‘ಇಂಡಿಯನ್ ಪ್ರೀಮಿಯರ್ ಲೀಗ್’ (IPL) 2026ರ ಟೂರ್ನಿಗಾಗಿ ತಂಡಗಳು ಆಡಗಾರರನ್ನು ಖರೀದಿಸಲು ಇದೇ ತಿಂಗಳು – ಡಿಸೆಂಬರ್ 16ರಂದು – ಮೆಗಾ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಭಾರತ ತಂಡದ ಕೆಲವು ಪ್ರಮುಖ ಆಟಗಾರರೂ ಮಾರಾಟವಾಗಲಿದ್ದಾರೆ. ಅವರ ಐಪಿಎಲ್ ಮೌಲ್ಯವೂ ಅಂದು ನಿರ್ಧಾರವಾಗಲಿದೆ.
2025ರ ಮಾರ್ಚ್-ಮೇ ನಡುವೆ ನಡೆದ ಐಪಿಎಲ್ ಟೂರ್ನಿಗಾಗಿ ಅತೀ ಹೆಚ್ಚು ಬೆಲೆಗೆ ಬಿಕರಿಯಾಗಿದ್ದ ಆಟಗಾರರಲ್ಲಿ ಭಾರತೀಯ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಗ್ರ ಸ್ಥಾನದಲ್ಲಿದ್ದರು. ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜೆ) ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಖರೀದಿ ಕೂಡ ಇದೇ ಆಗಿತ್ತು. ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇತರರು ಇದ್ದಾರೆ.
2025ರ ಐಪಿಎಲ್ ಟೂರ್ನಿಗಾಗಿ 2024ರ ಡಿಸೆಂಬರ್‌ನಲ್ಲಿ ನಡೆದಿದ್ದ ಮೆಘಾ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಪ್ರಮುಖ ಐದು ಆಟಗಾರರ ಪಟ್ಟಿ ಇಲ್ಲಿದೆ;
ರಿಷಭ್ ಪಂತ್: 27 ಕೋಟಿ ರೂ.
ರಿಷಭ್ ಪಂತ್ 2025ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಬಿಕರಿಯಾಗಿದ್ದರು. ಇದು ಐಪಿಎಲ್ ಹರಾಜಿನಲ್ಲಿಯೇ ಅತ್ಯಧಿಕ ಮೊತ್ತವಾಗಿತ್ತು. ಆದಾಗ್ಯೂ, ಐಪಿಎಲ್ ಟೂರ್ನಿಯಲ್ಲಿ ಪಂತ್ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಅವರ ಕಡೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಶತಕ ಬಾರಿದರು. ಅದಕ್ಕೂ ಮೊದಲ ಆಡಿದ್ದ ಒಟ್ಟು 13 ಪಂದ್ಯಗಳಲ್ಲಿ ಅವರು ಒಟ್ಟಾರೆಯಾಗಿ ಗಳಿಸಿದ್ದದ್ದು ಕೇವಲ 100 ರನ್‌ಗಳು ಮಾತ್ರ.
ಶ್ರೇಯಸ್ ಅಯ್ಯರ್: 26.75 ಕೋಟಿ ರೂ.
2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ಆ ಟೂರ್ನಿಯಲ್ಲಿ ಕೆಕೆಆರ್‌ಗೆ ಟ್ರೋಫಿ ತಂದುಕೊಟ್ಟಿದ್ದರು. ಆದ್ದರಿಂದ, ಅವರಿಗಾಗಿ ಬೇಡಿಕೆ ಹೆಚ್ಚಾಗಿತ್ತು. 2025ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶ್ರೇಯಸ್ ಬೆನ್ನತ್ತಿತ್ತು. ಬರೋಬ್ಬರಿ 26.75 ಕೋಟಿ ರೂ.ಗೆ ಖರೀದಿಸಿತು. ಗಮನಾರ್ಹವಾಗಿ, 2014ರಲ್ಲಿಯೂ ಅವರು ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ, ಫೈನಲ್‌ನಲ್ಲಿ ಸೋಲುಂಡಿತ್ತು.
ವೆಂಕಟೇಶ್ ಅಯ್ಯರ್: 23.75 ಕೋಟಿ ರೂ.
