ನೂತನವಾಗಿ ಜಾರಿಯಾದ ಮೂರು ಕ್ರಿಮಿನಲ್ ಕಾನೂನುಗಳಲ್ಲಿ ಒಂದಾದ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್) ಇರುವ ದೋಷವನ್ನು ಜಾರ್ಖಂಡ್ ಹೈಕೋರ್ಟ್ ಬೊಟ್ಟು ಮಾಡಿದೆ. ಯುನಿವರ್ಸಲ್ ಲೆಕ್ಸಿಸ್‌ನೆಕ್ಸಿಸ್ ಆವೃತ್ತಿಯಲ್ಲಿನ ದೋಷವನ್ನು ಸ್ವಯಂ ಪ್ರೇರಿತವಾಗಿ ಗ್ರಹಿಸಿದೆ.
ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಆನಂದ ಸೇನ್ ಮತ್ತು ಸುಭಾಷ್ ಚಂದ್ ಅವರ ಪೀಠವು ಭಾರತೀಯ ನ್ಯಾಯ ಸಂಹಿತೆಯ ಒಂದು ಆವೃತ್ತಿಯಲ್ಲಿ ಗುಂಪು ಹತ್ಯೆ (lynching) ಸಂಬಂಧಿಸಿದ ನಿಬಂಧನೆ ಸೆಕ್ಷನ್ 103 (2) ಅನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದೆ.
ಹೊಸ ಕಾನೂನಿನ ಪರಿಚ್ಛೇದ 103 (2) ರಲ್ಲಿ “ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪು ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ವೈಯಕ್ತಿಕ ನಂಬಿಕೆ ಅಥವಾ ಯಾವುದೇ ಇತರೆ ಈ ರೀತಿಯ ಆಧಾರದ ಮೇಲೆ ಕೊಲೆ ಮಾಡಿದಾಗ ಅಂತಹ ಗುಂಪಿನ ಪ್ರತಿಯೊಬ್ಬ ಸದಸ್ಯನಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಸಹ ಹೊಣೆಗಾರನಾಗಿರುತ್ತಾರೆ” ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಬಲವಂತವಾಗಿ ಕ್ರಿಮಿನಲ್ ಕಾನೂನುಗಳ ಜಾರಿ, ‘ಬುಲ್ಡೋಜರ್ ನ್ಯಾಯ’ ಒಪ್ಪಲ್ಲ: ಖರ್ಗೆ
ಆದರೆ ಯುನಿವರ್ಸಲ್ ಲೆಕ್ಸಿಸ್‌ನೆಕ್ಸಿಸ್ ಆವೃತ್ತಿಯಲ್ಲಿ, ‘ಯಾವುದೇ ಇತರೆ ಈ ರೀತಿಯ ಆಧಾರದ ಮೇಲೆ’ (any other similar ground) ಬದಲಿಗೆ ‘ಇತರೆ ರೀತಿಯ ಆಧಾರದ ಮೇಲೆ’ (any other ground) ಎಂದು ಬಳಸಲಾಗಿದೆ. ದೋಷವು ‘ಗಂಭೀರ ಪರಿಣಾಮಗಳನ್ನು’ ಉಂಟುಮಾಡಬಹುದು ಎಂದು ಹೇಳಿದ ಪೀಠವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರಿಜೆಂಡಮ್ (ತಿದ್ದೋಲೆ) ಅನ್ನು ಪ್ರಕಟಿಸಲು ಪ್ರಕಾಶಕರಿಗೆ ನಿರ್ದೇಶಿಸಿದೆ.

ಈ ಹಿಂದಿನ ಕ್ರಿಮಿನಲ್ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ), ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಎಂಬ ಹೊಸ ಕಾನೂನುಗಳನ್ನು ಜಾರಿ ಮಾಡಲಾಗಿದೆ.





