ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಮಾಡಿದ್ದು, ಜಾರಿಗೊಳಿಸಲು ಮುಂದಾಗಿದೆ. ಆದರೆ, ಅಲೆಮಾರಿ ಸಮುದಾಯಗಳನ್ನು ಬಲಗೈ ಸಮುದಾಯಗಳೊಂದಿಗೆ ಸೇರಿಸಿ, ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಲಾಗಿದೆ. 1% ಪ್ರತ್ಯೇಕ ಒಳಮೀಸಲಾತಿಗಾಗಿ ಹೋರಾಟ ಮುಂದುವರೆದಿದೆ. ತಮಗಾದ ಅನ್ಯಾಯವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲು ಸಮುದಾಯದ ಜನರು ದೆಹಲಿಗೆ ತೆರಳಿ ಕಳೆದ 10 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅದರೆ, ಹೋರಾಟಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವಾಗಲೀ, ಕಾಂಗ್ರೆಸ್ ವರಿಷ್ಠರಾಗಲೀ ಸ್ಪಂದಿಸಿಲ್ಲ. ಹೀಗಾಗಿ, ಸಮುದಾಯದ ಜನರು ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ ಎದುರು ಶನಿವಾರದಿಂದ (ಅಕ್ಟೋಬರ್ 11) ಧರಣಿ ಆರಂಭಿಸಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಕಚೇರಿ ಎದುರು ಧರಣಿ ಕೂರುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ದೆಹಲಿಯಲ್ಲಿ ಹೋರಾಟನಿರತ ಪ್ರತಿಭಟನಾಕಾರರು, “ನ್ಯಾಯ ಅರಸಿ ದೆಹಲಿಯವರೆಗೆ ಬಂದಿದ್ದೇವೆ. ಆದರೆ, ನಮ್ಮ ಅಳಲನ್ನು ಕಾಂಗ್ರೆಸ್ ಸರ್ಕಾರವಾಗಲೀ, ಕರ್ನಾಟಕದ ಆಡಳಿತರೂಢ ಪಕ್ಷ ಕಾಂಗ್ರೆಸ್‌ನ ಹೈಕಮಾಂಡ್ ಆಗಲೀ ಕೇಳುತ್ತಿಲ್ಲ. ಸ್ಪಂದಿಸುತ್ತಿಲ್ಲ. ನಮ್ಮ ಹಕ್ಕಾದ 1% ಪ್ರತ್ಯೇಕ ಮೀಸಲಾತಿ ಪಡೆಯದೆ ದೆಹಲಿ ತೊರೆಯುವುದಿಲ್ಲ. ಕರ್ನಾಟಕಕ್ಕೆ ಮರಳುವುದಿಲ್ಲ” ಎಂದಿದ್ದಾರೆ.
“ಭಾರತಕ್ಕೆ ಸ್ವಾತಂತ್ರ್ಯ ದೊರತು 8 ದಶಕಗಳು ಕಳೆದಿವೆ. ಆದರೆ, ಇಂದಿಗೂ ನಮ್ಮಲ್ಲಿನ (ಅಲೆಮಾರಿ) ಹೆಚ್ಚಿನ ಜನರು ಬೀದಿಗಳಲ್ಲೇ ಪ್ಲಾಸ್ಟಿಕ್ ಶೀಟುಗಳಡಿ ವಾಸಿಸುತ್ತಿದ್ದೇವೆ. ಸಮುದಾಯದಲ್ಲಿ ಒಬ್ಬ ಉನ್ನತ ಅಧಿಕಾರಿ ಇಲ್ಲ, ಒಬ್ಬ ರಾಜಕೀಯ ಪ್ರತಿನಿಧಿ ಇಲ್ಲ. ಕೃಷಿ ಮಾಡಲು ಭೂಮಿ ಇಲ್ಲ, ವ್ಯಾಪಾರ ಮಾಡಲು ಬಂಡವಾಳ ಇಲ್ಲ. ಊರೂರು ಬಣ್ಣ ಕಟ್ಟಿ ಭಿಕ್ಷೆಗಾಗಿ ಅಲೆಯುತ್ತೇವೆ ಅಥವಾ ಕರಿಮಣಿ, ಬಲೂನು ಇತ್ಯಾದಿ ಬೀದಿ ವ್ಯಾಪಾರ ಮಾಡುತ್ತಾ ಸುತ್ತುತ್ತೇವೆ. ಇದೇ ನಮ್ಮ ಕಾಯಕವಾಗಿದೆ. ನಿನ್ನೆ ತಾನೆ ಮೈಸೂರು ದಸರಾಗೆ ಬಲೂನು ಮಾರಲು ಕಲ್ಬುರ್ಗಿಯಿಂದ ಬಂದಿದ್ದ, ಬೀದಯಲ್ಲೇ ಟೆಂಟು ಹಾಕಿಕೊಂಡು ಉಳಿದುಕೊಂಡಿದ್ದ, ಅಲೆಮಾರಿ ಕುಟುಂಬದ 9 ವರ್ಷದ ಮಗುವಿನ ಅತ್ಯಾಚಾರ ಮತ್ತು ಕೊಲೆಯಾಗಿದೆ. ಇಂತಹವು ನಡೆಯುತ್ತಲೇ ಇರುತ್ತವೆ. ಪೋಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಆದರೆ ಅಪರಾಧಿ ಯಾರು? ಆ ಕುಡುಕ ಮಾತ್ರವೇನಾ? ಅಥವಾ ನಮ್ಮನ್ನು ಇಂದಿಗೂ ಬೀದಿಗಳಲ್ಲೇ ಉಳಿಸಿರುವ ಈ ವ್ಯವಸ್ಥೆಯಾ? ಈ ಸಮಾಜವಾ? ಈ ಸರ್ಕಾರಗಳಾ? ನೀವೇ ಹೇಳಬೇಕಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನಾವು ಪರಿಶಿಷ್ಟ ಜಾತಿಗಳಡಿ ಇದ್ದರೂ ನಮಗೆ ಈವರೆಗೆ ಮೀಸಲಾತಿಯ ಅನುಕೂಲತೆಗಳು ಸಿಕ್ಕಿಲ್ಲ. ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿಗಳಿವೆ. ನಾವು ಕಟ್ಟಕಡೆಯವರು. ಇದ್ದಬಿದ್ದ ಮೀಸಲಾತಿಯನ್ನು ಪರಿಶಿಷ್ಟ ಜಾತಿಯಲ್ಲಿ ಮುಂದುವರೆದವರೇ ಅನುಭವಿಸುತ್ತಾ ಬಂದರು. ನಮಗೆ ಅದು ತೊಟ್ಟಿಕಲೂ ಇಲ್ಲ. ನಮಗಿಂತ ಸಂಘಟಿತವಾಗಿದ್ದ ಮಾದಿಗ ಸಮುದಾಯ ಕಳೆದ 35 ವರ್ಷಗಳ ಕಾಲ ಒಳ ಮೀಸಲಾತಿಗಾಗಿ ಹೋರಾಡಿತು. 2024 ರಲ್ಲಿ ಒಳ ಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟು ತೀರ್ಪು ನೀಡಿತು. ಇದನ್ನು ಜಾರಿಗೊಳಿಸುವ ಸಲಹೆ ಪಡೆಯಲು ಕರ್ನಾಟಕ ಸರ್ಕಾರ ಜಸ್ಟಿಸ್ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚಿಸಿತು. ಮನೆಮನೆ ಸರ್ವನಡೆಸಿ ನಾಗಮೋಹನ್ ದಾಸ್ ಸಮಿತಿ ಕೂಲಂಕುಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅಲೆಮಾರಿಗಳನ್ನು ಅತ್ಯಂತ ಹಿಂದುಳಿದವರು ಎಂದು ಗುರುತಿಸಿ, ‘ಕೆಟಗರಿ A’ ಅಡಿ ಈ ಸಮುದಾಯಗಳಿಗೆ ಶೇ. 1 ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತು. ‘ಅಬ್ಬ ಮೊಟ್ಟಮೊದಲ ಬಾರಿಗೆ ನಮಗೂ ಏನೋ ಸಿಗುತ್ತದೆ’ ಎಂದುಕೊಂಡೆವು. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಬಲಾಢ್ಯರ ಒತ್ತಡಕ್ಕೆ ಮಣಿದು ಅಸ್ಪಷ್ಯ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ನಮ್ಮನ್ನು ಸರ್ಕಾರವು ಸ್ಪಷ್ಯ ಹಾಗೂ ಸಾಪೇಕ್ಷವಾಗಿ ಮುಂದುವರೆದ ಗುಂಪಿನಲ್ಲಿ ಹಾಕಿಬಿಟ್ಟಿತು. ನಮಗಿದು ದೊಡ್ಡ ಶಾಕ್ ನೀಡಿತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
