ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025-26ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದ ಜಿಡಿಪಿ 8.2%ಗೆ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡಿದೆ. ಆದರೆ, ಕೇಂದ್ರ ಸರ್ಕಾರದ ಜಿಡಿಪಿ ದತ್ತಾಂಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ‘ಸಿ’ ಗ್ರೇಡ್ ಕೊಟ್ಟಿದೆ. ಭಾರತ ಸರ್ಕಾರವು ದತ್ತಾಂಶಗಳನ್ನು ಸರಿಯಾಗಿ ಲೆಕ್ಕಹಾಕಿಲ್ಲ. ಭಾರತದ ಡೇಟಾಗಳು ನಿಖರತೆ ಮತ್ತು ವಿಶ್ವಾಸಾರ್ಹತೆ ಹೊಂದಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಇದು, ಮೋದಿ ಸರ್ಕಾರ ನಿರ್ವಹಿಸುತ್ತಿರುವ ಅಂಕಿಅಂಶಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
2025ರ ನವೆಂಬರ್ 26ರಂದು ಬಿಡುಗಡೆಯಾದ IMFನ ವಾರ್ಷಿಕ ‘ಆರ್ಟಿಕಲ್ IV’ ಸಮೀಕ್ಷಾ ವರದಿಯಲ್ಲಿ, ಭಾರತದ ರಾಷ್ಟ್ರೀಯ ಲೆಕ್ಕಾಚಾರ (National Accounts Statistics) –ಜಿಡಿಪಿ, ಜಿಡಿಪಿ ಮೌಲ್ಯ ಸೇರ್ಪಡೆ (GVA) ಇತ್ಯಾದಿ – ದೋಷಗಳಿಂದ ಕೂಡಿವೆ ಎಂದು ಹೇಳಲಾಗಿದ್ದು, ‘ಸಿ’ ಗ್ರೇಡ್; ನೀಡಿದೆ. ಇದು ನಾಲ್ಕು ಗ್ರೇಡ್‌ಗಳಲ್ಲಿ (A, B, C, D) ಎರಡನೇ ಕಡಿಮೆ ಗ್ರೇಡ್.
ಐಎಂಎಫ್‌ನ ಡೇಟಾ ಸಮರ್ಪಕತೆ ಮೌಲ್ಯಮಾಪನ ವ್ಯವಸ್ಥೆಯಡಿ (Data Adequacy Assessment for Surveillance – DAA) ‘ಸಿ’ ಗ್ರೇಡ್ ಎಂದರೆ, ಡೇಟಾ ಆಗಾಗ ಲಭ್ಯವಿದ್ದರೂ, ಅದರ ಗುಣಮಟ್ಟದಲ್ಲಿ ದೋಷಗಳಿರುತ್ತವೆ. ಜೊತೆಗೆ, ಆರ್ಥಿಕ ನೀತಿ ರೂಪಿಸುವುದು ಮತ್ತು ಅಂತರರಾಷ್ಟ್ರೀಯ ಹೋಲಿಕೆಗೆ ಅಸಮರ್ಪಕ ತೊಡಕು ಕಂಡುಬರುತ್ತದೆ.
ಐಎಂಎಫ್‌ನ ಮೌಲ್ಯಮಾಪನದಲ್ಲಿ ಭಾರತದ ದತ್ತಾಂಶಗಳು 2ನೇ ಬಾರಿಗೆ ‘ಸಿ’ ಗ್ರೇಡ್ ಪಡೆದುಕೊಂಡಿದೆ. 2024ರಲ್ಲಿಯೂ ಭಾರತಕ್ಕೆ ಇದೇ ಗ್ರೇಡ್ ದೊರೆತಿತ್ತು. ಆದರೂ, ಕೇಂದ್ರ ಸರ್ಕಾರವು ತನ್ನ ಅಂಕಿಅಂಶಗಳಲ್ಲಿ ಸುಧಾರಣೆಗಳನ್ನು ತಂದುಕೊಂಡಿಲ್ಲ. ಇದೀಗ, ಸತತ ಎರಡನೇ ಬಾರಿಗೆ ‘ಸಿ’ ಗ್ರೇಡ್‌ನಲ್ಲಿಯೇ ಉಳಿದಿದೆ. ಇದು, ದೇಶದ ಆರ್ಥಿಕತೆಯ ಬೆಳವಣಿಗೆಯನ್ನು ದುರ್ಬಲಗೊಳಿಸಿದೆ.
