ಆರ್‌ಎಸ್‌ಎಸ್ ಸಮವಸ್ತ್ರಕ್ಕೆ ‘ಗಣವೇಷ’ ಎನ್ನುವುದು ತಪ್ಪಲ್ಲವೇ?

Date:

ಆರ್‌ಎಸ್ಎಸ್‌ನ ವೇಷಭೂಷಣದ ಮೂಲವನ್ನು ಹುಡುಕುತ್ತಾ ಹೋದರೆ, ನಾವು ಇಟಲಿಗೆ ತಲುಪುತ್ತೇವೆ! ಹೌದು, ಆರ್‌ಎಸ್‌ಎಸ್‌ನ ವೇಷದ ಮೂಲವೇ ಮುಸೊಲಿನಿ, ಮತ್ತವನ ‘ಫ್ಯಾಸಿಸಂ’. ಇಟಲಿಯಿಂದ ಆಮದು ಮಾಡಿಕೊಂಡು ಬಂದದ್ದನ್ನು ‘ಗಣವೇಷ’ ಎನ್ನಬೇಕೋ ಅಥವಾ ‘ಫ್ಯಾಸಿಸ್ಟ್ ವೇಷ’ ಎನ್ನಬೇಕೋ?

‘ಗಣವೇಷ ಧರಿಸಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನ ಮಾಡಿದರು, ಗಣವೇಷಧಾರಿಗಳಿಗೆ ಪುಷ್ಪಾರ್ಚನೆ ಮಾಡಲಾಯಿತು’- ಈ ರೀತಿಯಲ್ಲಿ ಮಾಧ್ಯಮಗಳು ವರದಿ ಮಾಡುತ್ತಿವೆ. ಆರ್‌ಎಸ್‌ಎಸ್‌ ಸಮವಸ್ತ್ರ ಧರಿಸಿದವರನ್ನು ‘ಗಣವೇಷಧಾರಿಗಳು’ ಎಂದ ತಕ್ಷಣ ಅದಕ್ಕೊಂದು ಧಾರ್ಮಿಕ ಸ್ವರೂಪವೂ ಬಂದು ಬಿಡುತ್ತದೆ. ಧರ್ಮರಕ್ಷಣೆಯ ಸೋಗುಹಾಕಿ, ಅಪರಾಧ ಮುಚ್ಚಿಹಾಕುವ ಪತ್ರಕರ್ತರಿಗೂ ‘ಶಿವಗಣಗಳು’ ಎಂದು ಬಿರುದುಕೊಟ್ಟ ನೆಲವಿದು! ಹೀಗಾಗಿ ‘ಗಣವೇಷ’, ‘ಗಣ’ ಇತ್ಯಾದಿಗಳ ಕುರಿತು ಚರ್ಚೆ ಮಾಡುವ ಅಗತ್ಯವಿದೆ. ಆರ್‌ಎಸ್‌ಎಸ್‌ ಗಣವೇಷದ ಮೂಲವನ್ನು ಅರಿತುಕೊಳ್ಳಬೇಕಾಗಿದೆ.

‘ಗಣ’ ಎಂಬ ಸಂಸ್ಕೃತ ಪದವು ಸಮೂಹ, ಪಡೆ, ಸಂಖ್ಯೆ, ಗುಂಪು, ಸರಣಿ ಅಥವಾ ವರ್ಗ ಎಂಬ ಅರ್ಥವನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ‘ಸೇವಕರ ಸಮೂಹ’ವನ್ನು ಸೂಚಿಸಲು ಬಳಸುತ್ತಾರೆ. ಸೇವಕರು ಎಂದು ಬಳಸುವುದಕ್ಕೂ ಧಾರ್ಮಿಕ ಆಯಾಮವಿದೆ. ಗಣಗಳು ಎಂದರೆ ಶಿವನ ಸೇವಕರು ಎಂದೂ ನಂಬಲಾಗಿದೆ. ಗಣಗಳ ನಾಯಕ ಅಥವಾ ಗುಂಪಿನ ನಾಯಕನನ್ನು ‘ಗಣಪತಿ’ ಎಂದು ಕರೆಯುತ್ತೇವೆ. ಆ ಮೂಲಕ ಆರ್‌ಎಸ್‌ಎಸ್ ತನ್ನ ಸ್ವಯಂಸೇವಕರನ್ನು ಅರ್ಥಾತ್ ಕಾಲಾಳುಗಳನ್ನು ದೈವೀಕರಿಸುತ್ತಿದೆಯೇ? ಇವರು ಹೇಳುವ ದೈವೀಕರಣವು ‘ಗಣ’ ಎಂಬ ಮೂಲ ಅರ್ಥವನ್ನು ಹೊಮ್ಮಿಸುತ್ತದೆಯೇ? ಹಾಗಾದರೆ ಇವರು ಹೇಳುವ ‘ಗಣವೇಷ’ ಯಾವುದು? ಹಿಂದುತ್ವ ರಾಜಕಾರಣ ಹೇಳುವ ‘ಗಣ’ವನ್ನು ಈ ನೆಲದ ಶೂದ್ರ ಪರಂಪರೆ ಪ್ರತಿನಿಧಿಸುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ- ಆರ್‌ಎಸ್ಎಸ್‌ ನೂರು ವರ್ಷಗಳಿಂದ ಹೇಗೆ ಯಾಮಾರಿಸಿದೆ ಎಂಬುದು ತಿಳಿಯುತ್ತದೆ. ‘ಗಣವೇಷಧಾರಿ’ ಎಂಬ ‘ಶುಗರ್ ಕೋಟೆಡ್’ ವಿಷಗುಳಿಗೆಯ ವಾಸ್ತವಗಳು ಅರಿವಾಗುತ್ತವೆ.

