2025ರ ಅಂತ್ಯದಲ್ಲಿದ್ದೇವೆ. ಕೆಲವೇ ಗಂಟೆಗಳಲ್ಲಿ ಈ ಶತಮಾನದ ಕಾಲು ಭಾಗವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಹೊತ್ತಿನಲ್ಲಿ ಹಿಂತಿರುಗಿ ಒಮ್ಮೆ ನೋಡಿದರೆ, ಈ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಾದ ಜಾಗತಿಕ ಬದಲಾವಣೆಗಳು, ಅಚ್ಚರಿ-ಆತಂಕಗಳೊಂದಿಗೆ ಹುಬ್ಬೇರಿಸುವಂತೆ ಮಾಡಿವೆ. ಮುಖ್ಯವಾಗಿ ಹೆಚ್ಚು ಚಾಲ್ತಿಯಲ್ಲಿದ್ದದ್ದು ಕೃತಕ ಬುದ್ಧಿಮತ್ತೆ. AI ತನ್ನ ಕೈಗೆಟುಕುವ ಎಲ್ಲಾ ಕ್ಷೇತ್ರಗಳನ್ನು ಹಿಂದೆಂದಿಗಿಂತಲೂ ವೇಗವಾಗಿ ಬರಸೆಳೆದಿದೆ. ಅವುಗಳಲ್ಲಿ ಮಾನವ ಬದುಕಿನ ಮೂಲಭೂತ ವಲಯಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ.
ಒಂದು ಕಾಲದಲ್ಲಿ ಆಸ್ಪತ್ರೆಯ ಯಾವುದೇ ನಿರ್ಧಾರಗಳು ವೈದ್ಯರ ಕೈಯಲ್ಲಿರುತ್ತಿತ್ತು. ಈಗ ಡೇಟಾ ಹಾಗೂ ಆಲ್ಗರಿದಮ್ ನಡುವಿನ ಸಂಯೋಜನೆಯ ಫಲದಲ್ಲಿದೆ. ವೈದ್ಯನು ರೋಗಿಯನ್ನು ಮುಟ್ಟಿ ಪರೀಕ್ಷಿಸುವ ಮೊದಲೇ ರೋಗ ಲಕ್ಷಣ, ಕಾರಣ, ಚಿಕಿತ್ಸೆ, ಔಷಧಿ ಕ್ರಮ ಎಲ್ಲವೂ ಸಿದ್ಧಗೊಳ್ಳುತ್ತದೆ. ಅನುಭವಕ್ಕಿಂತ ಮುಂಚಿತವಾಗಿ ಡೇಟಾವೇ ಮಾತಾಡುವ ವ್ಯವಸ್ಥೆ ರೂಪುಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರಯೋಗಗಳು, ಸಂಶೋಧನೆಗಳು 2025ನ್ನು ಟರ್ನಿಂಗ್ ಪಾಯಿಂಟ್ ಎನಿಸಿಕೊಂಡಿವೆ.
ವೈದ್ಯಕೀಯ ಕ್ಷೇತ್ರದಲ್ಲಿ AI:
ಸದ್ಯ ಕೃತಕ ಬುದ್ಧಿಮತ್ತೆ (AI)ಯನ್ನು ಆರೋಗ್ಯ ಕ್ಷೇತ್ರದಲ್ಲಿ ಜಟಿಲ ವೈದ್ಯಕೀಯ ಮತ್ತು ಆರೋಗ್ಯ ಡೇಟಾವನ್ನು ವಿಶ್ಲೇಷಿಸಿ ಅರ್ಥಮಾಡಿಕೊಳ್ಳಲು ಬಳಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಇದು ಮಾನವ ಸಾಮರ್ಥ್ಯವನ್ನು ಮೀರಿ ರೋಗ ಪತ್ತೆ, ಚಿಕಿತ್ಸೆ ಹಾಗೂ ರೋಗ ತಡೆಗೆ ಹೆಚ್ಚು ನಿಖರತೆ ಒದಗಿಸುತ್ತದೆ. ರೋಗನಿರ್ಣಯ, ಚಿಕಿತ್ಸೆ ಪ್ರೋಟೋಕಾಲ್ ರೂಪಣೆ, ಔಷಧ ಅಭಿವೃದ್ಧಿ, ವೈಯಕ್ತಿಕ ಚಿಕಿತ್ಸೆ ಹಾಗೂ ರೋಗಿಯ ಮೇಲ್ವಿಚಾರಣೆಯಲ್ಲಿ AI ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ರೇಡಿಯಾಲಜಿಯಲ್ಲಿ ಇಮೇಜ್ ವಿಶ್ಲೇಷಣೆಯಲ್ಲಿ AIನ ಪಾತ್ರ ಮಹತ್ವ ಪಡೆದಿದೆ. ಆರೋಗ್ಯ ಕ್ಷೇತ್ರಕ್ಕೆ AI ಬಳಕೆ ಹೊಸದಾಗಿ ಕಾಲಿಟ್ಟಿರುವುದರಿಂದ ಹಲವು ನೈತಿಕ ಪ್ರಶ್ನೆಗಳು, ಡೇಟಾ ಗೌಪ್ಯತೆ, ಉದ್ಯೋಗಗಳ ಮೇಲೆ ಪರಿಣಾಮ, ಆಲ್ಗರಿದಮಿಕ್ ಪಕ್ಷಪಾತ ಮತ್ತು ಮಾನವೀಯ ಸಂವೇದನೆಯ ಕೊರತೆ ಕುರಿತು ಆತಂಕ ಹೆಚ್ಚಿಸಿದೆ.
