ಪರ್ಷಿಯನ್ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕಡಲ ಭದ್ರತೆಯ ಕಾಳಜಿಗಳ ನಡುವೆಯೇ, ಜಾಗತಿಕ ಹಡಗು ಸಂಚಾರದ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಯಕಟ್ಟಿನ ಜಲಮಾರ್ಗದ ಮೂಲಕ ಭಾರತದ ಪ್ರವೇಶವನ್ನು ಖಚಿತಪಡಿಸುವ ಬೆಳವಣಿಗೆಗಳು ಶೀಘ್ರದಲ್ಲೇ ಹೊರಹೊಮ್ಮಲಿವೆ ಎಂದರು. ಹಾರ್ಮುಜ್ ಜಲಸಂಧಿಯ ಮೂಲಕ ಭಾರತವು ಸುರಕ್ಷಿತ ಮಾರ್ಗವನ್ನು ಪಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಫತಾಲಿ, “ಹೌದು, ಏಕೆಂದರೆ ಭಾರತ ನಮ್ಮ ಮಿತ್ರ ರಾಷ್ಟ್ರ. ಇನ್ನೆರಡು ಅಥವಾ ಮೂರು ಗಂಟೆಗಳಲ್ಲಿ ನೀವೇ ಅದನ್ನು ನೋಡಲಿದ್ದೀರಿ” ಎಂದು ಪ್ರತಿಕ್ರಿಯಿಸಿದರು.
ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷಗಳ ಕಾರಣದಿಂದಾಗಿ ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಮಾರುಕಟ್ಟೆಗಳಿಗೆ ಬೆಸೆಯುವ ಈ ಕಿರಿದಾದ ಜಲಮಾರ್ಗದ ಹಡಗು ಸಂಚಾರವನ್ನು ತೀವ್ರವಾಗಿ ಗಮನಿಸಲಾಗುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
’ಭಾರತ–ಇರಾನ್ ಸಮಾನ ಹಿತಾಸಕ್ತಿ ಹೊಂದಿವೆ’
ಭಾರತವು ಈ ಮಾರ್ಗದಲ್ಲಿ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗಲಿದೆಯೇ ಎಂಬ ನೇರ ಪ್ರಶ್ನೆಗೆ, ಸಕಾರಾತ್ಮಕ ಬೆಳವಣಿಗೆಗಳ ನಿರೀಕ್ಷೆಯಿದೆ ಎಂದು ರಾಯಭಾರಿ ಸೂಚಿಸಿದರು. “ಹೌದು, ಭವಿಷ್ಯದಲ್ಲಿ ನೀವು ಅದನ್ನು ಕಾಣಬಹುದು. ಮುಂದಿನ ಎರಡು–ಮೂರು ಗಂಟೆಗಳ ನಂತರ ಈ ಬಗ್ಗೆ ತಿಳಿಯಲಿದೆ ಎಂದು ನಾನು ಭಾವಿಸುತ್ತೇನೆ” ಎಂದರು.
ಭಾರತವನ್ನು ಇರಾನ್‌ನ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿದ ಫತಾಲಿ, ಈ ವಲಯದಲ್ಲಿ ಉಭಯ ದೇಶಗಳ ನಡುವಿನ ಸಮಾನ ಹಿತಾಸಕ್ತಿಗಳನ್ನು ಬೊಟ್ಟು ಮಾಡಿದರು. “ಈ ಪ್ರದೇಶದಲ್ಲಿ ಇರಾನ್ ಮತ್ತು ಭಾರತವು ಸಮಾನ ಹಿತಾಸಕ್ತಿಗಳನ್ನು ಹಂಚಿಕೊಂಡಿವೆ ಎಂದು ನಾವು ನಂಬುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ನೆತನ್ಯಾಹು ಬದುಕಿದ್ದಾರಾ? ಇರಾನ್ ರಣಕಹಳೆಗೆ ತತ್ತರಿಸಿದ ಇಸ್ರೇಲ್
ದೀರ್ಘಕಾಲದ ಬಾಂಧವ್ಯದ ಉಲ್ಲೇಖ
ನವದೆಹಲಿ ಮತ್ತು ಟೆಹ್ರಾನ್ ನಡುವಿನ ವಿಶಾಲ ಸಂಬಂಧದ ಬಗ್ಗೆಯೂ ಮಾತನಾಡಿದ ರಾಯಭಾರಿ, ಇದು ಸ್ನೇಹ ಮತ್ತು ಸಹಕಾರದ ತಳಹದಿಯ ಮೇಲೆ ನಿರ್ಮಿತವಾಗಿದೆ ಎಂದು ವಿವರಿಸಿದರು. “ಇರಾನ್ ಮತ್ತು ಭಾರತ ಮಿತ್ರ ರಾಷ್ಟ್ರಗಳೆಂಬುದು ನಮ್ಮ ನಂಬಿಕೆ. ನಮ್ಮದು ಸಮಾನ ಹಿತಾಸಕ್ತಿ, ಸಮಾನ ನಂಬಿಕೆ” ಎಂದರು.
ಕಷ್ಟದ ಸಮಯದಲ್ಲಿ ಇರಾನ್‌ಗೆ ಬೆಂಬಲ ನೀಡಿದ ಭಾರತದ ಪಾತ್ರವನ್ನೂ ಅವರು ಸ್ಮರಿಸಿದರು. “ಭಾರತದಲ್ಲಿನ ರಾಯಭಾರಿಯಾಗಿ ನಾನು ಹೇಳುವುದೇನೆಂದರೆ, ಯುದ್ಧದ ನಂತರದ ಈ ಕಠಿಣ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ ನಮಗೆ ವಿವಿಧ ಕ್ಷೇತ್ರಗಳಲ್ಲಿ ಸಹಾಯ ಮಾಡಿದೆ” ಎಂದು ಫತಾಲಿ ಕೃತಜ್ಞತೆ ಸಲ್ಲಿಸಿದರು.
ಪ್ರಮುಖ ಜಾಗತಿಕ ಇಂಧನ ಕಾರಿಡಾರ್ ‘ಹಾರ್ಮುಜ್ ಜಲಸಂಧಿ’
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಕಡಲ ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಗಮನಾರ್ಹ ಪಾಲು ಇದರ ಮೂಲಕವೇ ಸಾಗುತ್ತದೆ.
ಈ ಜಲಮಾರ್ಗದಲ್ಲಿನ ಅಡೆತಡೆಗಳು ಈಗಾಗಲೇ ಇಂಧನ ಮಾರುಕಟ್ಟೆಗಳು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿವೆ. ಈ ಪ್ರದೇಶದ ಮೂಲಕವೇ ತನ್ನ ಕಚ್ಚಾ ತೈಲದ ಬಹುಪಾಲು ಆಮದು ಮಾಡಿಕೊಳ್ಳುವ ಭಾರತಕ್ಕೂ ಇದು ಅನ್ವಯಿಸುತ್ತದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ವಿವಿಧ ಸರ್ಕಾರಗಳು ಮತ್ತು ಹಡಗು ಕಂಪನಿಗಳು ಜಲಸಂಧಿಯ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೊತ್ತಿನಲ್ಲೇ, ಭಾರತಕ್ಕೆ ಸುರಕ್ಷಿತ ಮಾರ್ಗ ಕಲ್ಪಿಸುವ ಕುರಿತಾದ ಫತಾಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.





