ರೈಲಿನ ಶೌಚಾಲಯದಲ್ಲಿ ರಾಜಸ್ಥಾನದ ಜೈಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಅವರ ಪತ್ನಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ರಾಜ್‌ಕುಮಾರ್ ಚೌಹಾಣ್ ಮತ್ತು ಅವರ ಪತ್ನಿ ಉಷಾ ಚೌಹಾಣ್ ಜೋಧ್‌ಪುರದಿಂದ ನಿಂಬಾಹೆರಾಗೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ (17606)ನಲ್ಲಿ ಪ್ರಯಾಣಿಸುತ್ತಿದ್ದರು. ಶೌಚಾಲಯಕ್ಕೆ ತೆರಳಿದ್ದ ಉಷಾ, ಹೆಚ್ಚು ಸಮಯವಾದರೂ ಶೌಚಾಲಯದಿಂದ ಹೊರಬಂದಿರಲಿಲ್ಲ. ರೈಲು ಜೋರಾ ನಿಲ್ದಾಣಕ್ಕೆ ತಲುಪಿದಾಗ ಸರ್ಕಾರಿ ರೈಲ್ವೆ ಪೊಲೀಸರು (GRP) ಶೌಚಾಲಯದ ಬಾಗಿಲು ಒಡೆದಿದ್ದಾರೆ. ಆದರೆ, ಆ ವೇಳೆಗೆ ಉಚಾ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ
ವರದಿಗಳ ಪ್ರಕಾರ, ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಮತ್ತು ಅವರ ಪತ್ನಿ ಒಟ್ಟಿಗೆ ಪ್ರಯಾಣಿಸುತ್ತಿದ್ದರೂ, ಅವರು ಪ್ರತ್ಯೇಕ ಬೋಗಿಗಳಲ್ಲಿ ಕುಳಿತಿದ್ದರು. ರೈಲು ನಿಂಬಾಹೆರಾಕ್ಕೆ ಬರುವ ಸ್ವಲ್ಪ ಸಮಯದ ಮೊದಲು, ಉಷಾ ಚೌಹಾಣ್ ತನ್ನ ಪತಿಗೆ ಕರೆ ಮಾಡಿ ತಾನು ಶೌಚಾಲಯಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು. ರೈಲು ನಿಂಬಾಹೆರಾ ನಿಲ್ದಾಣವನ್ನು ತಲುಪಿದಾಗ, ನ್ಯಾಯಾಧೀಶರು ಇಳಿದು ತಮ್ಮ ಪತ್ನಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದರು. ಅವರು ಕಾಣಿಸದಿದ್ದಾಗ, ಆತಂಕಗೊಂಡ ಚೌಹಾಣ್ ಜಿಆರ್‌ಪಿಗೆ ಮಾಹಿತಿ ನೀಡಿದ್ದಾರೆ.
ಜಿಆರ್‌ಪಿ ತಂಡವು ನಿಂಬಹೆರಾ ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಅದರಲ್ಲಿ, ಉಷಾ ಚೌಹಾಣ್ ರೈಲಿನಿಂದ ಇಳಿಯಲಿಲ್ಲ ಎಂಬುದು ದೃಢಪಟ್ಟಿದೆ. ಉಷಾ ಅವರು ಇನ್ನೂ ರೈಲಿನಲ್ಲೇ ಇರುವ ಸಾಧ್ಯತೆಯನ್ನು ಅರಿತ ಜಿಆರ್‌ಪಿ ಸಿಬ್ಬಂದಿ ರೈಲಿನಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ, ಲಾಕ್ ಆಗಿದ್ದ ಶೌಚಾಲಯದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಬಾಗಿಲು ತೆರೆಯದಿದ್ದಾಗ, ಬಾಗಿಲನ್ನು ಒಡೆದಿದ್ದಾರೆ. ಅಲ್ಲಿ, ಉಷಾ ಪ್ರಜ್ಞಾಹೀನರಾಗಿ ಬಿದ್ದಿದ್ದರು ಎಂದು ವರದಿಯಾಗಿದೆ.
ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಉಷಾ ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಆಕೆಗೆ ‘ಹೃದಯಾಘಾತ’ವಾಗಿದೆ ಎಂದು ಹೇಳಲಾಗಿದೆ.