ಯಾವ ರೋಗಿಯಲ್ಲಿ ಯಾವ ರೋಗಗಳಿವೆ ಎಂಬುದನ್ನು ಸರಿಯಾದ ಸಮಯದಲ್ಲಿ ಮತ್ತು ನಿಖರವಾಗಿ ಗುರುತಿಸುವುದು ಇನ್ನೂ ಆರೋಗ್ಯ ಕ್ಷೇತ್ರದ ದೊಡ್ಡ ಸವಾಲಾಗಿರುವುದು ಗೊತ್ತೇ ಇದೆ. ಆದರೆ, ಈಗ ಎಐ ತನ್ನ ವೇಗವಾದ ಡೇಟಾ ವಿಶ್ಲೇಷಣಾ ಸಾಮರ್ಥ್ಯದಿಂದ ವೈದ್ಯರಿಗೆ ರೋಗ ಪತ್ತೆಯಲ್ಲಿ ಸಹಾಯ ಮಾಡುತ್ತಿದೆ. ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್‌ಗಳ (EHR) ವಿಶ್ಲೇಷಣೆಯ ಮೂಲಕ ಆಲ್ಜೈಮರ್ ಸೇರಿದಂತೆ ಹಲವು ಕಾಯಿಲೆಗಳನ್ನು ಮುಂಚಿತವಾಗಿಯೇ ಗುರುತಿಸಲು ಸಾಧ್ಯವಾಗುತ್ತಿದೆ. ಕೆಲ ಅಧ್ಯಯನಗಳಲ್ಲಿ ವೈದ್ಯರ ಉತ್ತರಗಳಿಗಿಂತ ಎಐ ಚಾಟ್‌ಬಾಟ್‌ಗಳ ಉತ್ತರಗಳು ಹೆಚ್ಚು ಸ್ಪಷ್ಟ ಮತ್ತು ಸಹಾನುಭೂತಿಪೂರ್ಣವೆಂದು ಜನರು ಮೆಚ್ಚಿರುವುದೂ ಕಂಡುಬಂದಿದೆ.

ಎಐ ಲಕ್ಷಾಂತರ ಆರೋಗ್ಯ ಡೇಟಾವನ್ನು ಬಳಸಿ ರೋಗದ ಅಪಾಯ ಅಂದಾಜು, ಚಿಕಿತ್ಸೆ ಪ್ರತಿಕ್ರಿಯೆ ಮುನ್ಸೂಚನೆ ಮತ್ತು ಔಷಧಗಳ ಪರಸ್ಪರ ಪರಿಣಾಮ ಗುರುತಿಸಲು ಸಹಾಯ ಮಾಡುತ್ತಿದೆ. Alpha Foldನಂತಹ ತಂತ್ರಜ್ಞಾನಗಳು ಔಷಧ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸಿವೆ. ಟೆಲಿಮೆಡಿಸಿನ್ ಮತ್ತು ಧರಿಸಬಹುದಾದ ಸಾಧನಗಳ ಮೂಲಕ ರೋಗಿಗಳು ದೂರದಲ್ಲಿದ್ದರೂ ಅವರ ನಿಖರ ಆರೋಗ್ಯ ಮೇಲ್ವಿಚಾರಣೆಯೂ ಸಾಧ್ಯವಾಗಿದೆ. ಲಕ್ಷಾಂತರ ವೈದ್ಯಕೀಯ ಚಿತ್ರಗಳನ್ನು ವಿಶ್ಲೇಷಿಸಿ ತರಬೇತಿ ಪಡೆದಿರುವ ಈ ಎಐ ವ್ಯವಸ್ಥೆಗಳು, ಮಾನವನ ಕಣ್ಣಿಗೆ ಸುಲಭವಾಗಿ ಗೋಚರಿಸದ ಸಣ್ಣ ರೋಗ ಲಕ್ಷಣಗಳನ್ನೂ ಗುರುತಿಸಬಲ್ಲವು. ಸ್ಟ್ರೋಕ್ ಅಥವಾ ಮೆದುಳಿನ ರಕ್ತಸ್ರಾವದಂತಹ ತುರ್ತು ಪರಿಸ್ಥಿತಿಗಳಲ್ಲಿ, ಎಐ ಕೆಲವೇ ಸೆಕೆಂಡುಗಳಲ್ಲಿ ಅಪಾಯವನ್ನು ಗುರುತಿಸಿ ವೈದ್ಯರಿಗೆ ಎಚ್ಚರಿಕೆ ನೀಡುತ್ತದೆ. ಇದರಿಂದ ಜೀವ ಉಳಿಯುವ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ಚಿಕಿತ್ಸೆ ವಿಳಂಬದಿಂದ ಉಂಟಾಗುವ ಶಾಶ್ವತ ಅಂಗವೈಕಲ್ಯ ತಪ್ಪಬಹುದು.
