ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಸೇನಾ ವಾಹನವು ರಸ್ತೆಯಿಂದ ಜಾರಿ 200 ಅಡಿ ಆಳದ ಕಮರಿಗೆ ಬಿದ್ದಿದೆ. ಪರಿಣಾಮ 10 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಒಟ್ಟು 17 ಸಿಬ್ಬಂದಿಯನ್ನು ಹೊತ್ತು ಸೇನಾ ವಾಹನವು ಎತ್ತರದ ಪೋಸ್ಟ್ ಕಡೆಗೆ ಭದೇರ್ವಾ-ಚಂಬಾ ರಸ್ತೆಯ ಖನ್ನಿ ಟಾಪ್‌ನಲ್ಲಿ ತೆರಳುತ್ತಿತ್ತು. ಈ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಕಮರಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸೇನೆ, ಪೊಲೀಸರು ಹಾಗೂ ಸ್ಥಳೀಯ ನಿವಾಸಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. 7 ಮಂದಿ ಗಾಯಗೊಂಡಿದ್ದ ಸೈನಿಕರನ್ನು ರಕ್ಷಿಸಿ ಮಿಲಿಟರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ರಕ್ಷಣಾ ಕಾರ್ಯಚರಣೆ ಆರಂಭವಾಗುವ ವೇಳೆಗೆ 10 ಮಂದಿ ಸೈನಿಕರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಶಾಂತಿ ಮತ್ತು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ, ಸೈನಿಕರನ್ನು ನಾನಾ ಭಾಗಗಳಿಗೆ ನಿಯೋಜಿಸಲಾಗುತ್ತಿದೆ. ನಿಯೋಜನೆಗೊಂಡ ಸೈನಿಕರ ತಂಡವೊಂದು ವಾಹನದಲ್ಲಿ ತೆರಳುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.




