ತನ್ನನ್ನು ತಾನೇ ಆಧ್ಯಾತ್ಮಿಕ ಗುರು, ದೇವಮಾನವ ಎಂದು ಕರೆದುಕೊಂಡಿರುವ ಜಗ್ಗಿ ವಾಸುದೇವ ಉರುಫ್ ಸದ್ಗುರು ಒಬ್ಬ ಫ್ರಾಡ್ ಎಂದು ಹೇಳಲಾಗುತ್ತಿದೆ. ಅದಕ್ಕೆ ನಾನಾ ಕಾರಣಗಳೂ ಇವೆ. ವಿಜ್ಞಾನ-ತಂತ್ರಜ್ಞಾನದ ಇಂದಿನ ಆಧುನಿಕ ಕಾಲದಲ್ಲಿಯೂ ವಿದ್ಯಾವಂತ ಜನರು ಮತ್ತು ಎನ್‌ಆರ್‌ಐ ಅನುಯಾಯಿಗಳನ್ನ ಹೇರಳವಾಗಿ ಹೊಂದಿರುವ ಹೊಸ ಯುಗದ ಸ್ವಯಂ ಘೋಷಿತ ದೇವಮಾನವ ಈ ಸದ್ಗುರು. ಇವರ ತಾರ್ಕಿಕ ಕೌಶಲ್ಯಗಳು ದೇಶಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನನ್ನು ಹೋಲುತ್ತದೆ ಎಂದರೆ ತಪ್ಪಾಗಲಾರದು. ನಿತ್ಯಾನಂದನ ಆಟಗಳು ಜನರಿಗೆ ಗೊತ್ತಾದ ಬಳಿಕ ನೆಟ್ಟಿಗರು ನಿತ್ಯಾನಂದನನ್ನು ನೇರವಾಗಿ ಗೇಲಿ ಮಾಡುತ್ತಿದ್ದಾರೆ. ಆದರೆ, ಜಗ್ಗಿ ವಾಸುದೇವ ತನ್ನ ಅರೆಬೆಂದ ಜ್ಞಾನದಿಂದ ಇಂಗ್ಲಿಷ್ ಭಾಷೆಯಲ್ಲಿ ಸಕ್ಕರೆ ಲೇಪಿತ ಹುಸಿ ವಿಜ್ಞಾನ ಮತ್ತು ಮೂಡನಂಬಿಕೆಗಳನ್ನ ಜನರ ತಲೆಗೆ ತುಂಬಿ ‘ಬ್ರೈನ್ ವಾಶ್’ ಮಾಡಿ ಅವರನ್ನ ಮೌಡ್ಯಕ್ಕೆ ದೂಡುತ್ತಿದ್ದಾರೆ. ಹೀಗಾಗಿ, ಬಹುತೇಕ ಜನರು ಈತನನ್ನು ನಂಬುತ್ತಾರೆ. ಆದಾಗ್ಯೂ, ಈತನ ಬಂಡವಾಳವೂ ಈಗ ಜನರ ಮುಂದೆ ಬಟಾಬಯಲಾಗುತ್ತಿದೆ.
ಸದ್ಗುರು ವಿರುದ್ಧದ ನಾನಾ ಪ್ರಕರಣಗಳು ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಅದರಲ್ಲೊಂದು ಪ್ರಕರಣದ ವಿಚಾರಣೆ ಸೋಮವಾರ ನಡೆದಿದೆ. ಆ ಪ್ರಕರಣ, ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಎಸ್.ಕಾಮರಾಜ್ (69) ಅವರು ಹೈಕೋರ್ಟ್‌ನಲ್ಲಿ ಜಗ್ಗಿ ವಾಸುದೇವ್ ವಿರುದ್ಧ ಹೇಬಿಯಸ್ ಕಾರ್ಪಸ್ ಅಡಿಯಲ್ಲಿ ಮೊಕದ್ದಮೆ ದಾಖಲಿಸಿರುವುದು. “ತಮ್ಮ 42 ಮತ್ತು 39ರ ವಯಸ್ಸಿನ ಇಬ್ಬರು ವಿದ್ಯಾವಂತ ಹೆಣ್ಣುಮಕ್ಕಳನ್ನು ಕಾಯಮ್ಮಾಗಿ ಇಶಾ ಯೋಗ ಸೆಂಟರ್‌ನಲ್ಲಿ ನೆಲೆಸುವಂತೆ ಅವರ ಬ್ರೈನ್ ವಾಶ್ ಮಾಡಲಾಗಿದೆ. ಅಲ್ಲದೆ, ಅವರಿಗೆ ಮೈಮನಗಳನ್ನು ಮರೆಸುವಂತಹ ಯಾವುದೋ ಬಗೆಯ ಆಹಾರ ಮತ್ತು ಔಷಧಿಯನ್ನು ನೀಡಲಾಗುತ್ತಿದೆ” ಎಂದು ಕಾಮರಾಜ್ ಆರೋಪಿಸಿದ್ದಾರೆ.
ಅವರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಹ್ಮಣ್ಯಂ ಮತ್ತು ವಿ.ಶಿವಗಾನಂ ದ್ವೀಸದಸ್ಯ ಪೀಠ ನಡೆಸಿದೆ. “ತನ್ನ ಮಗಳಿಗೆ ಮದುವೆ ಮಾಡಿ, ಆಕೆಗೆ ಸ್ಥಿರವಾದ ಸುಖಮಯ ಬದುಕನ್ನು ಕಟ್ಟಿಕೊಟ್ಟಿರುವ ಜಗ್ಗಿ ವಾಸುದೇವ್ ಅಲಿಯಾಸ್ ಸದ್ಗುರು, ಇತರ ಯುವತಿಯರಿಗೆ ತಮ್ಮ ತಲೆ ಬೋಳಿಸಿಕೊಂಡು, ಲೌಕಿಕ ಬದುಕನ್ನು ತ್ಯಜಿಸಿ ಸನ್ಯಾಸಿನಿಯಂತೆ ಬಾಳಬೇಕೆಂದು ಹುರಿದುಂಬಿಸುವುದು ಯಾಕೆ?” ಎಂದು ಪ್ರಶ್ನೆ ಮಾಡಿದೆ.
ವಿಚಾರಣೆ ಸಮಯದಲ್ಲಿ ಇಬ್ಬರೂ ಹೆಣ್ಣುಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ, ಇಬ್ಬರು ಹೆಣ್ಣುಮಕ್ಕಳು ‘ತಮ್ಮ ಸ್ವಂತ ಇಚ್ಛೆಯ ಪ್ರಕಾರ ಕೊಯಮತ್ತೂರಿನ ವೆಳ್ಳಿಯನ್ ಗಿರಿ ಬೆಟ್ಟದ ತಪ್ಪಲಿನ ಯೋಗ ಕೇಂದ್ರದಲ್ಲಿ ನೆಲೆಸಿರುವುದಾಗಿ” ಹೇಳಿಕೆ ನೀಡಿದ್ದಾರೆ.
ಈ ವೇಳೆ, ನ್ಯಾಯಮೂರ್ತಿಗಳು ಹೆಣ್ಣುಮಕ್ಕಳ ಜತೆಗೆ ಕುಶಲೋಪರಿ ನಡೆಸಿ, ಈ ವಿಷಯದ ಬಗೆಗೆ ಆಳವಾಗಿ ಕೆದಕಬಯಸಿದರು. ಆದರೆ, ಇಶಾ ಪೌಂಡೇಶನ್ ಪರ ವಕೀಲ್ ಕೆ.ರಾಜೇಂದ್ರಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಈ ಪ್ರಕರಣವನ್ನು ಹಿಗ್ಗಿಸುವಂತಿಲ್ಲ. ವಯಸ್ಕರಿಗೆ ತಮ್ಮ ದಾರಿಯನ್ನು ತಾವು ಆರಿಸಿಕೊಳ್ಳುವ ಸ್ವಾತಂತ್ರ್ಯ ಇದೆ. ಹೀಗಿರುವಾಗ ನ್ಯಾಯಾಲಯದ ಸಂಶಯ ತಮಗೆ ಅರ್ಥವಾಗುತ್ತಿಲ್ಲ” ಎಂದು ನ್ಯಾಯಮೂರ್ತಿಗಳನ್ನು ತಡೆಯಲು ಪ್ರಯತ್ನಿಸಿದರು.
