‘ಮಿರ್ಜಾಪುರ’ ವೆಬ್ ಸೀರೀಸ್ ನೋಡಿ ವಿದ್ಯಾರ್ಥಿಯೋರ್ವ ತನ್ನ ಗೆಳತಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಈ ಸಂಬಂಧ ವಿದ್ಯಾರ್ಥಿ ಮತ್ತು ಆತನಿಗೆ ಸಹಾಯ ಮಾಡಿದ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮೋಹಿತ್ ಸೈನಿ ಮತ್ತು ಓಂಕಾರ್ ಶರ್ಮಾ ಎಂದು ಗುರುತಿಸಲಾಗಿದೆ. ಡಿಸೆಂಬರ್ 25ರಂದು ಅಂಜಲಿ ಎಂಬ ಯುವತಿಯ ಶವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಅಂದಿನಿಂದ ಇಬ್ಬರು ಕೂಡಾ ತಲೆಮರೆಸಿಕೊಂಡಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರು | ಕೂಲಿ ಕಾರ್ಮಿಕನ ಕತ್ತು ಸೀಳಿ ಬರ್ಬರ ಕೊಲೆ
ಬಿಕಾಂ ಮೊದಲನೇ ವರ್ಷದ ವಿದ್ಯಾರ್ಥಿ ಹಾಗೂ ಫುಟ್ಬಾಲ್ ಆಟಗಾರರಾಗಿರುವ ಮೋಹಿತ್ ಕಳೆದ ಎರಡು ವರ್ಷಗಳಿಂದ ಅಂಜಲಿ ಜೊತೆ ಲಿವ್‌ಇನ್ ಸಂಬಂಧ ಹೊಂದಿದ್ದರು. ಆದರೆ ಅಂಜಲಿಗೆ ಬೇರೆ ಸಂಬಂಧವು ಇದೆ ಎಂದುಕೊಂಡ ಮೋಹಿತ್ ಆಕೆಯನ್ನು ಕೊಲ್ಲಬೇಕು ಎಂದು ನಿರ್ಧರಿಸಿದ ಎಂದು ವರದಿಯಾಗಿದೆ.
“ಮೋಹಿತ್ ತನ್ನ ಗೆಳತಿಯನ್ನು ಕೊಂದಿದ್ದಾನೆ. ಆಕೆ ಬೇರೊಬ್ಬನೊಂದಿಗೆ ವಿವಾಹವಾಗಿದ್ದಾಳೆ ಎಂದು ತಿಳಿದ ಬಳಿಕ ಕೊಲೆ ಮಾಡಿದ್ದಾನೆ. ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಮತ್ತು ಅಪರಾಧಕ್ಕೆ ಸಹಾಯ ಮಾಡಿದ ತನ್ನ ಸ್ನೇಹಿತನೊಂದಿಗೆ ಪರಾರಿಯಾಗಿದ್ದನು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹೆಣ್ಣು ಮಗು ಬೇಡವೆಂದು 9 ದಿನದ ಶಿಶುವಿನ ಗಂಟಲು ಸೀಳಿ ಕೊಂದ ತಾಯಿ
ಈ ಬಗ್ಗೆ ಮಾಹಿತಿ ಹಂಚಿಕೊಂಡ ಗ್ರಾಮಾಂತರ ಎಸ್‌ಪಿ ಕುನ್ವರ್ ಆಕಾಶ್ ಸಿಂಗ್, ಆರೋಪಿಯು ಪ್ರಸಿದ್ಧ ವೆಬ್ ಸೀರೀಸ್ ಮಿರ್ಜಾಪುರವನ್ನು ವೀಕ್ಷಿಸಿದ ನಂತರ ಕೊಲೆ ಮಾಡಿದ್ದಾನೆ. ತನ್ನ ಗೆಳತಿಯ ಕತ್ತು ಸೀಳಿದ್ದಾನೆ. ಅಂಜಲಿ ಇನ್ನೂ ತನ್ನ ಪತಿಯೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂದು ತಿಳಿದುಬಂದ ಬಳಿಕ ಈ ಕೃತ್ಯ ಎಸಗಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.
ಮಿರ್ಜಾಪುರ ವೆಬ್ ಸೀರೀಸ್ ನೋಡಿದ ಬಳಿಕ ಅಂಜಲಿಯ ಕತ್ತು ಸೀಳಿ ಕೊಲ್ಲುವ ನಿರ್ಧಾರ ಮಾಡಿರುವುದಾಗಿ ಮೋಹಿತ್ ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಇಬ್ಬರೂ ಆರೋಪಿಗಳು ಜೈಲಿನಲ್ಲಿದ್ದಾರೆ. ಈ ಬಗ್ಗೆ ಅಧಿಕ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