ಭಾರತದ ಆರ್ಥಿಕ ದತ್ತಾಂಶಗಳಿಗೆ ‘ಸಿ’ ಗ್ರೇಡ್ ಬಂದಿದ್ದರೂ, ಕೇಂದ್ರ ಸರ್ಕಾರವು ತನ್ನ ಜಿಡಿಪಿ ವರದಿಯನ್ನು ಶುಕ್ರವಾರ (ನ.28) ಬಿಡುಗಡೆ ಮಾಡಿದೆ. ರಾಷ್ಟ್ರೀಯ ಸಂಖ್ಯಾಪ್ರಮಾಣ ಸಂಸ್ಥೆ (NSO) ವರದಿಯು 2025-26ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು 8.2%ಗೆ ಬೆಳೆವಣಿಗೆ ಕಂಡಿದೆ ಎಂದು ಘೋಷಿಸಿದೆ. ಈ ಅಂಕಿಅಂಶವು ಅಂದಾಜಿಸಲಾಗಿದ್ದ 7.3%ಗಿಂತ 0.9%ರಷ್ಟು ಅಧಿಕವಾಗಿದೆ. ಗಮನಾರ್ಹವಾಗಿ, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ (2025ರ ಜುಲೈ-ಸೆಪ್ಟೆಂಬರ್) ಜಿಡಿಪಿ ದರವು 5.6% ಇತ್ತು. ಒಂದು ವರ್ಷದಲ್ಲಿ ಬರೋಬ್ಬರಿ 3% ಏರಿಕೆಯಾಗಿರುವುದು ಆಶ್ಚರ್ಯಕರವಾಗಿದೆ. ಐಎಂಎಫ್‌ನ ವಿಮರ್ಶೆಯು ಎನ್‌ಎಸ್‌ಒ ಘೋಷಿಸಿರುವ ಅಂಕಿಅಂಶಗಳ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಐಎಂಎಫ್ ಹೇಳುವಂತೆ, ಭಾರತದ ದತ್ತಾಂಶಗಳಲ್ಲಿ ದೋಷ ಕಂಡುಬರಲು ಪ್ರಮುಖ ಮೂರು ಕಾರಣಗಳಿವೆ.
- ಹಳೆಯ ಬೇಸ್ ಇಯರ್ (2011-12): ಜಿಡಿಪಿ ಮತ್ತು ಸಿಪಿಐನ ಬೇಸ್ ಇಯರ್ 14 ವರ್ಷಗಳ ಹಳೆಯದು. ಡಿಜಿಟಲ್ ಆರ್ಥಿಕತೆ, ಯುಪಿಐ, ಜಿಎಸ್‌ಟಿಯನ್ನು ಒಳಗೊಂಡಿರುವ ಆರ್ಥಿಕ ವ್ಯವಸ್ಥೆಯನ್ನು ಹಳೆಯ ಬೇಸ್ ಇಯರ್ ಮೇಲೆ ಅಳೆಯುವುದು ನೈಜ ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಜಿಡಿಪಿಯನ್ನು ಅಳೆಯಲು ಸರಾಸರಿ 5 ವರ್ಷಗಳ ಬೇಸ್ ಇಯರ್ ಇರಬೇಕು.