ಆದರೆ, ಅದಕ್ಕೆ ಸೊಪ್ಪುಹಾಕದ ನ್ಯಾಯಮೂರ್ತಿಗಳು, “ಸಂಪೂರ್ಣ ನ್ಯಾಯವನ್ನು ಒದಗಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಹಾಗಾಗಿ, ಸಂವಿಧಾನದ 226ನೆಯ ವಿಧಿಯ ಪ್ರಕಾರ ವಿಷಯದ ಆಳಕ್ಕಿಳಿದು ನ್ಯಾಯ ಒದಗಿಸಬೇಕಿದೆ. ನೀವು ನಿರ್ದಿಷ್ಟ ಕಕ್ಷಿದಾರರನ್ನು (ಇಶಾ ಫೌಂಡೇಶನ್) ಪ್ರತಿನಿಧಿಸಿ ವಾದಿಸುತ್ತಿದ್ದೀರಿ. ಹೀಗಾಗಿ ನಿಮಗೆ ಅರ್ಥವಾಗುವುದಿಲ್ಲ. ಆದರೆ, ಈ ನ್ಯಾಯಲಯ ಯಾರ ಪರವಾಗಿಯೂ ಇಲ್ಲ, ಯಾರದೇ ವಿರೋಧವಾಗಿಯೂ ಇಲ್ಲ. ಕಕ್ಷಿದಾರರಿಗೆ ನ್ಯಾಯ ಸಲ್ಲಿಸುವುದಷ್ಟೇ ನಮ್ಮ ಕರ್ತವ್ಯ” ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ನ್ಯಾಯಮೂರ್ತಿಗಳು ಇಬ್ಬರು ಹೆಣ್ಣುಮಕ್ಕಳಿಗೆ ಪ್ರಶ್ನೆಯೊಂದನ್ನ ಕೇಳಿದೆ. “ನೀವು ಆಧ್ಯಾತ್ಮದ ಹಾದಿಯಲ್ಲಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ. ಆದರೆ, ನಿಮಗೆ ಜನ್ಮ ಕೊಟ್ಟವರನ್ನು ನಿರ್ಲಕ್ಷ್ಯ ಮಾಡುವುದು ಪಾಪ ಎಂದು ನಿಮಗೆ ಅನಿಸುವುದಿಲ್ಲವೇ? ನಿಮ್ಮ ಪೋಷಕರ ಬಗೆಗೆ ನಿಮ್ಮಲ್ಲಿ ಅದೆಷ್ಟೊಂದು ದ್ವೇಷವಿದೆ ಎಂಬುದು ನಿಮ್ಮ ಮಾತಿನಲ್ಲಿ ಎದ್ದು ಕಾಣುತ್ತಿದೆ” ಎಂದಿದ್ದಾರೆ.
ಅಲ್ಲದೆ, ವಿಚಾರಣೆಯ ವೇಳೆ, “ಇಶಾ ಫೌಂಡೇಶನ್ ವಿರುದ್ಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳಿವೆ. ಅಲ್ಲಿ ಕೆಲಸ ಮಾಡುವ ವೈದ್ಯನೊಬ್ಬನ ಮೇಲೆ ಇತ್ತೀಚೆಗೆ ಪೋಕ್ಸೋ ಕೇಸ್ ಹಾಕಲಾಗಿದೆ” ಎಂದು ಅರ್ಜಿದಾರರ ಪರ ವಕೀಲ ಎಂ.ಪುರುಷೋತ್ತಮನ್ ಅವರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಹೌದು, ವಕೀಲ ಪುರುಷೋತ್ತಮನ್ ಹೇಳಿದಂತೆ ಇಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಈತ ಹಲವು ಜನರಿಗೆ ಮೋಸ ಮಾಡಿದ ಆರೋಪಗಳು ಕೂಡ ಇವೆ. ಹೀಗಾಗಿ, ಈ ವಿಷಯದ ಕುರಿತು ಮತ್ತಷ್ಟು ಗಮನ ಹರಿಸುವುದು ಅಗತ್ಯವಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿವರವನ್ನು ಸಲ್ಲಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನವನ್ನೂ ನೀಡಿದೆ.
