2024-25ರ ಹಣಕಾಸು ವರ್ಷದಲ್ಲಿ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ತಲಾ ಆದಾಯವನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ತಲಾದಾಯ ಪ್ರಮಾಣವು 2 ಲಕ್ಷ ರೂಪಾಯಿ ದಾಟಿದೆ. ಒಂದು ದಶಕದಲ್ಲಿ ರಾಜ್ಯದ ತಲಾ ಆದಾಯ ದುಪ್ಪಟ್ಟಾಗಿದೆ ಎಂದು ಲೋಕಸಭೆಯಲ್ಲಿ ಹಣಕಾಸು ಸಚಿವಾಲಯ ಮಂಡಿಸಿದ ಅಂಕಿಅಂಶಗಳು ತಿಳಿಸಿವೆ.
2024–25ರಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ತಲಾ ಆದಾಯದ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ತಮಿಳುನಾಡು ತಲಾ ಆದಾಯ 1,96,309 ರೂಪಾಯಿ ಆಗಿದ್ದು, ಎರಡನೇ ಸ್ಥಾನದಲ್ಲಿದೆ.
ಇದನ್ನು ಓದಿದ್ದೀರಾ? ಮುಂದಿನ 5 ವರ್ಷಗಳಲ್ಲಿ ಭಾರತದ ತಲಾ ಆದಾಯವು 2,000 ಡಾಲರ್‌ಗಳಷ್ಟು ಹೆಚ್ಚುತ್ತದೆ: ನಿರ್ಮಲಾ ಸೀತಾರಾಮನ್
ರಾಜ್ಯದ ತಲಾ ನಿವ್ವಳ ಆಂತರಿಕ ಉತ್ಪಾದನೆ(ಎನ್‌ಎಸ್‌ಡಿಪಿ) 2,04,605 ರೂಪಾಯಿಗೆ ತಲುಪಿದ್ದು, 2014–15ರಲ್ಲಿದ್ದ ಎನ್‌ಎಸ್‌ಡಿಪಿಗಿಂತ(1,05,697 ರೂಪಾಯಿ) ಶೇಕಡ 93.6ರಷ್ಟು ಬೆಳವಣಿಗೆ ದಾಖಲಾಗಿದೆ. ಇದೇ ಅವಧಿಯಲ್ಲಿ ದೇಶದ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 1,14,710 ರೂಪಾಯಿಯಿದೆ. ಅಂದರೆ ಒಂದು ದಶಕದ ಹಿಂದೆಯಿದ್ದ 72,805 ರೂಪಾಯಿಯಿಂದ ಶೇಕಡ 57.6ರಷ್ಟು ಬೆಳವಣಿಗೆಯಾಗಿದೆ.
ಕಳೆದ ದಶಕದಲ್ಲಿ ಕರ್ನಾಟಕದ ಆದಾಯವು ಬಹುತೇಕ ದುಪ್ಪಟ್ಟಾಗಿದೆ. ಹೆಚ್ಚಿನ ಪ್ರಮುಖ ರಾಜ್ಯಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ. 2013–14ರಲ್ಲಿ ರಾಜ್ಯದ ತಲಾ ಆದಾಯವು 1,01,858 ರೂ.ಗಳಾಗಿದ್ದವು, 2023–24ರ ವೇಳೆಗೆ ರಾಜ್ಯದ ತಲಾ ಆದಾಯ ಶೇ. 88.5ರಷ್ಟು(1,91,970 ರೂಪಾಯಿ) ಏರಿಕೆ ಕಂಡಿದೆ. 2024–25ರಲ್ಲಿ 2,04,605 ರೂಪಾಯಿಗೆ ತಲುಪಿದ್ದು ವರ್ಷದಿಂದ ವರ್ಷಕ್ಕೆ ಶೇಕಡ 6.6ರಷ್ಟು ಬೆಳವಣಿಗೆ ದಾಖಲಾಗಿದೆ.
ಇನ್ನು ಒಂದು ದಶಕದ ಆರ್ಥಿಕ ಬೆಳವಣಿಗೆ ನೋಡಿದಾಗ ಕರ್ನಾಟಕ ಶೇಕಡ 93.6ರಷ್ಟು ತಲಾ ಆದಾಯ ಏರಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಶೇಕಡ 96.7ರಷ್ಟು ಏರಿಕೆ ಕಂಡಿರುವ ಒಡಿಶಾ ಮೊದಲ ಸ್ಥಾನದಲ್ಲಿದೆ. ಇನ್ನು 2023–24ನೇ ವಿತ್ತೀಯ ವರ್ಷದಲ್ಲಿ ಮಿಜೋರಾಂ ಶೇ.125.4ರಷ್ಟು ಬೆಳವಣಿಗೆ ದಾಖಲಿಸಿದೆ. ನಂತರದ ಸ್ಥಾನದಲ್ಲಿ, ಕ್ರಮವಾಗಿ ಗುಜರಾತ್ (ಶೇ.90.7), ಗೋವಾ(ಶೇ.89.9), ಕರ್ನಾಟಕ (ಶೇ.88.5), ತೆಲಂಗಾಣ (ಶೇ.84.3) ಮತ್ತು ಒಡಿಶಾ(ಶೇ.83.4) ಇದೆ.
ಇದನ್ನು ಓದಿದ್ದೀರಾ? ಮಾತು ಉಳಿಸಿಕೊಳ್ಳದ ಮೋದಿ; ಒಂದು ಯುಎಸ್ ಡಾಲರ್‌ಗೆ ಭಾರತದ 84 ರೂಪಾಯಿ!
ಕರ್ನಾಟಕ ಮತ್ತು ಕೆಲವು ರಾಜ್ಯಗಳ ತಲಾ ಆದಾಯ ಉತ್ತಮ ಬೆಳವಣಿಗೆ ಕಂಡಿದ್ದರೂ ಕೆಲವು ರಾಜ್ಯಗಳು ಹಿಂದುಳಿದಿದೆ. ಪಂಜಾಬ್‌ನ ತಲಾ ಆದಾಯ ದಶಕದಲ್ಲಿ ಶೇ.41.3ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಉತ್ತರಾಖಂಡ ಮತ್ತು ಪುದುಚೇರಿ ಕ್ರಮವಾಗಿ ಶೇ.33.5, ಶೇ.32.8ರಷ್ಟು ಬೆಳವಣಿಗೆ ದಾಖಲಿಸಿದೆ.
ಎಲ್ಲ ರಾಜ್ಯಗಳ ಅಂಕಿಅಂಶ ವರದಿಯಾಗಿಲ್ಲ
ಆದರೆ 2024–25ರ ಸಾಲಿನ ತಲಾ ಆದಾಯಕ್ಕೆ ಸಂಬಂಧಿಸಿದ ಎಲ್ಲ ರಾಜ್ಯಗಳ ವರದಿಯಾಗಿಲ್ಲ. ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಜಾರ್ಖಂಡ್, ಕೇರಳ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಉತ್ತರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ದೆಹಲಿ ಮತ್ತು ಲಡಾಖ್ ಸೇರಿದಂತೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತಲಾ ಆದಾಯದ ಅಂಕಿಅಂಶ ಲಭ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಉಲ್ಲೇಖಿಸಿದೆ.





