ಭಾರತದ ಮಾಧ್ಯಮ ಮತ್ತು ಮನರಂಜನಾ (Media and Entertainment) ಉದ್ಯಮವು ಭಾರಿ ಬೆಳವಣಿಗೆಯ ಹಾದಿಯಲ್ಲಿದ್ದು, 2029ರ ವೇಳೆಗೆ ಒಟ್ಟು ಉದ್ಯಮದ ಮೌಲ್ಯ 47.2 ಶತಕೋಟಿ ಡಾಲರ್ (ಅಂದಾಜು ₹3.96 ಲಕ್ಷ ಕೋಟಿ) ತಲುಪಲಿದೆ ಎಂದು ‘ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್’ (PwC) ತನ್ನ ಇತ್ತೀಚಿನ ವರದಿಯಲ್ಲಿ ಅಂದಾಜಿಸಿದೆ.
ಪ್ರಸ್ತುತ 2024ರಲ್ಲಿ 32.2 ಶತಕೋಟಿ ಡಾಲರ್ ಇರುವ ಈ ಉದ್ಯಮ, ವಾರ್ಷಿಕ ಶೇ 7.8ರ ದರದಲ್ಲಿ (CAGR) ಪ್ರಗತಿ ಕಾಣಲಿದೆ. ಜಾಗತಿಕವಾಗಿ ಈ ವಲಯದ ಸರಾಸರಿ ಬೆಳವಣಿಗೆ ದರ ಶೇ 4.2ರಷ್ಟಿದ್ದರೆ, ಭಾರತದಲ್ಲಿ ಇದು ದ್ವಿಗುಣ ವೇಗದಲ್ಲಿ ಬೆಳೆಯುತ್ತಿರುವುದು ವಿಶೇಷ. ದೇಶದಲ್ಲಿ ಹೆಚ್ಚುತ್ತಿರುವ ಯುವ ಜನಸಂಖ್ಯೆ, ಇಂಟರ್ನೆಟ್ ಸಂಪರ್ಕದ ವಿಸ್ತರಣೆ ಮತ್ತು ಡಿಜಿಟಲ್ ಬಳಕೆಯ ಏರಿಕೆ ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ವಿಶ್ಲೇಷಿಸಿದೆ.
ವರದಿಯ ಪ್ರಕಾರ, ಇಂಟರ್ನೆಟ್ ಜಾಹೀರಾತು ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. 2024ರಲ್ಲಿ 6.25 ಶತಕೋಟಿ ಡಾಲರ್(5416 ಕೋಟಿ ರೂ) ಇರುವ ಆದಾಯ, 2029ಕ್ಕೆ 13.06 ಶತಕೋಟಿ ಡಾಲರ್‌ಗೆ(11736 ಕೋಟಿ ರೂ) (ಶೇ 15.9ರಷ್ಟು ಬೆಳವಣಿಗೆ) ಏರಿಕೆಯಾಗುವ ನಿರೀಕ್ಷೆಯಿದೆ. ಮೊಬೈಲ್ ಮೂಲಕವೇ ಹೆಚ್ಚು ಕಂಟೆಂಟ್ ವೀಕ್ಷಣೆ ಮಾಡುತ್ತಿರುವುದು ಮತ್ತು ಪ್ರಾದೇಶಿಕ ಭಾಷೆಗಳ ಡಿಜಿಟಲ್ ಪ್ರಚಾರ ಇದಕ್ಕೆ ಪುಷ್ಟಿ ನೀಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ‘ದೇವರ’ ದಾಖಲೆ ಮುರಿದು ಮುನ್ನುಗ್ಗುತ್ತಿರುವ ಕೊಹ್ಲಿ
ಒಟಿಟಿ ಸ್ಟ್ರೀಮಿಂಗ್ ಆದಾಯವು 2.27 ಶತಕೋಟಿ ಡಾಲರ್‌ನಿಂದ(2044 ಕೋಟಿ ರೂ.) 3.47 ಶತಕೋಟಿ ಡಾಲರ್‌ಗೆ(3120 ಕೋಟಿ ರೂ) ಏರಿಕೆಯಾಗಲಿದ್ದು, ಗ್ರಾಮೀಣ ಭಾಗದಲ್ಲಿ ಒಟಿಟಿ ಬಳಕೆ ಹೆಚ್ಚಾಗುತ್ತಿದೆ. ಪ್ರಾದೇಶಿಕ ಕಂಟೆಂಟ್‌ಗಳಿಗೆ ಅಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇದೇ ವೇಳೆ, ಮೊಬೈಲ್ ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್ ಆದಾಯವೂ 2029ರ ವೇಳೆಗೆ 3.96 ಶತಕೋಟಿ ಡಾಲರ್(3558 ಕೋಟಿ ರೂ.) ತಲುಪಲಿದೆ.
ಡಿಜಿಟಲ್ ಯುಗದಲ್ಲೂ ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಂಡಿವೆ. ಪ್ರಾದೇಶಿಕ ವೀಕ್ಷಕರ ಬಲದಿಂದ ಟಿವಿ ಉದ್ಯಮ 18.11 ಶತಕೋಟಿ ಡಾಲರ್‌ಗೆ(16,270 ಕೋಟಿ ರೂ.) ತಲುಪುವ ನಿರೀಕ್ಷೆಯಿದೆ. ಇತ್ತ ವಿಶ್ವಾಸಾರ್ಹತೆ ಮತ್ತು ಪ್ರಾದೇಶಿಕ ಓದುಗರ ಬೆಂಬಲದಿಂದಾಗಿ ಮುದ್ರಣ ಮಾಧ್ಯಮದ ಆದಾಯ ಕೂಡ 3.5 ಶತಕೋಟಿ ಡಾಲರ್ (3145 ಕೋಟಿ ರೂಪಾಯಿ)ನಿಂದ 4.2 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ‘ಕ್ರಿಯೇಟರ್ ಎಕಾನಮಿ’ ಮನರಂಜನಾ ಕ್ಷೇತ್ರದ ಸ್ವರೂಪವನ್ನೇ ಬದಲಿಸುತ್ತಿವೆ. ಕಂಟೆಂಟ್ ರಚನೆ, ಎಡಿಟಿಂಗ್ ಮತ್ತು ಜಾಹೀರಾತುಗಳಲ್ಲಿ ಎಐ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪಿಡಬ್ಲ್ಯೂಸಿ ಇಂಡಿಯಾದ ಕ್ಲೈಂಟ್ಸ್ ಅಂಡ್ ಅಲಯನ್ಸಸ್ ಆಫೀಸರ್ ಮನ್‌ಪ್ರೀತ್ ಸಿಂಗ್ ಅಹುಜಾ ಅಭಿಪ್ರಾಯಪಟ್ಟಿದ್ದಾರೆ.