ಬಯಾಪ್ಸಿ (ದೇಹದೊಳಗಿನ ಅಸಹಜ ಅಂಗಾಂಶ, ಜೀವಕೋಶ ಅಥವಾ ದ್ರವದ ಒಂದು ಸಣ್ಣ ಮಾದರಿಯನ್ನು ತೆಗೆದು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸುವ ವೈದ್ಯಕೀಯ ವಿಧಾನ) ಮೂಲಕ ತೆಗೆದುಕೊಳ್ಳುವ ಟಿಶ್ಯೂ ಮಾದರಿಗಳನ್ನು ಎಐ ಅತ್ಯಂತ ನಿಖರವಾಗಿ ಪರಿಶೀಲಿಸಬಲ್ಲದು. ಕ್ಯಾನ್ಸರ್ ಕೋಶಗಳ ಸಂಖ್ಯೆ ಮತ್ತು ಸ್ವರೂಪವನ್ನು ಗುರುತಿಸಿ, ಗಡ್ಡೆಯ ತೀವ್ರತೆಯನ್ನು ನಿರ್ಧರಿಸಲು ಇದು ಪೆಥಾಲಜಿಸ್ಟ್‌ಗಳಿಗೆ ನೆರವಾಗುತ್ತದೆ. ಈ ವೇಗ ಮತ್ತು ನಿಖರತೆಯಿಂದ ಪರೀಕ್ಷಾ ವರದಿಗಳು ಬೇಗ ಸಿಗುತ್ತವೆ; ಪರಿಣಾಮವಾಗಿ ಕ್ಯಾನ್ಸರ್ ರೋಗಿಗಳಿಗೆ ವೈಯಕ್ತಿಕ ಚಿಕಿತ್ಸೆ ಆರಂಭಿಸಲು ಸಮಯ ಉಳಿಯುತ್ತದೆ. ಎಐ ರೋಗಿಯ DNA ಮಾಹಿತಿ ಮತ್ತು ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಒಟ್ಟಿಗೆ ವಿಶ್ಲೇಷಿಸಿ, ಯಾವ ಜೀನಿನ ದೋಷ ರೋಗಕ್ಕೆ ಕಾರಣವಾಗಿದೆ ಎಂಬುದನ್ನು ಗುರುತಿಸುವ ಸಾಮರ್ಥ್ಯವನ್ನೂ ಹೊಂದಿದೆ.
ಹೊಸ ಔಷಧಿ ತಯಾರಿಸಲು ಸಾಮಾನ್ಯವಾಗಿ ವರ್ಷಗಳ ಸಮಯ ಬೇಕಾಗುತ್ತದೆ. ಎಐ ಕಂಪ್ಯೂಟರ್‌ನಲ್ಲೇ ಲಕ್ಷಾಂತರ ರಾಸಾಯನಿಕ ಸಂಯೋಜನೆಗಳನ್ನು ಪರೀಕ್ಷಿಸಿ, ಅತ್ಯುತ್ತಮ ಔಷಧಿ ಆಯ್ಕೆಗಳನ್ನು ವೇಗವಾಗಿ ಗುರುತಿಸುತ್ತದೆ. ಇದರಿಂದ ಜೀವ ರಕ್ಷಕ ಔಷಧಿಗಳು ಬೇಗ ಲಭ್ಯವಾಗುತ್ತವೆ.