“ನಮ್ಮ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಎಚ್ಚೆತ್ತು, 49 ಜಾತಿಗಳೆಲ್ಲ ಕೂಡಿ ʼಕರ್ನಾಟಕ ಅಸ್ಪ್ರಷ್ಯ ಅಲೆಮಾರಿ ಮಹಾ ಒಕ್ಕೂಟʼ ರಚಿಸಿಕೊಂಡು ಬೃಹತ್ ಸಮಾವೇಶ ಮಾಡಿದೆವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ನಮ್ಮನ್ನು ಮತ್ತಷ್ಟು ನಿರಾಸೆಗೊಳಿಸಿತು. ‘ನಿಮಗೆ ಅನ್ಯಾಯವಾಗಿರುವುದು ನಿಜ. ನಾನು ನಿಮ್ಮ ಜೊತೆಗಿದ್ದೇನೆ. ಆದರೆ ನನ್ನ ಕ್ಯಾಬಿನೆಟ್ ನನ್ನ ಜೊತೆಗಿಲ್ಲ. ನಾನು ಒಂಟಿಯಾಗಿದ್ದೇನೆ. ನನ್ನ ಕೈಗಳನ್ನು ಕಟ್ಟಿಹಾಕಲಾಗಿದೆ. ನಾನೇನು ಮಾಡಲಾರೆ ಕ್ಷಮಿಸಿ’ ಎಂದು ಸಿದ್ದರಾಮಯ್ಯ ಹೇಳಿದರು. ಇದೆಂತಹ ಮಾತು? ಮುಖ್ಯಮಂತ್ರಿಗಳೇ ಅಸಾಹಯಕರಾಗುವಷ್ಟು ಬಲಾಢ್ಯ ಜಾತಿಗಳ ಲಾಬಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿರುವಾಗ ಇದನ್ನು ಸರಿಪಡಿಸುವ ಜವಬ್ದಾರಿ ಯಾರುದು? ನಮ್ಮ ಮಟ್ಟಿಗೆ ಕಂಡದ್ದು; ಹೈಕಮಾಂಡ್, ಅದರಲ್ಲೂ ರಾಹುಲ್ ಗಾಂಧಿ. ಹಾಗಾಗಿ ಅವರನ್ನು ಕಾಣಲು ದೆಹಲಿಗೆ ಬಂದೆವು” ಎಂದು ವಿವರಿಸಿದ್ದಾರೆ.
“ಅಕ್ಟೋಬರ್ 2 ರಂದು ಜಂತರ್ ಮಂತರಿನಲ್ಲಿ ಅಲೆಮಾರಿ ಕಲಾವಿದರೆಲ್ಲಾ ಸೇರಿ ಆಕರ್ಷಕ ಪ್ರತಿಭಟನೆ ದಾಖಲಿಸಿದೆವು. AICC ಕಛೇರಿ ಮುಂದೆಯೂ ಪ್ರತಿಭಟನೆ ಮಾಡಿದೆವು. ಕಾಂಗ್ರೆಸ್ ಪ್ರತಿನಿಧಿಗಳು ಕರೆಸಿ ಮಾತನಾಡಿದರು. “ಈ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ರಾಹುಲ್ ಗಾಂಧಿಯವರು ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬರಲೇಬೇಕು”. ಎಂದರು. “ಸರಿ ಕಾಯುತ್ತೇವೆ. ಆದರೆ ನಮ್ಮ ಹಕ್ಕು ಪಡೆಯದೆ ವಾಪಾಸ್ ಹೋಗುವ ಮಾತೇ ಇಲ್ಲ” ಎಂದು ಒಂದು ತಂಡ ಇಲ್ಲೇ ಧರಣಿ ಮುಂದುವರೆಸಿದ್ದೇವೆ” ಎಂದು ತಿಳಿಸಿದ್ದಾರೆ.
“ಆಳುವವರಿಗೆ ಒಂದು ಮಾತು ಹೇಳುತ್ತೇವೆ; ನಮ್ಮನ್ನು ದಶಕಗಟ್ಟಲೆ ಕಾಯಿಸಿದ್ದೀರಿ. ಈಗಲೂ ಕೊನೆ ಇಲ್ಲದೆ ಕಾಯಿಸಬೇಡಿ. ರಾಹುಲ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಬಂದೊಡನೆ ಮೊದಲ ಆಧ್ಯತೆಯಲ್ಲಿ ಭೇಟಿ ಮಾಡಿಸಿ ನಮಗೆ ನ್ಯಾಯ ಕೊಡಿಸಿ. ನಾವು ದೂರಕೂತರೆ ನಮ್ಮನ್ನು ಮರೆತೇಬಿಡುವ ಸಾಧ್ಯತೆ ಇದೆ. ಹಾಗಾಗಿ, ಶನಿವಾರದಿಂದ AICC ಕಚೇರಿಯಲ್ಲೇ ಧರಣಿ ಕೂರಲು ತೀರ್ಮಾನಿಸಿದ್ದೇವೆ. ನಮ್ಮ ಹಕ್ಕನ್ನು ಪಡೆದೇ ಹಿಂತಿರುಗುತ್ತೇವೆ” ಎಂದಿದ್ದಾರೆ.




