ಸದ್ಯ ರೈಲುಗಳಲ್ಲಿ ನೀಡುವ ಮಾಂಸಾಹಾರಿ ಊಟಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸಲಾಗುತ್ತಿದೆ ಎಂಬ ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಈಗಾಗಲೇ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರೈಲ್ವೆಗೆ ನೋಟಿಸ್ ನೀಡಿದೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಗುರುವಾರ ಸ್ಪಷ್ಟೀಕರಣವನ್ನು ನೀಡಿದೆ.
2023ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ಈ ಹಲಾಲ್ ವಿವಾದ ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗೆಯೇ NHRC ರೈಲ್ವೆಗೆ ನೋಟಿಸ್ ನೀಡಿದೆ ಎಂದು ವರದಿಗಳಾಗಿವೆ. ಈ ಬೆನ್ನಲ್ಲೇ “ರೈಲುಗಳಲ್ಲಿ ಬಡಿಸುವ ಊಟಗಳಿಗೆ ಹಲಾಲ್ ಪ್ರಮಾಣೀಕರಣಗೊಂಡ ಮಾಂಸವನ್ನು ಕಡ್ಡಾಯಗೊಳಿಸುವ ಯಾವುದೇ ಮಾರ್ಗಸೂಚಿಗಳಿಲ್ಲ” ಎಂದು IRCTC ಪುನರುಚ್ಚರಿಸಿದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಕೃಷಿ ಕಾಯ್ದೆ ರದ್ದಾಗದಿದ್ದರೆ ದೆಹಲಿ ಮಾದರಿಯಲ್ಲಿ ಹೋರಾಟ
ಇನ್ನು ಕಂಪನಿಯು ಈ ಹಿಂದೆಯೂ ಇದೇ ರೀತಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಮಾಂಸಾಹಾರಿ ಆಹಾರವನ್ನು ಮುಖ್ಯವಾಗಿ ಕೋಳಿ ಮಾಂಸವನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನೀಡಲಾಗುತ್ತದೆ ಎಂದು ಹೇಳಿದೆ.
ಕೇಂದ್ರ ಸರ್ಕಾರವು ನಿಗದಿಪಡಿಸಿದ ಮತ್ತು ಅನುಮೋದಿಸಿದ ಆಹಾರದ ವಿಚಾರದಲ್ಲಿ ರೈಲ್ವೆಗಳು ಬಹಳ ಕಟ್ಟುನಿಟ್ಟಾದ ಮಾನದಂಡಗಳನ್ನು ಅನುಸರಿಸುತ್ತವೆ. ಪರವಾನಗಿದಾರರು ಮತ್ತು ಆಹಾರ ಮಾರಾಟಗಾರರು FSSAI ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪಾಲಿಸುವಂತೆ ನೋಡಿಕೊಳ್ಳಲಾಗುತ್ತದೆ ಎಂದೂ IRCTC ಒತ್ತಿಹೇಳಿದೆ.
ದೂರುದಾರರು ಭಾರತೀಯ ರೈಲ್ವೆಗಳು ಹಲಾಲ್ ಮಾಂಸವನ್ನು ಬಳಸಿ ತಯಾರಿಸಿದ ಮಾಂಸಾಹಾರಿ ಆಹಾರವನ್ನು ಮಾತ್ರ ನೀಡುತ್ತವೆ ಎಂದು ದೂರಿದ್ದರು. ಇದು ಧಾರ್ಮಿಕ ಆಧಾರದಲ್ಲಿ ತಾರತಮ್ಯಕ್ಕೆ ಕಾರಣವಾಗುತ್ತದೆ, ಪ್ರಯಾಣಿಕರ ಆಯ್ಕೆಯ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಇದು ಹಿಂದೂ ಮತ್ತು ಸಿಖ್ ಪ್ರಯಾಣಿಕರಿಗೆ ಅವರ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಊಟವನ್ನು ಪಡೆಯುವ ಅವಕಾಶವನ್ನು ನಿರಾಕರಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ದೂರುದಾರರು ಹೇಳಿದ್ದರು.
ಈ ಸಂಬಂಧ ಮಾನವ ಹಕ್ಕುಗಳ ಆಯೋಗ ಭಾರತೀಯ ರೈಲ್ವೆಗೆ ನೋಟಿಸ್ ನೀಡಿದ್ದು, ಹಲಾಲ್ ಮಾಂಸವನ್ನು ಮಾತ್ರ ಬಳಕೆ ಮಾಡುವ ಪ್ರಕ್ರಿಯೆ ಮೂಲಭೂತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ಅವರಿದ್ದ ಪೀಠ ಅಭಿಪ್ರಾಯಿಸಿದೆ.