ಮೆಡಿಕಲ್ ಟ್ರಾನ್ಸ್ಕ್ರೈಬರ್ (ಲಿಪ್ಯಂತರ) ಆಗಿ AI: ವೈದ್ಯ ಮತ್ತು ರೋಗಿಯ ಮಾತುಕತೆಯನ್ನು ಕೇಳಿ, AI ಸ್ವಯಂಚಾಲಿತವಾಗಿ ವೈದ್ಯಕೀಯ ವರದಿಯನ್ನು ಬರೆಯುತ್ತದೆ ಮತ್ತು ಡಿಜಿಟಲ್ ದಾಖಲೆಗಳಲ್ಲಿ ದಾಖಲಿಸುತ್ತದೆ. ಇದರಿಂದ ವೈದ್ಯರು ಕಂಪ್ಯೂಟರ್ ಮುಂದೆ ಕುಳಿತು ಕಳೆಯುವ ಸಮಯ ಕಡಿಮೆಯಾಗುತ್ತದೆ. ರೋಗಿಗಳ ಜೊತೆ ನೇರ ಸಂವಾದಕ್ಕೆ ಹೆಚ್ಚು ಸಮಯ ಸಿಗುತ್ತದೆ.
ಆಸ್ಪತ್ರೆ ನಿರ್ವಹಣೆಯಲ್ಲಿ AI: ತುರ್ತು ವಿಭಾಗದ ಒತ್ತಡ, ಹಾಸಿಗೆ ಲಭ್ಯತೆ, ಸಿಬ್ಬಂದಿ ಅಗತ್ಯಗಳನ್ನು AI ಮುಂಚಿತವಾಗಿ ಅಂದಾಜು ಮಾಡುತ್ತದೆ. ಉದಾಹರಣೆಗೆ, ಫ್ಲೂ ಪ್ರಕರಣಗಳು ಹೆಚ್ಚಾಗಲಿವೆ ಎಂಬ ಮುನ್ಸೂಚನೆ ಸಿಕ್ಕರೆ, ಆಸ್ಪತ್ರೆಗಳು ಮುಂಚೆಯೇ ಸಿದ್ಧತೆ ಮಾಡಿಕೊಳ್ಳಬಹುದು. ಇದರಿಂದ ನಿರೀಕ್ಷಾ ಸಮಯ ಕಡಿಮೆಯಾಗುತ್ತದೆ.

ರೋಗಿಗಳಿಗೆ ವರ್ಚುವಲ್ ಸಹಾಯಕನಾಗಿ AI: ಎಐ ಆಧಾರಿತ ಆಪ್‌ಗಳು ಮತ್ತು ಚಾಟ್‌ಬಾಟ್‌ಗಳು ಅಪಾಯಿಂಟ್‌ಮೆಂಟ್ ಬುಕ್ಕಿಂಗ್, ಔಷಧಿ ನೆನಪಿನ ಸಂದೇಶಗಳು ಮತ್ತು ರೋಗಿ ಕೇಳುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ. ಇದರಿಂದ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
AI ವ್ಯವಸ್ಥೆಗಳು ಕಲಿಯುವುದು ಅವುಗಳಿಗೆ ನಾವು ನೀಡುವ ಡೇಟಾದಿಂದಲೇ. ಈ ತರಬೇತಿ ಡೇಟಾ ಒಂದು ನಿರ್ದಿಷ್ಟ ಸಮುದಾಯ, ಜಾತಿ, ಲಿಂಗ ಅಥವಾ ಆರ್ಥಿಕ ಹಿನ್ನೆಲೆಗೆ ಮಾತ್ರ ಸೀಮಿತವಾಗಿದ್ದರೆ, ಎಐ ಅದೇ ಮಾದರಿಯ ನಿರ್ಧಾರಗಳನ್ನು ಪುನರುತ್ಪಾದಿಸುತ್ತದೆ. ಪರಿಣಾಮವಾಗಿ, ಇತರ ಸಮುದಾಯಗಳಿಗೆ ತಪ್ಪಾದ ರೋಗ ಪತ್ತೆ, ಚಿಕಿತ್ಸಾ ಸಲಹೆ ಅಥವಾ ಅಪಾಯ ಅಂದಾಜು ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಕ್ಷೇತ್ರದಲ್ಲಿ ಇದು ಕೇವಲ ತಾಂತ್ರಿಕ ದೋಷ ಮಾತ್ರವಾಗುವುದಿಲ್ಲ. ಹೀಗಾಗಿ AI ತರಬೇತಿಗೆ ಬಳಸುವ ಡೇಟಾವನ್ನು ನಿರಂತರವಾಗಿ ಪರಿಶೀಲನೆಗೊಳಪಡಿಸಬೇಕು.
