ. ಈ ಮಾತನ್ನು ಮೂಲೆಪಾಲು ಮಾಡಲಾಗಿದೆ.
ಈ ವಾತಾವರಣದಲ್ಲಿ ನ್ಯಾಯವು ಷರತ್ತುಬದ್ಧ ಹಕ್ಕಾಗಿ ಉಳಿಯುವುದೇ ವಿನಾ ಬೇಷರತ್ ಹಕ್ಕಾಗಿ ಉಳಿಯುವುದಿಲ್ಲ. ಹಕ್ಕುಗಳನ್ನು ಧರ್ಮ, ಪ್ರದೇಶ, ಜಾತಿ ಮತ್ತು ರಾಜಕೀಯ ಅನುಕೂಲತೆಯ ಆಧಾರದ ಮೇಲೆ ಹಂಚಲಾಗುತ್ತದೆಯೇ ವಿನಾ ಎಲ್ಲ ನಾಗರಿಕರಿಗೆ ಸಮಾನ ಖಾತರಿಯ ಭರವಸೆಯಾಗಿ ಅಲ್ಲ.
ಗುಂಪುಗಳು ಹಾದಿಬೀದಿಗಳಲ್ಲಿ ಜಜ್ಜಿ ಎಸಗುವ ಹತ್ಯೆಗಳು, ಪೊಲೀಸ್ ಕಸ್ಟಡಿಯಲ್ಲಿನ ಚಿತ್ರಹಿಂಸೆ, ಅಥವಾ ಜಾತೀಯ ಪ್ರೇರಿತ ದಾಳಿಗಳಲ್ಲಿ ಕುಟುಂಬಗಳು ಮಕ್ಕಳುಮರಿಗಳನ್ನು ಕಳೆದುಕೊಳ್ಳುತ್ತಿವೆ. ಅವುಗಳಿಗೆ ಕಾನೂನು ವ್ಯವಸ್ಥೆಯೇ ಮತ್ತೊಂದು ಆಘಾತದ ಸ್ಥಳವಾಗಿ ಹೊಮ್ಮತೊಡಗಿದೆ. ವಿಚಾರಣೆಗಳು ಅಂತ್ಯವೇ ಇಲ್ಲದಷ್ಟು ವಿಳಂಬಗೊಳ್ಳುತ್ತಿವೆ. ತನಿಖೆಗಳು ಸ್ಥಗಿತಗೊಳ್ಳುತ್ತವೆ. ಸಾಕ್ಷಿಗಳಿಗೆ ಬೆದರಿಕೆ ಒಡ್ಡಲಾಗುತ್ತದೆ. ಪೊಲೀಸ್ ಠಾಣೆಗಳು ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತುವುದೆಂದರೆ ಗಾಯಗಳನ್ನು ಮತ್ತೆ ಮತ್ತೆ ಕೆದಕಿದಂತೆ ಆಗಿಹೋಗಿದೆ. ಅಪರಾಧಿಗಳಿಗಿಂತ ಹೆಚ್ಚಾಗಿ ಅಪರಾಧಕ್ಕೆ ಬಲಿಯಾದವರನ್ನೇ ದಂಡಿಸುವ ಪ್ರಕ್ರಿಯೆ ರೂಪು ತಳೆಯುತ್ತದೆ. ಇಂತಹ ಬಲಿಪಶುಗಳನ್ನು ರಕ್ಷಿಸಲು ರಾಜ್ಯವ್ಯವಸ್ಥೆ ವಿಫಲವಾಗುವುದು ಮಾತ್ರವಲ್ಲ, ಆಶಾವಾದವನ್ನೇ ಚಿವುಟಿ ಹಾಕುತ್ತದೆ.