ಅಂದಹಾಗೆ, ಈ ಜಗ್ಗಿ ವಾಸುದೇವ್ ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದವರು. ಈತ, ಸುಮಾರು ನಾಲ್ಕು ನೂರು ವರ್ಷಗಳಷ್ಟು ಹಿಂದಿನ ತಮ್ಮ ಜನ್ಮಗಳ ಅರಿವನ್ನ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ, ಅರುಂಧತಿ ಸುಬ್ರಮಣ್ಯಂ ಅವರು ಬರೆದಿರುವ ಸದ್ಗುರು ಜೀವನಚರಿತ್ರೆ ‘More than a life- Sadhguruʼ ಎಂಬ ಪುಸ್ತಕದಲ್ಲಿ ಹೇಳಲಾಗಿದೆ. ಮರಣದ ಸಮಯದಲ್ಲಿ ಹೊಂದಿದ್ದ ಸಂಪೂರ್ಣ ಅರಿವಿನಿಂದಾಗಿ ಸದ್ಗುರು ತಮ್ಮ ಮುಂದಿನ ಜನ್ಮದಲ್ಲಿ ಆಧ್ಯಾತ್ಮಿಕ ಮಹತ್ವಾಕಾಂಕ್ಷಿಯಾಗಿ ಜನಿಸಿದ್ದಾರೆ ಎಂದೂ ಅರುಂಧತಿ ಬರೆದಿದ್ದಾರೆ.
ಆದರೆ, ಆತನ ಇತಿಹಾಸ ಬೇರೆಯದ್ದೇ ರೀತಿಯಲ್ಲಿದೆ. ಈ ಜಗ್ಗಿ ವಾಸುದೇವ್ ಅಲಿಯಾಸ್ ಜಗದೀಶ್ ವಾಸುದೇವ್ 1957ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದವರು. 1984ರಲ್ಲಿ ವಿಜಿಕುಮಾರಿ ಅವರನ್ನು ವಿವಾಹವಾಗಿದ್ದರು. ಇವರಿಗೆ ರಾಧೆ ಎಂಬ ಮಗಳೂ ಇದ್ದಾರೆ. ಆಕೆಗೆ 2014ರಲ್ಲಿ ಮದುವೆಯನ್ನೂ ಮಾಡಿಸಿದ್ದಾರೆ.
ಜಗ್ಗಿ ವಾಸುದೇವ್ ತಮ್ಮ ಜೀವನೋಪಾಯಕ್ಕಾಗಿ ಆರಂಭದಲ್ಲಿ ಮೈಸೂರಿನಲ್ಲಿ ಕೋಳಿ ಫಾರಂ ನಡೆಸುತ್ತಿದ್ದರು. ಈತ, ಸಿದ್ಧ ಸಮಾಧಿ ಯೋಗ ಕೇಂದ್ರದಲ್ಲಿ ಯೋಗದ ತರಬೇತಿ ಪಡೆಯುವವರೆಗೂ ಇವರಿಗೆ ಯೋಗದ ಬಗ್ಗೆ ಯಾವುದೇ ಗಂಧಗಾಳಿಯೂ ತಿಳಿದಿರಲಿಲ್ಲ. ಆ ನಂತರದಲ್ಲಿ 1986 ಮತ್ತು 1987ರ ನಡುವೆ ಹೈದರಾಬಾದ್, ಬೆಂಗಳೂರು ಮತ್ತು ಮೈಸೂರಿನಲ್ಲಿದ್ದ ಯೋಗ ಕಲಿಸುವ ಗುರುವಾಗಿ ರಿಷಿ ಪ್ರಭಾಕರ್ ಯೋಗ ಕೇಂದ್ರ ಸೇರಿದರು. ಆ ನಂತರ ಯೋಗ ಗುರು ರಿಷಿ ಪ್ರಭಾಕರ್ ಅವರು ವಾಸುದೇವ ಅವರನ್ನು ಯೋಗ ಕಲಿಸಿ ಕೊಡಲು ಕೊಯಮತ್ತೂರಿಗೆ ಕಳುಹಿಸಿದರು. ಆ ಬಳಿಕ, ವಾಸುದೇವ್ ತಮ್ಮ ಗುರುವಿಂದಲೇ ಬೇರ್ಪಟ್ಟು 1992ರಲ್ಲಿ ತಮ್ಮದೇ ಆದ ಇಶಾ ಫೌಂಡೇಶನ್ ಅನ್ನು ಸ್ಥಾಪನೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಲಡಾಖ್ ಜನರು ಹೋರಾಟ ಮಾಡುತ್ತಿರುವುದು ಯಾಕೆ? ಮೋದಿ ಸರ್ಕಾರ ವಾಂಗ್ಚುಕ್‌ರನ್ನು ಬಂಧಿಸಿದ್ದೇಕೆ?