ಬಹುತೇಕ AI ವ್ಯವಸ್ಥೆಗಳು ‘ಬ್ಲಾಕ್ ಬಾಕ್ಸ್’ ಆಗಿವೆ. ಕೇಳಿದ್ದಕ್ಕೆ ತಕ್ಷಣವೇ ಉತ್ತರ ನೀಡುತ್ತವೆ. ಆದರೆ, ಆ ನಿರ್ಧಾರವನ್ನು ಫೈನಲ್ ಮಾಡುವುದು ಹೇಗೆ ಎಂಬುದು ವೈದ್ಯರಿಗೆ ಸ್ಪಷ್ಟವಾಗುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಈ ಅಸ್ಪಷ್ಟತೆ ಅಪಾಯಕಾರಿ. ವೈದ್ಯರು AI ನೀಡುವ ಸಲಹೆಯನ್ನು ಅರ್ಥಮಾಡಿಕೊಳ್ಳದೆ ಅನುಸರಿಸುವಂತಾಗಬಾರದು. ಹೀಗಾಗಿ, AI ಆಧಾರಿತ ನಿರ್ಧಾರಗಳು ವಿವರಿಸಬಹುದಾಗಿರಬೇಕು. ಎಐ ಕಾರ್ಯನಿರ್ವಹಿಸಲು ದೊಡ್ಡ ಪ್ರಮಾಣದ ರೋಗಿ ಡೇಟಾ ಅಗತ್ಯವಿದೆ. ವೈದ್ಯಕೀಯ ಇತಿಹಾಸ, ಡಿಎನ್‌ಎ ಮಾಹಿತಿ, ಜೀವನಶೈಲಿ ವಿವರಗಳು ಸೇರಿದಂತೆ ಅತ್ಯಂತ ವೈಯಕ್ತಿಕ ಮಾಹಿತಿಗಳು. ಈ ಮಾಹಿತಿಯ ದುರುಪಯೋಗ, ಲೀಕ್ ಅಥವಾ ವ್ಯಾಪಾರೀಕರಣ, ರೋಗಿಗಳ ಗೌಪ್ಯತೆಗೆ ಭಾರೀ ಧಕ್ಕೆಯಾಗಬಹುದು. ಹೀಗಾಗಿ, ಡೇಟಾ ಸಂಗ್ರಹ, ಸಂಸ್ಕರಣೆ ಮತ್ತು ಸಂರಕ್ಷಣೆಗೆ ಕಠಿಣ ಕಾನೂನುಗಳು, ತಾಂತ್ರಿಕ ಭದ್ರತಾ ವ್ಯವಸ್ಥೆಗಳು ಮತ್ತು ಸ್ಪಷ್ಟ ಹೊಣೆಗಾರಿಕೆ ಅಗತ್ಯ. ರೋಗಿಯ ಒಪ್ಪಿಗೆ ಮತ್ತು ಮಾಹಿತಿ ಮೇಲಿನ ಹಕ್ಕು ವೈದ್ಯಕೀಯ ಎಐ ಬಳಕೆಯ ಕೇಂದ್ರಬಿಂದು ಆಗಬೇಕು.
ಶಿಕ್ಷಣ ಕ್ಷೇತ್ರದಲ್ಲಿ AI:
ಶಿಕ್ಷಣ ಕ್ಷೇತ್ರದಲ್ಲೂ AI ಕಡಿಮೆ ಸದ್ದು ಮಾಡುತ್ತಿಲ್ಲ. ಹಿಂದೆ ಶಿಕ್ಷಕರೇ ಮಾಹಿತಿ, ಮಾರ್ಗದರ್ಶನ ಮತ್ತು ಜ್ಞಾನದ ಮೂಲವೂ ಆಗಿದ್ದರು. ವಿದ್ಯಾರ್ಥಿಗಳು ಅವರಿಂದಲೇ ಕಲಿಯುತ್ತಿದ್ದರು, ಅವರಿಂದಲೇ ಪ್ರೇರಣೆ ಪಡೆಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಗೂಗಲ್ ಬಂದ ಬಳಿಕವಂತೂ ವಿಶ್ವದ ಜ್ಞಾನವನ್ನು ಒಂದೇ ಕ್ಲಿಕ್ಕಿನಲ್ಲಿ ಪಡೆಯುವಷ್ಟು ಸಲೀಸು. ವಿಡಿಯೋ ಕ್ಲಾಸ್‌ಗಳು, ಆನ್‌ಲೈನ್ ಕೋರ್ಸ್‌ಗಳು, ವರ್ಚುವಲ್ ಕ್ಲಾಸ್‌ರೂಮ್‌ಗಳು, ಇಂಟರಾಕ್ಟೀವ್ ಸಾಫ್ಟ್‌ವೇರ್‌ಗಳು ಸೇರಿದಂತೆ ಹತ್ತು ಹಲವು ರೋಮಾಂಚನಕಾರಿ ಬದಲಾವಣೆಗಳು, ಪರಿಕಲ್ಪನೆಗಳು ತರಗತಿ ಕೊಠಡಿಗಳಿಂದ ಆಡಳಿತಾತ್ಮಕ ಕಾರ್ಯಗಳಲ್ಲಿಯೂ ತನ್ನ ಪ್ರಭಾವ ಹೆಚ್ಚಿಸಿವೆ.

