ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಲೇಖಕಿ ಅರುಂಧತಿ ರಾಯ್ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ತಮ್ಮ ʼಮದರ್ ಮೇರಿ ಕಮ್ಸ್ ಟು ಮಿʼ ಪುಸ್ತಕದ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅರುಂಧತಿ, ಜಾಗತಿಕ ವಿದ್ಯಮಾನಗಳ ಕುರಿತ ಭಾರತದ ದಿವ್ಯ ಮೌನ ಹಾಗೂ ಅಮೆರಿಕ, ಇಸ್ರೇಲ್ ರಾಷ್ಟ್ರಗಳ ಸಾಮ್ರಾಜ್ಯಶಾಹಿ ನೀತಿ ಕುರಿತಾಗಿ ತೀವ್ರ ಕಳವಳ ವ್ಯಕ್ತಪಡಿಸಿದರು. ಅವರ ಭಾಷಣದ ಯಥಾವತ್ ಅನುವಾದ ಇಲ್ಲಿದೆ.
“ಅರಿವಿದೆ ನಾವಿಂದು ಮದರ್ ಮೇರಿ ಕಮ್ಸ್ ಟು ಮಿ ಕುರಿತು ಮಾತನಾಡಲು ಸೇರಿದ್ದೇವೆ. ಆದರೆ, ಯುದ್ಧ ಜ್ವಾಲೆಯಲ್ಲಿ ನಲುಗುತ್ತಿರುವ ಟೆಹ್ರಾನ್, ಇಸ್ಫಹಾನ್, ಬೆರೂಟ್ ನಂತಹ ಸುಂದರ ನಗರಿಗಳ ಕುರಿತು ಮಾತನಾಡದೆ ಮುಂದುವರಿಯುವು ಅಸಾಧ್ಯ. ನನ್ನ ಮದರ್ ಮೇರಿಯ ಪ್ರಾಮಾಣಿಕ ಚೈತನ್ಯ ಹಾಗೂ ವಿನಯಹೀನ ಮನೋಭಾವಕ್ಕೆ ಅನುಗುಣವಾಗಿ ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಒಂದುಗೂಡಿ ನಡೆಸಿದ ಹೃದಯವಿಹೀನ ಕಾನೂನುಬಾಹಿರ ದಾಳಿಯ ಕುರಿತು ಮಾತನಾಡಲು ಈ ವೇದಿಕೆಯನ್ನು ನಾನು ಬಳಸುತ್ತಿದ್ದೇನೆ. ‘ಅಮೆರಿಕ ಮತ್ತು ಇಸ್ರೇಲ್ ಗಾಜಾದಲ್ಲಿ ಕೈಗೊಂಡ ನರಮೇಧವನ್ನು ಮತ್ತೆ ಮುಂದುವರೆಸುತ್ತಿದೆ. ಈಗಲೂ ಈ ಹಿಂದೆ ನರಬಲಿಗೆ ಆಯ್ದ ಕಣವನ್ನೇ ಆರಿಸಿಕೊಂಡಿದೆʼ, ಸಾವಿರಾರು ಸಂಖ್ಯೆಯಲ್ಲಿ ಮಹಿಳೆ ಮಕ್ಕಳ ಹತ್ಯೆ ನಡೆಸುತ್ತಿರುವ ಈ ದೇಶಗಳು ಆಸ್ಪತ್ರೆಗಳು, ಜನನಿಬಿಡ ನಗರಗಳ ಮೇಲೆ ಬಾಂಬ್ ದಾಳಿ ಮಾಡುತ್ತಿರುವುದರ ಜೊತೆಗೆ ತಾವೇ ಸಂತ್ರಸ್ತರು ಎನ್ನುವ ನಾಟಕ ಮಾಡುತ್ತಿವೆ.
ಆದರೆ ಇರಾನ್ ಗಾಜಾವಲ್ಲ; ಈಗ ಶುರುವಾಗಿರುವ ಯುದ್ಧರಂಗ ಇಡೀ ಜಗತ್ತನ್ನೇ ಸಮಾಪ್ತಿ ಮಾಡಬಲ್ಲದು. ನಾವು ಪರಮಾಣು ತರುವ ಆಪತ್ತು ಮತ್ತು ಆರ್ಥಿಕ ಕುಸಿತ ಉಂಟು ಮಾಡಬಹುದಾದ ದುರಂತದ ಅಂಚಿನಲ್ಲಿದ್ದೇವೆ. ಹಿರೊಶಿಮ ಮತ್ತು ನಾಗಸಾಕಿಯ ಮೇಲೆ ಪರಮಾಣು ದಾಳಿ ನಡೆಸಿದ ರಾಷ್ಟ್ರಗಳೆ ಈಗ ಜಗತ್ತಿನ ಅತ್ಯಂತ ಹಳೆಯ ನಾಗರಿಕತೆಯನ್ನು ಬಾಂಬುಗಳಿಂದ ಬಲಿ ಪಡೆಯಲಿದೆ. ಪ್ರಸ್ತುತ ಘಟನೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಲು ಬೇರೆ ಸಂದರ್ಭಗಳು ಬರಬಹುದು.