ಇನ್ನು ಇಶಾ ಫೌಂಡೇಶನ್ ಆರಂಭವಾದಾಗಿನಿಂದ ಅಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂಬ ಆರೋಪ ಇದೆ. ಮೊದಲನೇಯದಾಗಿ, ಕೊಯಮತ್ತೂರಿನ ಇಕ್ಕರೈ ಬೊಲುವಾಂಪಟ್ಟಿಯಲ್ಲಿ ಇಶಾ ಫೌಂಡೇಶನ್ ತೆರೆದು ಜಗ್ಗಿ ವಾಸುದೇವ್, ಬೋಲುವಾಂಪಟ್ಟಿಯ ಬರೋಬ್ಬರಿ 44.30 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು 112 ಅಡಿ ಆದಿಯೋಗಿ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಇದೆ.
ಗಮನಾರ್ಹವಾಗಿ, 2012ರಲ್ಲಿ, ಕೊಯಮತ್ತೂರು ವಿಭಾಗದ ಅಂದಿನ ಜಿಲ್ಲಾ ಅರಣ್ಯಾಧಿಕಾರಿಗಳು, ಇಶಾ ಫೌಂಡೇಶನ್ ಕಾಂಪೌಂಡ್ ಗೋಡೆ ಮತ್ತು ಮುಂಭಾಗದ ಗೇಟ್ ಅನ್ನು ಅರಣ್ಯ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಥಳಗಳಿಗೆ ನಿರಂತರವಾಗಿ ಜನರು ಭೇಟಿ ನೀಡುವುದರಿಂದ ಆನೆಗಳ ಆವಾಸಸ್ಥಾನಕ್ಕೆ ತೊಂದರೆಯಾಗುತ್ತದೆ. ಇದನ್ನ ಗಮನಿಸಿ ಕಟ್ಟಡಗಳನ್ನು ನಿರ್ಮಿಸಲು ಫೌಂಡೇಶನ್‌ಗೆ HACA ಅನುಮೋದನೆ ನೀಡಲು ನಿರಾಕರಿಸಿದ್ದರು.
ಆ ಬಳಿಕ, ಇತ್ತೀಚೆಗೆ ಅವರನ್ನು ಕೊಯಮತ್ತೂರಿನಿಂದ ಒದ್ದು ಓಡಿಸಲಾಯಿತು. ಕೊಯಮತ್ತೂರಿನಲ್ಲಿ ಜಾಗ ಖಾಲಿ ಮಾಡಿದ ಜಗ್ಗಿ ವಾಸುದೇವ್, ಕರ್ನಾಟಕದ ಚಿಕ್ಕಬಳ್ಳಾಪುರದ ಅವಲಗುರ್ಕಿಗೆ ಬಂದು ಇಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯಲ್ಲಿ ಬೃಹತ್ ಆದಿಯೋಗಿ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ತಮ್ಮ ಇಶಾ ಫೌಂಡೇಶನ್‌ಅನ್ನು ಅವಲಗುರ್ಕಿಗೆ ಸ್ಥಳಾಂತರಿಸಿದ್ದಾರೆ.
