ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯನ್ನು ಮರಾಠಿಗರ ಪಾಲಿನ ‘ಅಳಿವು-ಉಳಿವಿನ ಪ್ರಶ್ನೆ’ ಎಂದು ಬಣ್ಣಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ, ಹಿಂದಿ ಹೇರಿಕೆ ವಿಚಾರವಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗರಿಗೆ ಕಟುವಾದ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಡೆದ ಬೃಹತ್ ರ‍್ಯಾಲಿಯಲ್ಲಿ ತಮ್ಮ ಸಹೋದರ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ವೇದಿಕೆ ಹಂಚಿಕೊಂಡ ರಾಜ್, ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮರಾಠಿ ಅಸ್ಮಿತೆಗಾಗಿ ಒಂದಾಗುವ ಸಂದೇಶ ರವಾನಿಸಿದರು.
‘ಹಿಂದಿ ನಿಮ್ಮ ಭಾಷೆ, ನಮ್ಮದಲ್ಲ’
ವೇದಿಕೆಯಲ್ಲಿ ಗುಡುಗಿದ ರಾಜ್ ಠಾಕ್ರೆ, “ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದವರು ಒಂದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಹಿಂದಿ ನಿಮ್ಮ ಭಾಷೆಯೇ ಹೊರತು ನಮ್ಮದಲ್ಲ. ನನಗೆ ಆ ಭಾಷೆಯ ಬಗ್ಗೆ ದ್ವೇಷವಿಲ್ಲ. ಆದರೆ ನೀವು ಅದನ್ನು ನಮ್ಮ ಮೇಲೆ ಬಲವಂತವಾಗಿ ಹೇರಲು ಬಂದರೆ, ನಾನು ಒದ್ದು ಓಡಿಸುತ್ತೇನೆ,” ಎಂದು ಎಚ್ಚರಿಸಿದರು. ಜನವರಿ 15ರಂದು ನಡೆಯಲಿರುವ ಚುನಾವಣೆಗೆ ಮುನ್ನ ಭಾಷಾ ಭಾವನೆಗಳನ್ನು ಕೆರಳಿಸಿದ ಅವರ ಈ ಹೇಳಿಕೆಗೆ ನೆರೆದಿದ್ದ ಜನಸ್ತೋಮ ಕರತಾಡನ ಮೂಲಕ ಬೆಂಬಲ ಸೂಚಿಸಿತು.
‘ಮರಾಠಿಗರಿಗೆ ಇದು ಕಡೆಯ ಚುನಾವಣೆ’
ಬಿಎಂಸಿ ಚುನಾವಣೆ ಕೇವಲ ಪಾಲಿಕೆಯ ಅಧಿಕಾರ ಹಿಡಿಯುವ ವಿಷಯವಲ್ಲ, ಇದೊಂದು ನಿರ್ಣಾಯಕ ಕ್ಷಣ ಎಂದು ರಾಜ್ ಪ್ರತಿಪಾದಿಸಿದರು. “ಎಲ್ಲೆಡೆಯಿಂದ ಮಹಾರಾಷ್ಟ್ರಕ್ಕೆ ಲಗ್ಗೆ ಇಡುತ್ತಿರುವವರು ನಿಮ್ಮ ಪಾಲನ್ನು ಕಸಿದುಕೊಳ್ಳುತ್ತಿದ್ದಾರೆ. ಭೂಮಿ ಮತ್ತು ಭಾಷೆ ಎರಡೂ ಹೋದರೆ ನೀವು ಮುಗಿದುಹೋದಂತೆಯೇ. ಮರಾಠಿ ಮನುಷ್ಯನ ಪಾಲಿಗೆ ಇದು ಕೊನೆಯ ಚುನಾವಣೆ. ಇಂದು ಈ ಅವಕಾಶ ತಪ್ಪಿಸಿಕೊಂಡರೆ ಮುಂದೆಂದೂ ಸಿಗಲಾರದು. ಮುಂಬೈ ಅನ್ನು ಮಹಾರಾಷ್ಟ್ರದ ಭಾಗವಾಗಿಸಲು ಹಿರಿಯರು ಮಾಡಿದ ತ್ಯಾಗವನ್ನು ಸ್ಮರಿಸಿ ಒಂದಾಗಿ,” ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಚುನಾವಣಾ ಅಕ್ರಮಗಳ ಬಗ್ಗೆಯೂ ಎಚ್ಚರಿಸಿದ ಅವರು, ಮತದಾನದ ದಿನದಂದು ಕಾರ್ಯಕರ್ತರು ಜಾಗರೂಕರಾಗಿರಬೇಕು. ಇವಿಎಂ ಮೇಲೆ ಕಣ್ಣಿಡಬೇಕು ಮತ್ತು ಯಾರಾದರೂ ಎರಡನೇ ಬಾರಿ ಮತ ಚಲಾಯಿಸಲು ಬಂದರೆ ಅವರನ್ನು ಹೊರಹಾಕಬೇಕು ಎಂದು ಸೂಚನೆ ನೀಡಿದರು.
