ತನ್ನ ತಂದೆಯ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ತಮಗೆ ನಿರಾಳತೆ ನೀಡಿದೆ ಎಂದು ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಹೇಳಿದ್ದಾರೆ.
“ನಾನು ಇಂದು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆ. ನ್ಯಾಯಾಧೀಶರು ತೀರ್ಪು ನೀಡಿದಾಗ ನಾನು ನ್ಯಾಯಾಲಯದಲ್ಲಿದ್ದೆ. ಈ ತೀರ್ಪಿನಿಂದ ನನಗೆ ತುಂಬಾ ಸಂತೋಷವಾಗಿದೆ. ನ್ಯಾಯಾಧೀಶರು ಸಾಧ್ಯವಾದಷ್ಟು ಬೇಗ – 3 ತಿಂಗಳೊಳಗೆ – ವಿಚಾರಣೆಯನ್ನು ಪೂರ್ಣಗೊಳಿಸಲು ಆದೇಶಿಸಿದ್ದು ನನಗೆ ತೃಪ್ತಿ ತಂದಿದೆ. ನನ್ನ ತಂದೆಯನ್ನು ಕುಲದೀಪ್ ಸೆಂಗಾರ್‌ನ ಸಹೋದರರಾದ ಅತುಲ್ ಸಿಂಗ್ ಸೆಂಗಾರ್ ಮತ್ತು ಜೈದೀಪ್ ಸಿಂಗ್ ಸೆಂಗಾರ್ ಕೊಂದರು. ಆರೋಪಿಗಳು ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ಜೈಲಿನಿಂದ ಹೊರಗಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಎಲ್ಲ ಪೊಲೀಸ್ ಅಧಿಕಾರಿಗಳು ಹೊರಗಿದ್ದಾರೆ. ಕುಲದೀಪ್ ಸಿಂಗ್ ಸೆಂಗಾರ್ ನನ್ನ ಮೇಲೆ ಘೋರ ಕೃತ್ಯ ಎಸಗಿದ್ದಾರೆ. ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಾನು ಅದನ್ನು ಹೇಗೆ ಸಾಬೀತುಪಡಿಸಬಹುದು? ನಾನು ಜೀವಂತವಾಗಿದ್ದೇನೆ. ದೆಹಲಿಯ ನಿರ್ಭಯಾಳಂತೆ ನಾನೂ ಸತ್ತಿದ್ದರೆ, ನನ್ನ ಮೇಲೆ ಅತ್ಯಾಚಾರವಾಗಿದೆ ಎಂಬುದನ್ನು ಎಲ್ಲರೂ ನಂಬುತ್ತಿದ್ದರು” ಎಂದು ಹೇಳಿದ್ದಾರೆ.
“ನನ್ನ ಮೇಲಾದ ಕೃತ್ಯವನ್ನು ಸಾಬೀತುಪಡಿಸಲು 8 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ನನಗೆ ಏನಾಯಿತು ಎಂಬುದನ್ನು ಸಾಬೀತುಪಡಿಸಲು ವರ್ಷಗಳೇ ಬೇಕಾಯಿತು. ಈಗಲೂ ಸಹ, ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಸಾಬೀತುಪಡಿಸಬೇಕಾಗಿದೆ. ಒಂದು ವೇಳೆ, ನಾನು ನಿರ್ಭಯಾಳಂತೆ ಸತ್ತಿದ್ದರೆ, ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಎಲ್ಲರೂ ನಂಬುತ್ತಿದ್ದರು. ಆದರೆ, ನಾನು ಜೀವಂತವಾಗಿದ್ದೇನೆ” ಎಂದಿದ್ದಾರೆ.
“ನನ್ನ ತಂದೆಯ ಸಾವಿಗೆ ನ್ಯಾಯ ಒದಗಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇನೆ. ಕುಲದೀಪ್ ಸಿಂಗ್ ಸೆಂಗಾರ್‌ಗೆ ಮರಣದಂಡನೆ ವಿಧಿಸಬೇಕು. ಅದರಿಂದ, ತನ್ನ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದಿದ್ದಾರೆ.
ಜೈಲಿನಲ್ಲಿರುವ ಅತ್ಯಾಚಾರ ಅಪರಾಧಿ, ಬಿಜೆಪಿ ಮಾಜಿ ಶಾಸಕ ಕುಲದಿಪ್ ಸಿಂಗ್ ಸೆಂಗಾರ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯನ್ನು ತಿರಸ್ಕರಿಸಿದೆ. ಪ್ರಕರಣವನ್ನು 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.