ಕೊಯಮತ್ತೋರಿನ ಅರಣ್ಯದ ಜಾಗದಲ್ಲಿ ಅಕ್ರಮವಾಗಿ ಇಶಾ ಫೌಂಡೇಶನ್ ನಿರ್ಮಾಣ ಮಾಡಿದ್ದು ಒಂದೆಡೆಯಾದರೇ, ಇಶಾ ಫೌಂಡೇಶ್‌ನಲ್ಲಿ ಅಕ್ರಮ, ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪಗಳೂ ಇವೆ. ಅದೇ ಆರೋಪಗಳ ಮೇಲೆ ಪ್ರಕರಣಗಳೂ ದಾಖಲಾಗಿವೆ.
ಅಮೆರಿಕದಲ್ಲಿ ನೋಂದಾಯಿಸಲ್ಪಟ್ಟಿರುವ ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ನ ಆಂತರಿಕ ಕಂದಾಯ ಸೇವೆಯ ದಾಖಲೆಗಳ ಪ್ರಕಾರ, 2018ರಲ್ಲಿ ₹56.43 ಕೋಟಿ ನಿವ್ವಳ ಆದಾಯವನ್ನು ತೋರಿಸಿದೆ. ಇದರಲ್ಲಿ ಸುಮಾರು ₹35.81 ಕೋಟಿ ರೂಪಾಯಿ ದೇಣಿಗೆಯಿಂದ ಬಂದಿದೆ ಎಂದು ಅದು ಹೇಳಿಕೊಂಡಿದೆ. ಹೇಳಿಕೇಳಿ, ಇಂತಹ ಫೌಂಡೇಶನ್‌ಗಳಿಗೆ ಆದಾಯದ ಮೂಲಗಳಿರುವುದಿಲ್ಲ. ದೇಣಿಗೆಗಳು ಮತ್ತು ಕೊಡುಗೆಗಳೇ ತಮ್ಮ ಆದಾಯದ ಮೂಲಗಳು ಎಂದು ಹೇಳಿಕೊಳ್ಳುತ್ತವೆ. ಜೊತೆಗೆ, ಆದಾಯ ತೆರಿಗೆ ಕಾಯಿದೆಯಡಿ ತೆರಿಗೆ ವಿನಾಯಿತಿ ಕೂಡ ಇದೆ.
ಇನ್ನೊಂದು ಪ್ರಮುಖ ವಿಚಾರ ಏನೆಂದರೆ, ಜಗ್ಗಿ ವಾಸುದೇವ್ ಅಲಿಯಾಸ್ ಜಗದೀಶ್ ಅವರ ಪತ್ನಿ ವಿಜಯಕುಮಾರಿ ಅವರನ್ನು ಜಗ್ಗಿ ವಾಸುದೇವ ಅವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಗ್ಗಿ ವಾಸುದೇವ್ ವಿರುದ್ಧ ಅವರ ಮಾವ ಅಂದರೆ, ವಿಜಯಕುಮಾರಿ ಅವರ ತಂದೆ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇಶಾ ಫೌಂಡೇಶನ್ ಯೋಗ ಕೇಂದ್ರದಿಂದ 2016ರಿಂದ ಈವರೆಗೆ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದೂ ವರದಿಯಾಗಿವೆ. ಅವರಲ್ಲಿ, ಇಲ್ಲಿಯವರೆಗೂ ಯಾರೂ ಕೂಡ ಮರಳಿ ಬಂದಿಲ್ಲ ಅಥವಾ ಪತ್ತೆಯಾಗಿಲ್ಲ. ಆರು ಮಂದಿಯ ನಾಪತ್ತೆ ಪ್ರಕರಣದಲ್ಲಿ ಇಶಾ ಫೌಂಡೇಶನ್ ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ಪೊಲೀಸರು ಅಫೀಡೆವಿಟ್ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಶಾ ಫೌಂಡೇಶನ್, “ಈಶಾ ಯೋಗ ಕೇಂದ್ರದಿಂದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ” ಎಂದು ವಾದಿಸಿದೆ.