- ಡಬ್ಲ್ಯೂಪಿಐ ಆಧಾರಿತ ಡೆಫ್ಲೇಟರ್: ಪ್ರೊಡ್ಯೂಸರ್ ಪ್ರೈಸ್ ಇಂಡೆಕ್ಸ್ (PPI) ಬದಲಾಗಿ ಭಾರತದಲ್ಲಿ ವ್ಯಾಪಾರ ಬೆಲೆ ಸೂಚ್ಯಂಕ (WPI) ಬಳಸಲಾಗುತ್ತಿದೆ. ಇದು ನಿಜವಾದ ಜಿಡಿಪಿಯನ್ನು ಅಂದಾಜಿಸುವಲ್ಲಿ ತೊಡಕು ಉಂಟುಮಾಡುತ್ತದೆ. ತಪ್ಪು ಲೆಕ್ಕಗಳಿಗೆ ಕಾರಣವಾಗುತ್ತದೆ.
- ಉತ್ಪಾದನೆ vs ವೆಚ್ಚದ ಅಂತರ: ಉತ್ಪಾದನೆ ಮತ್ತು ವೆಚ್ಚ ವಿಧಾನಗಳ ನಡುವೆ ದೊಡ್ಡ ಅಂತರವಿದೆ. ಜಿಡಿಪಿ ಲೆಕ್ಕಾಚಾರದಲ್ಲಿ ಆದಾಯವನ್ನು ಮಾತ್ರ ಅಳೆಯಲಾಗುತ್ತಿದ್ದು, ವೆಚ್ಚವನ್ನು ಕಡೆಗಣಿಸಲಾಗಿದೆ. ಹೀಗಾಗಿ, ನಿಖರ ಅಂಕಿಅಂಶ ದೊರೆಯುವುದಿಲ್ಲ.
ಈ ದೋಷಗಳು 2023ರಿಂದಲೇ IMF ಗಮನಕ್ಕೆ ಬಂದಿವೆ ಎಂಬುದು ಸ್ಪಷ್ಟ. ಆದರೆ, ಸರ್ಕಾರವು ಐಎಂಎಫ್‌ನ ವಿಮರ್ಶೆಯನ್ನು ಗಂಭೀರವಾಗಿ ಪರಿಗಣಿಸಿದೆ, ತನ್ನದೇ ಲೆಕ್ಕಾಚಾರ ಹಾಕುತ್ತಿದೆ. ಆದಾಗ್ಯೂ, ಐಎಂಎಫ್‌ನ ಟೀಕೆ ಮತ್ತು ‘ಸಿ’ ಗ್ರೇಡ್ ಸರ್ಕಾರದ ಜಿಡಿಪಿ ದತ್ತಾಂಶಗಳ ಮೇಲಿನ ಅನುಮಾನವನ್ನು ಹೆಚ್ಚಿಸಿದೆ.
ಐಎಂಎಫ್ ಟೀಕೆಯ ನಡುವೆಯೂ ಭಾರತದ ಜಿಡಿಪಿ 8.2%ಗೆ ಬೆಳೆದಿದೆ ಎಂದು ಹೇಳಿರುವ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ.
