“ಚರ್ಚೆಗೆ ಆಸ್ಪದ ಕೊಡದೆ ಬರಿದೇ ಹೇಳಿಕೆಗಳನ್ನು ಓದುವುದು ಸಂಸತ್ತಿನ ಸದಸ್ಯರ ಸಮ್ಮತ ನಡೆಯಲ್ಲ” ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ಸಂಸತ್ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಗಂಭೀರ ವಿಷಯವಾಗಿದ್ದು ಸದನದಲ್ಲಿ ಚರ್ಚೆಯಾಗಬೇಕಿತ್ತು ಎಂಬುದು ಪಕ್ಷದ ಉದ್ದೇಶವಾಗಿತ್ತು. ಯಾವುದೇ ಪ್ರಶ್ನೆಗಳಿಗೆ ಅನುವು ಮಾಡಿಕೊಡದೇ ಕೇವಲ ಹೇಳಿಕೆಯನ್ನು ಓದುವುದರಿಂದ ಸದನದ ಸದಸ್ಯರಿಗೆ ವಿಷಯ ಸರಿಯಾಗಿ ವಿನಿಮಯವಾಗುವುದಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದ ಉದ್ದೇಶವು ಇಂಧನ ಸುರಕ್ಷತೆ, ಏರಿಕೆಯಾಗುತ್ತಿರುವ ತೈಲ ದರ ಹಾಗೂ ಎಲ್‌ಪಿಜಿ ದರಗಳ ಕುರಿತಾಗಿ ಚರ್ಚೆ ನಡೆಸಲು ಆಂದೋಲನ ಕೈಗೊಳ್ಳುವುದಾಗಿತ್ತು” ಎಂದು ತರೂರ್ ಹೇಳಿದ್ದಾರೆ.
ಮುಂದುವರೆದು “ಅಂತಾರಾಷ್ಟ್ರೀಯ ಕಾನೂನು ಮತ್ತು ಭಾರತದ ಹಿತಾಸಕ್ತಿಯ ಕುರಿತ ಕಾಳಜಿಯನ್ನು ವ್ಯಕ್ತಪಡಿಸಲು ಸಂಸತ್ತು ವೇದಿಕೆಯಾಗಬೇಕು. ಅಂತಾರಾಷ್ಟ್ರೀಯ ಕಾನೂನಿನ ವಿಷಯವಾಗಿ ಹಲವು ಪ್ರಶ್ನೆಗಳು ಉಲ್ಬಣವಾಗಿವೆ. ಆ ಪ್ರಶ್ನೆಗಳು ಏನೇ ಇರಲಿ ಅದನ್ನು ಆಲಿಸುವ ಚರ್ಚಿಸುವ ಜಾಗ ಸಂಸತ್ತು” ಎಂದಿದ್ದಾರೆ.
“ಸರ್ಕಾರ ನಮ್ಮದು ಎಂದು ನಾವು ಹೇಳುತ್ತಿಲ್ಲ. ಸರ್ಕಾರ ಅವರದ್ದೇ. ಅವರಿಗೆ ಯಾವುದು ಒಪ್ಪಿತವೋ ಅದನ್ನೇ ಅವರು ಮಾಡುತ್ತಾರೆ. ಕಡೆಯ ಪಕ್ಷ ಸಂಸತ್ತನ್ನು ಪರ ವಿರೋಧದ ಚರ್ಚೆಗಳನ್ನು ಆಲಿಸಲು, ದೇಶದ ಭಿನ್ನ ಬಗೆಯ ದೃಷ್ಟಿಕೋನಗಳನ್ನು ಅವಲೋಕಿಸಲು ಬಳಸಿಕೊಳ್ಳಲಿ” ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಸಹ ಇದರ ಪರವಾಗಿ ಧ್ವನಿಗೂಡಿಸಿದ್ದು, “ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಪಕ್ಷಪಾತ ಮಾಡುವಂತಹ ವಿಷಯವಲ್ಲ. ಸರ್ಕಾರವು ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು” ಎಂದರು
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್ “ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ ಬಗ್ಗೆ ಪ್ರಧಾನಿ ಮೋದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಸ್ತುತ ಜಾಗತಿಕ ವಿದ್ಯಮಾನದ ಕುರಿತು ಭಾರತಕ್ಕೆ ಕಳವಳವಿದೆ. ನೆರೆಯ ರಾಷ್ಟ್ರವಾಗಿ ಪಶ್ಚಿಮ ಏಷ್ಯಾ ಸುಸ್ಥಿರವಾಗಿರುವುದು ನಮ್ಮ ಆದ್ಯತೆಯೂ ಆಗಿದೆ. ಕೊಲ್ಲಿ ರಾಜ್ಯಗಳಲ್ಲಿ ಭಾರತದ ಒಂದು ಕೋಟಿ ಪ್ರಜೆಗಳು ಉದ್ಯೋಗ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದಾರೆ. ಇರಾನಿನಲ್ಲಿಯೂ ಭಾರತದ ಅಸಂಖ್ಯ ಪ್ರಜೆಗಳು ವಿದ್ಯಾಭಾಸ ಹಾಗೂ ಉದ್ಯೋಗಕ್ಕಾಗಿ ನೆಲೆಸಿದ್ದಾರೆ. ನಮ್ಮ ಇಂಧನ ಭದ್ರತೆ ಹಾಗೂ ತೈಲ ಪೂರೈಕೆಯ ಮೂಲವಾಗಿ ಈ ಪ್ರದೇಶಗಳು ಗಣನೀಯ ಪಾತ್ರ ವಹಿಸಿವೆ, ಆದರಿಂದ ಪ್ರಸ್ತುತ ಸಂದರ್ಭವು ಕಳವಳಕಾರಿ ವಾತಾವರಣವನ್ನು ಸೃಷ್ಟಿಸಿದೆ “ ಎಂದು ಅವರು ಹೇಳಿದರು.
ಮುಂದುವರೆದು “ಇರಾನಿನಲ್ಲಿರುವ ಭಾರತೀಯರೊಂದಿಗೆ ಸರ್ಕಾರವು ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಬೇಕಾದ ಔಪಚಾರಿಕ ಸಲಹೆಗಳನ್ನು ನೀಡುತ್ತಿದೆ. ಕೊಲ್ಲಿಯಾದ್ಯಂತ ನೆಲೆಸಿರುವ ಭಾರತದ ಪ್ರಜೆಗಳೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಇಂಧನ ಭದ್ರತೆಯ ಕುರಿತು ಮಾತನಾಡುತ್ತಾ, ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿದ್ದ ವ್ಯಾಪಾರಗಳಿಗೆ ಅಡಚಣೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಭಾರತದ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರವು ಸೂಕ್ತ ಇಂಧನ ಮಾರುಕಟ್ಟೆಗಾಗಿ ಶೋಧ ನಡೆಸುತ್ತಿದೆ. ನಮ್ಮ ಇಂಧನ ಭದ್ರತೆಯ ಮೇಲೆ ಸಂಘರ್ಷದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಇಂಧನ ಮಾರುಕಟ್ಟೆಯ ವೆಚ್ಚ, ಲಭ್ಯತೆ ಹಾಗೂ ಅಪಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿರುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಭಾರತದ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಬದ್ಧತೆಯಾಗಿದೆ” ಎಂದು ಹೇಳಿದರು.