ಆರ್‌ಎಸ್‌ಎಸ್ ಸಮವಸ್ತ್ರದ ಮೂಲ ಯಾವುದು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರ್‌ಎಸ್ಎಸ್‌ನ ವೇಷಭೂಷಣದ ಮೂಲವನ್ನು ಹುಡುಕುತ್ತಾ ಹೋದರೆ, ನಾವು ಇಟಲಿಗೆ ತಲುಪುತ್ತೇವೆ! ಹೌದು, ಆರ್‌ಎಸ್‌ಎಸ್‌ನ ವೇಷದ ಮೂಲವೇ ಮುಸೊಲಿನಿ, ಮತ್ತವನ ‘ಫ್ಯಾಸಿಸಂ’. ಇಟಲಿಯಿಂದ ಆಮದು ಮಾಡಿಕೊಂಡು ಬಂದದ್ದನ್ನು ‘ಗಣವೇಷ’ ಎನ್ನಬೇಕೋ ಅಥವಾ ‘ಫ್ಯಾಸಿಸ್ಟ್ ವೇಷ’ ಎನ್ನಬೇಕೋ?- ಮುಂದೆ ನಿರೂಪಿಸಿರುವ ಸಂಗತಿಗಳಿಂದ ನೀವೇ ನಿರ್ಧರಿಸಿ.

ಆರ್‌ಎಸ್‌ಎಸ್‌ನವರು ಸ್ವಯಂಸೇವಕರಿಗೆ ಶಸ್ತ್ರಾಸ್ತ್ರ ಮತ್ತು ದಂಡ ಯುದ್ಧದ ತರಬೇತಿ ನೀಡುತ್ತಾರೆ. ಈ ತರಬೇತಿಯು ಆತ್ಮರಕ್ಷಣೆಗಾಗಿ ಎಂದು ಅವರು ಹೇಳಿಕೊಂಡರೂ ಅದೊಂದು ಫ್ಯಾಸಿಸ್ಟ್ ಸಿದ್ಧಾಂತದ ಪಡಿಯಚ್ಚು. ಈ ಬಲಪಂಥೀಯ ಸಿದ್ಧಾಂತ ಮತ್ತು ಉಗ್ರವಾದದ ಬೇರುಗಳು 1930 ಮತ್ತು 1940ರ ದಶಕದ ಯುರೋಪಿಯನ್ ಫ್ಯಾಸಿಸ್ಟ್ ಆಡಳಿತದಿಂದ ಹುಟ್ಟಿಕೊಂಡಿದೆ.

ಇದನ್ನೂ ಓದಿರಿ: ಕಲ್ಲಡ್ಕ ಭಟ್ ಕೋಮುದ್ವೇಷದ ಇತಿಹಾಸ; ಸರ್ಕಾರ ಎಲ್ಲಿ ಎಡವುತ್ತಿದೆ?

ಆರ್‌ಎಸ್‌ಎಸ್‌ ಕಾಲಾಳುಗಳು ಧರಿಸುವ ಸಮವಸ್ತ್ರ (ಕಪ್ಪು ಟೋಪಿ, ಶರ್ಟ್ ಮತ್ತು ಖಾಕಿ ಚಡ್ಡಿ- ಈಗ ಪ್ಯಾಂಟ್) ಯುರೋಪಿಯನ್ ಫ್ಯಾಸಿಸ್ಟ್ ಆಡಳಿತಗಳಿಂದ ಪ್ರಭಾವಿತವಾಗಿದೆ. ಕಪ್ಪು ಟೋಪಿಯು ಮುಸೊಲಿನಿ ರೂಪಿಸಿದ ಫ್ಯಾಸಿಸ್ಟ್ ಇಟಲಿಯನ್ನೂ ಹಿಟ್ಲರ್‌ ರೂಪಿಸಿದ ನಾಜಿ ಜರ್ಮನಿಯನ್ನೂ ಪ್ರತಿನಿಧಿಸುತ್ತದೆ.

ಆರಂಭಿಕ ದಿನಗಳಲ್ಲಿ ಆರ್‌ಎಸ್ಎಸ್‌ ವಸ್ತ್ರ

1925ರಲ್ಲಿ ಆರ್‌ಎಸ್‌ಎಸ್ ರಚನೆಯಾದಾಗ ಅದು ಖಾಕಿ ಶರ್ಟ್‌, ಖಾಕಿ ಚಡ್ಡಿ ಮತ್ತು ಖಾಕಿ ಕ್ಯಾಪ್‌ಗಳನ್ನು ತನ್ನ ಸದಸ್ಯರಿಗೆ ಸಮವಸ್ತ್ರವಾಗಿ ಪರಿಚಯಿಸಿತು. ಖಾಕಿ ಟೋಪಿಯು ಗಾಂಧಿ ಟೋಪಿಯನ್ನು ಹೋಲುತ್ತಿದ್ದರಿಂದ 1920ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಸಮಯದವರೆಗೆ ಆರ್‌ಎಸ್‌ಎಸ್‌ನಲ್ಲಿ ಗಾಂಧಿ ಟೋಪಿ ಕಾಣಿಸಿಕೊಳ್ಳುವುದಕ್ಕೂ ಕಾರಣವಿತ್ತು. 1920ನೇ ಇಸವಿಯಲ್ಲಿ ನಾಗ್ಪುರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನ ನಡೆದಾಗ, ಕೆಲವರು ಕೆ.ಬಿ.ಹೆಡಗೇವಾರ್‌ ಸಂಪರ್ಕಕ್ಕೆ ಬಂದಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತ ಎಚ್.ವಿ.ಶೇಷಾದ್ರಿ ಅವರ ಪ್ರಕಾರ, ಡಾ. ಎಲ್.ವಿ. ಪರಾಂಜಪೆ ಭಾರತ ಸ್ವಯಂಸೇವಕ ಮಂಡಲವನ್ನು ಪ್ರಾರಂಭಿಸಿದ್ದರು. ಹೆಡಗೇವಾರ್ ಅದರ ಮೊದಲ ಮುಖ್ಯ ಸಹೋದ್ಯೋಗಿ. ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ 1000-1500 ಸ್ವಯಂಸೇವಕರ ದಳವನ್ನು ಸಂಘಟಿಸಲು ಪ್ರಯತ್ನಗಳು ಪ್ರಾರಂಭವಾದವು. ಬಹುಶಃ, ಕಾಂಗ್ರೆಸ್‌ನಿಂದ ಹೋದ ಆರಂಭಿಕ ಸ್ವಯಂಸೇವಕರು ಖಾಕಿ ಕ್ಯಾಪ್ ಅನ್ನು ಸಂಘಟನೆಯಲ್ಲಿ ಬಳಸಿರಬಹುದು ಎಂದು ಚರಿತ್ರಾಕಾರರು ಊಹಿಸುತ್ತಾರೆ.