ಆಯ್ದ ನ್ಯಾಯದ ಈ ಮಾದರಿ ಸಮಾಜಕ್ಕೆ ಭೀತಿಭರಿತ ಸಂದೇಶ ರವಾನಿಸುತ್ತದೆ. ಇಂತಿಂತಹ ಜೀವಗಳನ್ನು ಉಳಿಸಬೇಕು, ಇತರೆ ಜೀವಗಳನ್ನು ಅಳಿಸಬಹುದೆಂದು ಹೇಳಿಕೊಡುತ್ತದೆ. ಕೆಲವು ಜೀವಗಳ ಕುರಿತು ಸಾರ್ವಜನಿಕ ಶೋಕ ವ್ಯಕ್ತವಾಗುತ್ತದೆ. ಇತರೆ ಕೆಲವು ಜೀವಗಳನ್ನು ಲೆಕ್ಕಿಸದೆ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯೀಕರಣದ ಮನೋವಿಜ್ಞಾನ
ಈ ಕ್ಷಣದ ಅತ್ಯಂತ ಅಪಾಯಕಾರಿ ಗುರುತೆಂದರೆ ಕ್ರೌರ್ಯವನ್ನು ಅದೃಶ್ಯಗೊಳಿಸುವುದು, ಗಮನಕ್ಕೆ ಬರದಂತೆ ಮಾಡುವುದು,
ಹಿಂಸಯನ್ನು ಗುರುತಿಸುವ ಸಾಮರ್ಥ್ಯವನ್ನೇ ಕುಗ್ಗಿಸಿಬಿಡುವುದು. ಅನ್ಯಾಯವೇ ದಿನನಿತ್ಯದ ರೂಢಿಯಾಗಿ ಹೋದಾಗ, ಅದು ದಿನನಿತ್ಯದ ಬದುಕನ್ನು ಅಸ್ತವ್ಯಸ್ತಗೊಳಿಸುವುದಿಲ್ಲ, ಬದಲಾಗಿ ದಿನನಿತ್ಯದ ಬದುಕಿನಲ್ಲಿ ಸಹಜಸ್ವಾಭಾವಿಕ ಎಂಬಂತೆ ಬೆರೆತುಹೋಗುತ್ತದೆ.
ಸಂಶಯ ಅಥವಾ ಕಣ್ಗಾವಲಿಗೆ ಗುರಿಯಾಗದವರಿಗೆ ಬದುಕು ಎಂದಿನಂತೆ ಸಹಜ ಸಾಮಾನ್ಯವಾಗಿ ಕಾಣುತ್ತದೆ. ದುಡಿಮೆ, ನಿತ್ಯ ನೇಮಗಳು, ಹಬ್ಬಆಚರಣೆಗಳು ಎಂದಿನಂತೆ ಯಾವ ವ್ಯತ್ಯಯವೂ ಇಲ್ಲದೆ ಜರುಗುತ್ತವೆ. ಟೀವಿಯನ್ನು ನೋಡಲೇಬೇಕೆಂದಿಲ್ಲ, ಸ್ವಿಚ್ ಆಫ್ ಕೂಡ ಮಾಡಬಹುದು. ಬಲಿಪಶು ಆಗುವವರಿಗೆ ಮತ್ತು ಆಗದವರ ನಡುವೆ ಅಪನಂಬಿಕೆಯ ಅಂತರವನ್ನು ಬೆಳೆಸುತ್ತದೆ. ಅನ್ಯಾಯ ಎಂಬುದು ನಿಮ್ಮ ಮನೆಬಾಗಿಲಿಗೇ ಬರದೆ ಹೋದರೆ, ಅದನ್ನು ಅತಿಶಯ, ಮೀಡಿಯಾ ನಿರ್ಮಿತ ರೋಚಕತೆ ಅಥವಾ ರಾಜಕೀಯ ಪ್ರಾಪಗ್ಯಾಂಡ ಎಂದು ತಳ್ಳಿ ಹಾಕುವುದು ಸುಲಭವಾಗುತ್ತದೆ.
ಆದರೆ ಸಂಶಯ- ಕಣ್ಗಾವಲಿಗೆ ಗುರಿಯಾದವರಿಗೆ ಬದುಕು ನಿರಂತರ ಅಸಹನೀಯ ಒತ್ತಡ ಆಗುತ್ತದೆ. ನಿತ್ಯ ಮುಂಜಾನೆಗಳು ಪೊಲೀಸರು ಕದ ಬಡಿಯುವ ಭಯ, ರಾತ್ರಿ ಗುಂಪು ಸೇರಲು ಭಯ, ತಪ್ಪಾಗಿ ಅರ್ಥೈಸಿಕೊಳ್ಳುವ ಭಯ, ಮೀಡಿಯಾದ ಸುದ್ದಿಯಾಗುವ ಭಯಗಳು ಕಾಡುತ್ತವೆ. ಮುಕ್ತವಾಗಿ ಮಾತಾಡುವುದು, ಸಾರ್ವಜನಿಕವಾಗಿ ಪ್ರಾರ್ಥಿಸುವುದು, ಘನತೆಯನ್ನು ಸಮರ್ಥಿಸಿಕೊಳ್ಳುವಂತಹ ಸಾಮಾನ್ಯ ಕ್ರಿಯೆಗಳು ಅಪಾಯಕಾರಿ ಆಗಿ ಹೋಗುತ್ತವೆ. ಕೇವಲ ದೈಹಿಕ ನಿಯಂತ್ರಣ ಮಾತ್ರವಲ್ಲ, ಮನೋವೈಜ್ಞಾನಿಕ ಅಧೀನತೆಯನ್ನು ಹೇರಲಾಗುತ್ತಿದೆ. ಇದು ನಿರಂತರ ಮನೋಯುದ್ಧವೇ ವಿನಾ ಕೇವಲ ರಾಜಕೀಯ ದಮನ ಅಲ್ಲ.