“ಐಎಂಎಫ್ ‘ಸಿ’ ಗ್ರೇಡ್ ನೀಡಿದ್ದರೂ, ದೇಶದ ಜಿಡಿಪಿ 8.2%ಗೆ ಬೆಳೆದಿದೆ ಎನ್ನುವ ಕೇಂದ್ರದ ವಾದವು ‘ವ್ಯಂಗ್ಯಾಸ್ಪದ’ವಾಗಿದೆ. ಖಾಸಗಿ ಹೂಡಿಕೆಯ ಕೊರತೆಯಿಂದ ಜಿಡಿಪಿ ಸುಸ್ಥಿರವಾಗಿಲ್ಲ. ಹಣದುಬ್ಬರವನ್ನು ಮರೆಮಾಚಿ ಅಥವಾ ಕಡಿಮೆ ತೋರಿಸಿ ಜಿಡಿಪಿಯನ್ನು ಹೆಚ್ಚು ತೋರಿಸಲಾಗುತ್ತಿದೆ. “GDP ಡೆಫ್ಲೇಟರ್ (ಬೆಲೆ ಸೂಚ್ಯಂಕ) ಹಣದುಬ್ಬರವು ಕೇವಲ 0.5% ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ದೇಶದ ಕೋಟ್ಯಂತರ ಕುಟುಂಬಗಳು ದುಬಾರಿ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿದ್ದಾರೆ. ಆಹಾರದಂತಹ ಮೂಲ ಸೌಕರ್ಯಕ್ಕಾಗಿಯೇ ತಮ್ಮ ದುಡಿಮೆಯ ಬಹುಪಾಲನ್ನು ಖರ್ಚು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸರ್ಕಾರದ ಡೇಟಾ ಅಸಮರ್ಪಕತೆಯು ಬೆಳಕಿಗೆ ಬಂದದ್ದು, 2024ರಲ್ಲಿ ಐಎಂಎಫ್ ’ಸಿ’ ಗ್ರೇಡ್ ಕೊಟ್ಟಾಗ ಎಂದು ಹಲವರು ಭಾವಿಸಿದ್ದಾರೆ. ಆದರೆ, ವಾಸ್ತವವಾಗಿ ಇದು ಬೆಳಕಿಗೆ ಬಂದದ್ದು, 2019ರಲ್ಲಿ ರಾಷ್ಟ್ರೀಯ ಸಂಖ್ಯಾಪ್ರಮಾಣ ಆಯೋಗದ (NSC) ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ಪಿ ಸಿ ಮೋಹನನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಾಗಲೇ ಬಹಿರಂಗವಾಗಿತ್ತು. “ಕೇಂದ್ರ ಸರ್ಕಾರವು 201-18ರ ಉದ್ಯೋಗ ಸಮೀಕ್ಷಾ ವರದಿಯನ್ನು (ಇದು ನಿರುದ್ಯೋಗವು 45 ವರ್ಷಗಳಲ್ಲಿಯೇ ಅಧಿಕ ಪ್ರಮಾಣಕ್ಕೆ ಏರಿಕೆಯಾಗಿದೆ ಎಂದಿತ್ತು) ಬಿಡುಗಡೆ ಮಾಡಲು ಉದ್ದೇಶಪೂರ್ವಕವಾಗಿ ತಡೆಯೊಡ್ಡುತ್ತಿದೆ. ಎನ್‌ಎಸ್‌ಪಿಗೆ ಸ್ವಾಯತ್ತತೆ ಇಲ್ಲದಂತಾಗಿದೆ. ಗ್ರಾಮೀಣ ಭಾರತದ ಖರ್ಚು ಕಡಿಮೆಯಾಗಿದೆ ಎಂಬ ವಾಸ್ತವವನ್ನು ಸರ್ಕಾರ ಒಪ್ಪಿಕೊಳ್ಳಲು ಸಿದ್ದವಾಗಿಲ್ಲ” ಎಂದು ಅವರು ಆರೋಪಿಸಿದ್ದರು.
ಪಿ ಸಿ ಮೋಹನನ್ ಅವರ ಆರೋಪಗಳು ಆರ್ಥಿಕತೆಯ ನಿಜವಾದ ಚಿತ್ರಣವನ್ನು ತೋರುತ್ತವೆ. ಅನೌಪಚಾರಿಕ ವಲಯದ ಕುಸಿತ, ಖಾಸಗಿ ಹೂಡಿಕೆಯ ಕೊರತೆಯಿಂದ ಆರ್ಥಿಕತೆಯು ಕುಸಿತ ಕಾಣುತ್ತದೆ. ಆದರೆ, ಕೇಂದ್ರ ಸರ್ಕಾರವು ಇದೆಲ್ಲವನ್ನೂ ಮರೆ ಮಾಡುತ್ತಿದೆ ಎಂದು ಆರ್ಥಿಕ ವಿಶ್ಲೇಷಕರು ದೂರಿದ್ದರು.