ಫ್ಯಾಸಿಸಂ ದಾರಿಯಲ್ಲಿ…

1930ರಲ್ಲಿ ಆರ್‌ಎಸ್‌ಎಸ್ ಸಮವಸ್ತ್ರದ ಭಾಗವಾಗಿ ಕಪ್ಪು ಕ್ಯಾಪ್‌ಗಳನ್ನು ಪರಿಚಯಿಸಿತು. ಇಟಾಲಿಯನ್ ಸರ್ವಾಧಿಕಾರಿ ಮುಸೊಲಿನಿ ತನ್ನ ಕಪ್ಪು ಕ್ಯಾಪ್‌ಗೆ ಪ್ರಸಿದ್ಧನಾಗಿದ್ದನು. ಇಟಲಿಯಲ್ಲಿ ಚಿಕ್ಕಚಿಕ್ಕ ಮಕ್ಕಳನ್ನೂ ಸೈನಿಕ ತರಬೇತಿಗೊಳಿಸುವ ಫ್ಯಾಸಿಸ್ಟ್ ಮಿಲಿಟೆಂಟ್ ತರಬೇತಿ ಕೇಂದ್ರಗಳು ಆರಂಭವಾಗಿದ್ದವು. ಅವುಗಳು ಮುಸೊಲಿನಿಯ ಡ್ರಸ್‌ಕೋಡ್‌ ಅನುಸರಿಸಿದವು. ಆರ್‌ಎಸ್‌ಎಸ್ ರಚನೆಯಲ್ಲಿ ಕಂಡುಬರುವ ಯುರೋಪಿಯನ್ ಫ್ಯಾಸಿಸಂ ಮತ್ತು ನಾಸಿಸಂನ ಪ್ರಭಾವ ಹಾಗೂ ಆರ್‌ಎಸ್‌ಎಸ್ ನಾಯಕರು ಫ್ಯಾಸಿಸಂಗೆ ಕೊಡುತ್ತಿದ್ದ ಬೆಂಬಲ ಮುಚ್ಚುಮರೆಯ ಸಂಗತಿಯೇನೂ ಅಲ್ಲ. ಹೆಡಗೇವಾರ್‌ ಅವರ ಮಾರ್ಗದರ್ಶಕರಾಗಿದ್ದ ಬಿ.ಎಸ್. ಮೂಂಜೆ ಮತ್ತು ಎರಡನೇ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ ಅವರ ನಡೆನುಡಿಗಳು ‘ಸಂಘಿಗಳ ಇಟಾಲಿಯನ್ ಕನೆಕ್ಷನ್’ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತವೆ.

ಸಂಘಿಗಳ ಗುರೂಜಿ ಗೋಲ್ವಾಲ್ಕರ್, “ಜರ್ಮನಿ ತನ್ನ ಜನಾಂಗ ಹಾಗೂ ಸಂಸ್ಕೃತಿಯ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ದೇಶದಲ್ಲಿದ್ದ ಸೆಮಿಟಿಕ್ ಜನಾಂಗದ ಯಹೂದ್ಯರನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಿ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತು. ಇಲ್ಲಿ ಅತ್ಯುಚ್ಚಮಟ್ಟದ ಜನಾಂಗೀಯ ಅಭಿಮಾನ ತೋರಿ ಬಂದಿದೆ. ಹಿಂದೂಸ್ಥಾನದಲ್ಲಿರುವ ನಾವು ಈ ಉತ್ತಮ ಪಾಠದಿಂದ ಕಲಿಯಬೇಕಾಗಿದೆ ಮತ್ತು ಇದರಿಂದ ಲಾಭ ಪಡೆಯಬೇಕಾಗಿದೆ” ಎನ್ನುತ್ತಾರೆ. ಅಂದರೆ ಜನಾಂಗೀಯ ನರಮೇಧವನ್ನು ಗೋಲ್ವಾಲ್ಕರ್ ಸಮರ್ಥಿಸುವಷ್ಟು ವಿಕೃತಿಯನ್ನು ಹೊಂದಿದ್ದರು!