ನಾನಿಲ್ಲಿ ಇರಾನ್ ಪರವಾಗಿ ನಿಸ್ಸಂದೇಹವಾಗಿ ನಿಲ್ಲುತ್ತೇನೆ ಎಂದಷ್ಟೇ ಹೇಳಬಲ್ಲೆ. ಅಮೆರಿಕ, ಇಸ್ರೇಲ್ ಜೊತೆಗೆ ಭಾರತವನ್ನೂ ಒಳಗೊಂಡು ಯಾವ ರಾಷ್ಟ್ರವೇ ಆಗಲಿ ಬದಲಾಗುವುದು, ಸುಳ್ಳಾಡುವ, ಮೋಸ ಮಾಡುವ, ಲೋಭಕೋರತನದಿಂದ ಸಂಪನ್ಮೂಲಗಳನ್ನು ದೋಚುವ, ಬಾಂಬ್ ದಾಳಿ ಮಾಡುವ ಸಾಮ್ರಾಜ್ಯಶಾಹಿ ಶಕ್ತಿ ಹಾಗೂ ಇಡೀ ಜಗತ್ತನ್ನು ತನ್ನ ಅಧೀನದಲ್ಲಿರಿಸುವ ಹಂಬಲ ಹೊಂದಿರುವ ಮಿತ್ರ ರಾಷ್ಟ್ರಗಳಿಂದಲ್ಲ, ಬದಲಿಗೆ ಅಲ್ಲಿ ನೆಲೆಸಿರುವ ಜನರಿಂದ ಬದಲಾಗುತ್ತದೆ. ಇಂತಹ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಇರಾನ್ ಸಿಡಿದು ನಿಂತಿದೆ. ಆದರೆ ಭಾರತ ಅವರ ಪರ ನಿಂತಿದೆ, ನಮ್ಮ ಸರ್ಕಾರ ಈ ಮಟ್ಟಿಗೆ ನಿರ್ದಯಿಯಾಗಿ ಬೆನ್ನುಮೂಳೆ ಮುರಿದಂತಾಗಿರುವುದು ವಿಷಾದದ ಸಂಗತಿ.
ಬಲು ಹಿಂದೆ ನಮ್ಮದು ಬಡ ರಾಷ್ಟ್ರವಾಗಿತ್ತು. ಆದರೆ ಘನತೆಯನ್ನು ಉಳಿಸಿಕೊಂಡಿದ್ದೆವು. ಇಂದಿನ ದಿನಗಳಲ್ಲಿ ಭಾರತ ಕೇವಲ ದ್ವೇಷವನ್ನೇ ಸೇವಿಸುತ್ತಾ ಊಟದ ಬದಲು ಸುಳ್ಳು ವಂಚನೆಯ ವಿಷವ ನುಂಗಿ ಬದುಕುವ ಅನಾಗರಿಕ ಬಡ ನಿರುದ್ಯೋಗಿ ಜನರನ್ನು ಹೊಂದಿರುವ ಘನತೆಯ ಕೊಂದಿರುವ ಶ್ರೀಮಂತ ದೇಶವಾಗಿದೆ. ಹೆಮ್ಮೆ, ಘನತೆ, ಧೈರ್ಯ ಎಲ್ಲವನ್ನೂ ಕಳೆದ ನಾವು ಈಗ ಕೇವಲ ಸಿನಿಮಾದಲ್ಲಷ್ಟೆ ಈ ಅಂಶಗಳನ್ನು ತೋರ್ಪಡಿಸುತ್ತೇವೆ.
ಇದನ್ನೂ ಓದಿ Pink Tax : ಅಸಮಾನತೆಗೆ ಬಳಿದ ಬಣ್ಣದ ಲೇಪ
ಅಮೆರಿಕ ಇತರ ದೇಶದ ಪ್ರಧಾನಿಯನ್ನು ಅಪಹರಿಸಿ ಕೊಂಡೊಯ್ದಾಗ ಕೊಂಚವೂ ಪ್ರಶ್ನೆ ಮಾಡದ, ಪ್ರತಿಕ್ರಿಯಿಸದ ಸರ್ಕಾರವನ್ನು ಚುನಾಯಿಸಿದ ನಾವು, ನಮಗೇ ಇಂತಹ ಪರಿಸ್ಥಿತಿ ಎದುರಾಗಲಿ ಎಂದು ಬಯಸುತ್ತೇವೆಯೆ? ನಮ್ಮ ಪ್ರಧಾನಿ ಇಸ್ರೇಲ್ ಭೇಟಿ ನೀಡಿ ನೆತನ್ಯಾಹು ಜೊತೆಗೆ ಮಾತುಕತೆ ನಡೆಸಿ ಅಪ್ಪಿಕೊಂಡ ಬೆನ್ನಲ್ಲೆ ಇಸ್ರೇಲ್ ಇರಾನಿನ ಮೇಲೆ ಯುದ್ಧ ಸಾರಿದರ ಹಿಂದಿನ ಮರ್ಮವೇನು? ನಮ್ಮ ಸರ್ಕಾರವು ಅಮೆರಿಕದೊಂದಿಗೆ ಬಹುದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ಭಾರತದ ರೈತರು ಹಾಗೂ ಜವಳಿ ಉದ್ದಿಮೆದಾರರನ್ನು ಅಕ್ಷರಶಃ ನೀರಿನಲ್ಲಿ ಮುಳುಗಿಸಿದೆ. ರಷ್ಯಾದೊಂದಿಗೆ ತೈಲ ಖರೀದಿಸಲು ಅಮೆರಿಕ ಒಪ್ಪಿಗೆ ನೀಡಿರುವುದರ ಅರ್ಥವೇನು? ನಾವು ಇನ್ನು ಯಾವೆಲ್ಲಾ ವಿಷಯಗಳಿಗೆ ಅಮೆರಿಕದ ಒಪ್ಪಿಗೆ ಪಡೆಯಬೇಕು ಹೀಗೆ ಮುಂದುವರೆದರೆ, ನಮ್ಮ ನಮ್ಮ ತಾಯಂದಿರನ್ನು ಭೇಟಿಯಾಗಲು, ಸ್ನಾನ ಮಾಡಲು, ಕೆಲಸಕ್ಕೆ ಒಂದು ದಿನದ ರಜೆ ಹಾಕಲು ಕೂಡ ಅನುಮತಿ ಪಡೆಯಬೇಕೆ?
