ಪ್ರಸಾದ ವಿನಿಯೋಗದ ವಿಚಾರವಾಗಿ ಆರಂಭವಾದ ಜಗಳವು ಹಿಂಸಾಚಾರಕ್ಕೆ ತಿರುಗಿದ್ದು, ದೇವಾಲಯದ ಸೇವಕನನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ನಡೆದಿದೆ. ದುರುಳರ ಗುಂಪಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ದೇವಾಲಯದಲ್ಲಿ ಸೇವಕನಾಗಿ ಕೆಲಸ ಮಾಡುತ್ತಿದ್ದ ಯೋಗೇಂದ್ರ ಅವರನ್ನು ದುರುಳರ ಗುಂಪು ಕೊಂದಿದೆ ಎಂದು ವರದಿಯಾಗಿದೆ.
ಶುಕ್ರವಾರ ರಾತ್ರಿ ಸುಮಾರು 9:30ರ ವೇಳಗೆ ದೇವಾಲಯದ ಆವರಣದಲ್ಲಿ ಜಗಳ ನಡೆಯುತ್ತಿದೆ ಎಂಧು ಪಿಸಿಆರ್ ಕರೆ ಬಂದಿತ್ತು. ಪೊಲೀಸರ ತಂಡ ಸ್ಥಳಕ್ಕೆ ತಲುಪಿದಾಗ ಯೋಗೇಂದ್ರ ಅವರು ನಿತ್ರಾಣರಾಗಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯಕ್ಕೆ ಬಂದಿದ್ದ ಐದಾರು ಆರೋಪಿಗಳ ಗುಂಪು ಯೋಗೇಂದ್ರ ಸಿಂಗ್ ಅವರ ಬಳಿ ಚುನ್ನಿ ಪ್ರಸಾದಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ, ಪ್ರಸಾದ ಇಲ್ಲವೆಂದು ಯೋಗೇಂದ್ರ ಹೇಳಿದ್ದಾರೆ. ಬಳಿಕ, ಗುಂಪು ಯೋಗೇಂದ್ರರೊಂದಿಗೆ ಜಗಳ ನಡೆಸಿದ್ದು, ಅವರ ಮೇಲೆ ಕೋಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
A sevadar Yogendra Singh at Kalkaji Temple in southeast Delhi was lynched to death following a scuffle over temple prasad. He was a sevadar in Kalkaji Temple for the last 14-15 years. Three accused Atul Pandey, Mohan and Kuldeep Bidhuri were arrested.pic.twitter.com/0mrRxZmChM
— Mohammed Zubair (@zoo_bear) August 30, 2025
ಆರೋಪಿಗಳಲ್ಲಿ ಒಬ್ಬನಾದ ದಕ್ಷಿಣಪುರಿ ನಿವಾಸಿ ಅತುಲ್ ಪಾಂಡೆ (30) ಅವರನ್ನು ಸಾರ್ವಜನಿಕರು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶನಿವಾರ ಸಂಜೆ – ತುಘಲಕಾಬಾದ್ ನಿವಾಸಿಗಳಾದ ಮೋಹನ್ (19) ಮತ್ತು ಕುಲದೀಪ್ ಬಿಧುರಿ (20), ಗೋವಿಂದಪುರಿ ನಿವಾಸಿ ನಿತಿನ್ ಪಾಂಡೆ (26) ಹಾಗೂ ಆತ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆತನ ತಂದೆ ಅನಿಲ್ ಕುಮಾರ್ (55) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಆಡಳಿತಾರೂಢ ಬಿಜೆಪಿಯನ್ನು ಎಎಪಿ ತರಾಟೆಗೆ ತೆಗೆದುಕೊಂಡಿದೆ. ಎಎಪಿ ನಾಯಕಿ, ಕಲ್ಕಾಜಿ ಶಾಸಕಿ ಅತಿಶಿ ಅವರು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಪತ್ರ ಬರೆದಿದ್ದು, “ಬಿಜೆಪಿ ಆಡಳಿತದಲ್ಲಿ ದೆಹಲಿಯು ಅಪರಾಧ, ಸುಲಿಗೆ ಹಾಗೂ ಗ್ಯಾಂಗ್ ವಾರ್‌ಗಳ ರಾಜಧಾನಿಯಾಗಿ ಮಾರ್ಪಟ್ಟಿದೆ. ದೆಹಲಿಯ ನಿವಾಸಿಗಳು ಇನ್ನು ಮುಂದೆ ತಮ್ಮ ಮನೆಗಳು, ಮಾರುಕಟ್ಟೆಗಳು ಅಥವಾ ಪೂಜಾ ಸ್ಥಳಗಳಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, “ಕಲ್ಕಾಜಿ ದೇವಾಲಯದಲ್ಲಿ ಸೇವಕನನ್ನು ಕ್ರೂರವಾಗಿ ಕೊಲ್ಲುವ ಮೊದಲು ಈ ದುಷ್ಕರ್ಮಿಗಳ ಕೈಗಳು ನಡುಗಲಿಲ್ಲವೇ? ಇದು ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವಲ್ಲದಿದ್ದರೆ, ಮತ್ತೇನು? ಬಿಜೆಪಿಯ ನಾಲ್ಕು ಎಂಜಿನ್‌ಗಳು ದೆಹಲಿಯನ್ನು ಇಂತಹ ದುಸ್ಥಿತಿಗೆ ತಂದಿವೆ. ಈಗ ದೇವಾಲಯಗಳಲ್ಲಿಯೂ ಸಹ ಇಂತಹ ಘಟನೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಯಾರಾದರೂ ಸುರಕ್ಷಿತವಾಗಿದ್ದಾರೆಯೇ ಅಥವಾ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಎಎಪಿಯ ಆರೋಪಕ್ಕೆ ಬಿಜೆಪಿ ಅಥವಾ ದೆಹಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