ಇದನ್ನೂ ಓದಿರಿ: ಸಂಘಪರಿವಾರ ಹೇಳುವ ‘ಸಾಮರಸ್ಯ’ ಕೇವಲ ಬೂಟಾಟಿಕೆ; ಆರ್‌ಎಸ್‌ಎಸ್‌ನಲ್ಲಿ ಜಾತಿ ನೋವುಂಡ ದಲಿತನ ಅನುಭವ ಕಥನ

1925ರಿಂದ 1935 ರವರೆಗಿನ ಮರಾಠಿ ಪತ್ರಿಕೆಗಳು, ನಿಯತಕಾಲಿಕೆಗಳು ಮುಸೊಲಿನಿ ಮತ್ತು ಫ್ಯಾಸಿಸಂ ಅನ್ನು ವೈಭವೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಇಟಲಿ, ಫ್ಯಾಸಿಸಂ ಮತ್ತು ಮುಸೊಲಿನಿಯ ಬಗ್ಗೆ ಸಂಪಾದಕೀಯಗಳನ್ನು, ಲೇಖನಗಳನ್ನು ನಿರಂತರವಾಗಿ ಪ್ರಕಟಿಸಿದವು. ಈ ಕೆಲಸವನ್ನು ಮುಂಚೂಣಿಯಲ್ಲಿ ನಿಂತು ಮಾಡಿದ್ದೇ ಚಿತ್ಪಾವನ ಬ್ರಾಹ್ಮಣರಾದ ಬಾಲಗಂಗಾಧರ ತಿಲಕರ ‘ಕೇಸರಿ’ ಪತ್ರಿಕೆ! ಇದರ ಲಂಡನ್ ಬಾತ್ಮಿದಾರರಾಗಿದ್ದ ಡಿ.ವಿ. ತಮ್ಹಾನ್ಕರ್ ಮುಸೊಲಿನಿಯ ಜೀವನ ಚರಿತ್ರೆಯನ್ನು ಮರಾಠಿ ಭಾಷೆಗೆ ಅನುವಾದಿಸಿ, ‘ಮಸ್ಲಿನಿ ಆಣಿ ಫ್ಯಾಸಿಸ್ಮೊ’ ಕೃತಿಯನ್ನು 1927ರಲ್ಲಿ ಪ್ರಕಟಿಸಿದರು. ತಿಲಕರ ಸಾಲಿನಲ್ಲೇ ನಡೆದವರು ಬಿ.ಎಸ್.ಮೂಂಜೆ. 1931ನೇ ಇಸವಿಯ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ದುಂಡು ಮೇಜಿನ ಸಭೆಯ ನೆಪದಲ್ಲಿ ಮೂಂಜೆ ಯುರೋಪ್ ಪ್ರವಾಸ ಕೈಗೊಂಡಿದ್ದರು. ಮುಖ್ಯವಾಗಿ ಇಟಲಿಯಲ್ಲಿ ಬಹುಕಾಲ ತಂಗಿದ್ದು, ಅಲ್ಲಿನ ವಿವಿಧ ಪ್ರಮುಖ ಮಿಲಿಟರಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರು. ಜೊತೆಗೆ ಮುಸೊಲಿನಿಯನ್ನೂ ಭೇಟಿಯಾಗಿದ್ದರು. ‘ಮೂಂಜೇಸ್ ಡೈರಿ’ಯಲ್ಲಿ ಇದೆಲ್ಲವನ್ನೂ ದಾಖಲಿಸಿದರು.

rss samavatra
ಮುಸೊಲಿನಿ ರೂಪಿಸಿದ ‘ಬಲಿಲ್ಲಾ’ ಸಂಘಟನೆಯಲ್ಲಿ ಮಕ್ಕಳು (ಇಟಲಿಯ ಫ್ಯಾಸಿಸ್ಟ್ ಮಾದರಿಯನ್ನು ಆರ್‌ಎಸ್‌ಎಸ್ ಅನುಕರಣೆ ಮಾಡಿತು)

