ಮೂರು ವರ್ಷದ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯನ್ನು ಆರೋಪಿಗಳ ಎದುರಿಗೇ ನಿಲ್ಲಿಸಿ, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡ ಗುರುಗ್ರಾಮ್ ಮ್ಯಾಜಿಸ್ಟ್ರೇಟ್ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ‘ಇದು ಅತ್ಯಂತ ಆತಂಕಕಾರಿ ವಿಷಯ. ಪೊಲೀಸ್ ವ್ಯವಸ್ಥೆ ಇಷ್ಟೊಂದು ಸಂವೇದನಾಶೂನ್ಯವಾಗಿದೆಯೇ’ ಎಂದು ಪ್ರಶ್ನಿಸಿದೆ.
ಮ್ಯಾಜಿಸ್ಟ್ರೇಟ್ ನಡವಳಿಕೆ ಕುರಿತು ಬಾಲಕಿಯ ತಂದೆ ಸಲ್ಲಿಸಿದ ಅಫಿಡವಿಟ್ಅನ್ನು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ. ಮ್ಯಾಜಿಸ್ಟ್ರೇಟ್ ಅವರಿಂದ ವಿವರಣೆ ಪಡೆದು ವರದಿ ಸಲ್ಲಿಸುವಂತೆ ಗುರುಗ್ರಾಮ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಸೂಚನೆ ನೀಡಿದೆ.
ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, “ಎಫ್‌ಐಆರ್ ದಾಖಲಾಗಿ ನಾಲ್ಕು ವಾರಗಳಾದರೂ ಯಾವುದೇ ಬಂಧನವಾಗಿಲ್ಲ, ಪೋಷಕರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ತನಿಖೆಯನ್ನು ಸಿಬಿಐ ಅಥವಾ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಎಸ್‌ಐಟಿಗೆ ವಹಿಸಬೇಕು” ಎಂದು ಮನವಿ ಮಾಡಿದರು.
“ಕಳೆದ ಒಂದೂವರೆ ತಿಂಗಳಿನಿಂದ ಈ ಮೂರು ವರ್ಷದ ಮಗುವನ್ನು ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆ ಮತ್ತು ಮಕ್ಕಳ ಕಲ್ಯಾಣ ಸಮಿತಿ (CWC) ಕಚೇರಿಗೆ ಅಲೆದಾಡಿಸಲಾಗುತ್ತಿದೆ. ನಿಯಮದ ಪ್ರಕಾರ ಸಿಡಬ್ಲ್ಯೂಸಿಯೇ ಬಾಲಕಿಯ ಮನೆಗೆ ಬರಬೇಕಿತ್ತು. ಇನ್ನು, ಮ್ಯಾಜಿಸ್ಟ್ರೇಟ್ ಅವರು ಮಗುವಿಗೆ ‘ನಿನಗೆ ಪ್ರಮಾಣ ವಚನ ಅರ್ಥವಾಗುವುದಿಲ್ಲ, ನಿಜ ಹೇಳು’ ಎಂದು ಕೇಳುತ್ತಿದ್ದಾರೆ. ಹೇಳಿಕೆ ದಾಖಲಿಸುವ ಅದೇ ಕೊಠಡಿಯಲ್ಲಿ ಮೂವರು ಆರೋಪಿಗಳೂ ಇದ್ದರು. ಮಗು ಈಗಾಗಲೇ ಆಘಾತದಲ್ಲಿದೆ. ಮಗುವಿನ ಪೋಷಕರಿಲ್ಲದೆ ಸಿಡಬ್ಲ್ಯೂಸಿ 30 ನಿಮಿಷಗಳ ಕಾಲ ಮಗುವನ್ನು ಮುಚ್ಚಿದ ಕೋಣೆಯಲ್ಲಿ ಅಪರಿಚಿತ ಮಹಿಳೆಯರೊಂದಿಗೆ ಇರಿಸಿತ್ತು. ಈ ಪ್ರಕರಣದ ಮೊದಲ ತನಿಖಾಧಿಕಾರಿ (IO) ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಲಂಚ ಪಡೆದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ” ಎಂದು ವಿವರಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್, “ನಿಮ್ಮ ಪೊಲೀಸರು ಎಷ್ಟೊಂದು ಸಂವೇದನಾಶೂನ್ಯರಾಗಿದ್ದಾರೆ? ಈ ಹಿಂದೆ ಕೂಡ ನೀವು ಅಂತಹ ದೊಡ್ಡ ಸಾಧನೆಯನ್ನೇನೂ ಮಾಡಿಲ್ಲ. ಇಂತಹ ಘಟನೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಅದು ಕೂಡ ಮೆಟ್ರೋಪಾಲಿಟನ್ ನಗರವೆಂದು ಕರೆಸಿಕೊಳ್ಳುವ ಕಡೆ ಈ ರೀತಿಯಲ್ಲಿ ನಡೆಯುತ್ತಿದೆ” ಎಂದು ಕಿಡಿಕಾರಿದರು.
