ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ ‘ಕೆಂಪು ಬೀಕನ್’ ದೀಪವನ್ನು ಅಳವಡಿಸಿದ ಆರೋಪದ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಆಡಿ ಕಾರನ್ನು ಪುಣೆ ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖೇಡ್ಕರ್ ಅವರು ತರಬೇತಿಗಾಗಿ ಪುಣೆಗೆ ನಿಯೋಜನೆಯಾದ ಸಮಯದಲ್ಲಿ ತಮಗೆ ಪ್ರತ್ಯೇಕ ಕ್ಯಾಬಿನ್ ಮತ್ತು ಸಿಬ್ಬಂದಿಗಳು ಬೇಕೆಂದು ಬೇಡಿಕೆ ಇಟ್ಟಿದ್ದರು. ಆಮೂಲಕ ವಿವಾದ ಸೃಷ್ಟಿಸಿಕೊಂಡು ಸುದ್ದಿಯಾಗಿದ್ದರು. ಮಾತ್ರವಲ್ಲದೆ, ಐಎಎಸ್ ಪಡೆಯುವ ವೇಳೆ, ಅಂಗವೈಕಲ್ಯ ಮತ್ತು ಇತರ ಹಿಂದುಳಿದ ವರ್ಗ (OBC) ಕೋಟಾವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದೂ ಆರೋಪಿಸಲಾಗಿತ್ತು.
ಇದೀಗ, ಖೇಡ್ಕರ್ ಅವರು ತಮ್ಮ ಆಡಿ ಕಾರಿನ ಮೇಲೆ ಅಕ್ರಮವಾಗಿ ‘ಕೆಂಪು ಬೀಕನ್ ಲೈಟ್’ ಬಳಸಿದ್ದಾರೆ. ಮಾತ್ರವಲ್ಲದೆ, ಅನುಮತಿ ಪಡೆಯದೆ ‘ಮಹಾರಾಷ್ಟ್ರ ಸರ್ಕಾರ’ ಎಂದೂ ಕಾರಿನ ಮೇಲೆ ಬರೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೊಸ ವಿವಾದದ ಬಳಿಕ ಆಕೆಯ ತರಬೇತಿ ಪೂರ್ಣಗೊಳ್ಳುವ ಮೊದಲೇ ಆಕೆಯನ್ನು ಪುಣೆಯಿಂದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಗಿದೆ.
“ಖೇಡ್ಕರ್ ಬಳಸುತ್ತಿದ್ದ ಖಾಸಗಿ ಕಾರಿನ ಮೇಲೆ ‘ಬೀಕನ್’ ಮತ್ತು ಸರ್ಕಾರದ ಹೆಸರನ್ನು ಅನಧಿಕೃತವಾಗಿ ಅಳವಡಿಸಿರುವುದರ ವಿರುದ್ಧ ಗುರುವಾರ ನೋಟಿಸ್ ನೀಡಲಾಗಿದೆ. ಭಾನುವಾರ ಕಾರನ್ನು ಜಪ್ತಿ ಮಾಡಲಾಗಿದೆ. ಅದರ ದಾಖಲೆಗಳನ್ನು ಪರಿಶೀಲಿಸಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳು (CMVR)-1989ರ ಸೆಕ್ಷನ್ 108ರ ಪ್ರಕಾರ, ರಾಜ್ಯ ಸರ್ಕಾರವು ವಿಐಪಿಗಳು, ವಿವಿಐಪಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಅಧಿಕೃತ ವಾಹನಗಳಲ್ಲಿ ಕೆಂಪು ಅಥವಾ ಅಂಬರ್ (ಹಳದಿ) ಬೀಕನ್ ದೀಪಗಳನ್ನು ಬಳಸಲು ಅನುಮತಿ ನೀಡಬಹುದು.
ನಿಯಮದ ಪ್ರಕಾರ, ರಾಜ್ಯ ಸರ್ಕಾರದ ಕಾರ್ಯದರ್ಶಿ ಮಟ್ಟಕ್ಕಿಂತ ಮೇಲಿನ ಉನ್ನತ ಅಧಿಕಾರಿಗಳು, ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪ್ರಾದೇಶಿಕ ಆಯುಕ್ತರ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಮಾತ್ರ ಫ್ಲ್ಯಾಷರ್‌ಗಳಿಲ್ಲದೆ ಅಂಬರ್ ಬೀಕನ್‌ಗಳನ್ನು ಬಳಸಲು ಅನುಮತಿಸಲಾಗಿದೆ ಹಾಗೂ ಉನ್ನತ ಮಟ್ಟದ ಜಿಲ್ಲಾ ಅಧಿಕಾರಿಗಳು ನೀಲಿ ಬೀಕನ್‌ಗಳನ್ನು ಬಳಸಲು ಅರ್ಹರಾಗಿರುತ್ತಾರೆ.