ಇಂತಹ ಸಮಾಜ ಸುಸ್ಥಿರವಾಗಿರಲು ಸಾಧ್ಯವಿಲ್ಲ. ಒಂದು ಗುಂಪನ್ನು ಮಾನವೀಯತೆಯಿಂದ ವಂಚಿಸಲು ತನಗೆ ತಾನೇ ತರಬೇತಿ ಪಡೆಯುವ ದೇಶವು, ಕಾಲಕ್ರಮೇಣ ಯಾರನ್ನಾದರೂ ರಕ್ಷಿಸಲು ಬೇಕಾಗಿರುವ ನೈತಿಕ ಭಾಷೆಯನ್ನು ಕಳೆದುಕೊಳ್ಳುತ್ತದೆ. ಅಲ್ಪಸಂಖ್ಯಾತರನ್ನು ಗುರಿ ಆಗಿಸಲು ನಿರ್ಮಿಸಿದ ವಿಧಿವಿಧಾನಗಳು ಅಲ್ಲಿಗೇ ನಿಲ್ಲುವುದಿಲ್ಲ. ಇಂದು ಮುಸ್ಲಿಮರು ಮತ್ತು ಕ್ರೈಸ್ತರು. ನಾಳೆ ಭಿನ್ನಮತೀಯರು, ಕಾರ್ಮಿಕರು ಹೊಸ ಗುರಿ ಆಗಬಲ್ಲರು. ಸರ್ವಾಧಿಕಾರ ಎಂಬುದು ಆರಂಭದ ಬಿಂದುವಿನಲ್ಲೇ ನಿಂತು ಬಿಡುವುದಿಲ್ಲ ಎಂಬುದನ್ನು ಅರಿಯಬೇಕಾಗಿದೆ.
ಸರ್ವಾಧಿಕಾರವು ತನ್ನ ಮೊದಲ ಬಲಿಪಶುಗಳಿಗಷ್ಟೇ ತೃಪ್ತಗೊಳ್ಳುವುದಿಲ್ಲ. ಅದು ವಿಸ್ತರಿಸುತ್ತದೆ, ರೂಪಾಂತರಗೊಳ್ಳುತ್ತದೆ, ಮುಂದಕ್ಕೆ ಚಲಿಸುತ್ತದೆ. ಆರಂಭದ ಬಿಂದುವಿನಲ್ಲೇ ನಿಂತು ಬಿಡುವುದಿಲ್ಲ. ಎದೆಗೊಟ್ಟು ಎದುರಿಸಿದಾಗ ಮಾತ್ರ ಅದು ನಿಲ್ಲುತ್ತದೆ.
ದ್ವೇಷವೆಂಬುದು ಚುನಾವಣಾ ತಂತ್ರವಾಗಿ…
ದ್ವೇಷ ಏಕೆ ಮುಂದುವರಿಯುತ್ತದೆ? ಏಕೆಂದರೆ ಇದು ಆಳುವವರು ಬಯಸಿದ್ದನ್ನು ಈಡೇರಿಸುತ್ತದೆ.