ಮುಂಬೈ ಉಳಿಸಲು ಮರುಮೈತ್ರಿ: ಉದ್ಧವ್
ಈ ಸಂದರ್ಭದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, “ಮುಂಬೈ ನಗರ ಎದುರಿಸುತ್ತಿರುವ ಅಸ್ತಿತ್ವದ ಭೀತಿಯೇ ನಾವು ಮತ್ತೆ ಒಂದಾಗಲು ಕಾರಣ,” ಎಂದರು. ಮರಾಠಿ ಮನುಷ್ಯ, ಹಿಂದೂಗಳು ಮತ್ತು ಮಹಾರಾಷ್ಟ್ರದ ಹಿತದೃಷ್ಟಿಯಿಂದ ನಾವು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿದ್ದೇವೆ. ಮರಾಠಿ ಪ್ರೇಮ ರಕ್ತಗತವಾಗಿರಬೇಕು ಎಂದು ಅವರು ಹೇಳಿದರು. ಮುಂಬೈ ಅನ್ನು ಹೊರಗಿನವರ ನಿಯಂತ್ರಣದಿಂದ ರಕ್ಷಿಸಲು ನಮ್ಮ ಮೈತ್ರಿ ಮಾತ್ರ ಸಮರ್ಥ ಪರ್ಯಾಯ ಎಂದು ಉಭಯ ನಾಯಕರು ಪ್ರತಿಪಾದಿಸಿದರು.
ಬಿಜೆಪಿ ಮತ್ತು ಅದಾನಿ ವಿರುದ್ಧ ವಾಗ್ದಾಳಿ
ಮಹಾರಾಷ್ಟ್ರದ ಹಿತಾಸಕ್ತಿಗಳನ್ನು ಕಡೆಗಣಿಸಿ ಗುಜರಾತ್ ಪರವಾದ ಅಜೆಂಡಾವನ್ನು ಬಿಜೆಪಿ ಜಾರಿಗೊಳಿಸುತ್ತಿದೆ ಎಂದು ಉಭಯ ನಾಯಕರು ಆರೋಪಿಸಿದರು. 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಗೌತಮ್ ಅದಾನಿ ನೇತೃತ್ವದ ಸಮೂಹಕ್ಕೆ ಒಲವು ತೋರುತ್ತಿದೆ ಎಂದು ರಾಜ್ ದೂರಿದರು.
”ವಧವಾನ್ ಬಂದರು ಯೋಜನೆ ಸೇರಿದಂತೆ ಪಾಲ್ಘರ್, ಠಾಣೆ ಮತ್ತು ಮುಂಬೈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದು ಅವರ ಗುರಿ. ದೀರ್ಘಾವಧಿಯಲ್ಲಿ ಮುಂಬೈಯನ್ನು ಗುಜರಾತ್‌ನೊಂದಿಗೆ ಸಂಪರ್ಕಿಸುವುದು (ಬುಲೆಟ್ ರೈಲು ಯೋಜನೆಯಂತಹವುಗಳ ಮೂಲಕ) ಅವರ ಯೋಜನೆಯಾಗಿದೆ. ಬಿಎಂಸಿ ನಮ್ಮ ವಶದಲ್ಲಿದ್ದರೆ ಅವರು ಅದಾನಿಗೆ ಭೂಮಿ ಮಾರಲು ಸಾಧ್ಯವಿಲ್ಲ,” ಎಂದು ರಾಜ್ ಹೇಳಿದರು.
ಬಿಜೆಪಿಯದ್ದು ‘ನಕಲಿ ಹಿಂದುತ್ವ’
ಬಿಜೆಪಿಯದ್ದು ‘ನಕಲಿ ಹಿಂದುತ್ವ’ ಎಂದು ಜರೆದ ಉದ್ಧವ್ ಠಾಕ್ರೆ, ಪ್ರತಿ ಚುನಾವಣೆಯಲ್ಲೂ ಬಿಜೆಪಿ ಹಿಂದೂ-ಮುಸ್ಲಿಂ ರಾಜಕೀಯ ಮಾಡುತ್ತದೆ ಎಂದು ಆರೋಪಿಸಿದರು. ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರು “ಬಾಂಬೆ ಮಹಾರಾಷ್ಟ್ರದ ನಗರವಲ್ಲ, ಇದೊಂದು ಅಂತಾರಾಷ್ಟ್ರೀಯ ನಗರ” ಎಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಉದ್ಧವ್, ಇದು ಮುಂಬೈ ಹೆಸರನ್ನು ಬದಲಾಯಿಸುವ ಮತ್ತು ನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಬಿಜೆಪಿಯ ದುರುದ್ದೇಶವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.