ಆದರೂ, ಕೇಂದ್ರ ಸರ್ಕಾರವು ಎಲ್ಲವೂ ಸುಭದ್ರವಾಗಿವೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಬಡತನ ಕಡಿಮೆಯಾಗುತ್ತಿದೆ. ಹಣದುಬ್ಬರ ತೀರಾ ಕಡಿಮೆ ಇದೆ. ಜನರ ಖರ್ಚಿನ ಶಕ್ತಿ ಹೆಚ್ಚಾಗಿದೆ. ಜನರ ಬಳಿ ಹಣವಿದೆ ಎಂದೆಲ್ಲ ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಲೂ, ಜನರನ್ನು ನಂಬಿಸುತ್ತಲೂ ಬಂದಿದೆ. ಆದರೆ, ಮೋದಿ ಸರ್ಕಾರದ ಒಳ ಹೂರಣವನ್ನು ಐಎಂಎಫ್ ಬಯಲುಗೊಳಿಸಿದೆ.
‘ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ’ ಎಂಬ ಮೋದಿ ಘೋಷಣೆಯನ್ನು ಐಎಂಎಫ್‌ನ ಟೀಕೆಯು ಅಲುಗಾಡಿಸಿದೆ. ಕೇಂದ್ರ ಸರ್ಕಾರವು ತಮಗೆ ಬೇಕಾದಂತೆ ಅಂಕಿಅಂಶಗಳು ಮತ್ತು ದತ್ತಾಂಶಗಳನ್ನು ತಿರುಚಿ, ಬರೆದುಕೊಂಡು, ಕೃತಕವಾಗಿ ಜಿಡಿಪಿ ವರದಿ ಮತ್ತು ದತ್ತಾಂಶ ಸೃಷ್ಟಿಸಿ, ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.
ಸದ್ಯಕ್ಕೆ, ಭಾರತದ ಜಿಡಿಪಿ ಬೆಳವಣಿಗೆಯು 2025-26ರ ಆರ್ಥಿಕ ವರ್ಷದಲ್ಲಿ 6.5-7% ಆಗಿಲಿದೆ ಎಂದು ಅಂದಾಜಿಸಿದೆ. ಆದರೆ, ಮೋದಿ ಸರ್ಕಾರವು ಮುಂದಿನ ಆರ್ಥಿಕ ವರ್ಷದಲ್ಲಿ ತಮ್ಮ ತಪ್ಪು ವರದಿಗಳಿಂದ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವೆಂದೇ ಘೋಷಿಸಿಬಿಡಬಹುದಾದ ಅಪಾಯವೂ ಇದೆ ಎನ್ನುತ್ತಾರೆ ವಿಮರ್ಶಕರು.
ಆದಾಗ್ಯೂ, ತನ್ನ ಮೇಲಿನ ಕಳಂಕವನ್ನು ತೊಡೆದುಕೊಳ್ಳಲು ಮೋದಿ ಸರ್ಕಾರಕ್ಕೆ ಕೆಲವು ಮಾರ್ಗಗಳಿವೆ. ಎನ್‌ಎಸ್‌ಸಿಯನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡುವುದು, ಸರಿಯಾದ ಬೇಸ್ ಇಯರ್‌ಅನ್ನು ನಿಗದಿ ಮಾಡಿಕೊಳ್ಳುವುದು ಹಾಗೂ ರಂಗರಾಜನ್ ಸಮಿತಿಯಂತಹ ಶಿಫಾರಸುಗಳನ್ನು ಜಾರಿಗೊಳಿಸುವುದರಿಂದ ಕೇಂದ್ರ ಸರ್ಕಾರವು ವಿಶ್ವಾಸಾರ್ಹ ದತ್ತಾಂಶಗಳನ್ನು ಸಿದ್ದಪಡಿಸಬಹುದು. ಇದರಿಂದ, ಭಾರತವು ಮುಂದಿನ ಆರ್ಥಿಕ ವರ್ಷದಲ್ಲಿ ಐಎಂಎಫ್‌ನಿಂದ ‘ಬಿ’ ಗ್ರೇಡ್ ಪಡೆದುಕೊಳ್ಳಲು ಸಾಧ್ಯವಾಗಬಹುದು ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು.




