ಬಿಹಾರದ ಎನ್‌ಡಿಎ ಗೆಲುವಿನಲ್ಲಿ ಎಸ್‌ಐಆರ್ ಪ್ರಭಾವ ಸ್ಪಷ್ಟವಾಗಿದೆ ಎಂದು ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಬಿಹಾರದಲ್ಲಿ ನಕಲಿ ಮತದಾರರ ಮೂಲಕ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಚುನಾವಣೆ ಗೆಲ್ಲುತ್ತಿದ್ದವು. ಎಸ್‌ಐಆರ್‌ನಲ್ಲಿ ನಕಲಿ ಮತದಾರರು ತೆಗೆದು ಹಾಕಿದ ಬಳಿಕ ಈಗ ಪರಿಣಾಮ ಗೊತ್ತಾಗುತ್ತಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್, ಸಿಪಿಎಂ ಪಕ್ಷಗಳು ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸುತ್ತಿವೆ” ಎಂದು ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದನ್ನು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಮರ್ಥಿಸಿಕೊಂಡಿದ್ದಾರೆ.
‘ಮತ ಬ್ಯಾಂಕ್ ರಾಜಕೀಯ’ ಮತ್ತು ‘ಆಡಳಿತ ವಿರೋಧಿ ಅಲೆಯ ಸಾಂಪ್ರದಾಯಿಕ ಪ್ರಚಾರ’ದ ಸಮಯ ಮುಗಿದಿದೆ. ಜನರು ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಒದಗಿಸುವ ಸರ್ಕಾರಕ್ಕೆ ಮತ ಹಾಕುತ್ತಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದಲ್ಲಿ ಗೆದ್ದಿದ್ದು ಜನತಂತ್ರವೋ ಅಥವಾ ಮತಗಳ್ಳತನವೋ?
ಕೇರಳದ ಜನರು ಕೂಡ ಉತ್ತಮ ಆಡಳಿತವನ್ನು ನೀಡುವ ಸರ್ಕಾರವನ್ನು ಪಡೆಯಬೇಕು ಎಂದಿದ್ದಾರೆ. ಬಿಹಾರದ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ಎಸ್‌ಐಆರ್ ನಂತರ ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಹಲವಾರು ವ್ಯತ್ಯಾಸಗಳನ್ನು ವಿರೋಧ ಪಕ್ಷಗಳು ಎತ್ತಿ ತೋರಿಸಿವೆ.
ಎಸ್‌ಐಆರ್ ಅನ್ನು ಪ್ರಶ್ನಿಸಿದ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿವೆ. ಬಿಹಾರದ ಎಸ್‌ಐಆರ್ ಬಳಿಕ ಚುನಾವಣಾ ಆಯೋಗ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಎಸ್‌ಐಆರ್ ಘೋಷಿಸಿದೆ. ಇದರ ವಿರುದ್ದ ತಮಿಳುನಾಡು, ಪಶ್ಚಿಮ ಬಂಗಾಳ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.