ದ್ವೇಷ ಎಂಬುದು ರಾಜಕೀಯವಾಗಿ ಪರಿಣಾಮಕಾರಿ ಅಸ್ತ್ರ. ಭಯವನ್ನು ನಿಷ್ಠೆಯಾಗಿ ಪರಿವರ್ತಿಸಿ ಮತಗಳನ್ನು ಧೃವೀಕರಿಸುತ್ತದೆ. ಭೌತಿಕ ಬದುಕುಗಳನ್ನು ಸುಧಾರಿಸದೆ ಭಾವತೀವ್ರ ಏಕತೆಯನ್ನು ಸೃಷ್ಟಿಸುತ್ತದೆ. ಹೀಗಾಗಿ ಆಳುವವರು ಹೊಣೆಯನ್ನೇ ಹೊರದೆ, ಸಾಧನೆಯನ್ನೇ ಮಾಡದೆ ಅಧಿಕಾರದಲ್ಲಿರಲು ಅವಕಾಶ ನೀಡುತ್ತದೆ. ಸಾರ್ವಜನಿಕ ಬದುಕನ್ನು ಸುಧಾರಿಸುವ ಆಡಳಿತಕ್ಕಿಂತ, ಕೋಮುವಾದಿ ಧ್ರುವೀಕರಣ ಅಗ್ಗವಾಗುತ್ತದೆ. ಆಳುವವರ ಪಾಲಿಗೆ ಭಯ ಎಂಬುದು ಅಭಿವೃದ್ಧಿಗಿಂತ ಹೆಚ್ಚು ನಂಬಿಕೆಗೆ ಅರ್ಹವಾಗಿ ಪರಿಣಮಿಸುತ್ತದೆ.
ಆಡಳಿತಸೂತ್ರ ಹಿಡಿದವರ ಸಿದ್ಧಾಂತ ಮಾತ್ರವಲ್ಲ, ವಿರೋಧಪಕ್ಷಗಳ ವೈಫಲ್ಯವು ಈ ದಿನಮಾನಗಳನ್ನು ನಿರ್ದಿಷ್ಟವಾಗಿ ಮಬ್ಬುಗೊಳಿಸಿ ದುರ್ಬಲ ಆಗಿಸಿದೆ. ವಿರೋಧಪಕ್ಷಗಳ ದೊಡ್ಡ ಗುಂಪುಗಳು ಬಹುಸಂಖ್ಯಾತವಾದವನ್ನು ಮುಖಾಮುಖಿಯಾಗಿ ಎದುರುಗೊಳ್ಳುವುದನ್ನು ಬಿಟ್ಟು, ಆ ಆವರಣದೊಳಗೇ ಪೈಪೋಟಿಗೆ ಇಳಿದಿವೆ. ಬಹುಸಂಖ್ಯಾತವಾದದ ತೆಳುಗೊಳಿಸಿದ ಸೌಮ್ಯ ಕಥಾನಕಗಳನ್ನು ನೀಡುತ್ತಿವೆ. ಹೀಗೆ ಮಾಡುವ ಮೂಲಕ ಸಮಾನತೆಯೆಂಬುದು ರಾಜೀ ಮಾಡಿಕೊಳ್ಳಬಹುದಾದ ಚೌಕಾಶಿಯ ವಿಷಯ ಎಂಬ ಅಪಾಯಕಾರಿ ಸುಳ್ಳಿಗೆ ಬಲ ತುಂಬುತ್ತಿವೆ. ಸಾಂವಿಧಾನಿಕ ಹಕ್ಕುಗಳನ್ನು ರಾಜಕೀಯ ಅನುಕೂಲ-ಅನಾನುಕೂಲಕ್ಕೆ ತಕ್ಕಂತೆ ಅಮಾನತುಗೊಳಿಸಬಹುದು, ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರವರ ಆಯ್ಕೆಗೆ ಬಿಟ್ಟದ್ದು ಎಂಬ ಅಸತ್ಯಗಳನ್ನು ದಟ್ಟಗೊಳಿಸುತ್ತಿವೆ.
ಫಲವಾಗಿ, ಮುಸ್ಲಿಮರನ್ನು ರಾಜ್ಯದ ಮೇಲೆ ನ್ಯಾಯಸಮ್ಮತ ಹಕ್ಕುಗಳಿರುವ ನಾಗರಿಕರಂತೆ ಅಲ್ಲ, ನಿರ್ವಹಿಸಬೇಕಾದ, ನಿಯಂತ್ರಿಸಬೇಕಾದ, ಅಥವಾ ಮೌನಗೊಳಿಸಬೇಕಾದ ಹೊಣೆಗಾರಿಕೆಗಳಂತೆ ಕಾಣಲಾಗುತ್ತದೆ. ನ್ಯಾಯವನ್ನು ತೆರೆದಾಗಿ ನಿರಾಕರಿಸಲಾಗುವುದಿಲ್ಲ; ಅದನ್ನು ಮುಂದೂಡಲಾಗುತ್ತದೆ, ಕುಗ್ಗಿಸಲಾಗುತ್ತದೆ, ಮರುವ್ಯಾಖ್ಯಾನಿಸಲಾಗುತ್ತದೆ—ಅಂತಿಮವಾಗಿ ಅದು ಅಳಿದುಹೋಗುವವರೆಗೆ.