2024ರ ಟೂರ್ನಿಯಲ್ಲಿ ಕೆಕೆಆರ್ ತಂಡವು 3ನೇ ಬಾರಿಗೆ ಕಪ್ ಗೆದ್ದಾಗ, ತಂಡದಲ್ಲಿ ವೆಂಕಟೇಶ್ ಅಯ್ಯಕ್ ಪ್ರಮುಖ ಪಾತ್ರ ವಹಿಸಿದ್ದರು. ಆದ್ದರಿಂದ, ಅವರನ್ನು ಬಿಟ್ಟುಕೊಡಲು ಸಿದ್ದವಿಲ್ಲದಿದ್ದ ಕೆಕೆಆರ್, 2025ರ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂ.ಗಳಿಗೆ ಖರೀದಿಸುವ ಮೂಲಕ, ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿತು. ಆದರೂ, ತಂಡದ ಆಟಗಾರರ ಪಟ್ಟಿಯಲ್ಲಿ ಅಯ್ಯರ್‌ಗೆ ಸ್ಥಿರವಾದ ಸ್ಥಾನ ನೀಡಲಾಗಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿನ ಎಲ್ಲ ಸ್ಥಾನಗಳಲ್ಲಿಯೂ ಅವರು ಬ್ಯಾಟಿಂಗ್ ಮಾಡಿದ್ದರು. ಒಟ್ಟು 11 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸುವ ಮೂಲಕ ನಿರಾಶಾದಾಯಕ ಪ್ರದರ್ಶನ ನೀಡಿದ್ದರು.
ಹರ್ಷದೀಪ್ ಸಿಂಗ್: 18 ಕೋಟಿ ರೂ.
ಭಾರತದ ಅತ್ಯಂತ ಯಶಸ್ವಿ ಟಿ20ಐ ಬೌಲರ್ ಹರ್ಷದೀಪ್ ಸಿಂಗ್ ಅವರನ್ನು 2025ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು 18 ಕೋಟಿ ರೂ,ಗಳಿಗೆ ಖರೀದಿಸಿತು. ಎಡಗೈ ವೇಗಿ ಬೌಲರ್ ಆಗಿರುವ ಹರ್ಷದೀಪ್ ಅವರು ತಂಡ ಭರವಸೆಯನ್ನು ನಿರಾಶೆಗೊಳಿಸದೆ ಪ್ರದರ್ಶನ ನೀಡಿದರು. ಕಳೆದ ಟೂರ್ನಿಯಲ್ಲಿ 21 ವಿಕೆಟ್‌ಗಳನ್ನು ಪಡೆದರು. ಮಾತ್ರವಲ್ಲದೆ, ಟೂರ್ನಿಯ ಉದ್ದಕ್ಕೂ ಓವರ್‌ಗೆ ಸರಾಸರಿ 9 ರನ್‌ಗಳಿಗಿಂತ ಕಡಿಮೆ ಎಕಾನಮಿ ಕಾಯ್ದುಕೊಂಡರು.
ಯುಜ್ವೇಂದ್ರ ಚಾಹಲ್: 18 ಕೋಟಿ ರೂ.
ಐಪಿಎಲ್‌ನಲ್ಲಿ ಯುಜ್ವೇಂದ್ರ ಚಾಹಲ್ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಬೌಲರ್. ಭಾರತೀಯ ತಂಡದ ಲೆಗ್ ಸ್ಪಿನ್ನರ್ ಆಗಿರುವ ಚಾಹಲ್‌ರನ್ನು ಪಂಜಾಬ್ ಕಿಂಗ್ಸ್ ತಂಡವು 18 ಕೋಟಿ ರೂ.ಗಳಿಗೆ ಖರೀದಿಸಿತು. ತಮ್ಮ ಮೇಲಿನ ತಂಡದ ಹೂಡಿಕೆ ಮತ್ತು ಭರವಸೆಯನ್ನು ಉಳಿಸಿಕೊಂಡು ಚಾಹಲ್ ಪ್ರದರ್ಶನ ನೀಡಿದರು. 14 ಪಂದ್ಯಗಳಲ್ಲಿ, 16 ವಿಕೆಟ್‌ಗಳನ್ನು ಪಡೆದರು.