ಮೂಂಜೆಯವರ ವಿದೇಶ ಪ್ರಯಾಣದ ಕುರಿತು ಸುರೇಶ್ ಭಟ್ ಬಾಕ್ರಬೈಲ್ ಅವರು ತಮ್ಮ ‘ಕೇಸರಿ ಭಯೋತ್ಪಾದನೆ’ ಕೃತಿಯಲ್ಲಿ ಹೀಗೆ ಬರೆಯುತ್ತಾರೆ: “ಕಾಂಗ್ರೆಸ್ಸಿಗರ ವಿರೋಧದ ಹೊರತಾಗಿಯೂ ಎರಡೆರಡು ಬಾರಿ ಲಂಡನ್ ದುಂಡು ಮೇಜಿನ ಪರಿಷತ್ತನಿನಲ್ಲಿ ಭಾಗವಹಿಸಿ ಹಿಂದೂಗಳ ಪರವಾಗಿ ಮೂಂಜೆ ವಾದ ಮಂಡಿಸಿದರು. 1931ರ ದುಂಡು ಮೇಜಿನ ಪರಿಷತ್ತನ್ನು ಮುಗಿಸಿಕೊಂಡು ಲಂಡನ್‌ನಿಂದ ಹಿಂದಿರುಗುವ ದಾರಿಯಲ್ಲಿ ಇಟಲಿಗೂ ಭೇಟಿ ನೀಡಿದರು. ಇದರ ಹಿಂದೆ ಸ್ಪಷ್ಟ ಉದ್ದೇಶಗಳಿದ್ದವು. ಇಟಲಿಯಲ್ಲಿ ಸುದೀರ್ಘ ಕಾಲವಿದ್ದು ಕೆಲವು ಪ್ರಮುಖ ಮಿಲಿಟರಿ ಶಾಲೆಗಳಿಗೂ ಭೇಟಿಕೊಟ್ಟರು. ಮಾರ್ಚ್ 19ರಂದು ರೋಮ್‌ನ ಮಿಲಿಟರಿ ಕಾಲೇಜು, ಕೇಂದ್ರ ದೈಹಿಕ ಶಿಕ್ಷಣ ಮಿಲಿಟರಿ ಶಾಲೆ ಹಾಗೂ ದೈಹಿಕ ಶಿಕ್ಷಣದ ಫ್ಯಾಸಿಸ್ಟ್ ಅಕಾಡೆಮಿಗಳನ್ನು ನೋಡಿಕೊಂಡು ಬಲಿಲ್ಲಾ, ಅವಾನ್‌ಗಾರ್ಡಿಸ್ಟಿ ಸಂಘಟನೆಗಳ ಕಚೇರಿಗೆ ಭೇಟಿ ಇತ್ತರು. ಅಲ್ಲಿ ಸೇರ್ಪಡೆಯಾಗಿದ್ದ 6ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ವಾರಕ್ಕೊಮ್ಮೆ ನೀಡುತ್ತಿದ್ದ ದೈಹಿಕ ಕಸರತ್ತು, ಸೇನಾ ಮಾದರಿಯ ತರಬೇತಿ, ಡ್ರಿಲ್, ಪರೇಡ್ ಇತ್ಯಾದಿಗಳನ್ನು ಕಂಡು ಬಹಳ ಪ್ರಭಾವಿತರಾದರು. ಬಲಿಲ್ಲಾ, ಅವಾನ್‌ಗಾರ್ಡಿಸ್ಟಿ ಸಂಘಟನೆಗಳ ರಚನಾ ವಿನ್ಯಾಸಕ್ಕೂ ಆರ್‌ಎಸ್‌ಎಸ್‌ನ ರಚನಾ ವಿನ್ಯಾಸಕ್ಕೂ ಬಹಳಷ್ಟು ಸಾಮ್ಯತೆಗಳಿರುವುದು ಖಂಡಿತ ಕಾಕತಾಳೀಯವಲ್ಲ.”

ಬಲಿಲ್ಲಾ ಮತ್ತು ಅವಾನ್‌ಗಾರ್ಡಿಸ್ಟಿಗಳನ್ನು ಆರ್‌ಎಸ್‌ಎಸ್‌ ಕೂಡ ಕಟ್ಟುನಿಟ್ಟಾಗಿ ಹೋಲುತ್ತದೆ ಎಂದು ಮೂಂಜೆಯೇ ಹೇಳಿಕೊಂಡಿದ್ದಾರೆ. ಬಲಿಲ್ಲಾ ಎಂಬುದು ‘ಚಿಕ್ಕ ಹುಡುಗ’ ಎಂಬ ಅರ್ಥವನ್ನು ಸೂಚಿಸುತ್ತದೆ. 6 ರಿಂದ 14 ವರ್ಷದ ಹುಡುಗರು ‘ಬಲಿಲ್ಲಾ’ದಲ್ಲಿ ಭಾಗಿಯಾಗಿ, ಅರೆಸೈನಿಕ ಕವಾಯತು, ಪ್ರೊಪಗಾಂಡ ಕ್ಲಾಸ್‌, ದೈಹಿಕ ತರಬೇತಿ ಪಡೆಯುವುದು ನಡೆಯುತ್ತಿತ್ತು. ಅವಾನ್‌ಗಾರ್ಡಿಸ್ಟಿಗಳೆಂದರೆ ‘ಮುಂದಾಳತ್ವ ವಹಿಸುತ್ತಿದ್ದ ಯುವಕರು’. ಅವಾನ್‌ಗಾರ್ಡಿಸ್ಟಿ ಹೆಚ್ಚಿನ ಮಿಲಿಟರಿ ತರಬೇತಿ ನೀಡುತ್ತಿತ್ತು. ಫ್ಯಾಸಿಸ್ಟ್ ವಿಚಾರಗಳಿಂದ ಪ್ರಭಾವಿತರಾಗಿ ಸಂಪೂರ್ಣವಾಗಿ ತಲೆತೊಳೆಸಿಕೊಂಡ 14ರಿಂದ 18 ವರ್ಷ ವಯೋಮಾನದ ಯುವಕರು ಇಲ್ಲಿದ್ದರು.

ಮೂಂಜೆ ತಮ್ಮ ದಿನಚರಿಯಲ್ಲಿ, “ನಿಮ್ಮ ಶ್ರೇಷ್ಠತೆಯಿಂದ, ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಪ್ರತಿಯೊಂದು ಮಹತ್ವಾಕಾಂಕ್ಷಿ ಮತ್ತು ಬೆಳೆಯುತ್ತಿರುವ ರಾಷ್ಟ್ರಕ್ಕೂ ಅಂತಹ ಸಂಘಟನೆಯ ಅಗತ್ಯವಿದೆ” ಎಂದು ಮುಸೊಲಿನಿಯನ್ನು ಹೊಗಳುತ್ತಾರೆ. ಮಾರ್ಚ್ 19ರಂದು ಮುಸೊಲಿನಿಯನ್ನು ಭೇಟಿಯಾಗಿ ಮಾತನಾಡಿದ್ದ ಅವರು, “ಮಹತ್ವಾಕಾಂಕ್ಷೆ ಹೊತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಯೊಂದು ದೇಶಕ್ಕೂ ಇಂತಹ ಸಂಸ್ಥೆಗಳ ಅವಶ್ಯಕತೆ ಇದೆ. ಕಳೆದ 150 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದಾಗಿ ಭಾರತೀಯರು ಸೈನಿಕ ವೃತ್ತಿಯಿಂದ ದೂರವಾಗಿದ್ದಾರೆ. ಆದರೆ ಭಾರತವೀಗ ತನ್ನ ರಕ್ಷಣೆಯ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಳ್ಳುವುದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಿಚ್ಛಿಸುತ್ತಿದೆ. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಅದೇ ತೆರನಾದ ಗುರಿ ಇರಿಸಿಕೊಂಡಿರುವಂತಹ, ನನ್ನದೇ ಆದ ಒಂದು ಸ್ವತಂತ್ರ ಸಂಘಟನೆಯನ್ನು ಈಗಾಗಲೇ ಆರಂಭಿಸಿದ್ದೇನೆ. ಸಂದರ್ಭ ದೊರೆತಾಗ ತಮ್ಮ ಬಲಿಲ್ಲಾ ಮತ್ತಿತರ ಫ್ಯಾಸಿಸ್ಟ್‌ ಸಂಘಟನೆಗಳನ್ನು ಸಾರ್ವಜನಿಕವಾಗಿ ಪ್ರಸಂಶಿಸಲು ಹಿಂಜರಿಯೆನು. ಅವು ಸೌಭಾಗ್ಯವಂತವಾಗಲೆಂದೂ ಯಶಸ್ವಿಯಾಗಲೆಂದೂ ಹಾರೈಸುತ್ತೇನೆ” ಎನ್ನುತ್ತಾರೆ.