ಎಐ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ವಿಶ್ಲೇಷಿಸಿ, ಅದಕ್ಕೆ ತಕ್ಕಂತೆ ಪಾಠಗಳನ್ನು ವೈಯಕ್ತಿಕಗೊಳಿಸಬಹುದು. ಉತ್ತರ ತಿದ್ದುವುದು, ಹಾಜರಿ ದಾಖಲಿಸುವುದು ಮುಂತಾದ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಸಾಮರ್ಥ್ಯವೂ ಇದಕ್ಕಿದೆ. ಇಂದು ಎಡ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಕೇಂದ್ರಬಿಂದುವಾಗಿರುವ ಎಐ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರಿಗೂ ಸಹಾಯಕವಾಗಿದೆ. ಪ್ರಶ್ನೆಪತ್ರಿಕೆ ರಚನೆ, ಪ್ರತಿಕ್ರಿಯೆ ನೀಡುವುದು ಹಾಗೂ ಪಾಠದ ಕಠಿಣತೆಯನ್ನು ವಿದ್ಯಾರ್ಥಿಯ ಮಟ್ಟಕ್ಕೆ ಹೊಂದಿಸುವುದು ಎಐ ಮೂಲಕ ಸಾಧ್ಯವಾಗಿದೆ.
AI ಕೆಲ ಸೆಕೆಂಡುಗಳಲ್ಲಿ ಪ್ರಶ್ನೆಪತ್ರಿಕೆ, ಫ್ಲಾಶ್‌ಕಾರ್ಡ್, ಅಧ್ಯಯನ ಟಿಪ್ಪಣಿಗಳನ್ನು ರಚಿಸುತ್ತದೆ. ಇದರಿಂದ ಶಿಕ್ಷಕರು ಸಮಯ ಉಳಿಸಿಕೊಂಡು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಬಹುದು. AI ವಿದ್ಯಾರ್ಥಿಗಳ ವರ್ತನೆ, ಕಲಿಕೆಯ ವೇಗ ಮತ್ತು ಸಾಧನೆಯನ್ನು ಗಮನಿಸಿ, ವೈಯಕ್ತಿಕ ಅಧ್ಯಯನ ಯೋಜನೆಗಳನ್ನು ತಯಾರಿಸುತ್ತದೆ. ಇದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿ, ರಂಜನಾತ್ಮಕವಾಗುತ್ತದೆ. ಅಸೈನ್ಮೆಂಟ್ ಮೌಲ್ಯಮಾಪನ, ಹಾಜರಿ ನೋಂದಣಿ, ಪಾಠ ವೇಳಾಪಟ್ಟಿ ನಿರ್ಮಾಣ ಮುಂತಾದ ಪುನರಾವರ್ತಿತ ಕಾರ್ಯಗಳನ್ನು AI ಸ್ವಯಂಚಾಲಿತವಾಗಿ ಮಾಡುತ್ತದೆ. ಇದರಿಂದ ಶಿಕ್ಷಕರು ಬೋಧನೆಗೆ ಹೆಚ್ಚು ಸಮಯ ಮೀಸಲಿಡಬಹುದು.