ಇದನ್ನೂ ಓದಿ ನೇಪಾಳಕ್ಕೆ ಯುವ ಸಾರಥ್ಯ; ಜೆನ್ ಝೀಗಳ ಫೇವರಿಟ್ ಬಾಲೇಂದ್ರ ಶಾ ಅತಿ ಕಿರಿಯ ಪ್ರಧಾನಿ
ಅಮೆರಿಕ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಅವಮಾನಿಸುವ, ಟೀಕಿಸುವ ಕೆಲಸ ಮಾಡುತ್ತಿದ್ದರೆ ನಮ್ಮ ಪ್ರಧಾನಿ ತಮ್ಮ ಲೋಕಾರೂಢಿ ನಿರ್ಲಜ್ಜ ನಗು ಬೀರುತ್ತಾ ಆಲಂಗಿಸುತ್ತಾ ತಿರುಗುತ್ತಿದ್ದಾರೆ. ಗಾಜಾದಲ್ಲಿ ನರಮೇಧ ಉತ್ತುಂಗಲ್ಲಿದ್ದಾಗ, ಭಾರತ ಸರ್ಕಾರವು ಇಸ್ರೇಲಿನಿಂದ ಪ್ಯಾಲೆಸ್ತೀನಿ ಕಾರ್ಮಿಕರನ್ನು ಹೊರದಬ್ಬಿದಾಗ ಅವರ ಬದಲಿಗೆ ಭಾರತದ ಸಾವಿರಾರು ಬಡ ಕಾರ್ಮಿಕರನ್ನು ಅಲ್ಲಿಗೆ ಕಳುಹಿಸಿತು. ಈಗ ಇಸ್ರೇಲಿಗರು ಆಶ್ರಯ ಪಡೆಯುತ್ತಿರುವ ಬಂಕರ್‌ಗಳಲ್ಲಿ ನಮ್ಮ ಕಾರ್ಮಿಕರನ್ನು ಸೇರಿಸಿಕೊಳ್ಳುತ್ತಿಲ್ಲ ಎಂಬ ವರದಿ ಹರಿದಾಡುತ್ತಿದ್ದು, ಈ ಅಸಹಾಯಕ ಅಮಾನವೀಯ ಕೂಪಕ್ಕೆ ನಮ್ಮನ್ನು ತಳ್ಳಿದವರಾರು?
ನಮ್ಮಲ್ಲಿ ಹಲವರಿಗೆ ಚೀನಾದ ಕಮ್ಯುನಿಸ್ಟ್ ಗಾದೆಯೊಂದು ನೆನಪಿರಬಹುದು; ʼಸಾಮ್ರಾಜ್ಯಶಾಹಿಯ ಓಡುವ ನಾಯಿʼ ಎಂಬ ಗಾದೆ ಬಹುಪಾಲು ನಮ್ಮ ಇಂದಿನ ವಾಸ್ತವ ಪರಿಸ್ಥಿತಿಯನ್ನು ವಿಷದ ಪಡಿಸುವಂತಿದೆ. ನಮ್ಮ ಸಿನಿಮಾ ಹೀರೊಗಳು ಹಿಂಸೆಯನ್ನು ವಿಜೃಂಭಿಸುವ, ನಮ್ಮಲ್ಲಿ ರಕ್ತಪಿಪಾಸುತನ ಪೋಷಿಸುವ ಸಿನಿಮಾಗಳ ಮೂಲಕ ಅವರ ಮಲ ತುಂಬಿದ ಮಿದುಳಿನಿಂದ ವಿಷ ಬಿತ್ತುವ ಕೆಲಸದ ಹೊರತು ಇನ್ನೇನನ್ನು ಮಾಡುತ್ತಿಲ್ಲ.