ಜನವರಿ 31, 1934ರಲ್ಲಿ ಹೆಡಗೇವಾರ್ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಫ್ಯಾಸಿಸಂ ಕುರಿತು ಮೂಂಜೆ ಮಾತನಾಡಿದ್ದರು. “ಹಿಂದೂ ಧರ್ಮವನ್ನು ಭಾರತದಾದ್ಯಂತ ಏಕಪ್ರಕಾರವಾಗಿಸುವ ಸಲುವಾಗಿ ಹಿಂದೂ ಧರ್ಮಶಾಸ್ತ್ರಗಳನ್ನು ಆಧರಿಸಿರುವ ಯೋಜನೆಯೊಂದರ ಕುರಿತು ಯೋಚಿಸಿದ್ದೇನೆ… ಆದರೆ ವಿಷಯ ಏನೆಂದರೆ ಅಂದಿನ ಶಿವಾಜಿ ಅಥವಾ ಇಂದಿನ ಮುಸೊಲಿನಿ, ಹಿಟ್ಲರ್‌ಗಳಂತಹ ಹಿಂದೂ ಸರ್ವಾಧಿಕಾರಿಯಿರುವ ನಮ್ಮದೇ ಸ್ವರಾಜ್ಯ ಬೇಕಾಗಿದೆ. ಇಲ್ಲವಾದಲ್ಲಿ ಆ ಆದರ್ಶವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಆದರೆ ಇಂತಹ ಸರ್ವಾಧಿಕಾರಿಯೊಬ್ಬ ಹುಟ್ಟುವ ತನಕ ನಾವು ಕೈಕಟ್ಟಿ ಕೂರಬೇಕೆಂದು ಇದರರ್ಥವಲ್ಲ. ಒಂದು ವೈಜ್ಞಾನಿಕ ಯೋಜನೆಯನ್ನು ರೂಪಿಸಿ ಅದಕ್ಕೆ ಪ್ರಚಾರ ನೀಡಬೇಕು”- ಇವು ಮೂಂಜೆ ನುಡಿಮುತ್ತುಗಳು! ವೈದಿಕ ಧರ್ಮಶಾಸ್ತ್ರಗಳು ಹೇಳುವ ಶ್ರೇಣಿಕೃತ ವ್ಯವಸ್ಥೆಯನ್ನಾಧಿಸಿದ ಹಿಂದೂ ರಾಷ್ಟ್ರೀಯತೆಯೇ ಅವರ ಗುರಿಯಾಗಿತ್ತು.

itali

ಮೂಂಜೆಯವರ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದ ಬ್ರಿಟಿಷರು, 1933ರ ಗುಪ್ತಚರ ವರದಿಯೊಂದರಲ್ಲಿ ಭವಿಷ್ಯದ ಭಾರತವನ್ನು ಊಹಿಸಿದ್ದರು. “ಇಟಲಿಯ ಫ್ಯಾಸಿಸ್ಟರ ಮತ್ತು ಜರ್ಮನಿಯ ನಾಝಿಗಳ ಮಾದರಿಯಲ್ಲೇ ಭವಿಷ್ಯದ ಭಾರತದಲ್ಲಿಯೂ ಕಾರ್ಯಾಚರಿಸುವ ದಿನವನ್ನು ಆರ್‌ಎಸ್‌ಎಸ್ ಎದುರು ನೋಡುತ್ತಿದೆ ಎಂದರೆ ಅದು ಪ್ರಾಯಶಃ ಅತಿಶಯೋಕ್ತಿ ಆಗಲಾರದು” ಎಂದಿತ್ತು ವರದಿ.