ಪರಿಣಾಮವಾಗಿ ಮುಸಲ್ಮಾನರನ್ನು ನಾಗರಿಕ ಹಕ್ಕುಗಳನ್ನು ಉಳ್ಳ ನಾಗರಿಕರಂತೆ ಅಲ್ಲದೆ ನಿಯಂತ್ರಿಸಿ, ಬಾಯಿ ಮುಚ್ಚಿಸಬೇಕಾದ ಜವಾಬ್ದಾರಿಗಳಂತೆ ಬಗೆಯಲಾಗುತ್ತಿದೆ. ನ್ಯಾಯನೀಡಿಕೆಯನ್ನು ಬಹಿರಂಗವಾಗಿ ನಿರಾಕರಿಸುತ್ತಿಲ್ಲ, ಬದಲಾಗಿ ಅದನ್ನು ತೆಳುವಾಗಿಸಲಾಗುತ್ತಿದೆ, ಮುಂದೂಡಲಾಗುತ್ತಿದೆ, ಹೊಸ ಚೌಕಟ್ಟುಗಳಲ್ಲಿ ಬಂಧಿಸಲಾಗುತ್ತಿದೆ, ನ್ಯಾಯನೀಡಿಕೆಯ ಪರಿಕಲ್ಪನೆಯೇ ಕಣ್ಮರೆ ಆಗುವ ತನಕವೂ ಈ ಪ್ರವೃತ್ತಿ ಮುಂದುವರೆಯುತ್ತದೆ.
ರಾಜಕೀಯ ಗಡಿರೇಖೆಗಳನ್ನೇ ದಾಟಿ ಹಂಚಿಕೊಂಡಿರುವ ಮೌನ ಒಪ್ಪಂದವಿದು. ಪ್ರಜಾಪ್ರಭುತ್ವವನ್ನು ಪೊಳ್ಳು ಮಾಡಿರುವ ಕೃತ್ಯ. ರಾಜಕೀಯವೆಂಬುದು ಪ್ರಹಸನ-ಪ್ರದರ್ಶನ ಆಗುತ್ತದೆ. ಆಕ್ರೋಶವು ನಾಟಕವಾಗುತ್ತದೆ ಹಾಗೂ ಪೌರತ್ವ ಎಂಬುದು ದೃಶ್ಯಾವಳಿಯಾಗಿಯಷ್ಟೇ ಉಳಿಯುತ್ತದೆ.
ಕ್ರೌರ್ಯವನ್ನು ಸಹಜಸ್ವಾಭಾವಿಕ ಎಂಬಂತೆ ಆಗಿಸುವ ಸಮಾಜಗಳು ಕೊಳೆಯುತ್ತವೆಯೇ ವಿನಾ ಸುಸ್ಥಿರಗೊಳ್ಳುವುದಿಲ್ಲ.
ನಾಜಿ ಜರ್ಮನಿ, ಜಿಮ್ ಕ್ರೋ ಅಮೆರಿಕ, ಜನಾಂಗೀಯಭೇದದ ದಕ್ಷಿಣ ಆಫ್ರಿಕಾದ ತನಕ ದ್ವೇಷದ ಮಾದರಿಗಳು ಒಂದೇ ತೆರನಾದವು. ಅಲ್ಪಸಂಖ್ಯಾತರ ದುಃಖ ಯಾತನೆಗಳು ನಿತ್ಯಬದುಕಿನ ರೂಢಿಯಾಗಿ ಹೋದಾಗ ಅಥವಾ ಮನರಂಜನೆಯಾಗಿ ಪರಿಣಮಿಸಿದಾಗ, ಜನತಾಂತ್ರಿಕ ಸಂಸ್ಥೆಗಳು ಒಳಗಿನಿಂದ ಕೊಳೆಯಲು ಆರಂಭಿಸುತ್ತವೆ. ಕಾಯ್ದೆ ಕಾನೂನುಗಳು ಅರ್ಥ ಕಳೆದುಕೊಳ್ಳುತ್ತವೆ. ಹಿಂಸಾಚಾರ ದಟ್ಟವಾಗುತ್ತಲೇ ಹೋಗುತ್ತದೆ. “ಅನ್ಯರನ್ನು” ಗುರಿಯಾಗಿಸಲು ಕಟ್ಟಿದ ವಿಧಿವಿಧಾನಗಳೇ ಎದುರುತಿರುಗಿ, ಕಟ್ಟಕಡೆಗೆ ಭಿನ್ನಮತೀಯರು, ವಿಮರ್ಶಕರು, ಹಾಗೂ ಅಂತಿಮವಾಗಿ ಚಪ್ಪಾಳೆ ತಟ್ಟಿ ಮೆಚ್ಚಿದ ಸಮಾಜವನ್ನೇ ನುಂಗಿಬಿಡುತ್ತದೆ.
