‘ಡ್ಯಾನ್ಸಿಂಗ್ ಪೊಲೀಸ್’ ಎಂದೇ ಖ್ಯಾತಿ ಪಡೆದಿದ್ದ ಇಂದೋರ್‌ನ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಂಜೀತ್ ಸಿಂಗ್ ವಿರುದ್ಧ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿದ್ದಾರೆ. ಮಹಿಳೆ ದೂರು ದಾಖಲಿಸಿದ ಬೆನ್ನಲ್ಲೇ, ರಂಜೀತ್ ಸಿಂಗ್ ಅವರಿಗೆ ಹೆಡ್ ಕಾನ್‌ಸ್ಟೇಬಲ್ ಹುದ್ದೆಯಿಂದ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿ ಮಧ್ಯಪ್ರದೇಶ ಪೊಲೀಸ್ ಇಲಾಖೆ ಆದೇಶಿಸಿದೆ.
ಸಂಚಾರ ನಿರ್ವಹಣೆ ವೇಳೆ ಡ್ಯಾನ್ಸ್ ಮಾಡತ್ತಲೇ ಕರ್ತವ್ಯ ನಿರ್ವಹಿಸುತ್ತಿದ್ದ ರಂಜೀತ್ ಸಿಂಗ್ ನೆಟ್ಟಿಗರಿಂದ ಪ್ರಸಂಶೆ ಪಡೆದಿದ್ದರು. ಇದೀಗ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಿಂಗ್ ವಿರುದ್ಧ ದೂರು ದಾಖಲಿಸಿರುವ ಮಹಿಳೆ, “ತಮಗೆ ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇಂದೋರ್‌ಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ರಂಜೀತ್ ಸಿಂಗ್ ವಿರುದ್ಧ ನಡೆದ ಪ್ರಾಥಮಿಕ ತನಿಖೆಯ ಆಧಾರದಲ್ಲಿ ಅವರಿಗೆ ಹಿಂಬಡ್ತಿ ನೀಡಲಾಗಿದೆ. ಪ್ರಕರಣವನ್ನು ವಿವರವಾದ ತನಿಖೆ ನಡೆಸಲು ಡಿಸಿಪಿಗೆ ಪೊಲೀಸ್ ಇಲಾಖೆ ಸೂಚಿಸಿದೆ.
ತಮ್ಮ ವಿರುದ್ಧದ ಆರೋಪವನ್ನು ರಂಜೀತ್ ಸಿಂಗ್ ನಿರಾಕರಿಸಿದ್ದಾರೆ. ಮಹಿಳೆಯು ಸುಳ್ಳು ಆರೋಪ ಮಾಡಿ, ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.