ಸಮವಸ್ತ್ರವು ಕೇವಲ ಸಂಘಟನೆಯ ಸಂಕೇತವಲ್ಲ, ಆದರೆ ಸಂಸ್ಥೆ ಪ್ರತಿನಿಧಿಸುವುದರ ಸಂಕೇತವೂ ಆಗಿದೆ. ಆರ್‌ಎಸ್‌ಎಸ್‌ ಮತ್ತು ಇಟಾಲಿಯನ್ ಸಂಪರ್ಕ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಫ್ಯಾಸಿಸಂ ಅಂದರೆ- ಬಂಡವಾಳಶಾಹಿಗಳ ಪೋಷಣೆ, ಬಹುತ್ವದ ಬುಡಮೇಲು, ಏಕ ಸಂಸ್ಕೃತಿಯ ಹೇರಿಕೆ, ಮೇಲ್ಮಧ್ಯಮ ಮತ್ತು ಬಲಾಢ್ಯ ಸಮುದಾಯಗಳ ಹಿತಾಸಕ್ತಿ. ಸಂಪತ್ತಿನ ಹಂಚಿಕೆಗೆ ಫ್ಯಾಸಿಸಂ ಕಡುವಿರೋಧಿ. ವೈವಿಧ್ಯತೆಯನ್ನು ನಾಶ ಮಾಡಿ, ಬ್ರಾಹ್ಮಣೀಯ ಸಂಸ್ಕೃತಿಯನ್ನು ಹೇರುವುದು ಅವರ ಉದ್ದೇಶ. ಇಂತಹ ಫ್ಯಾಸಿಸ್ಟ್ ವ್ಯವಸ್ಥೆಯನ್ನು ಭಾರತದಲ್ಲಿ ತರುವುದು ‘ಆರ್‌ಎಸ್‌ಎಸ್‌’ನ ಮೂಲ ಗುರಿ.

ಆರ್‌ಎಸ್‌ಎಸ್‌ ವಸ್ತ್ರವನ್ನು ಗಣವಸ್ತ್ರ ಎನ್ನಬಹುದೇ?

ಈ ಲೇಖನದ ಮೂಲ ಪ್ರಶ್ನೆಯೇ ಇದಾಗಿತ್ತು. ಆರ್‌ಎಸ್‌ಎಸ್ ಹೇಳುವ ‘ಗಣ’ಕ್ಕೂ, ಮೂಲ ‘ಗಣ’ ಪರಿಕಲ್ಪನೆಗೂ ವ್ಯತ್ಯಾಸವಿದೆ. ‘ಢುಂಢಿ – ಅರಣ್ಯಕನೊಬ್ಬ ಗಣಪತಿಯಾದ ಕತೆ’ ಕೃತಿಯನ್ನು ಬರೆದು, ಬಳಿಕ ತೀವ್ರ ವಿವಾದವನ್ನೂ ಎದುರಿಸಿದ ಬರೆಹಗಾರ ಯೋಗೇಶ್ ಮಾಸ್ಟರ್ ಅವರು ‘ಗಣ’, ‘ಗಣಪತಿ’ ಎಂಬುದಕ್ಕೆ ಮತ್ತಷ್ಟು ವಿವರಗಳನ್ನು ನೀಡುತ್ತಾರೆ.

rss pathsanchalan
ಇಟಲಿ ಮಾದರಿಯಲ್ಲಿ ‘ಆರ್‌ಎಸ್‌ಎಸ್’

‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಅವರು, “ಅವೈದಿಕರ ಆರಾಧ್ಯ ಮೂರ್ತಿ ಗಣಪತಿ. ಅರಣ್ಯಕ ಮತ್ತು ಬ್ರಾಹ್ಮಣಗಳಲ್ಲಿ ಬರುವ ಗಣಪತಿಗೆ ಒಳ್ಳೆಯ ಸ್ಥಾನವೇನೂ ಇರಲಿಲ್ಲ. ಆತನನ್ನು ವಿಘ್ನಕಾರಕನನ್ನಾಗಿಯೇ ಚಿತ್ರಿಸಲಾಗುತ್ತಿತ್ತು. ಗಣಪತಿ ಕನಸಲ್ಲಿ ಬಂದರೂ ಕೆಟ್ಟದ್ದೆಂದು ಹೇಳುವ ನಂಬಿಕೆಯೂ ಇತ್ತು. ವಿಘ್ನಕಾರಕ ಗಣಪತಿ, ಜನಪ್ರಿಯನಾಗುತ್ತಾ ವಿಘ್ನನಿವಾಕರನಾದ. ಇದೊಂದು ಸುದೀರ್ಘ ಪ್ರಯಾಣ. ಬುಡಕಟ್ಟುಗಳನ್ನು ‘ಗಣ’ ಎನ್ನುತ್ತಿದ್ದರು. ಬುಡಕಟ್ಟುಗಳ ನಾಯಕ- ಗಣಪತಿ. ವಿವಿಧ ಗಣಗಳ ನಡುವೆ ದಾಳಿಗಳಾಗುತ್ತಿದ್ದವು. ಹೆದರಿಕೆಯನ್ನು ಹುಟ್ಟಿಸುವ ಗಣಗಳಿದ್ದವು. ಹೀಗಾಗಿ ಹಲವು ಗಣಪತಿಗಳು ನಮಗೆ ಕಾಣಿಸುತ್ತಾರೆ. ‘ಗಣಪತಿ’ ಪೂಜನೀಯ ಸ್ಥಾನಕ್ಕೆ ಬಂದಿದ್ದು ಹಲವು ವರ್ಷಗಳ ಬಳಿಕ. ಅದಕ್ಕೆ ಬೇರೆಬೇರೆ ಕಾರಣಗಳಿವೆ. ಆದರೆ ಆತ ಅವೈದಿಕ ದೇವರು ಎಂಬುದಂತೂ ಸತ್ಯ. ಪ್ರಾಚೀನ ಶಿಲ್ಪಿಗಳನ್ನು ನೋಡಿದರೆ, ಗಣಪತಿಗೆ ಒಡವೆಗಳು ಇರುವುದಿಲ್ಲ. ಆದರೆ ಆರ್ಯದೇವತೆಗಳು ಆಭರಣಗಳಿಂದ ಕೂಡಿರುತ್ತವೆ. ಇಲ್ಲಿನ ಬಹುಜನರೇ ಅವೈದಿಕರಾಗಿದ್ದರು ಎಂಬುದನ್ನು ಮನಗಾಣಬೇಕು. ಗಣಪತಿ ಅವೈದಿಕರಲ್ಲಿ ಪ್ರಖ್ಯಾತನಾಗಿದ್ದರು. ಗಣಪತಿಯನ್ನು ವೈದೀಕರಣಗೊಳಿಸಿದರು. ಇದು ಚರಿತ್ರೆಯುದ್ದಕ್ಕೂ ನಡೆದು ಬಂದಿದೆ. ಹಾಸನದ ಮಳಲಿ ಗಿಡ್ಡಮ್ಮನನ್ನು ಮಳಲಿ ಲಕ್ಷ್ಮಿದೇವಿ ಮಾಡಲಾಗಿದೆ, ಮುನಿಯಪ್ಪ ದೇವರನ್ನು ಮುನೀಶ್ವರ ಮಾಡಲಾಗಿದೆ. ಇಂತಹ ಹಲವು ಉದಾಹರಣೆಗಳನ್ನು ಕೊಡಬಹುದು” ಎಂದರು. ‘ಗಣ’, ‘ಗಣಪತಿ’ ಮೂಲದಲ್ಲಿ ವೈದಿಕ ಪರಂಪರೆಯ ಪರಿಕಲ್ಪನೆಗಳಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿರಿ: RSS ಸಮಾನತೆಯ ಶತ್ರು; ಯಾಕೆಂದರೆ…