ಭಾರತವೂ ಅಪವಾದವಲ್ಲ. ಯಾವುದೇ ನಾಗರಿಕತೆಯೂ ಈ ತರ್ಕದಿಂದ ಮುಕ್ತವಲ್ಲ.
ಕಟ್ಟಕಡೆಗೆ ಉಳಿಯುವ ಪ್ರಶ್ನೆಯಿದು
ಈ ದಿನಮಾನಗಳ ಕುರಿತು ಸಹಾನುಭೂತಿಯಷ್ಟೇ ಸಾಲದು. ಸ್ಥಿತಿಗತಿಯನ್ನು ಗುರುತಿಸಬೇಕಾಗುತ್ತದೆ.
ದ್ವೇಷವನ್ನು ಪ್ರತಿನಿತ್ಯ ಪುನರಾವರ್ತಿಸಿದಾಗಲೂ ಅದು ನಮ್ಮ ಕಣ್ಣುಗಳಿಗೆ ದ್ವೇಷವಾಗಿಯೇ ಕಾಣಬಹುದೇ? ಕ್ರೌರ್ಯಕ್ಕೆ ಕಾನೂನು ಹೊದಿಸಿ, ಚರ್ಚೆಯಾಗಿ ಪ್ರಸಾರ ಮಾಡಿದಾಗಲೂ ಅದು ಆಕ್ರೋಶವನ್ನು ಅನುಭವ ನೀಡುವುದೇ? ನಮ್ಮ ನೆರೆಹೊರೆಯವರನ್ನು ಅಪಾಯದಂತೆ ಕಾಣುವಂತೆ ಅಧಿಕಾರ ಸಾರಿ ಹೇಳುವಾಗಲೂ ನಾವು ಅವರನ್ನು ಮನುಷ್ಯರಂತೆ ಗುರುತಿಸಬಹುದೇ?
ಏಕೆಂದರೆ ದ್ವೇಷವೇ ಅಧಿಕಾರದ ವ್ಯಾಕರಣವಾದಾಗ, ಮೌನವಹಿಸುವುದು ದ್ವೇಷದಲ್ಲಿ ಪಾಲ್ಗೊಂಡಂತೆಯೇ ವಿನಾ ತಟಸ್ಥತೆಯಾಗಿ ಉಳಿಯುವುದಿಲ್ಲ.
ಗಣರಾಜ್ಯಗಳು ಯಾವುದೇ ಒಂದು ನಾಟಕೀಯ ಕ್ಷಣದಲ್ಲಿ ಕುಸಿಯುವುದಿಲ್ಲ. ಅವು ಮೌನವಾಗಿ ಕ್ಷೀಣಿಸುತ್ತವೆ. ಅವು ಸಾಮಾನ್ಯೀಕರಣದ ಮೂಲಕ, ಅವಹೇಳನವನ್ನು ನಕ್ಕು ಮೆಚ್ಚುವ ಮೂಲಕ ಕ್ಷೀಣಿಸುತ್ತವೆ. “ವಾಸ್ತವವಾದ” ಮತ್ತು “ಪ್ರಾಯೋಗಿಕ ರಾಜಕೀಯ” ಎಂಬ ಹೆಸರಿನಲ್ಲಿ ಬಗೆಯುವ ನಿರ್ಲಕ್ಷ್ಯದ ಮೂಲಕ ಕ್ಷೀಣಿಸುತ್ತವೆ. ಅನ್ಯಾಯ ಎಂಬುದು ವ್ಯಕ್ತಿಗತವಾಗಿ ನಮ್ಮದೇ ಬಾಗಿಲಿಗೆ ತಟ್ಟುವ ಹೊತ್ತಿಗೆ, ಅಡಿಪಾಯಗಳು ಅದಾಗಲೇ ದುರ್ಬಲಗೊಂಡಿರುತ್ತವೆ.