ಭಾರತದಲ್ಲಿ ಬೈಜೂಸ್ ಮತ್ತು ವೇದಾಂತ್‌ನಂತಹ ವೇದಿಕೆಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ 24/7 ಉತ್ತರಿಸಲು AI ಚಾಟ್‌ಬಾಟ್‌ಗಳನ್ನು ಬಳಸುತ್ತವೆ. ಈ ಬಾಟ್‌ಗಳು ಕಲಿಯುವವರಿಗೆ ವಿಷಯಗಳನ್ನು ಪರಿಷ್ಕರಿಸಲು ಮತ್ತು ಅನುಮಾನಗಳನ್ನು ತಕ್ಷಣವೇ ಪರಿಹರಿಸಲು ಸಹಾಯ ಮಾಡುತ್ತವೆ. ಎಂಬಿಬೆ ಮತ್ತು ಟಾಪರ್ ನಂತಹ ಅಪ್ಲಿಕೇಶನ್‌ಗಳು ವಿದ್ಯಾರ್ಥಿಗಳ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು AI ಅನ್ನು ಬಳಸುತ್ತವೆ. ಅವು ಪ್ರತಿಯೊಬ್ಬ ವಿದ್ಯಾರ್ಥಿಯ ಅಗತ್ಯತೆಗಳು ಮತ್ತು ಸಾಮರ್ಥ್ಯಗಳಿಗೆ ಹೊಂದಿಕೆಯಾಗುವ ಪಾಠಗಳನ್ನು ನೀಡುತ್ತವೆ. ಉನ್ನತ ಶಿಕ್ಷಣ ನೀಡುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸಂಶೋಧನೆ, ಆಡಳಿತ ಮತ್ತು ಕ್ಯಾಂಪಸ್ ಭದ್ರತೆಗಾಗಿ AI ಅನ್ನು ಈಗಾಗಲೇ ಬಳಸುತ್ತಿವೆ. AI ವ್ಯವಸ್ಥೆಗಳು ಡೇಟಾವನ್ನು ನಿರ್ವಹಿಸುತ್ತಿವೆ, ಕ್ಯಾಂಪಸ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಭಾರತದಲ್ಲಿ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವಲ್ಲಿ, ಅದರ ಬಳಕೆಯನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತಂದಿರುವ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ. AI ಲ್ಯಾಬ್‌ಗಳು, ಹ್ಯಾಕಥಾನ್‌ಗಳು ಮತ್ತು ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಮೂಲಕ LPU ಸಂಸ್ಥೆ ತಾಂತ್ರಿಕ ನಾವೀನ್ಯತೆಗೆ ಒಗ್ಗಿಕೊಳ್ಳುತ್ತಿದೆ.

ಚೀನಾ ಈ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿನ ಶಾಲೆಗಳಲ್ಲಿ AI ಆಧರಿತ ಕ್ಯಾಮೆರಾಗಳು ಮತ್ತು ವಿಶ್ಲೇಷಕ ಸಾಫ್ಟ್‌ವೇರ್‌ಗಳು ವಿದ್ಯಾರ್ಥಿಗಳ ಮುಖಭಾವ, ಗಮನ ಮತ್ತು ಆಸಕ್ತಿಯನ್ನು ದಾಖಲಿಸುತ್ತವೆ. ಈ ಮಾಹಿತಿ ಶಿಕ್ಷಕರಿಗೆ ಯಾವ ವಿದ್ಯಾರ್ಥಿಗೆ ಹೆಚ್ಚು ಮಾರ್ಗದರ್ಶನದ ಅಗತ್ಯವಿದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಜೊತೆಗೆ, AI ಪ್ಲಾಟ್‌ಫಾರ್ಮ್‌ಗಳು ವಿದ್ಯಾರ್ಥಿಯ ಬೋಧನಾ ಶೈಲಿಯನ್ನು ಗುರುತಿಸಿ ಅವರ ಕಲಿಕೆಗೆ ಹೊಂದುವ ಪಠ್ಯ ಸಾಮಗ್ರಿ ಮತ್ತು ಅಭ್ಯಾಸಗಳನ್ನು ತಯಾರಿಸುತ್ತವೆ. ಚೀನಾ ಸರ್ಕಾರ 2025ರೊಳಗೆ ಎಲ್ಲ ಶಾಲೆಗಳಲ್ಲಿ AI ಕಲಿಕೆ ಅಳವಡಿಸುವ ಗುರಿ ಹೊಂದಿತ್ತು.
ದಕ್ಷಿಣ ಕೊರಿಯಾ ಕೂಡ ತಂತ್ರಜ್ಞಾನ ಆಧರಿತ ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಅಲ್ಲಿ AI-ಸಹಾಯಿತ ಪಠ್ಯಕ್ರಮಗಳು ಪ್ರಾಥಮಿಕ ಶಿಕ್ಷಣದಿಂದಲೇ ಆರಂಭವಾಗಿವೆ. ಜತೆಗೆ ಸಿಂಗಪುರ್, ಯುರೋಪಿನ ಎಸ್ಟೋನಿಯಾ ದೇಶಗಳು AI ಶಿಕ್ಷಣ ಮಾದರಿಗಳನ್ನ ಈಗಾಗಲೇ ಯಶಸ್ವಿಯಾಗಿ ಅಳವಡಿಸಿಕೊಂಡಿವೆ. ಅಲ್ಲಿನ ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಶಿಕ್ಷಣ ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ನೈಜ ತರಗತಿ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಾಗಿದೆ.