2014ರಲ್ಲಿ, ಭಾರತೀಯ ಮೂಲದ ಸ್ವೀಡಿಷ್ ಪ್ರಜೆ ಜೆಯಾ ಬಾಲು ಅವರು ಕೊಯಮತ್ತೂರಿನ ಅಲಂದೂರೈ ಪೊಲೀಸ್ ಠಾಣೆಯಲ್ಲಿ ಇಶಾ ಫೌಂಡೇಶನ್ ವಿರುದ್ಧ ವಂಚನೆಯ ದೂರು ದಾಖಲಿಸಿದ್ದಾರೆ. ಯೋಗ ಸೆಷನ್‌ಗಳು ಮತ್ತು ಯಂತ್ರ ಸಮಾರಂಭಕ್ಕಾಗಿ ತಾನು ಫೌಂಡೇಶನ್‌ಗೆ 4,50,000 ರೂಪಾಯಿಗಳನ್ನು ಪಾವತಿಸಿದ್ದೇನೆ. ಆದರೆ, ನನಗೆ ಬಿಲ್ ಬದಲಿಗೆ ದೇಣಿಗೆಯ ರಶೀದಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ವಾಸುದೇವ್ ಅವರೊಂದಿಗೆ ಕೈಲಾಸ ಮಾನಸ ಸರೋವರಕ್ಕೆ 13 ದಿನಗಳ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ ಬರೋಬ್ಬರಿ ₹50 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಭಕ್ತರಿಗೆ ನಾನಾ ರೀತಯ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ಇಶಾ ಫೌಂಡೇಷನ್ ಭಾರೀ ಹಣ ದೋಚುತ್ತಿದೆ. ಅದರಲ್ಲಿ, ₹2,75,000, ₹3,45,000 ಹಾಗೂ ₹5,50,000 ಪ್ಯಾಕೇಜ್‌ಗಳೂ ಸೇರಿವೆ. ಅದೇ ರೀತಿ, ವಾಸುದೇವ್ ಅವರೊಂದಿಗೆ ಹಿಮಾಲಯಕ್ಕೆ ಮೋಟಾರ್ಸೈಕಲ್‌ನಲ್ಲಿ 12 ದಿನಗಳ ಪ್ರಯಾಣದ ಬೆಲೆ ಪ್ರತಿ ವ್ಯಕ್ತಿಗೆ ₹12 ಲಕ್ಷ ಐದು ದಿನಗಳ ವಾರಣಾಸಿ ಪ್ರವಾಸಕ್ಕೆ ವಾಸುದೇವ್ ಅವರ ಕಂಪನಿಯಲ್ಲಿ ಐದು ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ ಮತ್ತು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ₹50,000 ಹಾಗೂ ರಾಮೇಶ್ವರಂ ಅಥವಾ ಮಧುರೈಗೆ ಐದು ದಿನಗಳ ಪ್ರವಾಸವು ಒಬ್ಬ ಭಕ್ತನಿಗೆ ₹3-4 ಲಕ್ಷ. ಈ ಎಲ್ಲಾ ‘ಆಧ್ಯಾತ್ಮಿಕ’ ಪ್ರವಾಸಗಳನ್ನು ಮಾರಾಟ ಮಾಡುವುದರಿಂದ, ಇಶಾ ವರ್ಷಕ್ಕೆ ಸುಮಾರು ₹60 ಕೋಟಿ ಆದಾಯ ಗಳಿಸುತ್ತಿದೆ. ಇದಲ್ಲದೆ, ಶಿವರಾತ್ರಿ ಉತ್ಸವದ ವೇಳೆಯೂ ಭಕ್ತರಿಗೆ ಪ್ರವೇಶ ಶುಲ್ಕವಾಗಿ ಭಾರೀ ಹಣ ದೋಚುತ್ತಿದೆ.