‘ಗಣ’ ಎಂಬುದು ‘ರಾಜ್ಯ’ಗಳನ್ನೂ ಸೂಚಿಸುತ್ತದೆ. ನಮ್ಮ ಒಕ್ಕೂಟ ವ್ಯವಸ್ಥೆಯನ್ನು ‘ಗಣರಾಜ್ಯ’ ಎಂದು ಕರೆದುಕೊಂಡಿದ್ದೇವೆ. ಆದರೆ ಆರ್‌ಎಸ್‌ಎಸ್ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಿದೆ. ಗೋಲ್ವಾಲ್ಕರ್, “ನಮ್ಮದು ಸಮರಸವಾದ ಏಕರಾಷ್ಟ್ರತ್ವ ಎಂಬ ದೃಢ ನಂಬಿಕೆಯು ನಮ್ಮ ಈಗಿನ ಸಂವಿಧಾನವನ್ನು ರಚಿಸಿದವರ ಮನಸ್ಸಿನಲ್ಲಿಯೂ ಬೇರೂರಿರಲಿಲ್ಲ ಎಂಬುದು ಒಕ್ಕೂಟ ಸ್ವರೂಪದ ಸಂವಿಧಾನ ರಚನೆಯಿಂದಲೇ ಸ್ಪಷ್ಟ. ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ ಎಂದು ಕರೆದಿದ್ದಾರೆ… ಈಗಿನ ಒಕ್ಕೂಟ ರಚನೆಯಲ್ಲಿ ಛಿದ್ರತೆಯ ಬೀಜಗಳು ಅಡಗಿವೆ…”. “ಇದಕ್ಕಾಗಿ ನಮ್ಮ ದೇಶದ ಸಂವಿಧಾನ ಒಕ್ಕೂಟ ಸ್ವೂರೂಪದ ಎಲ್ಲ ಮಾತನ್ನು ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೆ, ‘ಸ್ವಯಂ ಅಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಂ ಅಧಿಕಾರವುಳ್ಳ ರಾಜ್ಯಗಳ ಅಸ್ತಿತ್ವವನ್ನೇ ಅಳಿಸಿ ಹಾಕಬೇಕು. ಏಕಾತ್ಮಕ ಸರಕಾರದ ಪದ್ಧತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿಡೋಣ”.-  ಇವು ‘ಬಂಚ್ ಆಫ್‌ ಥಾಟ್ಸ್‌’ನಲ್ಲಿ ಗೋಲ್ವಾಲ್ಕರ್ ಕಾರಿಕೊಳ್ಳುವ ಮಾತುಗಳು. ಅಂದರೆ ಗಣರಾಜ್ಯ ವ್ಯವಸ್ಥೆಯ ಬಗ್ಗೆಯೂ ಇವರಿಗೆ ಅಸಹನೆ.

ಅವೈದಿಕ ಧಾರ್ಮಿಕ ಪರಂಪರೆಯ ಅರ್ಥದಲ್ಲಿಯೂ ಸಂವಿಧಾನ ರೂಪಿಸಿರುವ ಆಡಳಿತಾತ್ಮಕ ಸ್ವರೂಪದಲ್ಲಿಯೂ ಆರ್‌ಎಸ್‌ಎಸ್ ಹೇಳುವ ‘ಗಣ’ ಒಳಪಡುವುದಿಲ್ಲ. ಹೀಗಾಗಿ ಆರ್‌ಎಸ್‌ಎಸ್‌ ಸಮವಸ್ತ್ರವನ್ನು ‘ಫ್ಯಾಸಿಸ್ಟ್ ಸಮವಸ್ತ್ರ’ ಎನ್ನುವುದೇ ಸರಿ. ಸ್ವಯಂಸೇವಕರನ್ನು ‘ಗಣವಸ್ತ್ರಧಾರಿಗಳು’ ಎನ್ನುವುದು ಧಾರ್ಮಿಕವಾಗಿಯೂ ತಪ್ಪು, ಸಾಂವಿಧಾನಿಕವಾಗಿಯೂ ತಪ್ಪು!

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...