ಅಫಿಡವಿಟ್‌ನಲ್ಲಿರುವ ಮಾಹಿತಿಯನ್ನು ಉಲ್ಲೇಖಿಸಿದ ಸಿಜೆಐ, “ಪೊಲೀಸ್ ಅಧಿಕಾರಿ ಮಗುವಿನ ಪೋಷಕರಿಗೆ ‘ನಿಮಗೇನು ಬೇಕು?’ ಎಂದು ಕೇಳುತ್ತಿದ್ದಾರೆ. ಇಂತಹ ಗಂಭೀರ ಪ್ರಕರಣಗಳಲ್ಲಿ ಪೋಷಕರು ದೂರು ನೀಡದಿದ್ದರೂ ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯವಲ್ಲವೇ? ಅವರಿಗೆ ಕನಿಷ್ಠ ಕಾನೂನಿನ ಅರಿವಿದೆಯೇ” ಎಂದು ಖಾರವಾಗಿ ಪ್ರಶ್ನಿಸಿದರು.
ನ್ಯಾಯಮೂರ್ತಿ ಬಾಗ್ಚಿ, “ಇಂತಹ ಸಂದರ್ಭಗಳಲ್ಲಿ ಛಾಯಾಚಿತ್ರಗಳ ಮೂಲಕ ಆರೋಪಿಗಳನ್ನು ಗುರುತಿಸಬೇಕೇ ಹೊರತು ಮಗುವನ್ನು ಆರೋಪಿಗಳ ಮುಂದೆ ತರಬಾರದು” ಎಂದರು.
ಪೀಠವು ಮಾರ್ಚ್ 25ರಂದು ಸಂಪೂರ್ಣ ತನಿಖಾ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವಂತೆ ಗುರುಗ್ರಾಮ್ ಪೊಲೀಸ್ ಕಮಿಷನರ್ ಮತ್ತು ತನಿಖಾಧಿಕಾರಿಗೆ (IO) ಆದೇಶಿಸಿದೆ.
ಈ ಲೇಖನ ಓದಿದ್ದೀರಾ?: ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!
ಪೊಲೀಸರ ಪರವಾಗಿ ವಾದ ಮಂಡಿಸಿದ ವಕೀಲರು, ”ಕಳೆದ ಶನಿವಾರವಷ್ಟೇ ಗುರುಗ್ರಾಮ್ ಪೊಲೀಸರು ಇಬ್ಬರು ಮಹಿಳಾ ಮನೆಗೆಲಸದವರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ” ಎಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ, “ಆರೋಪಿಗಳನ್ನು ನಿನ್ನೆಯಷ್ಟೇ ಬಂಧಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದೆವು. ಇಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಿದ್ದರು” ಎಂದು ಪ್ರಶ್ನಿಸಿದರು.
ಆರೋಪಿಗಳನ್ನು ಮತ್ತೆ ಗುರುತಿಸಲು ಮಗುವಿನೊಂದಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವಂತೆ ಸೋಮವಾರ ಬೆಳಿಗ್ಗೆ ಪೋಷಕರಿಗೆ ಕರೆ ಬಂದಿದೆ ಎಂದು ರೋಹಟಗಿ ತಿಳಿಸಿದಾಗ, “ಹಾಜರಾಗಬೇಡಿ. ತಂದೆಗೆ ಇಷ್ಟವಿಲ್ಲದಿದ್ದರೆ ಹೋಗುವ ಅಗತ್ಯವಿಲ್ಲ” ಎಂದು ಸಿಜೆಐ ಹೇಳಿದರು.