2017ರಲ್ಲಿ ಕಾವೇರಿ ಉಳಿಸಿ, ಕಾವೇರಿ ಕಾಲಿಂಗ್ ಹೆಸರಿಲ್ಲಿ ₹45 ರೂ. ನಂತೆ ಜನರಿಂದ ಭಾರೀ ಹಣ ವಸೂಲಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೂಡ ಇದೆ. ಇನ್ನೊಂದು ದೊಡ್ಡ ಆರೋಪಗಳೆಂದರೆ, ಜಗ್ಗಿ ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ. ಇಶಾ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ಮುಚ್ಚಿಡುತ್ತಿದ್ದಾರೆ ಎಂಬ ಆರೋಪ ಕೂಡ ಇದೆ.

ಇನ್ನು ಇಶಾ ಫೌಂಡೇಶನ್ ವಿರುದ್ಧ ದಾಖಲಾದ ಎಲ್ಲ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶದ ನಂತರ 150 ಪೊಲೀಸ್ ಅಧಿಕಾರಿಗಳ ತಂಡವು, ಕೊಯಮತ್ತೂರಿನ ತೊಂಡಮುತ್ತೂರ್‌ನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮಕ್ಕೆ ತೆರಳಿದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮಠಗಳು, ದೇವರ ಹೆಸರಿನ ಆಶ್ರಮಗಳು ಜನರನ್ನು ಸುಲಿಗೆ ಮಾಡುವ ತಾಣಗಳಾಗುತ್ತಿವೆ. ದೇವರು, ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು, ಜನರ ತಲೆಗೆ ಭಯವನ್ನು ತುಂಬುವ ಮೂಲಕ ಭಕ್ತಿಯ ಹೆಸರಿನಲ್ಲಿ ತಮ್ಮ ಕೈಗೊಂಬೆಗಳಂತೆ ಆಡಿಸುತ್ತಿದ್ದಾರೆ. ಜನ ಯಾರ ಮಾತನ್ನು ಮೀರಿದರೂ, ದೇವರ ಹೆಸರಿನಲ್ಲಿ ವಂಚಿಸುವವರ ಮಾತನ್ನು ಮೀರುವುದಿಲ್ಲ ಎಂಬುದೇ ಅವರ ಅಸ್ತ್ರವಾಗಿದೆ. ಅದಕ್ಕೇ ದಾಳವಾಗಿಟ್ಟುಕೊಂಡು ಅತ್ಯಾಚಾರ, ಅನಾಚಾರ, ಶೋಷಣೆ, ಸುಲಿಗೆ ಮಾಡುತ್ತಿದೆ. ಅದೇ ರೀತಿಯ ಜನರಲ್ಲಿರುವ ದೇವರ ಮೇಲಿನ ಭಕ್ತಿ ಮತ್ತು ಭಯವನ್ನೇ ಬಂಡವಾಳ ಮಾಡಿಕೊಂಡು ಮುನ್ನೆಲೆಗೆ ಬಂದವನು ಈ ಜಗ್ಗಿ ವಾಸುದೇವ. ಆದರೆ, ಆತನ ಅನಾಚಾರಗಳು ಕೆಲವೇ ವರ್ಷಗಳಲ್ಲಿ ಬಯಲಾಗಿದೆ. ಆದರೂ, ಚಿಕ್ಕಬಳ್ಳಾಪುರದಲ್ಲಿ ಆತನ ಇಶಾ ಫೌಂಡೇಷನ್ ಆರಂಭವಾಗಿದ್ದು, ಇಲ್ಲಿಯು ಸುಲಿಗೆ ಆರಂಭವಾಗಿದೆ. ಅದಕ್ಕೂ ಆದಷ್ಟು ಬೇಗ ಬ್ರೇಕ್ ಬೀಳಬೇಕು. ನ್ಯಾಯಾಲಯದಲ್ಲಿ ಜಗ್ಗಿಯ ವಂಚನೆಗಳು ಸಾಬೀತಾಗಿ, ಆತನನ್ನು ಜೈಲಿಗಟ್ಟಬೇಕು. ಜನರಲ್ಲಿ ಮೌಢ್ಯದ ವಿರುದ್ಧದ ಅರಿವು ಬೆಳೆಯಬೇಕು.




