ಸುಮಾರು 40 ಕೆಜಿ ಸ್ಫೋಟಕ ಹೊಂದಿರುವ ಸುಧಾರಿತ ರಾಕೆಟ್ ಒಂದು ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಗೆಲ್ಮೋಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಈ ಸುಧಾರಿತ ರಾಕೆಟ್ ಅನ್ನು ವಶಪಡಿಸಿಕೊಂಡಿದ್ದಾರೆ. ರಾಕೆಟ್ ಜತೆಗೆ ರಾಕೆಟ್ ಉಡಾವಣಾ ಸ್ಟ್ಯಾಂಡ್ ಮತ್ತು ಬ್ಯಾಟರಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ ; ಪೊಲೀಸರ ಮೇಲೆ ಗುಂಡಿನ ದಾಳಿ
ಕಾಂಗ್‌ಪೋಕ್ಪಿ ಜಿಲ್ಲೆಯ ಸಾಂಗ್‌ಲಂಗ್ ಗ್ರಾಮದ ಸಮೀಪದಲ್ಲಿ ಮತ್ತೊಂದು ಕಾರ್ಯಾಚರಣೆ ನಡೆದಿದ್ದು, ಭದ್ರತಾ ಪಡೆಗಳು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಒಂದು ಜರ್ಮನ್ ರೈಫಲ್, ಎರಡು ಬೋಲ್ಟ್-ಆಕ್ಷನ್ ರೈಫಲ್‌ಗಳು, ನಾಲ್ಕು ಪುಲ್ ಮೆಕ್ಯಾನಿಸಂ ರೈಫಲ್‌ಗಳು, ಒಂದು ಸುಧಾರಿತ ಮಾರ್ಟರ್, ಎರಡು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಡಿಟೋನೇಟರ್‌ಗಳು, ಒಂದು ರೇಡಿಯೋ ಸೆಟ್ ಅನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದೆ.
ಜಿಲ್ಲೆಯ ಗೆಲ್‌ಬಂಗ್ ಕಾಡಿನಿಂದಲೂ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಒಂದು ಸಿಎಂಜಿ ಕಾರ್ಬೈನ್, ಒಂದು .303 ರೈಫಲ್(ಲೀ-ಎನ್‌ಫೀಲ್ಡ್), ಎರಡು ಪಿಸ್ತೂಲ್‌ಗಳು, ಒಂಬತ್ತು ಬೋಲ್ಟ್-ಆಕ್ಷನ್ ರೈಫಲ್‌ಗಳು, ಒಂದು ದೇಶೀಯ ನಿರ್ಮಿತ ಎಸ್‌ಬಿಬಿಎಲ್, ಒಂದು ಸ್ಥಳೀಯ ನಿರ್ಮಿತ ಗ್ರೆನೇಡ್, ಮೂರು ಪ್ಲಾಸ್ಟಿಕ್ ಸ್ಫೋಟಕಗಳು ಮತ್ತು ಎರಡು ಹ್ಯಾಂಡ್‌ಸೆಟ್‌ಗಳು ಸೇರಿವೆ.
2023ರ ಮೇ 3ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗುತ್ತಿದ್ದಂತೆ 2025ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಹಿಂಸಾಚಾರದ ಸಂದರ್ಭದಲ್ಲಿ ಗುಂಪುಗಳು ಪೊಲೀಸ್ ಶಸ್ತ್ರಾಗಾರಗಳಿಂದ 6,000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದವು. ರಾಷ್ಟ್ರಪತಿ ಆಡಳಿತದ ಬಳಿಕ ಅವುಗಳನ್ನು ಮತ್ತೆ ಆಡಳಿತದ ವಶಕ್ಕೆ ಪಡೆದುಕೊಳ್ಳುತ್ತಿದೆ.