ವಿದ್ಯಾರ್ಥಿಗಳು, ಚಿಂತಕರು, ಮತ್ತು ಸಾಮಾನ್ಯ ನಾಗರಿಕರ ಮಹತ್ವ ಅಡಗಿರುವುದು ಇಲ್ಲಿಯೇ. ವಿಶ್ವವಿದ್ಯಾಲಯಗಳು, ಪ್ರಶ್ನಿಸುವಿಕೆಯ, ಸ್ಥಳಗಳಾಗಬೇಕಿತ್ತೇ ವಿನಾ ಉಸಿರೆತ್ತದೆ ಪಾಲಿಸುವ ಸ್ಥಳಗಳಲ್ಲ, ಭಿನ್ನಮತದ ಆವರಣಗಳಾಗಬೇಕೇ ವಿನಾ ಭಯದ ತಾಣಗಳಲ್ಲ. ಶಿಕ್ಷಕರು ಮೌನದ ಅನುಕೂಲವನ್ನು ತಳ್ಳಿ ಹಾಕಬೇಕು, ಪತ್ರಕರ್ತರು ಸತ್ಯವನ್ನು ಆಯ್ದುಕೊಳ್ಳಬೇಕು. ಸುಳ್ಳು ಸುರಕ್ಷತೆಗಾಗಿ ಮಾನವೀಯತೆಯನ್ನು ಬಲಿ ಕೊಡುವುದು ಸರಿಯೇ ತಪ್ಪೇ ಎಂದು ಸಮಾಜ ನಿರ್ಧರಿಸಬೇಕು.
ಭಾರತದ ಮುಂದಿರುವ ಆಯ್ಕೆ ನಿಚ್ಚಳ. ದ್ವೇಷದ ಈ ಯಂತ್ರಾಂಗವನ್ನು ಅಡ್ಡಗಟ್ಟಬೇಕು. ಇಲ್ಲವಾದರೆ ಭಯವೇ ಪೌರತ್ವವನ್ನು ವ್ಯಾಖ್ಯಾನಿಸುವ, ಸಾರ್ವಜನಿಕವಾಗಿ ಪ್ರದರ್ಶನವಾಗಿ ತೋರುವುದೇ ನಿಷ್ಠಾವಂತಿಕೆ ಎನಿಸಿಕೊಳ್ಳುವ ಹಾಗೂ ಮಾನವೀಯತೆ ಎಂಬುದು ಐಚ್ಛಿಕ ಎನಿಸುವ ಭವಿಷ್ಯತ್ತನ್ನು ಒಪ್ಪಿಕೊಳ್ಳಬೇಕು.
ಇತಿಹಾಸ ಮೌನವಾಗಿದ್ದವರನ್ನು ಯಾಕೆ ಎಂದು ಕೇಳುವುದಿಲ್ಲ. ಮೌನವೇ ಸುಲಭ ದಾರಿಯೆನಿಸಿದ್ದ ಸನ್ನಿವೇಶದಲ್ಲಿ ಯಾರು ಮಾತನಾಡಿದರು, ಕ್ರೌರ್ಯ ಸಹಜ ಸಾಮಾನ್ಯ ಎಂಬಂತೆ ಆಗಿಸಿದ ದಿನಮಾನಗಳಲ್ಲಿ ಯಾರು ಮನುಷ್ಯರಾಗಿ ಉಳಿದರು ಎಂಬುದನ್ನು ಕೇಳುತ್ತದೆ.
ಲೇಖನ : ರೋಷನ್ ಮೊಹಿದ್ದೀನ್; ಸೌಜನ್ಯ– ಮಖ್ತೂಬ್ ಮೀಡಿಯಾ
ಮೂಲ ಲೇಖನದ ಲಿಂಕ್ https://maktoobmedia.com/opinion/from-spectacle-to-structure-how-hate-became-grammar-of-power-in-india/
ಕನ್ನಡಾನುವಾದ – ಡಿ ಉಮಾಪತಿ