ಗ್ರಾಮದ ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, “ಪಿರ್ತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಲದಿಹ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
“ಗ್ರಾಮದ ಜಾತ್ರೆಯ ಸಮಯದಲ್ಲಿ ಇಬ್ಬರು ಬುಡಕಟ್ಟು ಹುಡುಗಿಯರನ್ನ ಆರೇಳು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ನಂತರ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹರ್ಲದಿಹ್ ಹೊರಠಾಣೆ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.
“ಅಪರಾಧಿಗಳನ್ನ ಬಂಧನ ಮಾಡಲು ಹಲವಾರು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ” ಎಂದು ದುಮ್ರಿ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಸುಮಿತ್ ಪ್ರಸಾದ್ ಹೇಳಿದ್ದಾರೆ.