ಕರ್ನಾಟಕದಲ್ಲೂ ಈ ಬದಲಾವಣೆ ವೇಗ ಪಡೆದುಕೊಳ್ಳುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳನ್ನು ತೆರೆಯಲು ಕ್ರಮವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳಿಗೂ ತಂತ್ರಜ್ಞಾನದ ಜೊತೆ ಕಲಿಯಲು ಅನುಕೂಲವಾಗುವಂತೆ, AI (Artificial intelligence) ಶಿಕ್ಷಣ ನೀಡುವುದು, ಶಾಲೆಯಲ್ಲಿ ಕೌಶಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ ಕಲಿಯುತ ಗಳಿಸುವ ಪರಿಕಲ್ಪನೆಯನ್ನು ಅನುಷ್ಠಾನ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆಯೂ ಸಹ ಮಕ್ಕಳ ಹಾಜರಾತಿಯನ್ನ ಫೇಷಿಯಲ್ ಅಟೆಂಡೆನ್ಸ್ ಮೂಲಕ ದಾಖಲು ಮಾಡಿಕೊಳ್ಳಲು ಮುಂದಾಗಿದ್ದು, ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: 2025 ಹಿನ್ನೋಟ | ಕೃಷಿ-ತಂತ್ರಜ್ಞಾನದಲ್ಲಿ AI ಪ್ರಯೋಗ; ಈ ವರ್ಷ ಸಾಧಿಸಿದ್ದೆಷ್ಟು?
ʼತಂತ್ರಜ್ಞಾನ (AI) ತಿಳಿದ ಯಾರಾದರೂ ಬೋಧಿಸಬಹುದು, ಅದಕ್ಕೆ ಶಿಕ್ಷಕರೇ ಬೇಕೆಂದೇನಿಲ್ಲʼ ಎಂಬ ಭ್ರಮೆಗೆ ಇತ್ತೀಚಿನ ಹಲವರು ಒಳಗಾಗುತ್ತಿದ್ದಾರೆ. ಆದರೆ, ಈ ಯೋಚನೆ ಅಪಾಯಕಾರಿ. ಶಿಕ್ಷಕರು ವಿದ್ಯಾರ್ಥಿಗಳ ಒಳಜಗತ್ತನ್ನು ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಕಣ್ಣಲ್ಲಿ ಕಾಣುವ ಸಂದೇಹ, ಧ್ವನಿಯಲ್ಲಿನ ಆತಂಕ, ಮನಸ್ಸಿನಲ್ಲಿ ಮೂಡುವ ಕುತೂಹಲ… ಇವುಗಳ ಅರ್ಥವನ್ನು ಯಂತ್ರಗಳಿಂದ ಅಳೆಯಲು ಸಾಧ್ಯವಿಲ್ಲ. ತಂತ್ರಜ್ಞಾನವು ಶಿಕ್ಷಕರ ಬುದ್ಧಿವಂತಿಕೆ ಮತ್ತು ಮಾನವೀಯ ಸ್ಪರ್ಶವನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ ಎನ್ನುವುದನ್ನು ಮರೆಯಬಾರದು.
ಮುಂದುವರೆದ ರಾಷ್ಟ್ರಗಳು ಅಲ್ಲಿರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡು ತಂತ್ರಜ್ಞಾನದ ಕ್ಷಿಪ್ರ ಕ್ರಾಂತಿಯ ಜತೆಗೆ ಸುಲಭವಾಗಿ ಓಡುತ್ತವೆ. ಭಾರತದಂತಹ ರಾಷ್ಟ್ರಗಳಲ್ಲಿ AI ಕ್ರಾಂತಿ ಅಸಾಧ್ಯವಲ್ಲ, ಹಾಗಂತ ಸುಲಭವೂ ಅಲ್ಲ. ಬಹುಭಾಗ ಗ್ರಾಮೀಣ ಪ್ರದೇಶಗಳಿರುವ ದೇಶ ನಮ್ಮದು. ಇಲ್ಲಿ ಈಗಲೂ ವಿದ್ಯುತ್ ಇಲ್ಲದ ಪ್ರದೇಶಗಳಿವೆ. ಶಿಕ್ಷಕರಿಲ್ಲ ಸ್ಕೂಲು, ವೈದ್ಯರಿಲ್ಲದ ಆಸ್ಪತ್ರೆಗಳಿವೆ. ಈ ಅಸಾಮಾನ್ಯ ಅಂತರದಿಂದ ನಗರ ಮತ್ತು ಗ್ರಾಮೀಣ ಭಾಗಗಳ ನಡುವೆ ಕಂದಕ ಉಂಟಾಗುವ ಅಪಾಯವಿದೆ. AI ಕ್ರಾಂತಿಯ ಯಶಸ್ಸು ತಂತ್ರಜ್ಞಾನದಲ್ಲಲ್ಲ, ಅದು ಯಾರನ್ನು ಎಷ್ಟು ಒಳಗೊಳ್ಳುತ್ತದೆ ಎಂಬುದರಲ್ಲಿದೆ ಎನ್ನುವುದನ್ನು ಮನಗಾಣಬೇಕಿದೆ.





